ಧಾರವಾಡ: ನಗರದ ಕೆಸಿಡಿ ಮೈದಾನದಲ್ಲಿ ಒಂದು ತಿಂಗಳ ಕಾಲ ಆಯೋಜಿಸಿರುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ, ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಜಗತ್ತಿನಲ್ಲಿ ಎಲ್ಲೆಡೆ ಇಂದು ಅಶಾಂತಿ ತಾಂಡವಾಡುತ್ತಿದೆ. ವಿಶ್ವದಲ್ಲಿ ಶಾಂತಿ ನೆಲೆಸುವುದು ಆಧ್ಯಾತ್ಮದಿಂದ ಮಾತ್ರ. ಆಧ್ಯಾತ್ಮಕ್ಕೆ ಅಂತಹ ಶಕ್ತಿ ಇದೆ ಎಂದರು.
ಮಾನವನಿಗೆ ಇಂದು ಮೂರು ರೀತಿಯ ತಾಪತ್ರಯಗಳು ಇವೆ. ಅಧಿಭೌತಿಕ ತಾಪತ್ರಯ, ಅಧಿದೈವಿಕ ತಾಪತ್ರಯ ಮತ್ತು ಆಧ್ಯಾತ್ಮಿಕ ತಾಪತ್ರಯ ಎಂದು. ಈ ಎಲ್ಲ ತಾಪತ್ರಯ ತೊಡೆಯುವ ಶಕ್ತಿ ಸಿದ್ದೇಶ್ವರ ಶ್ರೀಗಳ ಪ್ರವಚನದಲ್ಲಿ ಅಡಗಿದೆ ಎಂದರು.
ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್ತಿನಲ್ಲಿ ಎಲ್ಲ ವಿಷಯಗಳು ಚರ್ಚೆಯಾಗುತ್ತವೆ. ಆದರೆ ಅಲ್ಲಿ ಆಧ್ಯಾತ್ಮಿಕ ವಿಷಯ ಕುರಿತು ಚರ್ಚೆಯಾಗುತ್ತಿಲ್ಲ. ಆಧ್ಯಾತ್ಮದ ಚರ್ಚೆಯಾದರೆ ದೇಶಕ್ಕೆ ಉತ್ತಮ. ಮಾನವನು ತನ್ನನ್ನು ತಾನೇ ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದೇ ನಿಜವಾದ ಆಧ್ಯಾತ್ಮ ಎಂದು ಹೇಳಿದರು.
ಬಿಷಪ್ ರೈಟ್ ರೆವರೆಂಡ್ ಜೆ. ನಿರಂಜನಕುಮಾರ್, ಮಾನವ ಲೋಕವನ್ನು ಗೆದ್ದು ಆತ್ಮವನ್ನು ಕಳೆದುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಆತ್ಮವನ್ನು ಗೆಲ್ಲುವತ್ತ ಗಮನಹರಿಸಬೇಕು. ಜಗತ್ತನ್ನು ಗೆಲ್ಲುವ ಆಕಾಂಕ್ಷೆ ಇಟ್ಟಡುಕೊಂಡಿದ್ದ ಅಲೆಕ್ಸಾಂಡರ್ ಕೊನೆಗೆ ಬರೀ ಕೈಯಲ್ಲೇ ಹೋದ. ಹೀಗಾಗಿ ನಾವುಗಳು ಪರಸ್ಪರರನ್ನು ಪ್ರೀತಿಸುವತ್ತ ಯೋಚಿಸಬೇಕು ಎಂದರು.
ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು, ಬಸವಣ್ಣನವರು ಎರಡು ಅಂಶಗಳಲ್ಲೇ ಜೀವನದ ಅರ್ಥವನ್ನು ಹೇಳಿದ್ದಾರೆ. ಒಂದು ಮತ್ತೊಬ್ಬರ ಮನಸ್ಸು ನೋಯಿಸದಿರುವುದು, ಮತ್ತೊಬ್ಬರ ಮನೆ ಹಾಳು ಮಾಡದಿರುವುದೇ ಉತ್ತಮ ಜೀವನ ಮತ್ತು ಆಧ್ಯಾತ್ಮ ಎಂದು ಹೆಳಿದ್ದಾರೆ. ಅದರಂತೆ ನಾವೆಲ್ಲ ನಡೆಯೋಣ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಧಾರವಾಡದಲ್ಲಿ ಸಿದ್ದೇಶ್ವರ ಶ್ರೀಗಳ ಪ್ರವಚನ ನಡೆಸಲು ೯ ವರ್ಷಗಳಿಂದ ಪ್ರಯತ್ನ ನಡೆಸಿದ್ದೆವು. ಆದರೆ ಈ ಬಾರಿ ಶ್ರೀಗಳು ಧಾರವಾಡದಲ್ಲಿ ಪ್ರವಚನ ಮಾಡಲು ಒಪ್ಪಿದರು. ಪ್ರವಚನಕ್ಕೆ ಎಲ್ಲ ಮತ, ಧರ್ಮ, ಸಮುದಾಯಗಳ ಜನತೆ, ಮುಖಂಡರು ಸಹಕಾರ ನೀಡಿದ್ದಾರೆ. ಶ್ರೀಗಳ ಪ್ರವಚನ ಕೇಳಿ ನಾವೆಲ್ಲ ಪುನೀತರಾಗೋಣ ಎಂದರು.
ಚಿಕ್ಕಮಲ್ಲಿಗವಾಡದ ಎ.ಪಿ. ಪಾಟೀಲ್ ಗುರೂಜಿ, ರಾಮಕೃಷ್ಣಾಶ್ರಮ ವಿಜಯಾನಂದ ಸರಸ್ವತಿಗಳು ಮಾತನಾಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಶಾಸಕ ಅರವಿಂದ ಬೆಲ್ಲದ ಸ್ವಾಗತಿಸಿದರು. ಕುರಡಿಕೇರಿ ಪ್ರಾರ್ಥಿಸಿದರು. ಆಕಾಶವಾಣಿಯ ಅನಿಲ್ ದೇಸಾಯಿ ನಿರೂಪಿಸಿದರು.
ಸಂಸದ ಪ್ರಹ್ಲಾದ ಜೋಶಿ, ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕರಾದ ಸೀಮಾ ಮಸೂತಿ, ವೀರಭದ್ರಪ್ಪ ಹಾಲಹರವಿ, ಮೋಹನ ಲಿಂಬಿಕಾಯಿ, ಚಂದ್ರಕಾಂತ್ ಬೆಲ್ಲದ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಸಾಹಿತಿ ಡಾ. ಗುರುಲಿಂಗ ಕಾಪ್ಸೆ, ಬಿ.ಡಿ. ಪಾಟೀಲ್, ಬಿ.ಡಿ. ಹಿರೇಮಠ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.