ಜೀಜಾಬಾಯಿ ಎಂದರೆ ಆತ್ಮಗೌರವದ ಮೂರ್ತಿ; ಎಂತಹ ಕಷ್ಟಗಳೇ ಬರಲಿ ಎದೆಗುಂದದೆ ಎಂತಹ ಪ್ರಸಂಗವನ್ನೂ ಎದುರಿಸುವ ಧೈರ್ಯಶಾಲಿ. ಆಕೆಯ ಅಜ್ಞಾತ ಇತಿಹಾಸವೂ ಅಷ್ಟೇ ಚೈತನ್ಯಮಯ. ಶಿವಾಜಿಯಂತಹ ಮಹಾಪುರುಷನ ಜೀವನಕ್ಕೆ ಆಧಾರ ರೂಪವಾಗಿ ಸಂಸ್ಕಾರ ಕೊಟ್ಟು ತ್ಯಾಗ ಮಾಡಿ, ವೀರತ್ವವನ್ನು ಜಾಗೃತಗೊಳಿಸಿ ಇತಿಹಾಸ ನಿರ್ಮಾಣ ಮಾಡುವ ಕಾರ್ಯದಲ್ಲಿ ಅತ್ಯಂತ ಹಿರಿದಾದ ಪಾತ್ರ ವಹಿಸಿ; ಇಡೀ ಮಾತೃವರ್ಗಕ್ಕೆ ಆದರ್ಶ ಮಾತೆಯಾಗಿ ಮೆರೆದ ವೀರ ಮಹಿಳೆ ಆಕೆ.
ಈಕೆಯ ಜನನ 12 ಜನವರಿ 1598 ರಲ್ಲಿ ಆಯಿತು. ತಂದೆ ಲಖೋಜಿ ರಾವ್ ಜಾಧವ್ ತಾಯಿ ಮಾಳಸಾಬಾಯಿ. ಲಖೋಜಿ, ನಿಜಾಮ್ ಶಾಹಿ ಆಡಳಿತದಲ್ಲಿ ಮೊದಲನೇ ದೊಡ್ಡ ಸರದಾರ. ಅತ್ಯಂತ ಶೂರ ವೀರನು. ತಾಯಿ ಮಾಳಸಾಬಾಯಿ ಸದ್ಗುಣಿ ಸುಶೀಲ ಸ್ತ್ರೀಯಾಗಿದ್ದಳು. ಅವರ ಮುದ್ದಿನ ಮಗಳಾಗಿ ಸದ್ವಿದ್ಯೆ ಬುದ್ಧಿಗಳನ್ನು ಪಡೆದು ಬೆಳೆದ ಚಾಣಾಕ್ಷೆ ಸುಂದರಿ ಜೀಜಾಬಾಯಿ. ಬಾಲ್ಯದಲ್ಲಿಯೇ ವಿದ್ಯಾವಂತೆ ಜೀಜಾ ತಂದೆಯ ಜೊತೆಗೂಡಿ ರಾಜಶಾಸ್ತ್ರ ವಿದ್ಯೆಯ ಬಗ್ಗೆ ಜ್ಞಾನ ಪಡೆದಳು. ತಾಯಿಯಿಂದ ಭಕ್ತಿ, ಭಾವ, ಅಡಿಗೆಯನ್ನು ಕಲೆತಳು. ಆಕೆಯನ್ನು ಕಂಡರೆ ಎಲ್ಲರಿಗೂ ಅತ್ಯಂತ ಪ್ರೀತಿ ವಾತ್ಸಲ್ಯ. ಆಕೆ ಕೇವಲ ಲಖೋಜಿಯ ಮುದ್ದಿನ ಮಗಳಾಗಿ ಅಲ್ಲದೇ ಇಡೀ ಬುಲ್ಧಾನ್ ಜಿಲ್ಲೆಯ ಮುದ್ದಿನ ಮಗಳಾಗಿ ಬೆಳೆದಳು.
ವೀರಮಾತೆಯ ದರ್ಶನ ನಮಗಾಗುವುದು ಸುಮಾರು 400 ವರ್ಷಗಳ ಹಿಂದೆ. ಇವಳು ಜೀಜಾಬಾಯಿ. ಶಹಾಜಿ ಭೋಸಲೆಯ ಹೆಂಡತಿ. ಆದರೆ ಗಂಡ, ಹೆಂಡತಿ ಜೊತೆಯಲ್ಲಿ ಇದ್ದದ್ದೇ ಅಪರೂಪ. ಜೀಜಾಬಾಯಿಯ ಮಗ ಶಿವಾಜಿ ತಾಯಿಯ ಪೋಷಣೆ ಹಾಗು ಮಾರ್ಗದರ್ಶನದಲ್ಲಿಯೇ ಬೆಳೆದ. ಭಾರತದ ಗಡಿಯಾಚೆಯಿಂದ ನುಗ್ಗಿದ ಕಟುಕ ದರೋಡೆಕೋರರನ್ನು ಜೀಜಾಬಾಯಿ ನೋಡಿದ್ದಳು. ಇಲ್ಲಿ ರಾಜ್ಯ ಸ್ಥಾಪಿಸಿ, ಇಲ್ಲಿಯ ಜನತೆಯನ್ನು ಹಿಂಡುತ್ತಿದ್ದಂತಹ, ಇಲ್ಲಿಯ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಂತಹ ವಿದೇಶಿ ದಾಳಿಕಾರರ ಅಡಿಯಲ್ಲಿಯೇ ಅವಳ ತಂದೆ ಹಾಗು ಅವಳ ಗಂಡ ಊಳಿಗ ಮಾಡುತ್ತಿದ್ದರು. ನಾಡ ಜನತೆಯ ಮೇಲೆ ನಡೆಯುವ ದಬ್ಬಾಳಿಕೆಯನ್ನು ಪ್ರತ್ಯಕ್ಷವಾಗಿ ಕಂಡ ಜೀಜಾಬಾಯಿ ಈ ನಾಡವರ ರಾಜ್ಯಕ್ಕಾಗಿ, ಭಾರತೀಯರ ಸ್ವರಾಜಕ್ಕಾಗಿ ತನ್ನ ಮಗ ಶಿವಾಜಿಗೆ ಪ್ರೇರಣೆ ಇತ್ತಳು.
ಶಿವಾಜಿಯು ತನ್ನ ಸ್ವರಾಜವನ್ನು ವಿಸ್ತರಿಸುತ್ತ ಹೋದಂತೆ, ವಿಜಯಪುರದ ಆದಿಲಶಾಹಿ ಚಿಂತಿತನಾದ. ಶಿವಾಜಿಯ ನಿಗ್ರಹಕ್ಕಾಗಿ ಆತ ಅಫ್ಝಲಖಾನನನ್ನು ಕಳಿಸಿಕೊಟ್ಟ. ಅಫ್ಝಲಖಾನ ಸಾಮಾನ್ಯನಲ್ಲ. ಅಫಘಾನ ಮೂಲದ ಈತ ಆದಿಲಶಾಹಿಯ ನೆಚ್ಚಿನ ಸೇನಾಪತಿ. ಶಿವಾಜಿಯನ್ನು ಪುಣೆಯಲ್ಲಿ ಎದುರಿಸಿ, ಕೊಚ್ಚಿ ಹಾಕಲು ಅಫಝಲಖಾನ ಬಯಸಿದ್ದ. ಆದರೆ ಶಿವಾಜಿ ಉದ್ದೇಶಪೂರ್ವಕವಾಗಿ ಪ್ರತಾಪಗಡಕ್ಕೆ ತೆರಳಿದ. ಅಫಝಲಖಾನನ ಸೈನ್ಯ ಪ್ರತಾಪಗಡವನ್ನು ದೀರ್ಘ ಕಾಲದವರೆಗೆ ಮುತ್ತಿಗೆ ಹಾಕಿದರೂ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಮೈತ್ರಿಯ ಒಪ್ಪಂದಕ್ಕೆ ಅಫಝಲಖಾನ ತನ್ನ ದೂತನನ್ನು ಕಳುಹಿದ. ಶಿವಾಜಿ ಈ ಭೇಟಿಗೆ ಒಪ್ಪಿದ. ಇವರಿಬ್ಬರೂ ನಿಶ್ಶಸ್ತ್ರರಾಗಿ ಸಂಧಿಸಬೇಕು. ಜೊತೆಗೆ ಇಬ್ಬರು ಸಶಸ್ತ್ರ ಅಂಗರಕ್ಷಕರು ಮಾತ್ರ ಇರಬೇಕು ಎನ್ನುವ ಶರತ್ತಿನೊಡನೆ ಭೆಟ್ಟಿಯ ಸಿದ್ಧತೆಗಳಾದವು. ಅಫ್ಝಲಖಾನ ಈ ಮೊದಲೊಮ್ಮೆ ಕಸ್ತೂರಿರಂಗ ಎನ್ನುವ ರಾಜನನ್ನು ಇಂತಹದೇ ನೆವದಲ್ಲಿ ಮೋಸದಿಂದ ಕೊಂದಿದ್ದ. ಆದುದರಿಂದ ಶಿವಾಜಿಯ ಹಿತವರ್ಗದವರೆಲ್ಲರೂ ಈ ಭೆಟ್ಟಿಗೆ ಒಪ್ಪದಿರಲು ಆತನಿಗೆ ಸಲಹೆ ನೀಡಿದರು. ಜೀಜಾಬಾಯಿ ಮಾತ್ರ ಶಿವಾಜಿಗೆ ಸಮ್ಮತಿ ನೀಡಿದಳು. (ಜೀಜಾಬಾಯಿಯ ಮೊದಲನೆಯ ಮಗ ಸಂಭಾಜಿ ಕಾಳಗವೊಂದರಲ್ಲಿ ಅಫ್ಝಲಖಾನನಿಂದಲೇ ಹತನಾಗಿದ್ದ. ಹೀಗಿದ್ದರೂ ಸಹ ಜೀಜಾಬಾಯಿ ತನ್ನ ಉಳಿದೊಬ್ಬ ಮಗನನ್ನು ಅಫ್ಝಲಖಾನನ ಭೇಟಿಗೆ ಕಳುಹಿಸಿಕೊಡುತ್ತಾಳೆ!)
ಭೇಟಿಗೆ ಹೋಗುವ ಮುಹೂರ್ತದಲ್ಲಿ ಶಿವಾಜಿಗೆ ಆರತಿ ಬೆಳಗಿ ತಿಲಕವನ್ನಿಡಬೇಕಲ್ಲ. ಶಿವಾಜಿಯ ಹೆಂಡತಿಯ ಕೈ ಆರತಿ ಎತ್ತುವಾಗ ಕಂಪಿಸಿತು. ಜೀಜಾಬಾಯಿ ತಾನೇ ಆರತಿ ಎತ್ತಿ, ತಿಲಕವನ್ನಿತ್ತು, ಆಶೀರ್ವದಿಸಿ ಕಳುಹಿಸಿದಳು. ಮುಂದಿನ ಕತೆ ಎಲ್ಲರಿಗೂ ಗೊತ್ತು. ಆದರೆ ತನ್ನ ಒಬ್ಬನೇ ಮಗನನ್ನು ಒಬ್ಬಂಟಿಯಾಗಿ ಹುಲಿಯ ಬಾಯಿಗೆ ಕಳುಹಿಸಿಲು ಅವಳಿಗೆ ಇದ್ದ ಪ್ರೇರಣೆ ಯಾವುದು?
ಕುಂತಿ ಏಕಚಕ್ರನಗರದ ಪ್ರಜೆಗಳ ಹಿತರಕ್ಷಣೆಗಾಗಿ ಭೀಮಸೇನನನ್ನು ಕಳೆದುಕೊಳ್ಳುವ ಅಪಾಯವನ್ನು ಹೇಗೆ ಎದುರಿಸಿದಳೋ, ಅದೇ ರೀತಿಯಲ್ಲಿ ಜೀಜಾಬಾಯಿಯೂ ಸಹ ಜನಹಿತರಕ್ಷಣೆಗಾಗಿ ತನ್ನ ಒಬ್ಬನೇ ಮಗ ಶಿವಾಜಿಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸಿದಳು. ನಮ್ಮ ನಾಡಿನಲ್ಲಿ ಇಂತಹ ಅಸಂಖ್ಯ ವೀರಮಾತೆಯರು ಆಗಿ ಹೋಗಿದ್ದಾರೆ. ಇವರಿಂದಾಗಿಯೇ ಭಾರತ ಇನ್ನೂ ಜೀವಂತವಿದೆ. ಹೀಗೆ ಎಲ್ಲರಿಗೂ ಆದರ್ಶ ಮೂರ್ತಿಯಾಗಿ ಎಲ್ಲರಿಗೂ ಮಾರ್ಗದರ್ಶಕಳಾಗಿ ಧೀರ ಮಾತೆ ಇವರು.
ದೇಶ-ಧರ್ಮಗಳ ರಕ್ಷಕಿ ಶಿವಾಜಿಯ ತಾಯಿ. ಅವನ ಎಳೆಯ ವಯಸ್ಸಿನಿಂದ ಅವನ ಮನಸ್ಸನ್ನು ರೂಪಿಸಿದ ಮಾರ್ಗದರ್ಶಕಳು. ಆತ್ಮಗೌರವದ ಜೀವಂತ ಮೂರ್ತಿ. ಸಂಕಟಗಳನ್ನು ನುಂಗಿಕೊಂಡು ವೀರಪುತ್ರನಿಗೆ ಸ್ಫೂರ್ತಿಯಾದ ಮಹಾಮಾತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.