ಆಧುನಿಕ ಸಂವಹನ ಮಾಧ್ಯಮಗಳು ಬಾಲ್ಯವನ್ನು ಹಾಳುಮಾಡದಿರಲಿ : ಡಾ|ಹರಿಕೃಷ್ಣ ಭರಣ್ಯ
ಬದಿಯಡ್ಕ: “ಶಾಲಾ ವಾರ್ಷಿಕೋತ್ಸವಗಳು ನಮ್ಮ ಬಾಲ್ಯದ ನೆನಪನ್ನು ಚಿರಸ್ಮರಣೀಯವಾಗಿ ಉಳಿಸುತ್ತವೆ. ಹಿಂದಿನ ಕಾಲದಲ್ಲಿ ದಿನಪೂರ್ತಿ ಕಾರ್ಯಕ್ರಮಗಳು ಜರಗುತ್ತಿದ್ದವು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಆಧುನಿಕ ಸಂವಹನ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಬಳಸಲು ಆರಂಭಿಸಿರುವುದು ಸಾಂಸ್ಕೃತಿಕ ವಾತಾವರಣವನ್ನು ಬದಲಾಯಿಸಿದೆ. ಮೊಬೈಲಿನ ಅಧಿಕ ಉಪಯೋಗ ವಿದ್ಯಾರ್ಥಿಗಳಲ್ಲಿ ಓದುವ, ಆಡುವ ಅಭ್ಯಾಸವನ್ನು ಕಡಿಮೆ ಮಾಡಿವೆ. ಈ ಸ್ಠಿತಿ ಖೇದಕರ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಬೆಳೆಯಬೇಕಾದ ಶಾಲಾ ದಿನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಾಹಿತ್ಯ, ಸಾಂಸ್ಕೃತಿಕ, ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸರ್ವಾಂಗೀಣ ವಿಕಾಸಕ್ಕೆ ಒಳಗಾಗಬೇಕು.” ಎಂದು ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ಹರಿಕೃಷ್ಣ ಭರಣ್ಯ ಅಭಿಪ್ರಾಯಪಟ್ಟರು. ಅವರು 27.01.2017ನೇ ಶುಕ್ರವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ವರ್ಧಂತ್ಯುತ್ಸವ ಮತ್ತು ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಂಗವಾದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಡಿ.ಶಂಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಮತ್ತು ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ ರೈ ಹಾಗೂ ಮಾತೃ ಸಂಘದ ಅಧ್ಯಕ್ಷೆಯರಾದ ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶ್ರೀಮತಿ ರೇವತಿ ಶುಭಹಾರೈಸಿದರು. ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಶಿಕ್ಷಕರಾದ ಎಚ್. ಶಿವಕುಮಾರ, ಮಾಲತಿ.ಎಂ, ವೇಣುಗೋಪಾಲಕೃಷ್ಣ.ಇ ಮತ್ತು ಶಿಕ್ಷಕೇತರ ಸಿಬ್ಬಂದಿ ಗೋಪಾಲ ನಾಯ್ಕ.ಎನ್ ಇವರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು.
ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟರಾಜ.ಸಿ.ಎಚ್ ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ವಂದಿಸಿದರು. ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ಕೋರಿಕ್ಕಾರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.