ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್ ರಾಷ್ಟ್ರಕ್ಕೆ ಕಲಿಸಿಕೊಟ್ಟದ್ದು ಧೈರ್ಯದ ಪಾಠ. ದಾಸ್ಯದ ಸಂಕೋಲೆಗೆ ಸಿಕ್ಕಿದ್ದ ಭಾರತೀಯರಿಗೆ ಕೊಟ್ಟ ಸಂದೇಶ ಇದು: ‘ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ. ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ’. ಜೀವಿತದಪೂರ್ತಿ ಸಾಹಸದ ಹೋರಾಟ ನಡೆಸಿದುದರ ಕಾರಣಕ್ಕಾಗಿಯೇ ಅವರನ್ನು ದೇಶವು ‘ಪಂಜಾಬ್ ಕೇಸರಿ’ ಎಂದು ಕರೆದದ್ದು. ಅವರ ಬಲಿದಾನ ರಣಭೂಮಿಯ ವೀರನ ಮರಣದಂತೆ. ಲಾಲಾಜಿಯವರು ನಿರ್ವಹಿಸಿದ ಪಾತ್ರವನ್ನು ಯಾರೂ ಮರೆಯುವಂತಿಲ್ಲ. ಲಾಲಾ ಲಜಪತ್ ರಾಯ್ ಸಕಲ ಗುಣಗಳ ಆಗರ. ಅವರ ವ್ಯಕ್ತಿತ್ವಕ್ಕೆ ಮೆರಗು ಕೊಡುವಂತೆ ಕೂಡಿದ್ದವು, ಕಾರ್ಯಧಕ್ಷತೆ, ಅವಿಶ್ರಾಂತ ದುಡಿಮೆ ಮತ್ತು ರಾಷ್ಟ್ರಪ್ರೇಮ. ಅವರ ಕಥೆ ಇಲ್ಲಿದೆ.
ಲಾಲಾ ಲಜಪತ್ ರಾಯ್ ಅವರು ಪಂಜಾಬಿನ ಮೋಗಾ ಜಿಲ್ಲೆಗೆ ಸೇರಿದ ಧುಡಿಕೆ ಎಂಬ ಗ್ರಾಮದಲ್ಲಿ ಜನವರಿ 28, 1865ರ ವರ್ಷದಲ್ಲಿ ಜನಿಸಿದರು. ‘ಲಾಲಾ’ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಹಿರಿಯ ಮನೆತನದಿಂದ ಬಂದವರಿಗೆ ಸಲ್ಲುತ್ತಿದ್ದ ಗೌರವಯುತ ಸಂಬೋಧನೆ. ರಾಯ್ ಅವರ ಪ್ರಾರಂಭಿಕ ಶಿಕ್ಷಣ ಪ್ರಸಕ್ತದಲ್ಲಿ ಹರ್ಯಾಣದಲ್ಲಿರುವ ರೆವಾರಿ ಎಂಬ ಊರಿನಲ್ಲಾಯಿತು. ಲಜಪತ್ ರಾಯ್ ಅವರ ತಂದೆ ರಾಧಾ ಕೃಷ್ಣನ್ ಅವರು ಅಂದಿನ ದಿನಗಳಲ್ಲಿ ಉರ್ದು ಶಿಕ್ಷಕರಾಗಿದ್ದರು.
ಹಿಂದೂ ಧರ್ಮ ಮತ್ತು ಮನುಸ್ಮೃತಿಗಳಿಂದ ತೀವ್ರ ಪ್ರಭಾವಿತರಾದ ಲಾಲಾ ಲಜಪತ್ ರಾಯ್ ಅವರು ರಾಜಕೀಯ ಹೋರಾಟ ಮತ್ತು ಬರವಣಿಗೆಗಳ ಕಡೆಗೆ ಅಪಾರ ಒಲವು ಬೆಳೆಸಿಕೊಂಡರು. ಹಿಂದೂ ಮಹಾಸಭಾದ ಕಾರ್ಯಕರ್ತರಾಗಿದ್ದ ಅವರು, ಹಿಂದೂ ಧರ್ಮದಲ್ಲಿ ಶಾಂತಿಯುತ ಹೋರಾಟಕ್ಕೆ ಮಹತ್ವವಿದೆ ಎಂದು ನಂಬಿದ್ದರು. ಇದೇ ಆಧಾರದ ಮೇಲೆ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಶಾಂತಿಯುತ ಚಳುವಳಿಗಳನ್ನು ಆಯೋಜಿಸತೊಡಗಿದರು.
ಆರ್ಯ ಸಮಾಜದಲ್ಲಿ ನಿಷ್ಠೆ ಹೊಂದಿದ್ದ ಅವರು ತಾವು ವಿದ್ಯಾರ್ಥಿಯಾಗಿದ್ದ ‘ಆರ್ಯ ಗೆಜೆಟ್’ನ ಸಂಪಾದಕರಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಮೇಲೆ ಅವರು ಪಂಜಾಬಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು. ಇದರಿಂದಾಗಿ ಬ್ರಿಟಿಷ್ ಆಡಳಿತ ಅವರನ್ನು ಬರ್ಮಾದ ಮಂಡಾಲೈ ಎಂಬಲ್ಲಿಗೆ ಗಡೀಪಾರು ಮಾಡಿತ್ತು. ಕೆಲವು ತಿಂಗಳ ನಂತರದಲ್ಲಿ ಲಾರ್ಡ್ ಮಿಂಟೋ ಅವರಿಗೆ ಲಾಲಾ ಲಜಪತ್ ರಾಯ್ ಅವರು ವಿರುದ್ಧ ಇರುವ ಆರೋಪಗಳಿಗೆ ಸರಿಯಾದ ಸಾಕ್ಷಾಧಾರಗಳಿಲ್ಲ ಎನಿಸಿ ಭಾರತಕ್ಕೆ ಹಿಂದಿರುಗಲು ಪರವಾನಗಿ ನೀಡಿದರು.
1907ರಲ್ಲಿ ಅಮೆರಿಕಕ್ಕೆ ತೆರಳಿದ್ದ ಲಾಲಾ ಲಜಪತ್ ರಾಯ್ ಅವರು 1919ರಲ್ಲಿ ಭಾರತಕ್ಕೆ ಹಿಂದಿರುಗಿದರು. ಅವರು ರಚಿಸಿರುವ ಪ್ರವಾಸಿ ಕಥನದಲ್ಲಿ ಪ್ರಸಿದ್ಧ ಬರಹಗಾರರಾದ ಡಬ್ಲ್ಯೂ. ಇ. ಬಿ. ಡುಬೋಯಿಸ್ ಮತ್ತು ಫ್ರೆಡ್ರಿಕ್ ಡೌಗ್ಲಾಸ್ ಮುಂತಾದವರ ಅನೇಕ ಉಕ್ತಿಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ. ಲಜಪತ್ ರಾಯ್ ಅವರು ಲಾಹೋರಿನಲ್ಲಿ ಬ್ರಿಟಿಷ್ ವಿದ್ಯಾಸಂಸ್ಥೆಗಳಿಗೆ ಪರ್ಯಾಯವಾಗಿ ನ್ಯಾಷನಲ್ ಕಾಲೇಜು ಪ್ರಾರಂಭಿಸಿದಾಗ ಅದರಲ್ಲಿ ಭಗತ್ ಸಿಂಗ್ ಅವರೂ ವಿದಾರ್ಥಿಯಾಗಿದ್ದರು. 1920ರ ವರ್ಷದಲ್ಲಿ ಕಲ್ಕತ್ತಾದಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಲಾಲಾ ಲಜಪತ್ ರಾಯ್ ಆ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಅನುಸಾರವಾಗಿ ಅಸಹಕಾರ ಚಳುವಳಿಯನ್ನು ಕೈಗೊಂಡಾಗ 1921ರಿಂದ 1923ರ ಅವಧಿಯವರೆಗೆ ಅವರು ಕಾರಾಗೃಹ ವಾಸವನ್ನು ಅನುಭವಿಸಿದರು. ಬಿಡುಗಡೆಯಾದ ಸಂದರ್ಭದಲ್ಲಿ ಅವರು ಲೆಜಿಸ್ಲೇಟಿವ್ ಅಸೆಂಬ್ಲಿಗೆ ಚುನಾಯಿತರಾದರು. ಪಂಜಾಬಿನ ವಿಭಜನೆಗೆ ಅವರು ಮಾತುಕತೆಗಳನ್ನು ಆಯೋಜಿಸಿದರು. ಈ ಕುರಿತು ಅವರು 1924ರ ವರ್ಷದಲ್ಲಿ ‘ದಿ ಟ್ರಿಬ್ಯೂನ್ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯನ್ನು ಆಧರಿಸಿ ಪಂಜಾಬನ್ನು ಪೂರ್ವ ಮತ್ತು ಪಶ್ಚಿಮ ಪಂಜಾಬುಗಳಾಗಿ ವಿಂಗಡಿಸಬೇಕೆಂಬ ವಾದವನ್ನು ಮಂಡಿಸಿದರು. ಅದೇ ರೀತಿಯಲ್ಲಿ ಅವರು ವಾಯವ್ಯ ಸೀಮಾ ಪ್ರದೇಶ, ಸಿಂದ್ ಮತ್ತು ಪೂರ್ವ ಬಂಗಾಳಗಳಲ್ಲಿ ಮುಸ್ಲಿಂ ರಾಜ್ಯಗಳನ್ನು ಪ್ರತ್ಯೇಕಿಸಬೇಕೆಂದು ಪ್ರತಿಪಾದಿಸಿದರು.
ಲಾಲಾ ಲಜಪತ್ ರಾಯ್ ಅವರು ತಮ್ಮ ತಾಯಿ ಅವರು 1927ರ ವರ್ಷದಲ್ಲಿ ನಿಧನರಾದಾಗ ಅವರ ಹೆಸರಿನಲ್ಲಿ ಗುಲಾಬಿ ದೇವಿ ಟ್ರಸ್ಟ್ ಸ್ಥಾಪಿಸಿ ಅನೇಕ ಸೇವಾ ಕಾರ್ಯಗಳಿಗೆ ಪ್ರಾರಂಭ ನೀಡಿದ್ದರು.
1928ರ ವರ್ಷದಲ್ಲಿ ಭಾರತದಲ್ಲಿನ ಪರಿಸ್ಥಿತಿಯನ್ನು ವರದಿ ಮಾಡಲು ನಿಯಮಿತಗೊಂಡಿದ್ದ ಸರ್ ಜಾನ್ ಸೈಮನ್ ನೇತೃತ್ವದ ಆಯೋಗದಲ್ಲಿ ಒಬ್ಬರೇ ಒಬ್ಬರೂ ಭಾರತೀಯ ಪ್ರತಿನಿಧಿಗಳು ಇರಲಿಲ್ಲ ಎಂಬ ನಿಟ್ಟಿನಲ್ಲಿ ಭಾರತೀಯ ಸಂಘಟನೆಗಳು ಅದನ್ನು ಬಹಿಷ್ಕರಿಸಲು ತೀರ್ಮಾನ ಕೈಗೊಂಡು ದೇಶದಾದ್ಯಂತ ಚಳುವಳಿಯನ್ನು ನಡೆಸಿದವು. ಅಕ್ಟೋಬರ್ 30, 1928ರಂದು ಸೈಮನ್ ಆಯೋಗವು ಲಾಹೋರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಲಾಲಾ ಲಜಪತರಾಯ್ ಅವರು ಶಾಂತಿಯುತ ಮೆರವಣಿಗೆಯ ನೇತೃತ್ವ ವಹಿಸಿದರು. ಆ ಸಂದರ್ಭದಲ್ಲಿ ಪೋಲಿಸ್ ಸೂಪರಿಂಟೆಂಡೆಂಟ್ ಜೇಮ್ಸ್ ಎ. ಸ್ಕಾಟ್ ಎಂಬ ದುರಹಂಕಾರಿಯು ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡುವ ಆದೇಶವಿತ್ತದ್ದೇ ಅಲ್ಲದೆ ಲಾಲಾ ಲಜಪತ ರಾಯ್ ಅವರ ಮೇಲೆ ಸ್ವಯಂ ಆಕ್ರಮಣ ನಡೆಸಿ ಅವರು ತೀವ್ರವಾಗಿ ಗಾಯಗೊಳ್ಳುವುದಕ್ಕೆ ಕಾರಣನಾದನು. ಈ ತೀವ್ರ ಪೆಟ್ಟುಗಳಿಂದ ಹೊರಬರಲಾಗದ ಲಾಲಾ ಲಜಪತ ರಾಯ್ ಅವರು ನವೆಂಬರ್ 17, 1928ರಂದು ಹೃದಯಾಘಾತದಿಂದ ನಿಧನರಾದರು. ಸ್ಕಾಟನ ಈ ದುಷ್ಕೃತ್ಯ ಮಹಾನ್ ದೇಶಭಕ್ತ, ವಿದ್ವಾಂಸ, ಅಹಿಂಸಾ ಪ್ರವೃತ್ತಿಯ ಶಾಂತಿದೂತರೆನಿಸಿದ್ದ ಲಾಲಾ ಲಜಪತ್ ರಾಯ್ ಅವರ ಮರಣಕ್ಕೆ ಕಾರಣವಾಯಿತು. ಇದರಿಂದ ತೀವ್ರವಾಗಿ ನೊಂದ ಭಗತ್ ಸಿಂಗ್, ರಾಜ ಗುರು, ಸುಖದೇವ್ ಥಾಪರ್, ಚಂದ್ರಶೇಖರ್ ಆಜಾದ್ ಅಂತಹ ವೀರರು ತೀವ್ರ ಹೋರಾಟಕ್ಕಿಳಿದು ದೇಶಕ್ಕೆ ಪ್ರಾಣಾರ್ಪಣೆ ಮಾಡಿದರು.
ಪಂಜಾಬಿನ ಕೇಸರಿ ಎಂದು ಕೀರ್ತಿ ಪಡೆದ ವೀರ ದೇಶನಾಯಕರು. ವಿದ್ಯಾಭ್ಯಾಸ, ಹಿಂದೂ ಸಂಘಟನೆ, ಸಮಾಜ ಸುಧಾರಣೆ – ಎಲ್ಲ ಕ್ಷೇತ್ರಗಳಲ್ಲಿ ದುಡಿದರು. ತಮ್ಮ ವೀರವಾಣಿಯಿಂದ, ಪ್ರಜ್ವಲಿಸುವ ಬಾಳಿನಿಂದ ದೇಶಕ್ಕೆ ಸ್ಫೂರ್ತಿಯಾದರು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಸೇವಕರ ಲಾಠಿ ಪೆಟ್ಟು ಅವರ ಜೀವನವನ್ನು ಕೊಂಡೊಯ್ದಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.