ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರೇ ನಮಗೆ ಪ್ರೇರಕ ಶಕ್ತಿಯಾಗಿದೆ. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ಅಜಾತ ಶತ್ರು ರಾಜಕಾರಣಿ, ದೇಶ ಕಂಡ ಅಪರೂಪದ ಪ್ರಧಾನಿ ಡಾ. ಲಾಲ್ ಬಹದ್ದೂರ್ ಶಾಸ್ತ್ರಿ. ಇಂದು (ಅಕ್ಟೋಬರ್ 2) ಅವರ 108ನೇ ಜನ್ಮದಿನ.
ಭ್ರಷ್ಟಾಚಾರ, ಅಕ್ರಮಗಳು, ದಿನೇ ದಿನೇ ಹೆಚ್ಚುತ್ತಿದ್ದು, ಅಭಿವೃದ್ಧಿ ಹೊಂದುತ್ತಿರುವ ಭಾರತ ದೇಶದ ಕನಸುಗಳು ಬಹುಪಾಲು ಕನಸುಗಳೇ ಆಗಿ ಉಳಿದಿದೆ. ಇಂದು ನಮ್ಮೆಲ್ಲರ ಮನದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಆಸೆ ಚಿಗುರುವುದು ಶಾಸ್ತ್ರಿ ಅವರಂಥಹ ಮಹನೀಯರಿಂದ ಎಂದರೆ ಅತಿಶಯೋಕ್ತಿಯಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿ ಎಂದರೆ ನಮಗೆಲ್ಲರಿಗೂ ನೆನಪಾಗುವುದು 1965 ರ ಯುದ್ಧ. ಅದು ಭಾರತದ ಪಾಲಿಗೆ ಸಂಕಷ್ಟದ ದಿನಗಳು. ಪಾಕಿಸ್ಥಾನದ ಕುತಂತ್ರದಿಂದಾಗಿ ಕಾಶ್ಮೀರ ಪ್ರದೇಶವನ್ನು ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಅಂತಹ ಒತ್ತಡದ ಸ್ಥಿತಿಯಲ್ಲೂ ಧೃತಿಗೆಡದೆ ಭಾರತವನ್ನು ಅಪಾಯದ ಅಂಚಿನಿಂದ ಪಾರುಮಾಡಿದ ಧೀಮಂತ. ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ, ವೈ.ಬಿ.ಚೌಹಾಣ್ ಅವರಿಗೆ ಅಗತ್ಯ ಬೆಂಬಲವನ್ನು ಸೂಚಿಸಿ, ಪಾಕಿಸ್ಥಾನದ ಭಾರತ ನಡುವಿನ ಯುದ್ಧದ ಗೆಲುವಿನ ರೂವಾರಿ ಎನಿಸಿಕೊಂಡ ರತ್ನವೇ ಭಾರತ ರತ್ನ ದಿ.ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. 1948ರಲ್ಲಿ ಭಾರತದ ಮೇಲೆ ಪಾಕ್ ದಾಳಿ ಮಾಡಿದ ಸಂದರ್ಭದಲ್ಲಿ ವಿಶ್ವ ಸಂಸ್ಥೆಯ ಕದ ತಟ್ಟಿದ್ದ ನೆಹರೂ ಆದಿಯಾಗಿ ಯಾರು ತಾನೆ ಇಂಥಹ ದೃಢ ನಿರ್ಧಾರ ತೆಳೆಯಲು ಸಾಧ್ಯ? ಭಾರತ ಪಾಕ್ ಯುದ್ಧದಲ್ಲಿ ಭಾರತವನ್ನು ಸೋಲಿಸಿದ್ದ ಚೀನಾ ಪಾಕಿಸ್ಥಾನದ ಪರ ವಕಾಲತ್ತು ವಹಿಸಿದಾಗಲೂ ಶಾಸ್ತ್ರಿ ಅವರಿಗೆ ಸ್ವತಃ ವಿಶ್ವಸಂಸ್ಥೆಯೇ ಸಹಾಯ ನೀಡಿತ್ತು. 1965 ರ ಗೆಲುವು 1962 ರ ಚೀನಾ ಯುದ್ಧದ ಸೋಲಿನಿಂದ ಕಂಗೆಟ್ಟಿದ್ದ ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿತ್ತು. ಇಷ್ಟು ಸಾಕಲ್ಲವೇ ಶಾಸ್ತ್ರಿ ಅವರು ಎಂಥಹಾ ಧೀಮಂತ ನಾಯಕರು ಎಂಬುದನ್ನರಿಯಲು. ಭಾರತಕ್ಕೆ ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರಿಯವರ ಕೊಡುಗೆ ಅವಿಸ್ಮರಣೀಯ.
“We would prefer to live in poverty for as long as necessary but we shall not allow our freedom to be subverted” ಎಂದಿದ್ದರು ಶಾಸ್ತ್ರಿ. ಆದರೆ ಇಂದಿನ ರಾಜಕಾರಣಿಗಳು ಇದಕ್ಕೆ ತದ್ವಿರುದ್ಧ. ತಮ್ಮ ಇಲಾಖೆಯ ಸಚಿವಾಲಯದಲ್ಲಿ ಇರುವ ಖಜಾನೆಯ ಹಣವನ್ನು ನುಂಗಿ ನೀರು ಕುಡಿಯುವ ಮತ್ತು ಕಾನೂನಿನ ಕೈಗೆ ಸಿಗದೆ ನುಣುಚಿಕೊಳ್ಳುವ ಮೇಧಾವಿ ರಾಜಕಾರಣಿಗಳ ದಂಡೇ ಇಂದಿನ ಭಾರತ ಘನ ಸರ್ಕಾರದ ಸಂಪತ್ತು. 1965ರ ಯುಧ್ಧದ ಪರಿಣಾಮದಿಂದ ಖಾಲಿಯಾಗಿದ್ದ ಖಜಾನೆಯನ್ನು ತುಂಬಲು ಮತ್ತು ದೇಶದ ಒಳಿತಿಗಾಗಿ ಒಂದು ಹೊತ್ತು ಉಪವಾಸ ಮಾಡಲು ಕರೆ ಕೊಟ್ಟ ಅಂದಿನ ಪ್ರಧಾನಿ ಒಂದೆಡೆಯಾದರೆ, ಇಂದು ಇಡಿ ರಾಷ್ಟ್ರದ ಖಜಾನೆಯನ್ನೇ ಲೂಟಿ ತಾನು ಶುದ್ಧಹಸ್ತನೆಂದು ಸಾರುತ್ತ ತಿರುಗುವ ಮಂತ್ರಿಗಳ ದಂಡು ಇನ್ನೊಂದೆಡೆ. ರಾಷ್ಟ್ರದ ಸಂಪತ್ತನ್ನು ಬರಿದಾಗಿಸಿ ವಿದೇಶದಲ್ಲಿ ತಮ್ಮ ಖಾತೆಗಳಲ್ಲಿ ಜಮೆ ಮಾಡಿಕೊಂಡಿರುವ ದೇಶದ್ರೋಹಿಗಳು ನಮ್ಮನಾಳುವುದು ನಮ್ಮ ದೇಶದ ದುರ್ದೈವ.
ಕಾಂಗ್ರೆಸ್ಸಿನವರು ಇಂದೇನಾದರೂ ಅಧಿಕಾರದಲ್ಲಿದ್ದರೆ ಅದು ಶಾಸ್ತ್ರಿ, ಪಟೇಲ್, ಮೊರಾರ್ಜಿ ಅಂಥವರ ಹೆಸರಿನಿಂದಲೇ ಹೊರತು ಇಂದಿನವರ ಕುಖ್ಯಾತ ಆಡಳಿತದಿಂದಲ್ಲ.
ಅದೊಂದು ದಿನ ಪ್ರಧಾನ ಮಂತ್ರಿ ಶಾಸ್ತ್ರಿ ಅವರು ಬಳಸುತ್ತಿದ್ದ ವಾಹನವನ್ನು ಅವರ ಮಗ ಸುನಿಲ್ ಶಾಸ್ತ್ರಿ ವೈಯಕ್ತಿಕ ಕೆಲಸಕ್ಕೆ ಉಪಯೋಗಿಸಿದ್ದು ಅವರ ಗಮನಕ್ಕೆ ಬಂದಾಗ ವಾಹನದ ಚಾಲಕನನ್ನು ಕರೆದು ವಾಹನ ಕ್ರಮಿಸಿದ ವಿವರವನ್ನು ಪಡೆದ ಶಾಸ್ತ್ರೀಜಿ ಅವರು ಅದರ ವೆಚ್ಚವನ್ನು ಸರ್ಕಾರಕ್ಕೆ ಪಾವತಿಸಿದರು!.
ಸಾಮಾನ್ಯ ಮಾನವನಾಗಿ ಹುಟ್ಟಿದರೂ ಅಸಾಮಾನ್ಯ ಕಾರ್ಯಗಳನ್ನೆಸಗಿ ಪಂಡಿತ ನೆಹರೂರವರ ಉತ್ತರಾಧಿಕಾರಿಯಾದರು, ಶಾಂತಿಸಮರಸಗಳೆರಡರಲ್ಲೂ ಜಯ ಭೇರಿ ಹೊಡೆದ ದಿಟ್ಟ ವ್ಯಕ್ತಿ, ಅಸದೃಶ ರಾಷ್ಟ್ರಪ್ರೇಮಿ, ’ತ್ರಿವಿಕ್ರಮ’ನಾಗಿ ಬೆಳೆದ ’ವಾಮನ’ ಲಾಲ್ ಬಹದ್ದೂರ್ ಶಾಸ್ತ್ರಿ.
ಇಂಥಹ ಪ್ರಾಮಾಣಿಕ ನಾಯಕತ್ವದ ಮಹಾನ್ ಚೇತನವನ್ನು ಅವರ ಜನ್ಮದಿನದಂದು ನೆನೆಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಬನ್ನಿ ಇಂತಹ ಮಹಾ ಪುರುಷರನ್ನು ಅವರ ಜನ್ಮದಿನದಂದು ಸ್ಮರಿಸೋಣ. ಅವರು ತೋರಿಸಿಕೊಟ್ಟ ಹಾದಿಯಲ್ಲಿ ಸಾಗೋಣ ತಾಯಿ ಭಾರತಿಯನ್ನು ಮತ್ತೆ ವಿಶ್ವಮಾತೆಯಾಗಿ, ಜಗದ್ಗುರುವನ್ನಾಗಿಸೋಣ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.