ಕಾರ್ಕಳ : ಕೇಂದ್ರ ಸರಕಾರವು ಕುದುರೆಮುಖ ಅಭಯಾರಣ್ಯದಲ್ಲಿ ಹುಲಿ ಯೋಜನೆಯನ್ನು ಅನುಷ್ಟಾನಗೊಳಿಸಿರುವುದನ್ನು ಖಂಡಿಸುವುದಾಗಿ ಕಾರ್ಕಳ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದ್ದಾರೆ.
ಅವರು ಕಾಂಗ್ರೆಸ್ ಕಛೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2011ರಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಹುಲಿಯೋಜನೆ ಬೇಕು ಎಂದು ಕೇಂದ್ರಕ್ಕೆ ಪತ್ರ ಬರೆದಿತ್ತು. ಆದರೆ ಆ ಸಂದರ್ಭ ಈಗಿನ ಶಾಸಕರು ಹಾಗೂ ಬಿಜೆಪಿ ನಾಯಕರುಗಳು ಸೇರಿಕೊಂಡು ಪ್ರತಿಭಟಿಸಿದ್ದರಲ್ಲದೆ, ನಮಗೆ ಮತ ನೀಡಿದರೆ ಆ ಯೋಜನೆ ಅನುಷ್ಟಾನ ಆಗಲು ಬಿಡುವುದಿಲ್ಲ ಎಂದು ಜನತೆ ಬಳಿ ಆಶ್ವಾಸನೆ ನೀಡಿದರು. ಸಂಸದರು ಕೂಡಾ ಚುನಾವಣೆ ಸಂದರ್ಭ ತಮ್ಮ ಕರಪತ್ರದಲ್ಲಿ ಹುಲಿಯೋಜನೆಯನ್ನು ವಿರೋಧಿಸುತ್ತೇನೆ ಎಂಬುವುದಾಗಿ ಮಾತುಕೊಟ್ಟಿದ್ದರು.
ಇದೀಗ ಅವರದ್ದೇ ಸರಕಾರ ಕೇಂದ್ರದಲ್ಲಿ ಈ ಯೋಜನೆಯನ್ನು ಅನುಷ್ಟಾನಕ್ಕೆ ಮುಂದಾದ ಸಂದರ್ಭದಲ್ಲಿ ಅವರೆಲ್ಲರೂ ಯಾಕೆ ಚಕಾರ ಎತ್ತುತ್ತಿಲ್ಲ ? ಎಂದು ದೂರಿದರು. ಹುಲಿ ಯೋಜನೆ ಅನುಷ್ಟಾನದ ಕುರಿತಂತೆ ನಮ್ಮ ಸ್ಪಷ್ಟವಾದ ವಿರೋಧವಿದ್ದು, ಮುಂದಿನ ದಿನಗಳಲ್ಲಿ ಈ ಜನವಿರೋಧಿ ಯೋಜನೆಯ ವಿರುದ್ದ ಗ್ರಾಮ ಗ್ರಾಮಗಳಲ್ಲಿ ಪ್ರತಿಭಟನೆ ಕೈಗೆತ್ತಿಕೊಳ್ಳಲಿದ್ದೇವೆ. ಮತಕ್ಕಾಗಿ ಜನರನ್ನು ದಿಕ್ಕು ತಪ್ಪಿಸಿದ ಬಿಜೆಪಿ, ಇದೀಗ ಅವರದ್ದೇ ಸರಕಾರ ಕೈಗೊಂಡ ಜನವಿರೋಧಿ ನಿಲುವನ್ನು ಮೌನದಿಂದ ಸಮ್ಮತಿಸುತ್ತಿರುವುದು ಜನತೆಗೆ ಮಾಡಿದ ದ್ರೋಹ. ಇದೀಗ ಮೋಸ ಹೋದ ಜನತೆ ಅವರನ್ನು ಪ್ರಶ್ನಿಸಬೇಕಾಗಿದೆ ಎಂದರು.
ಕಸ್ತೂರಿ ರಂಗನ್ ವರದಿಯ ಕುರಿತು ರಾಜ್ಯ ಸರಕಾರವು ತಮ್ಮ ಅಭಿಪ್ರಾಯವನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಇದೀಗ ಆ ವರದಿ ಅನುಷ್ಟಾನಗೊಂಡರೂ, ಕೇಂದ್ರ ಸರಕಾರದ ವಿರುದ್ದ ನಾವೆಲ್ಲರೂ ಒಂದಾಗಿ ನಿರಂತರ ಧರಣಿ ನಡೆಸಬೇಕಾಗುತ್ತದೆ. ವನ್ಯಜೀವಿ ಹಾಗೂ ಅರಣ್ಯ ಪ್ರದೇಶದಲ್ಲಿ ಈ ವರದಿ ಅನುಷ್ಠಾನವಾಗಬೇಕು ಹೊರತು, ಅರಣ್ಯದ ಅಂಚಿನಲ್ಲಿರುವ ರೈತಾಪಿ ವರ್ಗಕ್ಕೆ ತೊಂದರೆಯಾಗಲು ನಾವು ಬಿಡುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಕೋಟ್ಯಾನ್, ವಕ್ತಾರ ಬಿಪಿನ್ಚಂದ್ರಪಾಲ್ ನಕ್ರೆ, ಕಾಂಗ್ರೆಸ್ ಪ್ರಮುಖರಾದ ಡಾ. ಸಂತೋಷ್ ಕುಮಾರ್ ಶೆಟ್ಟಿ, ಅಜಿತ್ ಹೆಗ್ಡೆ ಮಾಳ, ಸತೀಶ್ ಕುಮಾರ್, ಮೊಹಮ್ಮದ್ ಅಸ್ಲಾಂ, ವಿಶ್ವನಾಥ್, ಸುನಿಲ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.