ಧಾರವಾಡ: ಆಸೆಗಳು, ಬಯಸಿದ್ದು ಈಡೇರಿದಾಗ ಶೋಕ(ದುಃಖ) ಉಂಟಾದರೆ, ಸಿಕ್ಕಾಗ ಮೋಹಗೊಂಡು (ಸಂತೋಷ) ಮನಸ್ಸು ಅದರಲ್ಲಿ ಬೆರತು ಹೋಗುತ್ತದೆ. ಬದುಕಿನಲ್ಲಿ ಉಳಿತು-ಸಂತೋಷ, ಹೋತು-ದುಃಖ, ಏನಿಲ್ಲ-ಶೂನ್ಯ ಇವುಗಳ ಕಡಿಮೆ ಮಾಡಲು ಒಂದಿಷ್ಟು ಸಂಗಮ(ಸತ್ಸಂಗ) ಮಾಡಬೇಕು. ಮೋಹ-ಶೋಕಗಳ ಕ್ರೀಡೆಯೇ ಜೀವನ.
ಸಂಗಮ(ಸತ್ಸಂಗ) ಎಂದರೆ, ಸತ್ಕಾರ್ಯ, ಸುಜ್ಞಾನ, ಸದ್ಭಾವ ಎಂದರ್ಥ. ಈ ಮೂರು ಸಾಧನೆಗಳೇ ದೇವನ ಸಂಗಮ. ಮನುಷ್ಯ ಜೀವನದಲ್ಲಿ ಅನುಭವಿಸಿ ಕಾರ್ಯಮಾಡಬೇಕು. ಮೋಹ-ಶೋಕ ತೆಗೆದು ಹಾಕಿ, ಶಾಂತಿ-ಸಂತೋಷ, ವೈಭವಕ್ಕೆ ಸಂಗಮಾನುಭೂತಿ ಸಹವಾಸ ಮಾಡಿದಾಗ ಸದ್ಗತಿ ಲಭಿಸಲಿದೆ. ಸಂಗಮಕ್ಕೆ ಮನಸ್ಸು ಮಾಡಬೇಕು.
ಕೈಯಿ-ದೇಹದಿಂದ ಮಾಡಲಾಗದ ಕೆಲಸಗಳನ್ನು ಸದ್ಭಾವದಿಂದ ಮಾಡಬಹುದು. ಜೀವನದಲ್ಲಿ ಸುಖ-ದುಃಖ, ಅಗಲುವ-ಕೂಡುವ ಎಲ್ಲ ಸಂಗತಿಗಳು ಬರುತ್ತವೆ. ಈ ಎಲ್ಲವೂ ಮುಗಿದ ಮ್ಯಾಲೆ ಬರುವುದೇ ಶೂನ್ಯ. ಇದುವೇ ಜೀವನ. ಸುಂದರ ಜೀವನ ಅನುಭವಿಸಲು ಇದೊಂದು ಅವಕಾಶ ಸಾಕು. ಇದಕ್ಕೆ ದೇವರಿಗೆ ಕೃತಜ್ಞತೆ ಹೇಳಬೇಕು.
ಸುಜ್ಞಾನ-ಸದ್ಭಾವ ಒಳಾಂಗಗಳು. ಸತ್ಕಾರ್ಯ ಹೊರಾಂಗ. ಎರಡು ಕಣ್ಣಿಗೆ ಗೋಚರಿಸಲ್ಲ. ಇನ್ನೊಂದು ಕಾಣಲ್ಲ. ಒಳಗಿನ ಸೂಕ್ಷ್ಮ-ಸ್ಥೂಲ ವ್ಯಕ್ತಿ ಬದುಕು ಸಾರ್ಥಕ-ಹಿತವಾಗಿ ಆಗಲು ಈ ಎರಡರ ಸಮಾವೇಶ ಆಗಬೇಕು.
ಹೊರಗೆ ಜಗದ್ಭಾವ, ಒಳಗಡೆ ಆತ್ಮಭಾವ ಕೂಡಿದಾಗ ಪರಮಾತ್ಮಭಾವ. ಎಲ್ಲ ನಿಂತಿರುವುದು ಇದರ ಮ್ಯಾಲೆ.
ಅದಕ್ಕಾಗಿ ಬಸವಣ್ಣನವರು ಅಂತರಂಗದ ಶುದ್ಧಿ, ಬಹಿರಂಗ ಶುದ್ಧಿ ಇದೇ ಕೂಡಲ ಸಂಗಮನ ಅನುಭವ ಎಂದು ಹೇಳಿದರು. ನದಿಗಳು ಕೂಡಿ ಸಾಗರದ ಸಂಗಮ ಆದಂತೆ ಜೀವನ. ಇದರ ವೈಭವ ಹೆಚ್ಚಾಗಲು ಅನುಭವಿಸುವ ಗುಣ ಬೆಳೆಯಬೇಕು. ಭಾರತೀಯರ ಸಂಪತ್ತೆ ಅನುಭವಿಸುವುದು, ದಿವ್ಯ ದರ್ಶನ ಮಾಡಿಸುವುದಾಗಿದೆ.
ಸಿಕ್ಕಾಗ ಮೋಹ, ಸಿಗದಾಗ-ದುಃಖ ಪಡುವುದು ಬೇಡ. ಒಂದಿಷ್ಟು ಸಂತೋಷ, ಶಾಂತಿ, ಸಮಾಧಾನದ ಜೀವನ ನಡೆಸೋಣ. ಮನುಷ್ಯ ಜನ್ಮ ಪುನಃ ಸಿಗಲ್ಲ. ಸಿಕ್ಕ ಅವಕಾಶ ಸದ್ಬಳಸಿಕೊಂಡು ಸಂಗಮದಿಂದ ಜೀವವ ಚೆನ್ನಾಗಿ ಅನುಭವಿಸಿ ಪರಮಾತ್ಮಭಾವಕ್ಕೆ ಕೊಂಡೊಯ್ದು, ಪರಮಾನಂದ ಅನುಭವಿಸಿದಾಗ ಜೀವನ ಸಾರ್ಥಕ-ಬೆಲೆ.
ಸುಜ್ಞಾನ-ಸದ್ಭಾವ-ಸತ್ಕಾರ್ಯ ಇವು ಜೀವನದ ಆಧಾರಗಳು. ಇದರಿಂದಲೇ ಜಗತ್ತು ಸುಂದರವಾಗಿ ಕಾಣುತ್ತದೆ. ಆದರೆ, ಭಾವ(ಮನಸ್ಸು) ಶುದ್ಧವಾಗಿರಬೇಕು. ಸಂತೋಷ-ಅಸಂತೋಷ ಭಾವ ಕಾರಣ. ಇದರ ಕಡೆಗೆ ಒಂದಿಷ್ಟು ಎಚ್ಚರ ವಹಿಸಬೇಕು. ಇದಕ್ಕಾಗಿ ಮನುಷ್ಯ ಮೊದಲು ಮೋಹ ಬಂಧನದಿಂದ ಬಿಡುಗಡೆ ಹೊಂದಬೇಕು.
ಆದರೆ, ಸಂತೋಷ ಕೊಡದ ಚಟುವಟಿಕೆಗಳಿಗೆ ಬಲಿಯಾದ ಮನುಷ್ಯ ಈ ಬಂಧನದಿಂದ ಆಚೆಗೆ ಬರಬೇಕಿದೆ. ಏಕೆಂದರೆ ಇವುಗಳಿಂದ ಆರೋಗ್ಯ, ಸಂಬಂಧ, ಆರ್ಥಿಕ ಸ್ಥಿತಿಯೂ ಹದಗೆಡುತ್ತದೆ. ಈ ಕಲ್ಪನೆ ಎಲ್ಲರಲ್ಲಿಯೂ ಇರಬೇಕು. ಹೀಗಾಗಿ ಭಾವ ತಿದ್ದಿ ನಡೆದಾಗ ಬದುಕು ಸುಂದರ. ಇದರಿಂದ ಜೀವನ ವೈಭೋಗ ಹೆಚ್ಚಲಿದೆ.
ಜೀವನವೇ ಒಂದು ಬಿಂದು. ಅಲ್ಲಿ ದೇವರೆಂದರೆ, ಬಯಲು-ಶೂನ್ಯ-ಏನಿಲ್ಲ, ನಾಸ್ತಿನಾಥ (ನಾಶಗಾರರೇ ನಾಶ), ಬಿಡಾಡಿ(ಕಟ್ಟಿ ಹಾಕದ) ಎಲ್ಲವೂ ಇರಲಿದೆ. ವಿವಿಧತೆಯಲ್ಲಿ ಏಕತೆ ಕಾಣುವುದೇ ಸದ್ಭಾವ ಯೋಗ. ಬುದ್ಧಿಯಿಂದ ಇದನ್ನು ದರ್ಶನ ಮಾಡಲು ಸಾಧ್ಯ. ಆಹ್ಮಹತ್ಯೆ, ವೈಮನಸ್ಸು ಬಿಟ್ಟು ಬದುಕು ಸದ್ಭಾವಯೋಗಕ್ಕೆ ಹೋಗಿರಿ.
ಪ್ರವಚನ: ಶ್ರೀ ಸಿದ್ದೇಶ್ವರ ಸ್ವಾಮೀಜಿ, 8 ನೇ ದಿನ 04-3-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.