ಬೆಳ್ತಂಗಡಿ : ಕಲಾಪ್ರದರ್ಶನದಲ್ಲಿ ಗಂಡು,ಹೆಣ್ಣು ಸಮಾನ ಎಂಬುದಕ್ಕೆ ಉಜಿರೆಯಲ್ಲಿ ನಡೆದ ಮಹಿಳಾ ಯಕ್ಷಗಾನ ಸಪ್ತಾಹದ ಯಶಸ್ಸೇ ಸಾಕ್ಷಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಹೇಳಿದ್ದಾರೆ.ಅವರು ಭಾನುವಾರ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಇದರ ಆಶ್ರಯದಲ್ಲಿ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ರಿ. ಉಜಿರೆ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಾರ ಕಾಲ ನಡೆದ ಮಹಿಳಾ ಯಕ್ಷಗಾನ ಸಮಾವೇಶ-ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಂದೇಶ ನೀಡಿದರು.
ಹಿಂದಿನಿಂದಲೂ ಸಂದಿ, ಪಾಡ್ದನ, ಶೋಭಾನ ಹಾಡುಗಳಂತಹ ಕಲೆಯಲ್ಲಿ ಮಹಿಳೆಯರೇ ಪ್ರಧಾನರಾಗಿದ್ದರು. ಕಲೆಯಲ್ಲಿ ಗಂಡು ಕಲೆ, ಹೆಣ್ಣು ಕಲೆ ಎಂಬುದಿಲ್ಲ ಎಂಬುದಕ್ಕೆ ಕಳೆದ 25 ವರ್ಷಗಳಿಂದ ಮಹಿಳೆಯರು ಯಕ್ಷಗಾನದಲ್ಲಿ ತೊಡಗಿಸಿಕೊಂಡು ಇಂದು ಯಕ್ಷಗಾನದಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ್ದನ್ನು ಮಹಿಳಾ ಯಕ್ಷಗಾನ ಸಪ್ತಾಹದ ಮೂಲಕ ಪ್ರತ್ಯಕ್ಷವಾಗಿ ಕಂಡಿದ್ದೇವೆ. ಆಸಕ್ತಿ ಮತ್ತು ಜೀವನೋತ್ಸಾಹ ಮುಖ್ಯ ಎಂದರು.
ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಕರಾವಳಿಯ ಕೊಡುಗೆ. ಯಕ್ಷಗಾನ ನಶಿಸುತ್ತಿದೆ ಎಂಬ ಮಾತು ಕೇಳಿ ಬರುವುದನ್ನು ಮಹಿಳೆಯರು ಇಂದು ಯಕ್ಷಗಾನವನ್ನು ಬೆಳೆಸುವ ಮೂಲಕ ಆ ಮಾತನ್ನು ಅಳಿಸಿದ್ದಾರೆ. ಹಿಂದೆ ರಾತ್ರಿಯಿಂದ ಬೆಳಿಗ್ಗೆ ತನಕ ಯಕ್ಷಗಾನ ವೀಕ್ಷಿಸುವ ಕಾಲವಿತ್ತು. ಆದರೆ ಇಂದು ಕೆಲಸದ ಒತ್ತಡದಿಂದ ಕಾಲಮಿತ ಯಕ್ಷಗಾನದತ್ತ ಒಲವು ಹೆಚ್ಚುತ್ತಿದೆ. ಲಯ ಮಾಧುರ್ಯವಿದ್ದಾಗ ಸಂಗೀತ ಆಲಿಸಬಹುದು. ಅದೇ ರೀತಿ ಯಕ್ಷಗಾನವನ್ನು ಯಾವ ಸಮಯದಲ್ಲೂ ಆಸ್ವಾದಿಸಬಹುದು. ಕಲೆಗಳನ್ನು ಆರಾಧಿಸಲು ತನ್ನದೇ ಆದ ತುಡಿತ ಚಿತ್ತ ಅಗತ್ಯ. ಧರ್ಮಸ್ಥಳ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಯಕ್ಷಗಾನವನ್ನು ಪ್ರದರ್ಶಿಸಲಾಗುತ್ತಿದೆ.
ಹಲವಾರು ವರ್ಷಗಳಿಂದ ಯಕ್ಷಗಾನದ ತರಬೇತಿಯನ್ನು ನೀಡಲಾಗುತ್ತಿದೆ. ಆದರೆ ಮಕ್ಕಳಿಗೆ ಓದುವ ಜವಾಬ್ದಾರಿ ಹೆಚ್ಚಿರುವುದರಿಂದ ತರಬೇತಿಗೆ ಬರುವ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಲಸಗಳನ್ನು ಆಸ್ವಾಧಿಸುವ ಉದ್ದೇಶದಿಂದ ರಜಾ ದಿನಗಳಲ್ಲಿ ಯಕ್ಷಗಾನ ತರಬೇತಿಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಸೇನೆ ಮೊದಲಾದ ಅತ್ಯುನ್ನತ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ತೋರಿಸಿದ್ದಾರೆ. ಆದರೆ ರಾಜಕೀಯ ಮತ್ತು ಯಕ್ಷಗಾನ ಪುರುಷರಿಗೆ ಮಾತ್ರ ಸೀಮಿತ ಎಂಬುದನ್ನು ಇಲ್ಲಿ ಸುಳ್ಳಾಗಿದೆ. ಹೆಣ್ಣು ಭ್ರೂಣಹತ್ಯೆ ಮಾಡುವ ಅನಿಷ್ಠ ಪದ್ದತಿ ಇನ್ನೂ ಇರುವುದು ವಿಷಾದನೀಯ. ಇದನ್ನು ನಿವಾರಿಸಲು ಮಹಿಳೆಯರು ಸಮಾಜದಲ್ಲಿ ಉನ್ನತಸ್ಥಾನ ಪಡೆಯಬೇಕು. ಇಂದು ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳು ಕಡಿಮೆಯಾಗಿ ಸಮಾಜಿಕ ಪ್ರಸಂಗಗಳು ಹೆಚ್ಚಾಗುತ್ತಿರುವುದರಿಂದ ಈ ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದಕ್ಕೆ ವಿಷಾದಿಸಿರು.
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮುಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಕುಸುಮಾ ವಿ. ಪಡ್ವೆಟ್ನಾಯ ಉಪಸ್ಥಿತರಿದ್ದರು.
ಕಲೆಗಳಲ್ಲಿ ವಿವಿಧ ಸಾಧನೆಗೈದ ಕೆ. ಆರ್. ಶಾಂತ, ಲೀಲಾ ಶ್ರೀಧರ ರಾವ್, ಶಾಂತ ಪಡ್ವೆಟ್ನಾಯ, ಗಿರಿಜಾ ಭಟ್, ಶ್ಯಾಮಲ ನಾಗರಾಜ್, ಮನೋರಮಾ ತೋಳ್ಪಾಡಿತ್ತಾಯ, ವತ್ಸಲಾ ಬಡೆಕಿಲ್ಲಾಯ, ಸುಚಿತ್ರಾ ಹೊಳ್ಳ, ವಿದ್ಯಾಮನೋಜ್, ಪ್ರಿಯಾ ಸತೀಶ್, ಅನುಸೂಯ ಪಾಠಕ್, ಶ್ಯಾಮಲ ಕೇಶವ್, ಡಾ| ರಜತಾ ರಾವ್, ಅನನ್ಯಾ ಭಟ್ ಕಲಾ ಕೈಂಕರ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಎನ್ ಅಶೋಕ್ ಭಟ್ ಸ್ವಾಗತಿಸಿದರು. ಮನೋರಮಾ ಬಿ. ಎನ್. ಶೃತಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಕುದ್ರೆಂತಾಯ ವಂದಿಸಿರು.
ಸರಕಾರ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸುವಂತೆ ಮಾಡಬೇಕು. ಅಲ್ಲದೆ ಯಕ್ಷಗಾನ ಕಲೆಯಲ್ಲಿ ಸಾಧನೆ ತೋರಿಸುತ್ತಿರುವ ಮಹಿಳೆಯರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡುವಂತಾಗಬೇಕು. ಇದನ್ನು ಕೊಡಿಸುವಂತೆ ನಾನೂ ಪ್ರಯತ್ನಿಸುತ್ತೇನೆ – ಕರಂದ್ಲಾಜೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.