ಬಂಟ್ವಾಳ : ಹಲಸು ಪ್ರೇಮಿಗಳಿಗೆ ಒಂದು ಸಿಹಿಸುದ್ದಿ..ಹಲಸು ಪ್ರೇಮಿಕೂಟ, ಬಂಟ್ವಾಳ ಕಳೆದ ಹಲವು ವರ್ಷಗಳಿಂದ ಹಲಸಿನ ಮೌಲ್ಯವರ್ಧನೆ, ಮಾರುಕಟ್ಟೆ, ತಳಿ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹಲಸಿನ ಹಬ್ಬ, ತಳಿ ಆಯ್ಕೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಿದೆ. ಏಪ್ರಿಲ್ 26 ರಂದು ಪಾಣೆಮಂಗಳೂರು ಹಳೆ ಟೋಲ್ಗೇಟ್ ಬಳಿ ಇರುವ “ನವರಂಗ್” ಆವರಣದಲ್ಲಿ ಹಲಸಿನ ಸಂತೆ ನಡೆಯಲಿದೆ. ಉಚಿತ ಮಾರುಕಟ್ಟೆಯ ವ್ಯವಸ್ಥೆ, ಕಸಿ ತಜ್ಞರಿಂದ ಉತ್ತಮ ತಳಿ ಆಯ್ಕೆ, ಮಾರುಕಟ್ಟೆಯ ಬಗ್ಗೆ ಸಂವಾದ, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.
ಹಾಗೆಯೆ ಹಿರಿಯ ಕೃಷಿಕರಾದ ಡಾ. ಕೆ.ಎಸ್. ಕಾಮತ್, ಕೃಷಿ ವಿಜ್ಞಾನಿ ಡಾ. ಸರಿತಾ ಹೆಗ್ಡೆ, ಶ್ರೀ ಪಡ್ರೆ, ನಿವೃತ್ತ ಅರಣ್ಯಾಧಿಕಾರಿ ಜಿ. ವೇಗಸ್, ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯ, ಪತ್ರಕರ್ತ ನಾ. ಕಾರಂತ ಪೆರಾಜೆ, ಮುಳಿಯದ ವೆಂಕಟಕೃಷ್ಣ ಶರ್ಮ ಮೊದಲಾದ ಹಲಸು ಪ್ರೇಮಿಗಳ ಉಪಸ್ಥಿತಿಯಲ್ಲಿ ಬೆಳಗ್ಗೆ 10-00ರಿಂದ ಸಂಜೆ 5-00ರ ತನಕ ನಡೆಯಲಿದೆ
ಬಂಟ್ವಾಳ ತಾಲೂಕಿನ ಸಾವಿರಾರು ಮರಗಳಿಂದ ಉತ್ತಮತಳಿಯ ಉತ್ಕೃಷ್ಟ ಗುಣಗಳ ಮರಗಳನ್ನು ಹಲಸು ಸ್ನೇಹಿ ಕೂಟ, ಉಬರು ಹಾಗೂ ಸಮಾನ ಮನಸ್ಕರಿಂದ ಸಂಗ್ರಹಿಸಿ ತಳಿ ಆಯ್ಕೆ ಜರುಗಿ ಇಪ್ಪತ್ತಕ್ಕೂ ಹೆಚ್ಚಿನ ತಳಿಗಳು ಕಸಿ ತಜ್ಞರಾದ ಉಡುಪಿಯ ಗುರುರಾಜ ಬಾಳ್ತಿಲ್ಲಾಯರು, ಆಲಂಕಾರಿನ ಕಸಿ ಕೆದಿಲಾಯರು, ಪುತ್ತೂರಿನ ಜಾಕ್ ಅನಿಲ್ ಮುಂತಾದವರ ಆಸಕ್ತಿಯಿಂದ ಇಂದು ಸಾವಿರಾರು ಆಯ್ದ ತಳಿಯ ಗಿಡಗಳು ವಿವಿಧ ಆಸಕ್ತ ರೈತರ ತೋಟಗಳಲ್ಲಿ ಬೆಳೆಯುತ್ತಿವೆ. ಮುಳಿಯದ ವೆಂಕಟಕೃಷ್ಣ ಶರ್ಮರ ತೋಟದಲ್ಲಿ ಹದಿನೈದಕ್ಕೂ ಹೆಚ್ಚಿನ ತಳಿಯ ಇನ್ನೂರಕ್ಕೂ ಮಿಕ್ಕಿದ ಗಿಡಗಳ ಫಲಗಳು ಇನ್ನೆರಡು ಮೂರು ವರ್ಷಗಳ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿವೆ. ದೋಸೆಗೆ ಒಂದು ತಳಿ, ಶ್ರಾವಣ ಮಾಸದಲ್ಲಿ ಫಲ ಕೊಡುವ ಒಂದು ತಳಿ, ಜನವರಿಯಲ್ಲಿ ಹಣ್ಣಾಗುವ ತಳಿ, ವರ್ಷವಿಡೀ ಕಾಯಿ ಬಿಡುವ “ನಿರಂತರ”, “ಅನನ್ಯ”, “ಪ್ರಶಾಂತಿ”, “ಅತಿಮಧುರ” ಮುಂತಾಗಿ ನಾಮಕರಣಗೊಂಡು ಇಂದು ಸಾವಿರಾರು ಗಿಡಗಳು ರೈತರ ಜಮೀನಿನಲ್ಲಿ ಅಭಿವೃದ್ಧಿಗೊಂಡಿವೆ.ಅಡ್ಯನಡ್ಕ ವಾರಣಾಶಿ ಕೃಷಿ ಸಂಶೋಧನಾ ಕೇಂದ್ರದ ದೂರದೃಷ್ಟಿಯ ಫಲವಾಗಿ ಆಯ್ದ ತಳಿಗಳ “ಮಾತೃ ಗಿಡ”ಗಳು ಅಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿವೆ.
ಹಲಸಿನ ಹಣ್ಣಿನ ಒಣಸೊಳೆ, ಮಹಾರಾಷ್ಟ್ರದ ಹಲಸಿನ ಪಾಣಸ್ ಪೋಳಿ, ಹಲ್ವ, ಚಿಪ್ಸ್, ಹಪ್ಪಳ, ಸ್ಕ್ವಾಶ್, ಐಸ್ಕ್ರೀಮ್, ಚಾಕೊಲೇಟ್ ಹೀಗೆ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪಟ್ಟಿ ಬಹಳ ದೊಡ್ಡದಿದೆ ಹಾಗೂ ಈ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಹೀಗಿದ್ದರೂ, ಹಲವು ಕಾರಣಗಳಿಂದ ಹಲಸಿನ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿಲ್ಲ. ಸೂಕ್ತ ತರಬೇತಿ ನೀಡಿ, ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಹಲಸಿನ ಉತ್ಪನ್ನಗಳು ಪ್ರವೇಶಿಸುವಂತೆ ಮಾಡುವ ಪ್ರಯತ್ನದ ಒಂದು ಭಾಗವಾಗಿ ಈಗಾಗಲೇ ನಮ್ಮ ಸಂಘದ ಸದಸ್ಯರು ಮಹಾರಾಷ್ಟ್ರ ಮತ್ತು ಕೇರಳಗಳಿಗೆ ಭೇಟಿಕೊಟ್ಟು ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಪಡೆದು ಬಂದಿರುತ್ತಾರೆ. ಈ ಅನುಭವವನ್ನು ಉಚಿತವಾಗಿ ಎಲ್ಲ ಆಸಕ್ತರಿಗೆ ವರ್ಗಾಯಿಸುವುದು ನಮ್ಮ ಸಂಘದ ಆಶಯಗಳಲ್ಲೊಂದು ಎಂದು ಮೌನೀಶ್ ಮಲ್ಯ ತಿಳಿಸಿದ್ದಾರೆ.
ಹಲಸಿನ ಹಣ್ಣಿನಲ್ಲಿ ವೈದ್ಯಕೀಯ ಗುಣಗಳಿರುವುದನ್ನು ದೃಢೀಕರಿಸಲಾಗಿದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಲಸು ಸ್ನೇಹಿ ಕೂಟವನ್ನು ಈಗಾಗಲೇ ಅಮೆರಿಕಾದ ಯುವತಿ ಗ್ಲೋಬಲ್ ವಿಲೇಜ್ ಫ್ರುಟ್ ಇದರ ಸಿ ಇ ಓ ಆನ್ಮೇರಿ, ಅಮೆರಿಕಾ ಹವಾಯಿಯ ಹಣ್ಣಿನ ರಾಯಭಾರಿ ಕೆನ್ಲವ್, ಆಸ್ಟ್ರೇಲಿಯಾದ ಯುವಕ ಜೂಲಿಯನ್ ಫ್ಯಾಂಗ್ ಇವರು ಭೇಟಿಯಾಗಿ, ಜಾಗತಿಕ ಮಟ್ಟದಲ್ಲಿ ಹಲಸಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.