ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು.
ಸ್ವಾತಂತ್ರ್ಯ ಸಂಗ್ರಾಮದ ವೇಳೆ ಕೆಚ್ಚೆದೆಯಿಂದ ಹೋರಾಡಿದ ಮಹಾನ್ ದೇಶಭಕ್ತರಲ್ಲಿ ನೇತಾಜಿಯೂ ಒಬ್ಬರು. ಭಾರತ ಕಂಡ ಅಪ್ರತಿಮ ದೇಶಭಕ್ತ ನೇತಾಜಿ. ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ಕೋಟ್ಯಂತರ ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದವರು ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಫೂರ್ತಿದಾಯಕವಾದುದು.
ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಜೀವವನ್ನೇ ಮುಡುಪಾಗಿಟ್ಟ ಸುಭಾಷ್ ಚಂದ್ರ ಬೋಸ್ ಜನುಮದಿನ ಇಂದು (ಜ. 23). ಭಾರತಮಾತೆಯ ವೀರ ಪುತ್ರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಧೀಮಂತ ಪುರುಷ.
ಸುಭಾಷ್ಚಂದ್ರ ಬೋಸ್ ಜನಿಸಿದ್ದು 1897 ರ ಜನವರಿ 23 ರಂದು, ಒರಿಸ್ಸಾದ ಕಟಕ್ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ 9 ಮಕ್ಕಳಲ್ಲಿ ಸುಭಾಷ್ 6 ನೆ ಯವರು. ಕಟಕ್ನಲ್ಲಿ ರ್ಯಾವೆನ್ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್ ಅವರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗ!
1919 ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ 1919 ರ ಸೆಪ್ಟೆಂಬರ್ 15 ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. 1920 ರ ಸೆಪ್ಟಂಬರ್ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪ್ರಾಪ್ತಿ. ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು 1921 ರ ಎಪ್ರಿಲ್ 22 ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು ಬೋಸ್!
20 ತಿಂಗಳ ಇಂಗ್ಲೆಂಡ್ ವಾಸದ ನಂತರ 1921 ರ ಜುಲೈ 16 ರಂದು ಮುಂಬಯಿಗೆ ಮರಳಿದರು ಬೋಸ್. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ. 1921 ರ ಆಗಸ್ಟ್ನಿಂದ ಚಿತ್ತರಂಜನ್ದಾಸ್ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು 6 ತಿಂಗಳ ಸಜೆ ಘೋಷಿಸಿದಾಗ ’ಬರಿಯ 6 ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!
ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.
ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್ರಿಂದ ಆರ್ಜೀ-ಹುಕುಮಂತ್-ಎ-ಆಜಾದ್ ಹಿಂದ್ (ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ) ಸ್ಥಾಪನೆ; ಐಎನ್ಎಯ ಕಮಾಂಡರ್ ಇನ್ ಚೀಫ್ ಆಗಿ ಬೋಸ್. 1945 ರ ಆಗಸ್ಟ್ 18 ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್ನಿಂದ ವಿಮಾನಹತ್ತಿದ ಸುಭಾಷ್, ವಿಮಾನ ಸ್ಫೋಟದಿಂದಾಗಿ ನಿಧನ.
ಆ ಕುರಿತು ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದೆ. ಅನ್ವೇಷಣಾ ಸಮಿತಿ ನೇಮಿಸಿದರೂ, ಸಾವನ್ನೊಪ್ಪದ ಅನೇಕ ಮಂದಿ ಬಹಳ ವರ್ಷ ನೇತಾಜಿ ಬದುಕಿದ್ದಾರೆಂದೇ, ತಿಳಿದಿದ್ದರು. ಬೋಸರು ಆಗಾಗ ಹೇಳುತ್ತಿದ್ದರು “ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು”.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸದ ಇವರು, ಮುಂದೆ ಆಜಾದ್ ಹಿಂದ್ ಫೌಜಿನ ಮೂಲಕ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.
ನಿಜ! ಅವರೊಬ್ಬ ಅಸಾಧಾರಣ ವ್ಯಕ್ತಿತ್ವದ ಮೇರು ಪುರುಷ. ಬ್ರಿಟನ್ನಿನಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ನಾಲ್ಕನೇ rank ಪಡೆದರೂ ಅದನ್ನು ತಿರಸ್ಕರಿಸಿ ಭಾರತಕ್ಕೆ ಬಂದು ಬ್ರಿಟೀಷ್ ವಿರುದ್ಧದ ಹೋರಾಟದಲ್ಲಿ ಧುಮುಕಿದರು. ಸೆರೆಮನೆಗೆ ತಳ್ಳಲ್ಪಟ್ಟರು ದೇಶಭಕ್ತಿ ಇಂಗಲಿಲ್ಲ. 1921 ರಿಂದ 1941 ರ 20 ವರ್ಷದ ಅವಧಿಯಲ್ಲಿ ಅವರನ್ನು 11 ಬಾರಿ ಬಂಧಿಸಿ ಸೆರೆಮನೆಗೆ ಹಾಕಲಾಯಿತು.
ತೂಕಡಿಸುತ್ತಿದ್ದ ರಾಷ್ಟ್ರವನ್ನು ಎಚ್ಚರಗೊಳಿಸಿ ಬ್ರಿಟೀಷ್ ಸಾನ್ರಾಜ್ಯದ ವಿರುದ್ಧ ಹೊರಾಡಲು ಅಹಿಂಸೆಗಿಂತ ಕ್ರಾಂತಿಯ ಮಾರ್ಗ ಉತ್ತಮ ಎಂದು ತಿಳಿದು ಆ ದಿಕ್ಕಿನಲ್ಲಿ ಹೋರಾಡಲು ಸಿದ್ಧರಾದರು. ಆರು ತಿಂಗಳಲ್ಲಿ ಸ್ವಾತಂತ್ರ್ಯಕೊಡದೇ ಹೋದಲ್ಲಿ ಸಶಸ್ತ್ರ ಹೋರಾಟ ನಡೆಸುವುದಾಗಿ ಬ್ರಿಟೀಷರಿಗೆ ಎಚ್ಚರಿಕೆ ನೀಡಿದರು.
ಸಶಸ್ತ್ರ ಹೋರಾಟಕ್ಕೆ ಅಣಿಯಾಗಿ ಭಾರತದಿಂದ ತಪ್ಪಿಸಿಕೊಂಡು ಕಾಬೂಲ್ ಮಾರ್ಗವಾಗಿ ಜರ್ಮನಿ ತಲುಪಿ ಹಿಟ್ಲರ್ ಭೇಟಿಯ ನಂತರ 1942 ರಲ್ಲಿ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದರು. ಅಲ್ಲಿಂದ ಸಿಂಗಾಪೂರ್ ಮೂಲಕ ಜಪಾನ್ ಆಗಮನ. ಜಪಾನ್ ಸರ್ಕಾರದ ಸಹಾಯದೊಂದಿಗೆ “ಚಲೋ ಡಿಲ್ಲಿ” ಘೋಷಣೆಯೊಂದಿಗೆ ಬ್ರಿಟೀಷ್ ಸಾನ್ರಾಜ್ಯದಲ್ಲಿ ನಡುಕ ಹುಟ್ಟಿಸಿದರು. ಬ್ರಿಟೀಷರಿಗೆ ನೇತಾಜಿಯನ್ನು ಕಂಡರೆ ಅತ್ಯಂತ ಭಯ ಮತ್ತು ಆತಂಕ.
1943 ರ ಅಕ್ಟೋಬರ್ 23 ರಂದು ಸುಭಾಷರು ಜಪಾನಿನಲ್ಲಿ ಸ್ವತಂತ್ರ ಭಾರತದ ‘ಹಂಗಾಮಿ ಸರ್ಕಾರ’ವನ್ನು ಸ್ಥಾಪಿಸಿ ‘ಮೊದಲ ಪ್ರಧಾನ ಮಂತ್ರಿ’ಯಾದರು , ಆ ಸರ್ಕಾರಕ್ಕೆ ಅಗತ್ಯವಾಗಿದ್ದ ಆಡಳಿತ ವ್ಯವಸ್ಥೆಯನ್ನು ಮಾಡಿದ್ದರು. ಅತಿ ಕಡಿಮೆ ಸಮಯದಲ್ಲೇ ನಾಣ್ಯ ವ್ಯವಸ್ಥೆ, ಸಂವಿಧಾನ ಎಲ್ಲವನ್ನು ಮಾಡಲಾಗಿತ್ತು ಅಂದರೆ ಸುಭಾಷರ ದೂರದರ್ಶಿ ವ್ಯಕ್ತಿತ್ವ ಹಾಗೂ ಅದೆಷ್ಟು ವೇಗವಾಗಿ ಕೆಲಸ ಮಾಡುತಿದ್ದರು ಎಂಬುದು ತಿಳಿಯುತ್ತದೆ ಮತ್ತು ಆ ಹಂಗಾಮಿ ಸರ್ಕಾರಕ್ಕೆ ‘ಜರ್ಮನಿ, ಜಪಾನ್, ಚೀನಾ, ಸಿಂಗಾಪುರ’ ಸೇರಿದಂತೆ ಇನ್ನು ಹಲ ರಾಷ್ಟ್ರಗಳು ಮಾನ್ಯತೆ ನೀಡಿದ್ದವು. ಹಂಗಾಮಿ ಸರ್ಕಾರ ಸ್ಥಾಪನೆಯಾದ ಕೆಲ ದಿನಗಳಲ್ಲೇ ಸುಭಾಷರು ಯುದ್ಧ ಘೋಷಿಸಿದರು. ಆಗ ಶುರುವಾಗಿದ್ದೆ ‘ಐ.ಎನ್.ಎ’ ಅಭಿಯಾನ.. ಯುದ್ಧ ಶುರುವಾದ ಕೆಲ ದಿನಗಳಲ್ಲೇ ಸುಭಾಷರ ಪಡೆ ‘ಅಂಡಮಾನ್ ಹಾಗೂ ನಿಕೋಬಾರ್’ ದ್ವೀಪಗಳನ್ನು ವಶಪಡಿಸಿಕೊಂಡಿತು. ಸುಭಾಷರು ಈ ಪ್ರದೇಶಗಳಿಗೆ ‘ಸ್ವರಾಜ್ ಹಾಗೂ ಶಹೀದ್’ ಎಂದು ನಾಮಕರಣ ಮಾಡಿದರು.
ಸ್ವತಂತ್ರ ಭಾರತದ ಮಣ್ಣಿನ ಮೇಲೆ ಕಾಲಿಟ್ಟ ‘ಐ.ಎನ್.ಎ’ ಸೈನಿಕರು ಪುಳಕಿತರಾಗಿದ್ದರು.ಅತ್ತ ಸುಭಾಷರು ಮುಟ್ಟಿಸಿದ ಬಿಸಿಗೆ , ಇತ್ತ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ಚಳುವಳಿಗೆ ಕರೆ ನೀಡಬೇಕಾಗಿ ಬಂತು. ಈಗಿನ ಮಣಿಪುರದ ರಾಜಧಾನಿ ‘ಇಂಫಾಲ್’ ಹಾಗೂ ಕೊಹಿಮಾ ಕೂಡ ಐ.ಎನ್.ಎ ಕೈ ವಶವಾಗಿತ್ತು. ಆದರೆ ಮಹಾ ಯುದ್ಧದಲ್ಲಿ ಬ್ರಿಟಿಷ್ ಮಿತ್ರ ಕೂಟಗಳ ಕೈ ಮೆಲಾಗುತ್ತ ಬಂತು ಹಾಗೆ,ಪ್ರತಿಕೂಲ ಹವಾಮಾನ ಇತ್ಯಾದಿ ಕಾರಣಗಳಿಂದಾಗಿ ‘ಐ.ಎನ್.ಎ’ ಅಭಿಯಾನ ತಾತ್ಕಾಲಿಕವಾಗಿ ಸ್ಥಗಿತವಾಯಿತು.ಸುಭಾಷರು 1945 ರ ಆಗಸ್ಟ್ನಲ್ಲಿ ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಮಡಿದರು ಅನ್ನುವ ಸುದ್ದಿಗಳು ಬಂದವು. ಬಹಳಷ್ಟು ಐ.ಎನ್ ಎ ಸೈನಿಕರನ್ನು ಬ್ರಿಟಿಷ್ ಪಡೆಗಳು ಬಂಧಿಸಿ ಅವರ ಮೇಲೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಸಿದ ‘ಕೋರ್ಟ್ ಮಾರ್ಷಲ್’ ಜನರನ್ನ ರೊಚ್ಚಿಗೆಬ್ಬಿಸಿತ್ತು, ನಂತರ ನೇತಾಜಿ ಯವರ ಐ.ಎನ್.ಎ ಮತ್ತು ಸಾವರ್ಕರ್ ರವರು ಭಾರತೀಯ ಯುವಕರನ್ನು ಪ್ರೇರೇಪಿಸಿ ಸೈನ್ಯಕ್ಕೆ ಸೇರಿಸಿದರ ಪರಿಣಾಮವಾಗಿ ಉಂಟಾದ ‘ನೌಕ ದಳದ’ಬಂಡಾಯ ಬ್ರಿಟಿಷರಿಗೆ ಚರಮ ಗೀತೆಯಾಯಿತು. ಇನ್ನು ಭಾರತೀಯರನ್ನ ದಾಸ್ಯದಲ್ಲಿಡುವುದು ಅಸಾಧ್ಯ ಅನ್ನಿಸಿ 1947 ರ ಆಗಸ್ಟ್ನಲ್ಲಿ ಇಲ್ಲಿಂದ ತೊಲಗಿದರು. ಆದರೆ ಇದರ ಸಂಪೂರ್ಣ ಕ್ರೆಡಿಟನ್ನು ಅಹಿಂಸಾವಾದಿಗಳಿಗೆ ನೀಡಲಾಯಿತು.
ಸದಾ ಭಾರತದ ಸ್ವಾತಂತ್ರಕ್ಕಾಗಿ ಹಂಬಲಿಸುತ್ತಿದ್ದ ನೇತಾಜಿಯ ಸಾವಿನ ಇತಿಹಾಸ ಒಂದು ನೋವಿನ ಅಧ್ಯಾಯ. ನೇತಾಜಿ ಸುಭಾಸ್ ಚಂದ್ರ ಬೋಸ್ 1945 ಅಗಸ್ಟ್ 23ರಂದು ಸಿಂಗಾಪುರದಿಂದ ಹೊರಾಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮೃತಪಟ್ಟರು ಎಂದು ನಾವು ಇತಿಹಾಸದಲ್ಲಿ ಓದುತ್ತೇವೆ. ಆದರೆ ನೇತಾಜಿ ಅಂದು ಸಾಯಲಿಲ್ಲ. ಅವತ್ತು ಅಲ್ಲಿ ವಿಮಾನವೇ ಹಾರಲಿಲ್ಲ. ನೇತಾಜಿ ನಮ್ಮೆಲ್ಲರಿಂದ ದೂರವಾದರು. ಆದರೆ ನೇತಾಜಿ ಹಚ್ಚಿದ ಒಂದು ಕ್ರಾಂತಿಯ ಕಿಡಿ ಮಹಾಜ್ವಾಲೆಯಾಗಿ ಅನೇಕರು ತಮ್ಮ ರಕ್ತವನ್ನು ತೇಯ್ದು ಭಾರತಕ್ಕಾಗಿ ಹರಿಸಿದರು. ಅವರು ಸೃಷ್ಟಿಸಿದ ಹೋರಾಟದ ಜಗತ್ತು ಇಂದಿಗೂ ಭಾರತೀಯರಿಗೆ ಸ್ಫೂರ್ತಿ ತುಂಬುವ ಕೇಂದ್ರ ಬಿಂದುವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.