ಅಂದು ಡಿಸೆಂಬರ್ 23. ಬೆಳಗಿನ ಚುಮು ಚುಮು ಚಳಿಯಲ್ಲಿ ಹೊರಟಿತ್ತು ನಮ್ಮ ಪ್ರಯಾಣ ಶ್ರೀ ಕ್ಷೇತ್ರ ರಾಮೇಶ್ವರದತ್ತ. ಇದು ನಮ್ಮ ಮನೆಯ ಹಿರಿಯರೆಲ್ಲ ಸೇರಿ ಕೈಗೊಂಡ ಯಾತ್ರೆ.
ಶಾಸ್ತ್ರದಲ್ಲಿ ಹೇಳುತ್ತಾರೆ ಮೊದಲು ಶ್ರೀ ಕ್ಷೇತ್ರ ರಾಮೇಶ್ವರ ದರ್ಶನ ಮಾಡಿ ಅಲ್ಲಿಯ ಮರಳನ್ನು ತೆಗೆದುಕೊಂಡು ಬಂದು ಶ್ರೀ ಕ್ಷೇತ್ರ ಕಾಶಿಯ ಗಂಗಾ ತಟದಲ್ಲಿ ಹಾಕಿ, ಕಾಶಿ ವಿಶ್ವನಾಥನ ದರ್ಶನ ಮಾಡಿ ಗಂಗಾ ತೀರ್ಥ ತೆಗೆದುಕೊಂಡು ಬಂದು ಮತ್ತೆ ಶ್ರೀ ಕ್ಷೇತ್ರ ರಾಮೇಶ್ವರದಲ್ಲಿ ಮಹಾಸ್ವಾಮಿಗೆ ಅಭಿಷೇಕ ಮಾಡಿಸಬೇಕೆನ್ನುವ ಉಲ್ಲೇಖವಿದೆ.
ಆದರೆ ಇದು ನನಗೊದಗಿದ ಕಾಕತಾಳೀಯವೊ ಅಥವಾ ಅದೃಷ್ಟವೊ ಗೊತ್ತಿಲ್ಲ. 2016 ರ ಆಕ್ಟೋಬರ್ 8 ರಂದು ಮೂರು ತಿಂಗಳ ಮುಂಚೆಯೇ ಮುಂಗಡ ಕಾಯ್ದಿರಿಸಿದ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಯಿತು. ಕಾರಣ ಆರೋಗ್ಯ ಎಚ್ಚರ ತಪ್ಪಿತ್ತು. ಆಗ ಅದೆಷ್ಟು ದುಃಖ ಬೇಸರವಾಗಿತ್ತು. ಆದರೆ ಈಗನಿಸುತ್ತದೆ; ನಮ್ಮಲ್ಲಿ ಒಂದು ಗಾದೆಯಿದೆ. “ಆಗೋದೆಲ್ಲ ಒಳ್ಳೆಯದಕ್ಕೆ”. ಮನೆಯ ಹಿರಿಯರ ಜೊತೆ ಕಾಶಿಗೆ ಹೋಗಲಾಗದಿದ್ದರೂ ಶ್ರೀ ಕ್ಷೇತ್ರ ರಾಮೇಶ್ವರಕ್ಕೆ ಅವರೊಟ್ಟಿಗೆ ಹೋಗುವ ಅವಕಾಶ ಒದಗಿ ಬಂದಿದೆ. ನಂತರದ ಪ್ರಯಾಣ ಕಾಶಿಗೆ ಹೋಗುವ ಯೋಚನೆ.
ಇನೋವಾ ಬಾಡಿಗೆ ವಾಹನದಲ್ಲಿ ಒಂದು ದಿನದ ಊಟದ ತಯಾರಿಯೊಂದಿಗೆ ಬೆಳಗ್ಗೆ ಆರು ಗಂಟೆಗೆ ಬೆಂಗಳೂರನ್ನು ಬಿಟ್ಟೆವು. ಸಾಗುವ ದಾರಿಗೆ ಕೊನೆಯಿಲ್ಲ, ಕಾಣುವ ಸೊಬಗಿಗೆ ಕಣ್ಣೆರಡೂ ಸಾಲದು. ಕಾಂಕ್ರೀಟ್ ಸಮತಟ್ಟಾದ ರಸ್ತೆ ತಮಿಳುನಾಡು ಪ್ರವೇಶಿಸುತ್ತಿದ್ದಂತೆ ಬದಲಾದ ಸೃಷ್ಟಿಯ ಸೌಂದರ್ಯ, ಫಲವತ್ತಾದ ಗದ್ದೆ, ತೋಟ ಎಲ್ಲೆಲ್ಲೂ ಹಸಿರ ಕುಚ್ಚು ಭೂರಮೆಯನ್ನು ಅಪ್ಪಿ ಹಿಡಿದ ಪೈರು. ಮನತಣಿಯೆ ಆಸ್ವಾಧಿಸುತ್ತ ಸಾಗುತ್ತಿತ್ತು ಪಯಣ. ಮಧ್ಯಾಹ್ನದ ಉರಿಬಿಸಿಲು ಏರುತ್ತಿದ್ದಂತೆ ಹೈವೇ. ಬದಿಯಲ್ಲಿ ಕಂಡ ಉಪಹಾರ ಕೇಂದ್ರದಲ್ಲಿ ಹೊಟ್ಟೆ ತಣಿಸಿ ಸಾಗುವ ದಾರಿಯ ಇಕ್ಕೆಲಗಳಲ್ಲಿ ಹುಲುಸಾದ ಸೀಬೆ ಹಣ್ಣಿನ ರಾಶಿ, ಪರಂಗಿ ಹಣ್ಣಿನ ಸೆಳೆತ ಖರೀದಿಸಿದ ಕೈಗಳು ಮೆಲ್ಲನೆ ನಾಲಿಗೆಗೆ ರುಚಿಯ ರಂಗೇರಿಸಿತ್ತು. ಮುಂದಿನ ಊರು ಮಧುರೈ 425 ಕಿ.ಮೀ.ತಲುಪಿದಾಗ ಮಧ್ಯಾಹ್ನ ಮೂರು ಗಂಟೆ.
ಅಲ್ಲಿಂದ ಮುಂದೆ 160 ಕೀ ಮೀ. ದೂರದಲ್ಲಿರುವ ರಾಮೇಶ್ವರದತ್ತ ಹೊರಟ ನಮ್ಮ ಪ್ರಯಾಣ ಕಾಶಿಯಿಂದ ತಂದ ಗಂಗಾ ತೀರ್ಥವನ್ನು ಶಿವನಿಗೆ ಅಭಿಷೇಕ ಮಾಡುವ ಉದ್ದೇಶ ಹಿರಿಯರದು. ನಾವು ಶ್ರೀ ಕ್ಷೇತ್ರವನ್ನು ತಲುಪಿದಾಗ ರಾತ್ರಿ ಏಳು ಗಂಟೆ ಕಳೆದಿತ್ತು. ವಸತಿಗೆ ರೂಮಿನ ಅನ್ವೇಷಣೆ ಪೂರೈಸಿ ಒಮ್ಮೆ ಶಿವನ ದರ್ಶನ ಮಾಡುವ ಧಾವಂತದಲ್ಲಿ ದೇವಸ್ಥಾನದತ್ತ ನಮ್ಮ ನಡಿಗೆ.
ಮುಂದುವರಿಯುವುದು ಕಂತು -2ರಲ್ಲಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.