ಮೂಡುಬಿದಿರೆ: ಭಾರತದಲ್ಲಿ ಈಶಾನ್ಯ ರಾಜ್ಯಗಳು ಯಾವಾಗಲೂ ಸಮಸ್ಯೆಗಳಿಂದ ಬಳಲು ಅಲ್ಲಿರುವ ರಾಜಕೀಯ ತಲ್ಲಣಗಳು ಹಾಗೂ ಗಡಿ ಸಮಸ್ಯೆಗಳೇ ಮುಖ್ಯ ಕಾರಣ. ನಮ್ಮ ನೆರೆರಾಷ್ಟ್ರಗಳೊಂದಿಗೆ ಬಹುತೇಕ ಈಶಾನ್ಯ ರಾಜ್ಯಗಳು ಗಡಿಯನ್ನು ಹಂಚಿಕೊಂಡಿದ್ದು, ರಾಜಕೀಯ ಅಸ್ಥಿರತೆ ಅಲ್ಲಿನ ಜನರನ್ನು ಕಾಡುತ್ತಿದೆ. ಅಲ್ಲದೇ ಬ್ರಿಟಿಷ್ ಸರಕಾರವಿದ್ದಾಗ ಮಾಡಿಕೊಂಡ ಹಲವು ಒಪ್ಪಂದಗಳು ಇಂದಿಗೂ ಆ ರಾಜ್ಯಗಳ ಮೇಲೆ ತಮ್ಮ ಪ್ರಭಾವವನ್ನು ಹೊಂದಿವೆ’ ಎಂದು ಇಂಫಾಲ್ ಫ್ರೀ ಪ್ರೆಸ್ನ ಪ್ರಧಾನ ಸಂಪಾದಕ ಪ್ರದೀಪ್ ಫಂಜೌಬಾಮ್ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಆಯೋಜಿಸಿದ್ದ `ಶ್ಯಾಡೋ ಆ್ಯಂಡ್ ಲೈಟ್: ನಾರ್ತ್ ಈಸ್ಟ್ ಆ್ಯಂಡ್ ಇಟ್ಸ್ ಲಿಗೆಸೀಸ್’ ಎಂಬ ವಿಷಯದ ಕುರಿತಾಗಿ ಆಯೋಜಿಸಿದ್ದ ಅತಿಥಿ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರದೀಪ್ ಫಂಜೌಬಾಮ್ ಅವರ ಉಪನ್ಯಾಸವು ಈಶಾನ್ಯ ಭಾರತದ ಇತಿಹಾಸದ ಹಲವು ಪ್ರಮುಖ ಘಟನೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿತು.
`ಬ್ರಿಟಿಷ್ ವಸಾಹತುಶಾಹಿಯ ಸಂದರ್ಭದಲ್ಲಿ ಬ್ರಿಟಿಷ್ ಚಿಂತನೆಗಳು ಈಶಾನ್ಯ ಭಾರತದ ಮೇಲೆ ದೊಡ್ಡ ಪರಿಣಾಮವನ್ನು ಬೀರಿದವು. `ಒಂದು ಧರ್ಮ, ಒಬ್ಬನೇ ದೇವರು’ ಅದರಲ್ಲಿ ಬಹುಮುಖ್ಯವಾದದು. ಆ ಸಂದರ್ಭದಲ್ಲಿ ಈಶಾನ್ಯ ರಾಜ್ಯಗಳು ಸಾಕಷ್ಟು ಘರ್ಷಣೆಗಳಿಗೆ ಒಳಗಾದವು. ಅಲ್ಲಿನ ಜನರು ತಮ್ಮ ಸ್ವತ್ತುಗಳಿಗಾಗಿ ಹೋರಾಟ ನಡೆಸಿದ ಸಂದರ್ಭಗಳೂ ಇವೆ. ವಸಾಹತುಶಾಹಿಯ ನಂತರದ ದಿನಗಳಲ್ಲಿ ಅಲ್ಲಿನ ಸಾಮಾಜಿಕ ಜೀವನದಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಂಡವು. ಬ್ರಿಟಿಷ್ ಸರಕಾರವಿದ್ದ ಸಂದರ್ಭದಲ್ಲಿ ಗಡಿ ಕುರಿತಾಗಿ ಚೀನಾದೊಂದಿಗೆ ಮಾಡಿಕೊಂಡ ಒಪ್ಪಂದವು ಈಶಾನ್ಯ ಭಾರತದ ಮೇಲೆ ಪರಿಣಾಮವನ್ನು ಬೀರಿದೆ’ ಎಂದರು.
ಅರುಣಾಚಲ ಪ್ರದೇಶವು ಚೀನಾದೊಂದಿಗೆ ಉದ್ದದ ಗಡಿಯನ್ನು ಹೊಂದಿದ್ದು, ಗಡಿ ಸಮಸ್ಯೆಗಳು ಅಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅರುಣಾಚಲ ಪ್ರದೇಶವನ್ನು ನಿಯಂತ್ರಿಸಿದರೆ ಅಲ್ಲಿನ ಅತಿ ದೊಡ್ಡ ಸಮಸ್ಯೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಪ್ರದೀಪ್ ಅಭಿಪ್ರಾಯ ಪಟ್ಟರು.
ಈಶಾನ್ಯ ಭಾರತವನ್ನು ಆಳಿದ ಹಲವಾರು ರಾಜಮನೆತನಗಳು, ಪ್ರಸಿದ್ಧ ರಾಜರು ಸೇರಿದಂತೆ ಲ್ಹಾಸಾ ಒಪ್ಪಂದ, ದಲಾಯಿಲಾಮ ಪ್ರವೇಶ, ಅರುಣಾಚಲ ಪ್ರದೇಶದೊಂದಿಗಿನ ಚೀನಾ ಗಡಿತಂಟೆ, ಅಕ್ಸಾಯಿಚಿನ್ ಸಂಗತಿಗಳ ಕುರಿತಾಗಿ ಅವರು ಮಾಹಿತಿ ನೀಡಿದರು. ಉಪನ್ಯಾಸದ ಬಳಿಕ ನಡೆದ ಸಂವಾದದಲ್ಲಿ ಸಶಸ್ತ್ರ ಸೇನಾ ಕಾಯ್ದೆ, ಈಶಾನ್ಯ ಭಾರತದ ಮಾಧ್ಯಮ ವ್ಯವಸ್ಥೆ, ನಾಗಾ ಬುಡಕಟ್ಟುಗಳ ವಿಲೀನ, ಮಣಿಪುರದಲ್ಲಿ ಹಿಂದೂಗಳ ಪರಿಸ್ಥಿತಿ-ಬದಲಾಗುತ್ತಿರುವ ವಿದ್ಯಮಾನಗಳು ಸೇರಿದಂತೆ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, `ನಾವು ಯಾವಾಗಲೂ ಈಶಾನ್ಯ ಭಾರತದ ಕಲೆ, ಶ್ರೀಮಂತ ಸಂಸ್ಕøತಿ ಬಗ್ಗೆ ಮಾತನಾಡುತ್ತೇವೆ ಆದರೆ ಅದನ್ನು ಆಳವಾಗಿ ಅಭ್ಯಸಿಸುವ, ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ನಮ್ಮ ಪಠ್ಯ ಪುಸ್ತಕಗಳಲ್ಲಿ ನಾವು ಶಿವಾಜಿ, ಟಿಪ್ಪು ಸುಲ್ತಾನ್, ಔರಂಗಜೇಬ್ ಮೊದಲಾದವರ ಬಗ್ಗೆ ಓದುತ್ತೇವೆ; ಆದರೆ ಈಶಾನ್ಯ ಭಾರತದ ಇತಿಹಾಸವನ್ನು ಓದುವ, ಆ ಇತಿಹಾಸದ ನಾಯಕರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಎಂದಿಗೂ ಮಾಡಿಲ್ಲ ಬಹುಶಃ ಈಶಾನ್ಯ ರಾಜ್ಯಗಳು ಭಾರತದ ಇತರೆ ರಾಜ್ಯಗಳಿಂದ ಪ್ರತ್ಯೇಕವಾಗಿ ಉಳಿಯಲು ಇದೇ ಕಾರಣ’ ಎಂದು ಅಭಿಪ್ರಾಯ ಪಟ್ಟರು.
ಈಶಾನ್ಯ ರಾಜ್ಯಗಳೊಂದಿಗಿನ ಈ ಅಂತರವನ್ನು ನಿವಾರಿಸಲೆಂದೇ ನಮ್ಮ ಕಾಲೇಜಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. `ಈಶಾನ್ಯ ಭಾರತ ದಿನ’ ಎಂಬ ದಿನವನ್ನು ನಾವು ಸಂಸ್ಥೆಯಲ್ಲಿ ಆಚರಿಸುತ್ತಿದ್ದು, ಅಲ್ಲಿನ ಹಲವಾರು ಕಲಾಪ್ರಕಾರಗಳನ್ನು ನಮ್ಮ ವಿದ್ಯಾರ್ಥಿಗಳ ಮುಂದೆ ಪ್ರಸ್ತುತ ಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಜೊತೆಗೆ ಆ ರಾಜ್ಯಗಳ ವಿಷಯ ಪರಿಣತರನ್ನು ಕರೆಸಿ ಅವರಿಂದ ಉಪನ್ಯಾಸ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಈ ಮೂಲಕ ಈಶಾನ್ಯ ಭಾರತದೊಂದಿಗೆ ಬಾಂಧವ್ಯ ಬೆಸೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಅವರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.