ಕಲ್ಲಡ್ಕ : ಮಂಗಳೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಸಣ್ಣ ಊರು ಕಲ್ಲಡ್ಕ. ಕೃಷಿ, ಕೂಲಿ, ಬೀಡಿ ಕಾರ್ಮಿಕರೇ ಹೆಚ್ಚಾಗಿರುವ ಊರು ಇದು. ಇಂತಹ ಕಲ್ಲಡ್ಕದ ಹೃದಯ ಭಾಗದಲ್ಲಿ ಹೆದ್ದಾರಿಯಿಂದ 60 ಅಡಿ ಎತ್ತರದಲ್ಲಿರುವ ಗುಡ್ಡದಲ್ಲಿ ಊರಿನ ಅನೇಕ ಹಿರಿಯರು ಒಟ್ಟು ಸೇರಿ ನಮ್ಮ ಧರ್ಮದ, ಪರಂಪರೆಯ ಪ್ರತೀಕವಾದ ಭಜನಾ ಸಂಕೀರ್ತನೆಯನ್ನು ನೂರು ವರ್ಷಗಳ ಹಿಂದೆ ಮುಳಿಹುಲ್ಲಿನ ಛಾವಣಿಯ ಕಟ್ಟಡದಲ್ಲಿ ಆರಂಭಿಸಿದರು. ಊರಿನ ಅನೇಕ ಹಿರಿಯರ ತಾಳದ ಧ್ವನಿಯ ಜೊತೆಗೆ ಎಲ್ಲರ ಕಂಠದಿಂದ ಮೊಳಗಿದ ಶ್ರೀ ರಾಮಭಜನೆಯ ಅಲೆಗಳು ಊರಿಗೆಲ್ಲಾ ಪ್ರತಿಧ್ವನಿಸಿತು. ಅದೇ ಈಗ ಶ್ರೀರಾಮ ಮಂದಿರವಾಗಿ ಎಲ್ಲಾ ಹಿಂದುಗಳ ಶ್ರದ್ಧಾ ಕೇಂದ್ರವಾಗಿದೆ.
ಸನಾತನ ಹಿಂದೂ ಧರ್ಮದ ಸಮಾನತೆ, ಸದ್ವಿಚಾರಗಳು ಕೃತಿಯಲ್ಲಿಯೇ ಪ್ರಕಟಗೊಂಡಾಗ ಮಾತ್ರ ಮನುಕುಲದ ಪ್ರಗತಿ ಸಾಧ್ಯ ಎಂಬುದನ್ನು ಅರಿತ ಅಂದಿನ ಹಿರಿಯರು 1932 ರಲ್ಲಿ ಇದೇ ಸ್ಥಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವ, ಶ್ರೀ ರಾಮನವಮಿ ಮುಂತಾದ ಉತ್ಸವಗಳನ್ನು ಆಚರಿಸಿಕೊಂಡು ಬಂದು ಪರಿಸರದ ಮನೆ-ಮನಗಳನ್ನು ಗೆದ್ದರು.
ಅದರ ಪರಿಣಾಮವಾಗಿ 40 ವರ್ಷಗಳ ಹಿಂದೆ 1974 ರಲ್ಲಿ ಆದರ್ಶ ಪುರಷ ಶ್ರೀರಾಮನ ಹೆಸರಿನಿಂದ ಶ್ರೀ ರಾಮ ಭಜನಾ ಮಂದಿರ ಎಂಬ ಹಂಚಿನ ಛಾವಣಿಯ ಸುಂದರ ಕಟ್ಟಡ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಮಕರ ಸಂಕ್ರಮಣದ ಶುಭ ದಿನ ಉದ್ಘಾಟನೆಯಾಗಿತ್ತು.
ಅಂದಿನಿಂದ ಈ ಮಂದಿರ ಹಿಂದು ಸಮಾಜದ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಶ್ರೀ ಸತ್ಯನಾರಾಯಣ ಪೂಜೆ (ಅನ್ನದಾನ), 83 ವರ್ಷಗಳಿಂದ ಶ್ರೀಕೃಷ್ಣಾಷ್ಟಮಿ (ಮೊಸರು ಕುಡಿಕೆ), 40 ವರ್ಷಗಳಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಶ್ರೀ ರಾಮನವಮಿ (ಅಖಂಡ ಭಜನೆ), ಅಯ್ಯಪ್ಪ ವ್ರತಾಚರಣೆ, ವರಮಹಾಲಕ್ಷ್ಮೀ ವ್ರತ, ವಾರದ ಭಜನೆ, ನಗರ ಭಜನೆ ಮುಂತಾದ ಚಟುವಟಿಕೆಗಳಿಂದ ಧಾರ್ಮಿಕ ಕೇಂದ್ರವಾಗಿಯೂ, ದೇಶದ ಚಿಂತನೆ ಹಾಗೂ ವ್ಯಕ್ತಿ ನಿರ್ಮಾಣದ ಕಾರ್ಯ ಮಾಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯ ಶಾಖೆ, ರಾಷ್ಟ್ರ ಸೇವಿಕಾ ಸಮಿತಿಯ ಶಾಖೆಗಳ ಮೂಲಕ ಸಾಮಾಜಿಕ – ಸಾಂಸ್ಕೃತಿಕ ಕೇಂದ್ರವಾಗಿಯೂ ಬೆಳೆಯಿತು. ಯುವಕರಲ್ಲಿ ಸಾಹಸ ಪ್ರವೃತ್ತಿ ಬೆಳೆಸಲು ಗರಡಿ ಸಾಧನೆಯ ಚಟುವಟಿಕೆಗಳು, ಉಪನಯನ ಮದುವೆ-ಸೀಮಂತ ವೈಕುಂಠ ಸಮಾರಾಧನೆಯ ಕಾರ್ಯಕ್ರಮಗಳು, ಹಿಂದೂ ಸಮಾಜದ ಎಲ್ಲಾ ವರ್ಗಗಳ ಸಂಘಟನೆಯ ಚಟುವಟಿಕೆಗಳಿಗೆ ಆಸರೆಯಾಗಿ ಸಾಮರಸ್ಯದ ಕೇಂದ್ರವಾಗಿಯೂ, ಜನರ ಸಮಸ್ಯೆಗಳನ್ನು ಪಂಚಾಯತಿಕೆಯ ಮೂಲಕ ನ್ಯಾಯ ಕೊಡುವ ನ್ಯಾಯ ಕ್ಷೇತ್ರವಾಗಿಯೂ ಬೆಳೆದು ಬಂದಿದೆ. ರಾಜ್ಯದಾದ್ಯಂತ ಶಿಕ್ಷಣ – ಸಂಸ್ಕಾರ ಕ್ಷೇತ್ರದಲ್ಲೇ ಹೆಸರು ಪಡೆದ ಶ್ರೀರಾಮ ವಿದ್ಯಾಕೇಂದ್ರ ಇದೇ ಜಾಗದಲ್ಲಿ ಜನ್ಮತಳೆದ ಸಂಸ್ಥೆ. ಹಿಂದೂ ಸಮಾಜದ ಮೇಲಾಗುತ್ತಿರುವ ಆಕ್ರಮಣಗಳ ವಿರುದ್ಧ ಹೋರಾಡಲು, ತಾಯಂದಿರ ಮಾನ, ಪ್ರಾಣ ಕಾಪಾಡಲು, ಗೋಮಾತೆಯ ರಕ್ಷಣೆಯ ಪ್ರೇರಣೆಯಾಗಿ ಸಮಾಜಕ್ಕೆ ಶಕ್ತಿ ನೀಡಿ, ಹಿಂದೂಗಳ ಸಂರಕ್ಷಣೆಯ ಕೇಂದ್ರವಾಗಿ ಶ್ರೀರಾಮ ಮಂದಿರ ಮೈ ತಳೆದಿದೆ.
2016 ಏಪ್ರಿಲ್ ತಿಂಗಳಿನಲ್ಲಿ ನೂತನ ಶಿಲಾಮಯ ಮಂದಿರದ ಪುನರ್ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿದ್ದು, ಚಿತ್ರದುರ್ಗ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಪರಮಪೂಜ್ಯ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಇವರ ಅಮೃತ ಹಸ್ತದಿಂದ ಸಪರಿವಾರ ಶ್ರೀರಾಮಚಂದ್ರ ದೇವರ ಪ್ರತಿಷ್ಠೆ ಹಾಗೂ ಶ್ರೀರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿದೆ.
ಇದೀಗ ಮಂದಿರದ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಧ್ಯಾನ ಮಂದಿರ ಮತ್ತು 9 ಅಡಿ 9 ಇಂಚು 9 ನೂಲು ಎತ್ತರದ ಹನುಮಾನ್ ವಿಗ್ರಹ ಪ್ರತಿಷ್ಠೆ ಜೂನ್ 19 ರಂದು ನಡೆಯಲಿರುವುದು. ಬೆಳಿಗ್ಗೆ 7 ರಿಂದ ಗಣಪತಿಹವನ, ಪ್ರತಿಷ್ಠಾಹವನ, 9.10 ಕ್ಕೆ ಹನುಮಾನ್ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ, ಪಂಚಾಮೃತಾಭಿಷೇಕ, ಕಲ್ಪೋಕ್ತ ಪೂಜೆ, 10 ಕ್ಕೆ ಸಭಾಕಾರ್ಯಕ್ರಮ, ’ಧರ್ಮಕೇಸರೀ ಸಭಾ’, ಶ್ರೀಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ, ಗುರುಪುರ ಇವರು ಆಶೀರ್ವಚನಗೈಯಲಿದ್ದು, ಸಭಾಧ್ಯಕ್ಷತೆಯಾಗಿ ಶ್ರೀ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಹಾಗೂ ಮುಖ್ಯ ಅತಿಥಿಯಾಗಿ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಉದ್ಯಮಿಗಳು ಇವರು ಉಪಸ್ಥಿತರಿರುವರು. 10.30 ಕ್ಕೆ ಸಾರ್ವಜನಿಕ ಸಿಯಾಳಾಭಿಷೇಕ, ನಿರಂತರ ಭಜನೆ, 12.30 ರಿಂದ ಅನ್ನಸಂತರ್ಪಣೆ ಹಾಗೂ ಸಂಜೆ 5 ರಿಂದ ತಿಲತೈಲಾಭಿಷೇಕ, ಅಲಂಕಾರ, ಭಜನಾ ಮಂಗಳ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿರುವುದು. ಈ ಎಲ್ಲಾ ಕಾರ್ಯಕ್ರಮಗಳಿಗೆ ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ನ ಅಧ್ಯಕ್ಷರಾಗಿರುವ ಡಾ. ಪ್ರಭಾಕರ ಭಟ್, ಕಲ್ಲಡ್ಕ ಹಾಗೂ ಸರ್ವಸದಸ್ಯರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.