ಮಂಗಳೂರು : ಜನಸಾಮಾನ್ಯರು ಮತ್ತು ಪೊಲೀಸರ ನಡುವೆ ಬಾಂಧವ್ಯವನು ವೃದ್ಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಹಲವಾರು ಸಮುದಾಯ ಪೊಲೀಸ್ ವ್ಯವಸ್ಥೆಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಭಾಗವಾಗಿ ಒಂದೇ ಸೂರಿನಡಿ ನೊಂದ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸಮಸ್ಯೆ ಪರಿಹಾರಕ್ಕೆ ಯತ್ನವಾಗಿ ಸಹಾಯವಾಣಿ ಕೇಂದ್ರ ಆರಂಭಿಸಿರುವುದಾಗಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಟ್ಟಡದ ನೆಲ ಮಹಡಿಯ ಪ್ರವೇಶ ದ್ವಾರದ ಬಳಿ ಆರಂಭಿಸಲಾಗಿರುವ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ತಡೆ ಹಾಗೂ ದೌರ್ಜನ್ಯಕ್ಕೊಳಗಾದವರಿಗಾಗಿ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರವು ಸಿಒಡಿಪಿ, ವಿಶ್ವಾಸ್ ಟ್ರಸ್ಟ್, ಸಾಂತ್ವನ ಕೇಂದ್ರ, ಚೈಲ್ಡ್ಲೈನ್, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ಮೊದಲಾದ ಸರಕಾರೇತರ ಸಂಸ್ಥೆಗಳು ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನೆರವಿನೊಂದಿಗೆ ಕೇಂದ್ರ ಕಾರ್ಯ ನಿರ್ವಹಿಸಲಿದೆ. ನೂತನ ಸಹಾಯವಾಣಿ ಕೇಂದ್ರದಲ್ಲಿ ಇಬ್ಬರು ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು .ಬೆಳಗ್ಗೆ 10ರಿಂದ ಸಂಜೆ 5-30ರವರೆಗೆ ಈ ಸಿಬ್ಬಂದಿಗಳು ಪ್ರಸ್ತುತ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಪ್ರಕರಣಗಳು ತೀರಾ ಕಡಿಮೆ. 2013ರಲ್ಲಿ ಜಿಲ್ಲೆಯಲ್ಲಿ 26 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2014ರಲ್ಲಿ 42 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಶೇ. 40ರಿಂದ 50ರಷ್ಟು ಪ್ರೇಮ ಪ್ರರಣಗಳಾಗಿವೆ. ಸೈಬರ್ ಅಪರಾಧಗಳ ನಿರ್ವಹಣೆ ಕುರಿತಂತೆ ಪಿಎಸ್ಐ ಮಟ್ಟದ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಅವಹೇಳನಕಾರಿಯಾಗಿ, ಪ್ರಚೋದನಕಾರಿ ಸಂದೇಶಗಳ ಕುರಿತಾದ ದೂರಿನ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಡಾ. ಶರಣಪ್ಪ ಪ್ರತಿಕ್ರಿಯಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಗರ್ಟ್ರೂಡ್ ವೇಗಸ್, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ನ ನಿರ್ದೇಶಕಿ ಹಿಲ್ಡಾ ರಾಯಪ್ಪನ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಪೊಲೀಸ್ ಇಲಾಖೆ ಕಾರ್ಯವೈಖರಿಗೆ ವದಂತಿಗಳಿಂದ ಹಿನ್ನೆಡೆ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳೊಂದಿಗೆ ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದ್ದರೂ ಬಾಯಿ ಮಾತುಗಳು ಹಾಗೂ ವದಂತಿಗಳಿಂದಾಗಿ ಸಾರ್ವಜನಿಕರು ಪೊಲೀಸ್ ಇಲಾಖೆಯ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ಆಸಕ್ತಿ, ಗೌರವ, ವಿಶ್ವಾಸ ಹೊಂದಲು ಸಾಧ್ಯವಾಗಿಲ್ಲ ಎಂದು ಎಸ್ಪಿ ಡಾ. ಶರಣಪ್ಪ ಬೇಸರಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಇಲಾಖೆಗೆ ೫೦ ಮಂದಿ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಆಯ್ಕೆಯಾಗಿದ್ದು, ಎ.29ರಂದು ಅವರ ದಾಖಲಾತಿಗಳ ಪರಿಶೀಲನೆ ನಡೆದು 9 ತಿಂಗಳ ಕಾಲ ತರಬೇತಿಗೆ ನಿಯುಕ್ತಿಗೊಳ್ಳಲಿದ್ದಾರೆ. ಆಯ್ಕೆಯಾದ 40 ಮಂದಿ ಪುರುಷ ಪೊಲೀಸ್ ಕಾನ್ಸ್ಟೆಬಲ್ ಅಭ್ಯರ್ಥಿಗಳಲ್ಲಿ 7 ಮಂದಿ ಮಾತ್ರ ಸ್ಥಳೀಯರಾಗಿದ್ದಾರೆ. ಕಾನ್ಸ್ಟೆಬಲ್ ಹುದ್ದೆಗೆ ವಿದ್ಯಾರ್ಹತೆ ಪಿಯುಸಿ ಸಾಕಾಗಿದ್ದರೂ, ಈ ಹುದ್ದೆಗಾಗಿ ಸ್ನಾತಕೋತ್ತರ ಪದವೀಧರರು ಮುಂದೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಸ್ಥಳೀಯ ಯುವಕರಿಂದ ಆಸಕ್ತಿ ಹೆಚ್ಚಬೇಕಾಗಿದೆ ಎಂದು ಎಸ್ಪಿ ಅಭಿಪ್ರಾಯಿಸಿದರು.
ಶಾಲಾ ಕಾಲೇಜುಗಳಲ್ಲಿ ಸುರಕ್ಷತೆ ಬಗ್ಗೆ ಇಂದು ಸಭೆ : ದ.ಕ. ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಸುರಕ್ಷತೆ ಕುರಿತಂತೆ ಎ. 28ರಂದು ಬೆಳಗ್ಗೆ 10:30ಕ್ಕೆ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಲಾ ಮುಖ್ಯಸ್ಥರು ಹಾಗೂ ಸಂಬಂಧಪಟ್ಟವರ ಜತೆ ದ.ಕ.ಜಿಲ್ಲಾ ಮಟ್ಟದ ಸಭೆಯನ್ನು ಆಯೋಜಿಸಲಾಗಿದೆ ಎಂದು ಎಸ್ಪಿ ಡಾ. ಶರಣಪ್ಪ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.