ಕಲ್ಲಡ್ಕ : ಜೀವನ ಮೌಲ್ಯಗಳನ್ನು ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಬಿತ್ತುವ ಕೆಲಸವಾಗಬೇಕು. ಮೌಲ್ಯಗಳ ಮೂಲಕ ಭದ್ರ ಬುನಾದಿಯನ್ನು ಹಾಕಿ ಸತ್ಪ್ರಜೆಗಳನ್ನಾಗಿ ರೂಪಿಸುವ ಕೆಲಸ ಶಿಕ್ಷಕರಿಂದ ನಡೆಯಬೇಕು ಎಂದು ಶಾರದಾ ವಿದ್ಯಾಸಂಸ್ಥೆ ಮಂಗಳೂರಿನ ಶೈಕ್ಷಣಿಕ ಸಲಹೆಗಾರ್ತಿ ಡಾ|| ಲೀಲಾ ಉಪಾಧ್ಯಾಯ ಹೇಳಿದರು.
ಅವರು ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಏರ್ಪಡಿಸಲಾದ ಹತ್ತು ದಿನಗಳ ವಿದ್ಯಾ ವಿಕಾಸ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ರಾಮಾಯಣ, ಮಹಾಬಾರತ ಕತೆಗಳ ಮೂಲಕ ಜೀವನ ಮೌಲ್ಯಗಳನ್ನು ಕಲಿಸಬಹುದು. ಶಿಕ್ಷಕರು ಉತ್ತಮ ಸಂವಹನ ಕಲೆ, ಹೊಸ ರೀತಿಯಲ್ಲಿ ಪಾಠ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಬೆಳೆಸಬೇಕು. ಶಿಕ್ಷಕ ವೃತ್ತಿಯೆಂದು ಭಾವಿಸದೇ ಸೇವಾ ಮನೋಭಾವನೆಯಿಂದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೂ ಶ್ರಮಿಸಬೇಕೆಂದು ಹೇಳಿದರು.
ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಿ. ಆರ್ ಜಗದೀಶ ಪ್ರ್ರಾಸ್ತಾವಿಕ ಮಾತುಗಳನ್ನಾಡಿದರು. ದೇಶಾದ್ಯಂತ 15,000 ಶಾಲೆಗಳಿದ್ದು 35 ಲಕ್ಷ ವಿದ್ಯಾರ್ಥಿಗಳು ವಿದ್ಯಾಭಾರತಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದರು. ಪ್ರಾಂತ ಸಹಕಾರ್ಯದರ್ಶಿ ವಸಂತ ಮಾಧವ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಲೋಕಯ್ಯ ಡಿ. ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ವೆಂಕಟರಮಣ ರಾವ್ ವಂದಿಸಿದರು.
ಶಿಬಿರವು ಮೇ 20ರ ವರೆಗೆ ನಡೆಯಲಿದ್ದು, ರಾಜ್ಯದ ಪ್ರಾಥಮಿಕ ಪ್ರೌಢಶಾಲೆಗಳಿಂದ 204 ಶಿಕ್ಷಕರು ಭಾಗವಹಿಸುತ್ತಿದ್ದಾರೆ. ಇದರ ಜೊತೆಗೆ ಶಿಶು ಶಿಕ್ಷಣ ತರಬೇತಿ ನಡೆಯುತ್ತಿದ್ದು ಶಿಶುಶಿಕ್ಷಣ ಪ್ರಮುಖರಾದ ತಾರಾ ಭಗಿನಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.