‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತು ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತ ಎನ್ನುವುದನ್ನು ಸಾಬೀತುಪಡಿಸಿದ ಮಹಿಳೆಯರ ಪೈಕಿ ಅಗ್ರಸಾಲಿನಲ್ಲಿ ನಿಲ್ಲುವವರು ಸಾವಿತ್ರಿಬಾಯಿ ಪುಲೆ. ಹೌದು, ನಮ್ಮ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ, ಮಹಿಳಾ ಸಮಾನತೆಯ ರೂವಾರಿಯಾದ ಸಾವಿತ್ರಬಾಯಿ ಅವರು ಜನಿಸಿದ್ದು 3.1.1831 ರಲ್ಲಿ, ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂನ್ನಲ್ಲಿ.
ನಮ್ಮ ಸಮಾಜದಲ್ಲಿ ಅಸ್ಪೃಶ್ಯತೆ, ಶೋಷಣೆಗೊಳಗಾದ ಇನ್ನೊಂದು ವರ್ಗವೆಂದರೆ ಮಹಿಳೆಯರು. ಮನು ಸಂವಿಧಾನದ ಪ್ರಕಾರ ಮಹಿಳೆ ವಿದ್ಯೆ ಕಲಿಯಲು ಅನರ್ಹಳು. ವಿದ್ಯಾವಂಚಿತ ಮಹಿಳೆಯರು ಸಮಾಜದಲ್ಲಿ ಶೂದ್ರರಂತೆ ಬದುಕುತ್ತಿದ್ದರು. ಇಂಥ ಕಠಿಣ ಸಂದರ್ಭದಲ್ಲಿ ಮೊದಲ ಮಹಿಳಾ ಶಿಕ್ಷಕಿಯಾಗಿ ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣದ ಮಹತ್ವ ತಿಳಿಸಿದವರು. ಪತಿಯ ಬೆಂಬಲ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಾತ್ರ ಸಾಮಾಜಿಕ ಸಮಾನತೆ ತರಲು ಸಾಧ್ಯ ಎಂಬುದು ಸಾವಿತ್ರಿಬಾಯಿ ಫುಲೆ ಅವರ ಪತಿ ಜ್ಯೋತಿಬಾ ಫುಲೆ ಅವರ ಸಿದ್ಧಾಂತವಾಗಿತ್ತು. ಅದಕ್ಕಾಗೇ ಅವರು ಪತ್ನಿಗೆ ಶಿಕ್ಷಣ ಕೊಡಿಸಿ ಶಿಕ್ಷಕಿಯನ್ನಾಗಿಸುವ ಮೂಲಕ ಮಹಿಳೆಯರಿಗೆ ವಿದ್ಯೆ ನೀಡುವ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು. ಭಾರತದಲ್ಲೆ ಮೊಟ್ಟಮೊದಲ ಬಾರಿ ಪುಣೆಯಲ್ಲಿ ತಾತ್ಯಾ ಸಾಹೇಬ ಭೀಡೆ ಅವರ ಮನೆಯಲ್ಲಿ 1848ರಲ್ಲಿ ಶಾಲೆಯೊಂದನ್ನು ತೆರೆದರು.
ತನ್ಮೂಲಕ ಪತ್ನಿಗೆ ಶಿಕ್ಷಕಿಯಾಗಿ ಮುಂದುವರೆಯಲು ಎಲ್ಲ ರೀತಿಯ ಬೆಂಬಲ ಮತ್ತು ಪ್ರೋತ್ಸಾಹ ನೀಡಿದರು. ಈ ಶಾಲೆ ಭಾರತದ ಪ್ರಪ್ರಥಮ ಖಾಸಗಿ ಮಹಿಳಾ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಮಹಿಳಾ ಶಾಲೆಗೆ ಆಗ ಪ್ರವೇಶ ಪಡೆದವರು ಕೇವಲ ಆರು ಮಂದಿ…! ಈ ಪೈಕಿ ಓರ್ವ ಮರಾಠಿ, ಓರ್ವ ಕುರುಬ ಹಾಗೂ ನಾಲ್ವರು ಬ್ರಾಹ್ಮಣ ವಿದ್ಯಾರ್ಥಿಗಳಾಗಿದ್ದರು. ಪ್ರಬುದ್ಧ ಲೇಖಕಿ ಸಾವಿತ್ರಿಬಾಯಿ ಅವರ ಸಾಧನೆ ಕೇವಲ ಶಿಕ್ಷಕ ವೃತ್ತಿಗೆ ಸೀಮಿತವಾಗಿರಲಿಲ್ಲ. ಅವರೊಬ್ಬ ಪ್ರಬುದ್ಧ ಲೇಖಕಿ ಹಾಗೂ ಕವಯಿತ್ರಿಯೂ ಆಗಿದ್ದರು. ಶ್ರೀ ವಾಳ್ವೇಕರ ಅವರ ಸಂಪಾದಕೀಯದಲ್ಲಿ ಬರುತ್ತಿದ್ದ ‘ಗೃಹಿಣಿ’ ಎಂಬ ನಿಯತಕಾಲಿಕೆಯಲ್ಲಿ ಅವರು ಲೇಖನಗಳನ್ನೂ ಬರೆಯುತ್ತಿದ್ದರು. 1854ರಲ್ಲಿ ‘ಕಾವ್ಯಫುಲೆ’ ಎಂಬ ಅಭಂಗ್ ಶೈಲಿಯಲ್ಲಿ ಮೊದಲ ಕವನ ಸಂಕಲನ ರಚಿಸಿದ ಅವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದೂ ಕರೆಯಲಾಗುತ್ತದೆ.
ಪ್ರಥಮ ಶಿಕ್ಷಕಿ 1847 ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕ ತರಬೇತಿ ಪಡೆದು ಇದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ನೇಮಕಗೊಂಡರು. ಹೀಗೆ ತರಬೇತಿ ಪಡೆದ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಯೂ ಸಾವಿತ್ರಿಬಾಯಿ ಅವರದ್ದು. ಸಂಕಷ್ಟಗಳ ಸರಮಾಲೆ ಸಾವಿತ್ರಿಬಾಯಿ ಅವರು ಶಾಲೆಗೆ ಹೋಗುವಾಗ ದಾರಿಯಲ್ಲಿ ಸಿಗುತ್ತಿದ್ದ ಮಹಿಳೆಯರು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಅಲ್ಲದೇ ಅವರ ಮೇಲೆ ಇಟ್ಟಿಗೆ ಮತ್ತು ಸಗಣಿ ಎರಚುತ್ತಿದ್ದರು. ಆದರೂ ಧೈರ್ಯಗುಂದದ ಸಾವಿತ್ರಿಬಾಯಿ ಶಾಲೆಗೆ ಹೋಗುವಾಗ ತಮ್ಮೊಂದಿಗೆ ಇನ್ನೊಂದು ಸೀರೆ ತೆಗೆದುಕೊಂಡು ಹೋಗುತ್ತಿದ್ದರು.
ಶಾಲೆಗೆ ಬಂದ ಮೇಲೆ ಕೊಳಕಾದ ಸೀರೆ ಬಿಚ್ಚಿಟ್ಟು ಬೇರೆ ಸೀರೆ ತೊಡುತ್ತಿದ್ದರು. ಐದು ಶಾಲೆಗಳು ಮಹಿಳೆಯರ ವಿದ್ಯಾಭ್ಯಾಸಕ್ಕೆಂದು ಫುಲೆ ದಂಪತಿಗಳು ಐದು ಶಾಲೆಗಳನ್ನು ಆರಂಭಿಸಿದರು. ಆರು ವಿದ್ಯಾರ್ಥಿಗಳಿಂದ ಆರಂಭವಾದ ಇವರ ಶಾಲೆಯಲ್ಲಿ ಕ್ರಮೇಣ 235 ಮಹಿಳೆಯರು ನೋಂದಣಿ ಪಡೆದರು. ಕಲಿಕೆಯಲ್ಲಿ ಹೆಣ್ಣುಮಕ್ಕಳಿಗಿದ್ದ ಆಸಕ್ತಿಯನ್ನು ಇದು ಎತ್ತಿ ತೋರಿಸುತ್ತದೆ. ಇವರ ಸಾಧನೆಯನ್ನು ಮೆಚ್ಚಿ ಅಂದಿನ ಬ್ರಿಟಿಷ್ ಸರ್ಕಾರ ಫುಲೆ ದಂಪತಿಗಳ ಗೌರವಿಸಿತ್ತು. ಸಾಮಾಜಿಕ ಕಳಕಳಿ 1891 ರಲ್ಲಿ ‘ಭುವನಕಾಶಿ ಸುಭೋಧ ರತ್ನಾಕರ್’ (ಅಪ್ಪಟ ಮುತ್ತುಗಳ ಸಾಗರ) ಹೆಸರಿನ ಕೃತಿ ಪ್ರಕಟವಾಯಿತು. ಈ ಕೃತಿ ಅವರ ಪತಿ ಜ್ಯೋತಿಬಾ ಅವರ ಜೀವನಚರಿತ್ರೆಯನ್ನೊಳಗೊಂಡಿತ್ತು.
1892 ರಲ್ಲಿ ಅವರ ಭಾಷಣಗಳ ಸಂಪಾದಿತ ಕೃತಿಯನ್ನು ಸಂಗ್ರಹಿಸಲಾಯಿತು. ನಂತರ ‘ಕರ್ಜೆ’ (ಸಾಲ) ಹೆಸರಿನ ಕೃತಿಯನ್ನೂ ಇವರು ರಚಿಸಿದ್ದು, ಇದರಲ್ಲಿ ಸಾವಿತ್ರಬಾಯಿ ಅವರ ಸಾಮಾಜಿಕ ಕಳಕಳಿ ಎದ್ದು ಕಾಣುತ್ತಿತ್ತು. ಸಾಮಾಜಿಕ ಹೋರಾಟ ಇಂದಿನ ಶಿಕ್ಷಣದ ಹಕ್ಕು, ಸರ್ವಶಿಕ್ಷಣ ಅಭಿಯಾನ, ಬಿಸಿಯೂಟದಂಥ ಯೋಜನೆಗಳನ್ನು ಸಾವಿತ್ರಿಬಾಯಿ ಫುಲೆ ಅವರು 150 ವರ್ಷಗಳ ಹಿಂದೆಯೇ ಅನುಷ್ಠಾನಕ್ಕೆ ತಂದಿದ್ದರು. ಶಾಲೆ ತೊರೆಯುವ ಮಕ್ಕಳಿಗೆ ಸ್ಟೈಫಂಡ್ ನೀಡುವ ಮೂಲಕ ಅವರನ್ನು ಶಾಲೆಯತ್ತ ಆಕರ್ಷಿಸುವಂಥ ಅನೇಕ ಯೋಜನೆಗಳನ್ನು ಸಾವಿತ್ರ ಅವರು ಅಂದೇ ಜಾರಿಗೆ ತಂದಿದ್ದರು.
ಪುನರ್ವಸತಿ ಕೇಂದ್ರ ಅಂದಿನ ಕಾಲದಲ್ಲಿ ನಡೆಯುತ್ತಿದ್ದ ವಿಧವೆಯರ ತಲೆ ಬೋಳಿಸುವ ಪದ್ಧತಿಯನ್ನು ಸಾವಿತ್ರಿಬಾಯಿ ಪ್ರಬಲವಾಗಿ ವಿರೋಧಿಸುತ್ತಿದ್ದರು. ವಿಧವೆಯರು ಮತ್ತು ವಿವಾಹಬಾಹಿರ ಸಂಬಂಧಗಳಿಂದಾಗಿ ಗರ್ಭಿಣಿಯರಾಗುವ ಮಹಿಳೆಯರಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿ ಸಂತ್ರಸ್ತೆಯರ ನೆಮ್ಮದಿಗೆ ಕಾರಣರಾಗಿದ್ದರು. ಇಂಥ ಸಂಬಂಧಗಳಿಂದ ಹುಟ್ಟುವ ಮಕ್ಕಳಿಗಾಗೇ ವಿಶೇಷ ಮತ್ತು ವಿಭಿನ್ನ ಶಿಶುಕೇಂದ್ರಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಇವರದು. ರಾತ್ರಿಪಾಳಿ ಶಾಲೆ 1855 ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳಿ ಶಾಲೆಗಳ ಸ್ಥಾಪಿಸಿದರಲ್ಲದೇ 1868ರಲ್ಲಿ ದಲಿತರಿಗಾಗಿ ಮನೆಯಲ್ಲಿದ್ದ ಕುಡಿಯುವ ನೀರಿನ ಟ್ಯಾಂಕನ್ನೇ ಬಿಟ್ಟುಕೊಡುವ ಮೂಲಕ ಜಾತಿಯತೆಯ ಪಿಡುಗಿಗೆ ಸವಾಲೆಸೆದರು. ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರು ಮತ್ತು ಅವರ ಮಕ್ಕಳ ಬದುಕಿಗೊಂದು ನೆಲೆ ಕೊಟ್ಟ ಸಾವಿತ್ರಿಬಾಯಿ ಫುಲೆ ಅವರು ಅಂದಿಗೂ, ಇಂದಿಗೂ ಮತ್ತು ಎಂದೆಂದಿಗೂ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಇಂಥ ಶ್ರೇಷ್ಠ ನಾರೀಮಣಿಯ ಜನ್ಮ ದಿನವಿಂದು. ನಾವೆಲ್ಲರೂ ಇಂದು ಉತ್ತಮ ಶಿಕ್ಷಣ ಪಡೆಯುತ್ತಿದ್ದರೆ ಅದಕ್ಕೆ ಕಾರಣೀಭೂತರು ಇಂತಹ ಮಹಾತ್ಮರು. ಬನ್ನಿ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತ ಅವರು ನಮಗಾಗಿ, ಭಾರತಕ್ಕಾಗಿ ಮಾಡಿದ ಈ ಅನನ್ಯ ಸೇವೆಗೆ ವಂದನೆ ಸಲ್ಲಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.