ಕುಂಬಳೆ : ನಾರಾಯಣಮಂಗಲದ ಆಸುಪಾಸಿನ ಕೃಷಿಕರಿಗೆ ‘ಜನ್ನಣ್ಣ’ ಅಂದರೆ ಆಪ್ತ ಸಹಾಯಕ. ತೆಂಗಿನ ಮರವೇರಿ ಫಸಲನ್ನು ಮನೆಗೆ ತಲಪಿಸಲು ಅವರಿಗೆ ಜನಾರ್ದನ ಮೂಲ್ಯರೇ ಆಸರೆ. ಹಲವಾರು ದಶಕಗಳ ಕಾಲ ಅವರು ಕಾನ, ನಾಯ್ಕಾಪು, ಕುಂಬಳೆಯ ಪರಿಸರದಲ್ಲಿ ದಿನಗೂಲಿಗೆ ದುಡಿದವರು. ಈ ಮಧ್ಯೆ ಬೆಳೆಸಿಕೊಂಡ ಅವರ ಹವ್ಯಾಸ ಮತ್ತೆ ಅವರನ್ನು ಸಮಾಜ ಗುರುತಿಸುವಂತೆ ಮಾಡಿದೆ. 82 ವರ್ಷದ ಇಳಿವಯಸ್ಸಿನಲ್ಲಿಯೂ ಚುರುಕಿನಿಂದ ದೇಸೀ ತಳಿಯ ಗೋಸೇವೆ ನಡೆಸುತ್ತಿರುವ ಅವರನ್ನು ಹವ್ಯಕ ಮಹಾಮಂಡಲದ ಕುಂಬಳೆ ವಲಯವು ಸೆಪ್ಟೆಂಬರ್ 1, ಶುಕ್ರವಾರ ಅಪರಾಹ್ನ ಶೇಡಿಗುಮ್ಮೆ ಗೋಪಾಲಕೃಷ್ಣ ಭಟ್ಟರ ನಿವಾಸದಲ್ಲಿ ನಡೆಯುವ ಕುಂಬಳೆ ವಲಯ ಸಭೆಯ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸೂಚನೆಯಂತೆ ಸನ್ಮಾನಿಸಲಿದೆ.
ಹೈನುಗಾರಿಕೆಯಲ್ಲಿ ಜನಾರ್ದನ ಮೂಲ್ಯರ ಪಯಣಕ್ಕೆ ಇಪ್ಪತ್ತೈದು ವರ್ಷಗಳು ಸಂದಿವೆ. ಕಾಸರಗೋಡು ತಳಿಯ ಒಂದು ಗಡಸು ಹಸುವನ್ನು ಅಂದು ಅವರು ತಂದು ಮನೆಯ ಹಿಂಬದಿಯಲ್ಲಿ ಕಟ್ಟಿಹಾಕಿದ್ದರು. ಅದೇ ಹಸು ಜನಾರ್ದನ ಮೂಲ್ಯರಿಗೆ ಆಪ್ತವಾಗಿ, ಅದರದ್ದೇ ಸಂತಾನ ಬೆಳೆದು ಬಂದು ಇಂದು ಅವರ ಹಟ್ಟಿಯಲ್ಲಿ ಇಪ್ಪತ್ತೇಳರ ಸಂಖ್ಯೆಗೆ ಬೆಳೆದು ಬಂದಿವೆ, ಸೂರಂಬೈಲಿನಲ್ಲಿರುವ ಎಡನಾಡು ಕ್ಷೀರೋತ್ಪಾದಕ ಸಹಕಾರಿ ಸಂಘಕ್ಕೆ ದೈನಂದಿನ ಏಳು ಲೀಟರ್ ಹಾಲು ಎರೆಯುವಷ್ಟರ ಮಟ್ಟಿಗೆ ಆಸರೆಯಾಗಿವೆ. ಅಂದ ಹಾಗೆ, ಈ ಇಪ್ಪತ್ತೇಳರಲ್ಲಿ ಹಸು, ಕರು, ಹೋರಿ… ಎಲ್ಲ ಬಗೆಯವುಗಳಿವೆ. ಯಾವುದನ್ನೂ ಇಲ್ಲಿಯ ತನಕ ಕಟುಕರ ಕೈಗೆ ಮಾರಾಟ ಮಾಡಿಲ್ಲ, ಯಾವುದಕ್ಕೂ ಕೃತಕ ಗರ್ಭಧಾರಣೆಯನ್ನು ಮಾಡಿಸಿಲ್ಲ ಎಂಬುದೇ ಅವರ ಇನ್ನೊಂದು ವಿಶೇಷತೆ.
ಪತ್ನಿ ಭಾಗೀರಥಿ, ಮಕ್ಕಳಾದ ಚಂದ್ರಶೇಖರ ಮತ್ತು ನಾರಾಯಣ ಇವರೊಂದಿಗೆ ದೇಸೀ ಹಸುಗಳನ್ನೂ ಜನಾರ್ದನ ಮೂಲ್ಯರು ತಮ್ಮ ಕುಟುಂಬವಾಗಿ ಬೆಳೆಸಿಕೊಂಡಿದ್ದಾರೆ. ಅದರಲ್ಲೂ ವಿಕಲಚೇತನ ಚಂದ್ರಶೇಖರನನ್ನು ನೋಡಿಕೊಳ್ಳುವುದರೊಂದಿಗೆ ಅಕ್ಕಪಕ್ಕದ ಹಿತ್ತಿಲಿನಿಂದ ಹುಲ್ಲನ್ನು ಒಟ್ಟುಮಾಡಿ ತಂದು ಹಸುಗಳನ್ನು ಸಾಕಿ ಸಲಹುವ ಕಷ್ಟವನ್ನೂ, ಗೋವು ನೀಡುವ ಪ್ರೀತಿಯನ್ನೂ ಮನೆಮಂದಿಯೆಲ್ಲ ಅನುಭವಿಸಿದ್ದಾರೆ. ಇಂತಹ ನೆಲಮೂಲದ ಕೃಷಿಕ ಜನಾರ್ದನ ಮೂಲ್ಯರಿಗೆ ಇದು ಅರ್ಹವಾಗಿ ದೊರೆತ ಗೌರವ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.