ಧಾರವಾಡ : ಕಲಾವಿದರು ಮೊದಲು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ಕಲಾವಿದರಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದರು.
ನಗರದ ಸರ್ಕಾರಿ ಆರ್ಟ್ ಗ್ಯಾಲರಿಯ ಸಭಾ ಭವನದಲ್ಲಿ ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಫೆ. 27 ರ ಸೋಮವಾರದಿಂದ ಮಾರ್ಚ್ 2 ರ ವರೆಗೆ ಹಮ್ಮಿಕೊಂಡಿರುವ ಯುಗಾದಿ ರಾಷ್ಟ್ರೀಯ ಚಿತ್ರಕಲಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಕಲೆಯಲ್ಲಿ ಮಾನವೀಯ ಮೌಲ್ಯಗಳನ್ನು ತೋರಿಸುವ ಮೂಲಕ ಅನೇಕ ಕಲಾವಿದರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಚಿತ್ರಕಲೆ ಹಾಗೂ ಕಲಾವಿದರನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ಟ್ರಸ್ಟ್ ಹಲವಾರು ಚಿತ್ರಕಲಾ ಶಿಬಿರಗಳನ್ನು ಏರ್ಪಡಿಸಿದೆ. ಇಂದಿನ ಯುವಕರು ಪಠ್ಯದ ಜತೆಗೆ ಚಿತ್ರಕಲೆಯ ಬಗ್ಗೆಯೂ ಆಸಕ್ತಿ ತೋರಿಸುವ ಮೂಲಕ ಶ್ರೇಷ್ಠ ಕಲಾವಿದರಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ಇರುವ ಶ್ರೇಷ್ಠ ಚಿತ್ರಕಲಾವಿದರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಈ ಚಿತ್ರಕಲಾ ಶಿಬಿರವನ್ನು ಆಯೋಜಿಸಲಾಗಿದೆ. ಯುಗಾದಿ ಅಂಗವಾಗಿ ಹಮ್ಮಿಕೊಂಡಿರುವ ರಾಷ್ಟ್ರೀಯ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿರುವ 20 ಕಲಾವಿದರು ವಿವಿಧ ಚಿತ್ರಗಳನ್ನು ಬಿಡಿಸಲಿದ್ದಾರೆ. ಸ್ಥಳೀಯ ಚಿತ್ರಕಲಾ ವಿದ್ಯಾರ್ಥಿಗಳು ಶಿಬಿರಕ್ಕೆ ಆಗಮಿಸಿ ಚಿತ್ರಕಲೆಯ ಬಗ್ಗೆ ಹೆಚ್ಚು ತಿಳಿದುಕೊಂಡು ಉತ್ತಮ ಕಲಾವಿದರಾಗಿ ರೂಪುಗೊಳ್ಳಬೇಕು ಎಂದರು.
ಯುಗಾದಿ ರಾಷ್ಟ್ರೀಯ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಲು ಬಂದಿದ್ದ ವಿವಿಧ ರಾಜ್ಯಗಳ 20 ಕಲಾವಿದರು ಹಾಗೂ ವೇದಿಕೆ ಮೇಲಿದ್ದ ಗಣ್ಯರು ಚಿತ್ರ ಬಿಡಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಸದಸ್ಯ ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಎಂ.ಆರ್.ಬಾಳಿಕಾಯಿ, ಬಿ. ಮಾರುತಿ, ಎಸ್.ಕೆ.ಪತ್ತಾರ, ಜೆಎಸ್ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ಸ್ನ ಪ್ರಾಚಾರ್ಯೆ ರೇಣುಕಾ ಮಾರ್ಕಾಂಡೆ, ಶಿವಶಂಕರ ಹಿರೇಮಠ, ಶಶಿ ಸಾಲಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಅನಿಲ ದೇಸಾಯಿ ನಿರೂಪಿಸಿ, ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.