‘ನಾಗಬನಗಳು ಧಾರ್ಮಿಕತೆ ಜೊತೆ ಪ್ರಕೃತಿ ಸಂರಕ್ಷಣೆ ಮಾಡುವಂತಾಗಲಿ’ ಬಾಯಾರಿನ ದಳಿಕುಕ್ಕು ಶ್ರೀ ನಾಗದೇವರು, ರಕ್ತೇಶ್ವರಿ,ಗುಳಿಗ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಶ್ರೀ ದಯಾನಂದ ಕತ್ತಲ್ ಸಾರ್
ಕಾಸರಗೋಡು : ಬಾಯಾರಿನ ದಳಿಕುಕ್ಕು ಎಂಬಲ್ಲಿ ಶ್ರೀ ನಾಗದೇವರು, ರಕ್ತೇಶ್ವರಿ, ಗುಳಿಗ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಇದೇ ಎಪ್ರಿಲ್ 1, 2 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಎಪ್ರಿಲ್ 1 ರಂದು ಸಂಜೆ ನಡೆದ ಧಾರ್ಮಿಕ ಸಮಾರಂಭದಲ್ಲಿ ಧಾರ್ಮಿಕ ಭಾಷಣಕಾರರಾಗಿ ಆಗಮಿಸಿದ ತುಳುವ ಬೊಳ್ಳಿ ದಯಾನಂದ ಜಿ.ಕತ್ತಲ್ ಸಾರ್ ಮಾತನಾಡುತ್ತಾ ನಮ್ಮ ತುಳುನಾಡು ತುಂಬಾ ದೈವಿಕತೆ ಇರುವ ಭೂಮಿ, ಈ ತುಳುನಾಡು ಆರಂಭವಾದ ನಂತರ ಇಂದಿನವರೆಗೆ ಯಾವುದೇ ಭೂಕಂಪ, ಸುನಾಮಿ ಮೊದಲಾದ ಪ್ರಾಕೃತಿಕ ವಿಕೋಪಗಳು ನಡೆದಿಲ್ಲ. ಆದರೆ ಇಂತಹ ಪುಣ್ಯ ಭೂಮಿಯಲ್ಲಿರುವ ಕೆಲವು ಸಜ್ಜನರು ಹಾಗೂ ಜ್ಞಾನಿಗಳಿಗೆ ಒಂದು ನೋವಿದೆ. ಅದೇನೆಂದರೆ ಹೆಂಗಸರನ್ನು ಪೂಜನೀಯರಾಗಿ ಕಂಡಲ್ಲಿ ದೇವರು ನೆಲೆಸುತ್ತಾನೆ ಎಂದು ತಿಳಿದಿರುವ ನಮ್ಮ ನಾಡಿನಲ್ಲೂ ಶಾಲೆಗೆ ಹೋಗುವ ಪುಟ್ಟ ಬಾಲಕಿಯ ಮೇಲೂ ಅತ್ಯಾಚಾರದಂತಹ ದುಷ್ಕೃತ್ಯ ನಡೆಸುವವರೂ ಕೂಡ ಇದ್ದಾರೆ ಎಂಬ ವಿಷಾದಕರ ಸಂಗತಿ. ನಾವು “ಗಾವೋ ವಿಶ್ವಸ್ಯ ಮಾತರಃ” ಎಂದು ನಂಬುವ, ಹಾಗೂ ಗೋವನ್ನು ಪೂಜಿಸುವವರು ನಾವು. ನಮ್ಮ ಹೆತ್ತ ತಾಯಿ ನಮಗೆ ಎರಡು ವರ್ಷ ಹಾಲು ಕೊಟ್ಟರೆ ಗೋ ಮಾತೆ ಉಳಿದಂತೆ ನಮ್ಮ ಜೀವನದ ಕೊನೆಯ ತನಕವೂ ಹಾಲು ಕೊಡುವ ತಾಯಿಯಗಿದ್ದಾಳೆ. ಪ್ರಪಂಚದಲ್ಲಿ ಇರುವ ಜೀವಸಂಕುಲಗಳಲ್ಲಿ ಆಮ್ಲಜನಕವನ್ನು ಸ್ವೀಕರಿಸಿ ಪುನಃ ಆಮ್ಲಜನಕವನ್ನೇ ಹೊರಕ್ಕೆ ಬಿಡುವ ಯಾವುದಾದರೂ ಪ್ರಾಣಿಯಿದ್ದರೆ ಅದು ಗೋವು ಮಾತ್ರ. ದನದ ಹಾಲು, ಮೊಸರು, ತುಪ್ಪ, ಗೋಮೂತ್ರ , ಗೋಮಯ ಗಳೆಂಬ ಪಂಚಗವ್ಯವನ್ನು ಸೇವಿಸುವವರಿಗೆ ಅನಾರೋಗ್ಯ ಸಮಸ್ಯೆಗಳು ಕಡಿಮೆ ಅನ್ನುವುದು ವೈಜ್ಞಾನಿಕವಾಗಿ ಸಾಬೀತಾದ ವಿಷಯ. ಇಂತಹ ಗೋಮಾತೆಯನ್ನು ಹಟ್ಟಿಯಿಂದಲೇ ಕದ್ದು ಕೊಂಡೊಯ್ದು ಗೋಮಾಂಸ ಮಾಡಿ ಮಾಡಿ ಮಾರಾಟ ಮಾಡುವವರು ಕೂಡ ನಮ್ಮ ಈ ಪವಿತ್ರ ತುಳುನಾಡಿನಲ್ಲೀ ಇದ್ದಾರೆ ಅನ್ನುವುದು ನಮ್ಮ ದುರದೃಷ್ಟಕರ. ಆದರೆ ನಮ್ಮ ಇಷ್ಟೆಲ್ಲ ವೈರುಧ್ಯಗಳ ನಡುವೆಯೂ ನಮ್ಮ ಹಿರಿಯರ ಪುಣ್ಯ ಫಲ ಹಾಗೂ ಇಲ್ಲಿನ ದೈವಿಕ ಶಕ್ತಿಗಳ ಬಲದಿಂದ ನಮ್ಮ ತುಳುನಾಡು ಈ ಎಲ್ಲ ಸಮಸ್ಯೆಗಳನ್ನು ಮೀರಿ ನಿಂತಿದೆ ಎಂದು ಅಭಿಪ್ರಾಯಪಟ್ಟರು.
ಮುಂದೆ ಅವರು ಮಾತನಾಡುತ್ತಾ ದೈವಾರಾಧನೆ ತುಳುನಾಡಿನ ವೈಶಿಷ್ಟ್ಯ ಅದರಲ್ಲಿ ನಾಗಾರಾಧನೆಯೂ ತುಂಬಾ ಪ್ರಾಮುಖ್ಯ, ಆಯುರ್ವೇದದ ಪ್ರಕಾರ ಮನುಷ್ಯನ ಶರೀರದಲ್ಲಿ ಸುಮಾರು 108 ದೋಷಗಳಿವೆ, ಹಾಗೆಯೇ ಅದರ ಚಿಕಿತ್ಸೆಗೆ 1008 ಗಿಡಮೂಲಿಕೆಗಳನ್ನು ಕೂಡ ಆಯುರ್ವೇದದಲ್ಲೇ ಸೂಚಿಸಲಾಗಿದೆ. ಈ ರೀತಿಯ ಅಮೂಲ್ಯ ಗಿಡಮೂಲಿಕೆಗಳು ಹಾಗೂ ಪಕ್ಷಿ ಸಂಕುಲ ಹಾಗೂ ಸರೀಸೃಪಗಳು ಈ ನಾಗಬನದ ಮೂಲಕ ಸಂರಕ್ಷಿಸಲ್ಪಡುತ್ತಿದ್ದವು. ಆದರೆ ಇಂದಿನ ದಿನಗಳಲ್ಲಿ ಪುನಃ ಪ್ರತಿಷ್ಠೆಯ ಹೆಸರಲ್ಲಿ ನಾಗಬನವನ್ನು ಕಡಿದು ಸಿಮೆಂಟಿನ ಮೂಲಕ ನಿರ್ಮಾಣ ಮಾಡುವ ಕ್ರಮ ಅತ್ಯಂತ ದುರದೃಷ್ಟಕರ ಎಂದರು.
ಮುಂದಿನ ದಿನಗಳಲ್ಲಾದರೂ ನಾಗಬನಗಳಲ್ಲಿ ಸಸ್ಯಸಂಕುಲವನ್ನು ಬೆಳೆಸುವ ಸಂಕಲ್ಪ ಮಾಡಬೇಕೆಂದು ಅವರು ಅಭಿಪ್ರಾಯಪಟ್ಟರು. ಮುಖ್ಯವಾಗಿ ಇಂದಿನ ಯುವಜನತೆ ಮದ್ಯಪಾನ ಧೂಮಪಾನದಂತಹ ದುಷ್ಟಗಳನ್ನು ಬಿಡಬೇಕು. ಇದಲ್ಲದೆ ನಮ್ಮದೈವಗಳಿಗೆ ಮದ್ಯ ಕೊಡುವ ಅಗತ್ಯವಿಲ್ಲ, ನಾವು ಉಪಯೋಗಿಸುವ ವಸ್ತುವನ್ನೆ ದೈವಗಳಿಗೆ ಸಮರ್ಪಿಸುವುದು ವಾಡಿಕೆ. ಹಾಗಾಗಿ ನಾವು ಮದ್ಯಪಾನ, ಧುಮಪಾನದಂತಹ ದುಷ್ಟಟಗಳನ್ನು ಬಿಡಬೇಕು, ಅದರ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಕ್ಷೇತ್ರ ಕೊಂಡೆವೂರು, ಪರಮಪೂಜ್ಯ ಶ್ರೀ ಶ್ರೀ ಉಮೇಶ್ವರ ಸ್ವಾಮೀಜಿ, ಅಮರಜ್ಯೋತಿ ವಿಶ್ವಕುಂಡಲಿ ಯೋಗಾಶ್ರಮ, ರಾಜಘಟ್ಟ ಹಾಗೂ ಕರ್ನಾಟಕ ಧರ್ಮರತ್ನ ಪರಮಪೂಜ್ಯ ಶ್ರೀ ಶ್ರೀ ಸದ್ಗುರು ಶಶಿಕಾಂತಮಣಿ ಸ್ವಾಮೀಜಿ, ಶಿಲಾಂಜನ ಕ್ಷೇತ್ರ, ಬಾಳೆಕೋಡಿ ,ಕನ್ಯಾನ , ಇವರು ಆಶೀರ್ವಚನ ನೀಡಿದರು. ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಮಾನಾಥ ಭಂಡಾರಿ ಪೆರ್ವಡಿ ಬೀಡು (ಮಾಜಿ ಆಡಳಿತ ಮೊಕ್ತೇಸರರು)ಪ್ರಸ್ತುತ ಸೇವಾಸಮಿತಿಯ ಅಧ್ಯಕ್ಷರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ,ಬಾಯಾರು ಇವರು ವಹಿಸಿದ್ದರು.ಬ್ರಹ್ಮಶ್ರೀ ಅನಲತ್ತಾಯ ಶ್ರೀನಿವಾಸ ತಂತ್ರಿ,ಕಮ್ಮಜೆ ಗಣಪತಿ ಭಟ್ (ಸಂಸ್ಕೃತ ವಿದ್ವಾಂಸರು) ಹಾಗೂ ರಾಘವೇಂದ್ರ ಬಲ್ಲಾಳ್ (ಟ್ರಸ್ಟಿಗಳು, ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ) ಇವರುಗಳ ಗೌರವ ಉಪಸ್ಥಿತಿ ಇತ್ತು. ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣಪ್ಪ ಪೂಜಾರಿ ದೇರಂಬಳ, (ಟ್ರಸ್ಟಿಗಳು, ಶ್ರೀ ಸದಾಶಿವ ದೇವಸ್ಥಾನ, ಅಂಬಾರು) ಇವರು ಉಪಸ್ಥಿತರಿದ್ದರು. ಶುಭಾಶಂಸನೆಯನ್ನು ಶ್ರೀ ಕಿಶೋರ್ ಕುಮಾರ್ ನಾಯಕ್ ಪೆರ್ವಡಿ ಬೀಡು. ( ಪೈವಳಿಕೆ ಪಂಚಾಯತ್ ಸದಸ್ಯರು),ಶ್ರೀ ಗಣೇಶ್ ಕುಲಾಲ್ ದಳಿಕುಕ್ಕು (ಪೈವಳಿಕೆ ಪಂಚಾಯತ್ ಸದಸ್ಯರು), ಶ್ರೀಮತಿ ಜಯಲಕ್ಷ್ಮಿ ಭಟ್ ( ಪೈವಳಿಕೆ ಪಂಚಾಯತ್ ಸದಸ್ಯರು),ಹಾಗೂ ಶ್ರೀಮತಿ ಭವ್ಯಾ ಬಿ (ಪೈವಳಿಕೆ ಪಂಚಾಯತ್ ಸದಸ್ಯರು), ಇವರು ನಡೆಸಿದರು.
ಸಭಾಕಾರ್ಯಕ್ರಮದ ನಂತರ ದಳಿಕುಕ್ಕಿನ ಬಾಲಗೋಕುಲದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ನಂತರ ಶ್ರೀ ಸಿದ್ಧಿವಿನಾಯಕ ಯಕ್ಷನಾಟ್ಯ ಕಲಾಕೇಂದ್ರ , ಸುರತ್ಕಲ್ ಇದರ ಸದಸ್ಯರಿಂದ ಯಕ್ಷಗಾನ ಬಯಲಾಟ ನಡೆಯಿತು.
ಎಪ್ರಿಲ್ 2 ರಂದು ಪ್ರಾತಃಕಾಲದಿಂದ ವಿವಿಧ ಭಜನಾ ಸಂಘಗಳಿಂದ ಭಜನೆಯಿಂದ ಆರಂಭಗೊಂಡು ನಂತರ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಶ್ರೀ ನಾಗದೇವರು, ರಕ್ತೇಶ್ವರಿ, ಗುಳಿಗ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು. ನಂತರ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಣಿಲ ಅವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾನ ಭೂಷಣ್ ಕೆ ವೆಂಕಟಕೃಷ್ಣ ಭಟ್ ಬಳಗದವರಿಂದ “ಭಕ್ತಿ ಸಂಗೀತ ಸುಧೆ” ಕಾರ್ಯಕ್ರಮ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.