ಜನವರಿ 1ರಂದು ಏನು ವಿಶೇಷವೆಂದು ಕೇಳಿದರೆ, ಸಣ್ಣ ಮಕ್ಕಳೂ ‘ಹೊಸ ವರ್ಷ’ ಎಂದು ಹೇಳುತ್ತಾರೆ. ಅನೇಕರು ಇದನ್ನೊಂದು ಹಬ್ಬವನ್ನಾಗಿಯೂ ಆಚರಿಸಿ, ಹೊಸ ವರ್ಷವನ್ನು ಸ್ವಾಗತಿಸುವುದು ತಿಳಿದಿರುವ ಸಂಗತಿಯೇ.
ಸಾಮಾನ್ಯವಾಗಿ ಏನಿದು ಕಲ್ಪತರು ದಿನ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೋಜು, ಮಸ್ತಿ, ಕುಡಿಯೋದು, ಕುಣಿಯೋದರಲ್ಲೇ ಸಮಯ ಕಳಿಯುವ ನಮಗೆ ಈ ದಿನದ ಮಹತ್ವ ಹೇಗೆ ಗೊತ್ತಾಗುತ್ತದೆ? ನಮ್ಮದೇ ಸಂಸ್ಕೃತಿಯ ಕಲ್ಪತರು ದಿನಾಚರಣೆ ಮಾಡುವುದು ಬೇಡವೇ?
ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಕೊನೆಯ ದಿನಗಳನ್ನು ಕಲ್ಕತ್ತದ ಕಾಶಿಪುರದ ಉದ್ಯಾನಗ್ರಹದಲ್ಲಿ ಕಳೆದರು. ಅದು ವಿವೇಕಾನಂದರಾದಿ ಶಿಷ್ಯರ ಪಾಲಿಗೆ ಒಂದು ದೇವಾಲಯವು ಆಗಿದೆ; ಒಂದು ವಿಶ್ವವಿದ್ಯಾನಿಲಯವೂ ಆಗಿದೆ. ಕೆಲವೊಮ್ಮೆ ಅಲ್ಲಿ ತತ್ತ್ವಶಾಸ್ತ್ರಗಳ ಅಧ್ಯಯನ ನಡೆದರೆ, ಇನ್ನು ಕೆಲವೊಮ್ಮೆ ಭಕ್ತಿಭಾವದ ಹೊನಲು ಹರಿಯುತ್ತದೆ. ನರೇಂದ್ರನೂ ಅವನ ಸ್ನೇಹಿತರೂ ಸೇರಿ ಭಜನೆ ಪ್ರಾರ್ಥನೆ-ಧ್ಯಾನ ಮಾಡುತ್ತಾರೆ. ಶಿಷ್ಯರೆಲ್ಲ ಹೀಗೆ ಸಾಧನೆ ಮಾಡಿ ಭಗವಂತನ ಕೃಪೆಯನ್ನು ಬೇಡಿದಾಗ, ಆ ದೇವಾಲಯದ ದೇವಮೂರ್ತಿ ಶ್ರೀರಾಮಕೃಷ್ಣರು ಅನುಗ್ರಹ ಮಾಡುವ ರೀತಿ ಅಪೂರ್ವ.
ಅಂದು 1886ನೇ ವರ್ಷದ ಜನವರಿ ಒಂದನೇ ತಾರೀಕು. ಇಂಗ್ಲೀಷ್ ವರ್ಷದ ಮೊದಲನೇ ದಿನ. ರಜಾದಿನ. ಅಂದು ಹಲವಾರು ಜನ ಭಕ್ತರು ಶ್ರೀರಾಮಕ್ರಷ್ಣರ ದರ್ಶನಕ್ಕೆ ಕಾಶಿಪುರಕ್ಕೆ ಬಂದಿದ್ದರು. ಶ್ರೇಷ್ಠ ಭಕ್ತ ಗಿರೀಶಚಂದ್ರನೂ ಬಂದಿದ್ದ. ಆಗ ಶ್ರೀರಾಮಕೃಷ್ಣರು ನೇರವಾಗಿ ಅವನ ಕಡೆಗೆ ಬಂದು ಕೇಳಿದರು. “ಗಿರೀಶ್, ನೀನು ನನ್ನ ವಿಷಯವಾಗಿ ಎಲ್ಲರ ಮುಂದೆ ಏನೇನೊ (ಅವರು ಅವತಾರ ಪುರುಷರು ಎಂದು) ಸಾರುತ್ತಿದ್ದೀಯಲ್ಲ. ನೀನು ಅಂಥಾದ್ದೇನನ್ನು ಕಂಡೆ ನನ್ನಲ್ಲಿ?”
ಈ ಪ್ರಶ್ನೆಗೆ ಗದ್ಗದ ಧ್ವನಿಯಲ್ಲಿ ಉತ್ತರಿಸಿದ ಗಿರೀಶ್ “ಯಾರ ಮಹಿಮೆಯನ್ನು ವರ್ಣಿಸುವಲ್ಲಿ ವ್ಯಾಸ-ವಾಲ್ಮೀಕಿಗಳೂ ಅಸಮರ್ಥರಾಗಿದ್ದಾರೋ ಅಂತಹ ಮಹಾಮಹಿಮನ ವಿಚಾರವಾಗಿ ನನ್ನಂಥವನು ಏನು ತಾನೆ ಹೇಳಬಲ್ಲ!” ಎಂದು. ಇದನ್ನು ಕೇಳಿದೊಡನೇ ಶ್ರೀರಾಮಕೃಷ್ಣರು ಭಾವವುಕ್ಕಿ ಬಂದು ಗಾಢ ಸಮಾಧಿಸ್ಥರಾಗಿ ಬಿಟ್ಟರು. ಗಿರೀಶ್ ಇದನ್ನು ಕಂಡು ಆನಂದಭರಿತನಾಗಿ “ಜೈ ಶ್ರೀರಾಮಕೃಷ್ಣ! ಜೈ ಶ್ರೀರಾಮಕೃಷ್ಣ!” ಎಂದು ಘೋಷಿಸುತ್ತ ಅವರ ಪಾದಧೂಳಿಯನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ. ಆಗ ಶ್ರೀರಾಮಕೃಷ್ಣರು ಮಂದಸ್ಮಿತವದನರಾಗಿ “ನಾನಿನ್ನೇನು ತಾನೆ ಹೇಳಲಿ! ನಿಮಗೆಲ್ಲರಿಗೂ ಆಧ್ಯಾತ್ಮಿಕ ಜಾಗೃತಿಯುಂಟಾಗಲಿ!” ಎಂದು ಗದರಿಸಿದರು. ತಮ್ಮ ಬಳಿಗೆ ಬಂದ ಪ್ರತಿಯೊಬ್ಬನ ಎದೆಯನ್ನೂ ಮುಟ್ಟಿ ‘ನಿನಗೆ ಆತ್ಮಜಾಗೃತವಾಗಲಿ’ ಎಂದು ಹರಸಿದರು. ಹೀಗೆ ಭಕ್ತರೆಲ್ಲ ತಮ್ಮ ಮನೋರಥಗಳನ್ನು ಪೂರೈಸುವ ಕಲ್ಪತರುವಿನ ಕೃಪೆಗೆ ಪಾತ್ರರಾದರು. (ಇಂದಿಗೂ ಜನವರಿ ಒಂದರಂದು ಕಾಶೀಪುರದ ಆ ದಿವ್ಯ ಉದ್ಯಾನದಲ್ಲಿ ಲಕ್ಷಗಟ್ಟಲೆ ಜನ ಸೇರಿ ಅತ್ಯುತ್ಸಾಹದಿಂದ ‘ಕಲ್ಪತರು ದಿನಾಚರಣೆ’ಯನ್ನು ನೇರವೆರಿಸುತ್ತಾರೆ).
ವಂದೇ ಮಾತರಂ
ಭಾರತ್ ಮಾತಾ ಕೀ ಜೈ.
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.