ಆರ್ ಬಿಐ ಗವರ್ನರ್ ರಘುರಾಮ ರಾಜನ್ ಅವರಿಗೇ ಪಾಠ ಮಾಡಿದ ಐಐಟಿ ಪ್ರೊಫೆಸರ್ ಪಟ್ಟಣದ ಸಹವಾಸವೇ ಸಾಕು ಎಂದು ಬುಡಕಟ್ಟು ಜನರೊಂದಿಗೆ ವಾಸಿಸತೊಡಗಿದರು. ಹಾಗೆ ಅವರು ಜನರೊಂದಿಗೆ ಬೆರೆತು ಪರಿಸರ ಜಾಗೃತಿ ಮೂಡಿಸಲು ಆರಂಭಿಸಿ ಎರಡು ದಶಕಗಳೇ ಸಂದವು. ಈ ತಪಸ್ವಿಯ ಸೇವೆಯಾದರೂ ಎಂಥಾದ್ದು? ಮುಂದೆ ಓದಿ.
ಕೊಚಾಮು ಎಂಬ ಹಳ್ಳಿ ಹೆಸರನ್ನು ಎಲ್ಲಾದರೂ ಕೇಳಿದ್ದೀರಾ?
ಮಹಾನಗರವಾಸಿಗಳಿಗೆ ಹಳ್ಳಿ ಜೀವನ ರೆಸಾರ್ಟ್ ನೆನಪಿಗೆ ಬಂದರೆ ಅದು ಉತ್ಪ್ರೇಕ್ಷೆ ಏನಲ್ಲ. ಅದು ಸಹಜವೂ ಹೌದು. ಹಳ್ಳಿಯಲ್ಲೇ ಬದುಕುವವರಿಗೂ ಅಷ್ಟೇ. ನಗರ ಜೀವನ ಎಂದರೆ ವಿಸ್ಮಯಗಳ ಸಂತೆ. ಇಬ್ಬರಿಗೂ ಒಂದನ್ನೊಂದು ಪರಸ್ಪರ ಟೀಕಿಸುವ ಮನೋಸ್ಥಿತಿ. ಕೆಲವೊಮ್ಮೆ ಹಳ್ಳೀ ಜೀವನವೇ ಒಳ್ಳೇದು. ಈ ಪಟ್ಟಣದ ಕಿರಿಕಿರಿ, ಸಹವಾಸವೇ ಸಾಕು ಎಂಬ ಮಾತು ನಗರವಾಸಿಗಳಿಂದ ಕೇಳಿಬರುತ್ತದೆ. ಅದೇ ಹಳ್ಳಿಯವರನ್ನು ಮಾತನಾಡಿಸಿದರೆ, ಸಾಕಪ್ಪಾ ಈ ಲೈಫು. ಎಲ್ಲಾದರೂ ಪೇಟೆಯಲ್ಲಿ ಹೋಗಿ ಸೆಟಲ್ ಆದರೆ ಜೀವನ ನೆಮ್ಮದಿ. ನಾವಲ್ಲದಿದ್ದರೆ ನಮ್ಮ ಮಕ್ಕಳಾದರೂ ಅಲ್ಲಿ ಖುಷಿ ಖುಷಿಯಾಗಿರಬಹುದು ಎಂಬ ಮಾತು. ಹೀಗೆ ಹಳ್ಳಿಗರಿಗೆ ದಿಲ್ಲಿ ಚಿಂತೆ, ದಿಲ್ಲಿಯವರಿಗೆ ಹಳ್ಳಿ ಚಿಂತೆ. ಆದರೆ ಎರಡರ ವಾಸ್ತವ ಚಿತ್ರಣ ಯಾರಿಗೂ ಅರಿವಾಗುವುದಿಲ್ಲ.
ಇಂಥದ್ದೊಂದು ಸನ್ನಿವೇಶದಲ್ಲೇ ಕಳೆದ ಇಪ್ಪತ್ತಾರು ವರ್ಷಗಳಿಂದ ವ್ಯಕ್ತಿಯೊಬ್ಬರು ಹಳ್ಳಿಯ ಜನರ ಏಳಿಗೆಗೇ ದುಡಿಯುತ್ತಿದ್ದಾರೆ. ಅವರು ಅಂತಿಂಥವರಲ್ಲ. ಐಐಟಿಯ ಪ್ರೊಫೆಸರ್ ಆಗಿದ್ದವರು. ರಘುರಾಮ ರಾಜನ್ ಗೊತ್ತಲ್ಲ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಅವರಿಗೇ ಪಾಠ ಮಾಡಿದವರು. ಇಂಥ ಮೇಸ್ಟ್ರ ಜೀವನಗಾಥೆ ಇದು. ಹೀಗಾಗಿಯೇ ಕೊಚಾಮು ಎಂಬ ಹಳ್ಳಿ ಹೆಸರನ್ನು ಇಲ್ಲಿ ಪ್ರಸ್ತಾಪಿಸಿದ್ದು.
ಇವರ ಹೆಸರು ಪ್ರೊಫೆಸರ್ ಅಲೋಕ್ ಸಾಗರ್. ವಯಸ್ಸು 64. ಮಧ್ಯಪ್ರದೇಶದ ಬುಡಕಟ್ಟು ಜನರೇ ವಾಸಿಸುವ ಕೊಚಾಮು ಎಂಬ ಹಳ್ಳಿ ಇವರ ಕಾಯಕ ಕ್ಷೇತ್ರ. ಅಲ್ಲೇ ವಾಸ, ಅವರೊಂದಿಗೇ ಬದುಕು. ಥೇಟ್ ತಪಸ್ವಿಯ ಹಾಗೆ. ಇದು ಅಂತಿಂಥ ಸಾಧನೆ ಏನಲ್ಲ, ಬಹುದೊಡ್ಡ ಸಾಹಸವೂ ಹೌದು.
ದೆಹಲಿ ಮೂಲದ ಸಾಗರ್, ತನ್ನ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಅನ್ನು ಐಐಟಿ ದೆಹಲಿಯಿಂದ ಪೂರೈಸಿ, ಅಮೇರಿಕಾದ ಹೋಸ್ಟನ್ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಪದವಿ ಪಡೆದರು. ಬಳಿಕ ದೆಹಲಿ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದರು. ಈ ಸಂದರ್ಭ ರಘುರಾಮ ರಾಜನ್ ಅವರಿಗೆ ಪಾಠ ಮಾಡಿದ್ದರು.
ಆ ಕಾಲದಲ್ಲೇ ಕೈತುಂಬಾ ಸಂಬಳ ಪಡೆಯುತ್ತಿದ್ದ ಸಾಗರ್ ಅವರ ಮನಸ್ಸು ಹಳ್ಳಿಯತ್ತಲೇ ಇತ್ತು. 1982ರಲ್ಲಿ ಮಧ್ಯಪ್ರದೇಶದ ಹಳ್ಳಿಗಳಿಗೆ ತೆರಳಿದರು. ಬುಡಕಟ್ಟು ಜನರ ಮತ್ತು ಮಹಿಳೆಯರ ಉದ್ಧಾರ ಅವರ ಕನಸಾಗಿತ್ತು.
ಹಾಗೆ ಅವರು ಬಂದು ನೆಲೆಸಿದ್ದು ಕೊಚಾಮು ಎಂಬ ಹಳ್ಳಿಗೆ. ಕಳೆದ ಇಪ್ಪತ್ತಾರು ವರ್ಷಗಳಿಂದ ಅವರು ಇಲ್ಲಿದ್ದಾರೆ.
ಬಂದವರೇ ಈ ಕುಗ್ರಾಮ ಅಭಿವೃದ್ಧಿಗೆ ಹಲವು ಯೋಜನೆ ಹಾಕಿಕೊಂಡರು.
ಕರೆಂಟಿಲ್ಲ, ಒಂದು ಪ್ರಾಥಮಿಕ ಶಾಲೆ ಬಿಟ್ಟರೆ ಬೇರೇನೂ ಈ ಕೊಚಾಮು ಎಂಬ ಹಳ್ಳಿಗಿಲ್ಲ. ಸಾಗರ್ ಈ ಹಳ್ಳಿ ಪ್ರವೇಶಿಸಿದ ಮೇಲೆ ಮೊತ್ತಮೊದಲ ಜಾಗೃತಿ ಮೂಡಿಸಿದ್ದು ಪರಿಸರ ಸಂರಕ್ಷಣೆ ಮೇಲೆ. ಗಿಡ ನೆಟ್ಟರಷ್ಟೇ ಅಭಿವೃದ್ಧಿ ಎಂಬ ತತ್ವ ಅವರದ್ದು. ಅದರಲ್ಲೂ ಬುಡಕಟ್ಟು ಜನರು ಸಸ್ಯಗಳನ್ನು ತಮ್ಮವರಂತೆಯೇ ಪ್ರೀತಿಸುತ್ತಾರೆ ಎಂಬ ಸತ್ಯವೂ ಸಾಗರ್ ಅರಿವಿತ್ತು. ಈ ಹಳ್ಳಿ ಸುತ್ತಮುತ್ತಲಿನ ಹಳ್ಳಿಗಳು ಸೇರಿ ಸಾಗರ್ ಒಟ್ಟು 60 ಕಿ.ಮೀ. ದೂರವನ್ನು ಕ್ರಮಿಸಿ ಅಲ್ಲಿ ಸಸ್ಯಗಳ ಬೀಜಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸಿದರು. ಹೀಗೆ ಸಾಗರ್ ದೆಸೆಯಿಂದ ಹುಟ್ಟಿದ ಗಿಡಗಳ ಸಂಖ್ಯೆ ಎಷ್ಟು ಗೊತ್ತೇ?
50 ಸಾವಿರ.
ಸಾಗರ್ ಪ್ರಕಾರ ಶಿಕ್ಷಣ ಎಂದರೆ ಡಿಗ್ರಿ ಪಡೆಯುವುದಕ್ಕೆ ಸೀಮಿತವಾಗುವುದಿಲ್ಲ.
ಭಾರತದಲ್ಲಿ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಅವರ ಬುದ್ಧಿಶಕ್ತಿಯನ್ನು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುವುದಕ್ಕೆ ವ್ಯಯಿಸುತ್ತಾರೆಯೇ ಹೊರತು ಜನಸೇವೆಗೆ ಸ್ವಲ್ಪ ಸಮಯವನ್ನೂ ನೀಡುವುದಿಲ್ಲ ಎಂಬ ಬೇಸರ ಸಾಗರ್ ಅವರಿಗಿದೆ. ಹೀಗಾಗಿ ದೃಢಮನಸ್ಸಿನಿಂದ ಸಾಗರ್ ಬುಡಕಟ್ಟು ಜನರೊಂದಿಗೇ ಬಾಳತೊಡಗಿದರು. ಈಗಂತೂ ಥೇಟ್ ಬುಡಕಟ್ಟು ವಾಸಿಯಂತೆಯೇ ಆಗಿದ್ದಾರೆ. ಸ್ಥಳೀಯ ಸಂಘ, ಸಂಸ್ಥೆಗಳಾದ ಶ್ರಮಿಕ್ ಆದಿವಾಸಿ ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಎಲ್ಲೂ ತಾನು ಐಐಟಿ ಪ್ರೊಫೆಸರ್ ಎಂದ ಹೇಳಿಕೊಳ್ಳದೆ ಇದ್ದ ಸಾಗರ್ ಬಗ್ಗೆ ಸ್ಥಳೀಯ ಪಂಚಾಯಿತಿಯವರು ಅನುಮಾನಪಟ್ಟದ್ದೂ ಉಂಟು.
ಬದುಕು ನಮಗಾಗಿಯಷ್ಟೇ ಅಲ್ಲ, ಇನ್ನೊಬ್ಬರಿಗಾಗಿ ಜೀವಿಸಿದರಷ್ಟೇ ಅದಕ್ಕೊಂದು ಅರ್ಥ ಎಂಬ ಮಾತನ್ನು ಅಕ್ಷರರಶ: ಪಾಲಿಸುವ ಅಲೋಕ್ ಸಾಗರ್ ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ದೊಡ್ಡ ಜಾಗೃತಿ ಮೂಡಿಸುತ್ತಾರೆ.
ಕೇವಲ ಮೂರು ಕುರ್ತಾ ಹಾಗೂ ಒಂದು ಸೈಕಲ್ ಹೊಂದಿರುವ ಈ ಪ್ರೊಫೆಸರ್, ಬಹುಭಾಷಾ ಪಂಡಿತ. ಮಧ್ಯಪ್ರದೇಶದ ಹಳ್ಳಿಯ ಬುಡಕಟ್ಟು ಜನರಿಗೆ ಇವರೇ ನಾಯಕ.
ನಮ್ಮೂರಲ್ಲೂ ಇಂಥ ಪ್ರೊಫೆಸರುಗಳು ಸಿಗುತ್ತಾರೆ. ಡಾಕ್ಟರುಗಳೂ ಇರುತ್ತಾರೆ. ಸೋಲಿಗರ ನಡುವೆಯೇ ಇದ್ದ ಡಾ.ಸುದರ್ಶನ್ ರಂಥವರು ಮಾದರಿ. ವಿಪರ್ಯಾಸವೆಂದರೆ ಇಂಥವರ ಸಂಖ್ಯೆ ವಿರಳ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.