ಹೊಸಪೇಟೆ: ಒಂದು ಧರ್ಮವು ಮತ್ತೊಂದು ಧರ್ಮವನ್ನು ಸಾಮರಸ್ಯದಿಂದ ಕಾಣುವುದೇ ಮಾನವ ಧರ್ಮ. ಅಂತೆಯೇ ಸೂಫಿಸಂನ ತಳಹದಿಯೂ ಸಾಮರಸ್ಯವೇ ಆಗಿದೆ ಎಂದು ಮಳಖೇಡದ ಸೂಫಿ ಗುರು ಸೈಯದ್ ಶಾ ಮುಸ್ತಫಾ ಖಾದ್ರಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆದ ಕನ್ನಡ ವಿವಿ ಲಲಿತ ಕಲೆಗಳ ನಿಕಾಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಭಾರತದ ಸೂಫಿ ಪರಂಪರೆಗಳು, ದರ್ಶನ, ಸಂಗೀತ ಮತ್ತು ಕಾವ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಸ್ಲಾಂನಲ್ಲಿ ಒಗ್ಗಟ್ಟೆಂಬುದು ಇಲ್ಲ. ಅವರಲ್ಲಿಯೇ ಅನೇಕ ಪಂಗಡಗಳಿವೆ. ಸಾಮರಸ್ಯ ಕಾಣುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಸೂಫಿ ಪರಂಪರೆ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದ ಹಂಪಿ ವಿವಿಗೆ ಧನ್ಯವಾದ ಹೇಳಿದರು.
ಮಸೀದಿ-ಮಂದಿರಗಳು ಇಂದು ವ್ಯಾಪಾರಿ ಕೇಂದ್ರಗಳಾಗಿದ್ದು. ಶ್ರದ್ಧೆಯಿಂದ ಇಲ್ಲಿಗೆ ಬರುವ ಭಕ್ತರನ್ನು ಶೋಷಿಸಲಾಗುತ್ತಿದೆ. ಇದನ್ನು ಮೊದಲು ತಡೆಯಬೇಕಿದೆ ಎಂದು ಒತ್ತಾಯಿಸಿದರು.
ರಾಷ್ಟ್ರೀಯ ವಿಚಾರ ಸಂಕಿರಣದ ಸಂಚಾಲಕ ಡಾ.ರಹಮತ್ ತರೀಕೆರೆ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ಚಿಂತನೆಯಲ್ಲಿ ಧರ್ಮಗಳ ಕುರಿತು ಇಂತಹ ಅಧ್ಯಯನಗಳು ಒಳಗೊಂಡಿವೆ. ಎಲ್ಲ ಧರ್ಮಗಳು ತಮ್ಮ ಹೊಟ್ಟೆಯಿಂದ ನಂಜನ್ನು ಉಂಟು ಮಾಡಿ ಸಾಮರಸ್ಯವನ್ನು ಕೆಡಿಸುತ್ತಿರುವಾಗ ಸೂಫಿಸಂ ಸಾಮರಸ್ಯದ ಆರೋಗ್ಯವನ್ನು ಕಾಪಾಡುತ್ತಿದೆ ಎಂದರು.
ಲಲಿತಕಲೆಗಳ ನಿಕಾಯದ ಡೀನ್ ಡಾ.ಅಶೋಕಕುಮಾರ ರಂಜೇರೆ ಅಧ್ಯಕ್ಷತೆವಹಿಸಿದ್ದರು. ಬಾನು ಮುಷ್ತಾಕ್, ಎಚ್.ಎಸ್. ಅನುಪಮ, ಡಾ.ವಿ.ಎಸ್. ಶ್ರೀಧರ, ಸೈಯದ್ ರಹೂಫ್ ಖಾದ್ರಿ, ಡಾ.ಸಂಜೀವ್ ಕುಲಕರ್ಣಿ, ಡಾ.ಜಿ.ಬಾಲಕೃಷ್ಣ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.