ಕಾಸರಗೋಡು: ದೇಶ ಉಳಿಯಬೇಕಾದರೆ ಧರ್ಮ ಉಳಿಯಬೇಕು, ಧರ್ಮದ ಉಳಿವಿಗೆ ಗೋಸಂರಕ್ಷಣೆ ಅನಿವಾರ್ಯ ಎಂದು ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಗಳು ನುಡಿದರು.
ಅವರು ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡ ‘ಸುರಭಿಸಮರ್ಪಣಮ್’ ಕಾರ್ಯಕ್ರಮದ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಮೇ. 21ನೇ ತಾರೀಕಿನಿಂದ 23ನೇ ತಾರೀಕಿನ ವರೆಗೆ ಅಮೃತಧಾರಾ ಗೋಶಾಲೆ ‘ಗೋಲೋಕ’ ಬಜಕೂಡ್ಲು ಇದರ ನೂತನ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮ ‘ಗೋವಿಂದಗೋಮಾತೆಗೆ ಅನಂತ ನೀರಾಜನ’ ಸುರಭಿ ಸಮರ್ಪಣಮ್ ನಡೆಯಲಿದೆ. ಇದರ ಪೂರ್ವಭಾವಿ ಸಭೆಯು ಬಜಕೂಡ್ಲಿನ ಗೋಲೋಕದಲ್ಲಿ ಬುಧವಾರ ವಿಶು ಕಣಿ ಪೂಜೆಯ ಬಳಿಕ ನಡೆಯಿತು.
ತಂತ್ರಿಗಳು ಮಾತನಾಡುತ್ತಾ, ನಮ್ಮೆಲ್ಲರ ತಾಯಿಯಾದ ಗೋಮಾತೆಯ ಪೂಜೆ, ರಕ್ಷಣೆ ಆಗಬೇಕು. ಎಲ್ಲಿ ಪಶು ಸಮೃದ್ಧಿ ಇದೆಯೋ ಅಲ್ಲಿ ನೆಮ್ಮದಿ ಇದೆ. ಮನೆಮನೆಯಲ್ಲಿ ಪಶುಸಂರಕ್ಷಣೆ ಸಾಧ್ಯವಾಗದಿದ್ದಲ್ಲಿ ಗೋಶಾಲೆಯ ಮುಖಾಂತರ ರಕ್ಷಣೆ ಮಾಡಬಹುದು. ಇಂದಿನ ಕಾಲದಲ್ಲಿ ಗೋಶಾಲೆ ನಡೆಸುವುದು ತುಂಬಾ ಕಷ್ಟದ ಕೆಲಸ. ಇದಕ್ಕೆ ಸೇವಾಕಾರ್ಯದಲ್ಲಿ ಮುನ್ನುಗ್ಗುವಂತಹ ಯುವಕರು ಹಿರಿಯರ ಮಾರ್ಗದರ್ಶನದೊಂದಿಗೆ ತಯಾರಾಗಬೇಕು. ಅಮೃತಧಾರಾ ಗೋಶಾಲೆ ಬಜಕೂಡ್ಲಿನಲ್ಲಿ ‘ಗೋಮಾತಾ ತುಲಾಭಾರ’ ‘ಜನಜನನೀ’ ಹಾಗೂ ಅನಂತಪುರದಿಂದ ತಿರುವನಂತಪುರದ ವರೆಗೆ ಸಾಗಿದ ‘ಅನಂತ ಗೋಯಾತ್ರೆ’ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿರುವುದು ಹೆಮ್ಮೆಯ ವಿಚಾರ ಎಂದರು.
ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅವರು ಮಾತನಾಡಿ ಪುಣ್ಯಕೋಟಿಯ ಸೇವೆ ಮಾಡೋಣ. ಕೋಟಿ ಪುಣ್ಯವನ್ನು ಗಳಿಸೋಣ. ಒಂದು ಕಾಲದಲ್ಲಿ ‘ದನ’ವೇ ನಮಗೆ ಧನ(ಸಂಪತ್ತು) ಆಗಿತ್ತು. ಆದರೆ ಈಗ ಮಾತ್ರ ಕಾಲ ವ್ಯತಿರಿಕ್ತವಾಗಿದೆ. ಗೋವಿನ ತುಪ್ಪದಿಂದ ದೀಪ ಉರಿಸಿದರೆ ಪರಿಸರ ಮಾಲಿನ್ಯ ನಿವಾರಣೆ ಆಗುತ್ತದೆ ಹಾಗೂ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಗೋಶಾಲೆಯ ಕಾರ್ಯದಲ್ಲಿ ತೊಡಗಿಕೊಳ್ಳುವ ಎಂದು ಹೇಳಿದರು.
ಧಾರ್ಮಿಕ ನೇತಾರ ಉಮೇಶ್ ಪೈ ಕುಂಬಳೆ ಮಾತನಾಡಿ, ಕೃಷ್ಣನು ಗೋಪಾಲಕನಾಗಿ ಬಂದು ಗೋಸಂರಕ್ಷಣೆ ಮಾಡಿ ದುಷ್ಟರನ್ನು ಸಂಹರಿಸಿದನು. ಕಟುಕರು ಅಂದೂ ಇದ್ದರು ಇಂದೂ ಇದ್ದಾರೆ. ೩೩ ಕೋಟಿ ದೇವತೆಗಳ ಆವಾಸಸ್ಥಾನವಾದ ಗೋಮಾತೆಯ ಸೇವೆ ಮಾಡಿ ಪುನೀತರಾಗೋಣ. ಗೋವಿನ ಆರಾಧನೆ ಆದಲ್ಲಿ ಸಂಪತ್ತು ಉಳಿಯುತ್ತದೆ ಎಂದರು.
‘ಕಾಮಧೇನು ಜ್ಯೋತಿ’ ಎಂಬ ಅಲಂಕೃತ ರಥ ಮೇ. 5ರಿಂದ ಮೇ. 21ರ ತನಕ ಕಾಸರಗೋಡು ಜಿಲ್ಲೆಯ ವಿವಿಧೆಡೆ ಸಂಚರಿಸಲಿದೆ. ಕಾಸರಗೋಡು ಗೋತಳಿಯ ತುಪ್ಪದಿಂದ ‘ನೀರಾಜನ’ ನಡೆಯಲಿದೆ ಎಂದು ಗೋಕರ್ಣ ಮಂಡಲಾಧ್ಯಕ್ಷ ಡಾ|ವೈ.ವಿ.ಕೃಷ್ಣಮೂರ್ತಿ ರಥದ ಬಗ್ಗೆ ವಿವರಣೆ ನೀಡುತ್ತಾ ಪ್ರತಿಯೊಂದು ಮನೆಯಲ್ಲೂ ಕಾಸರಗೋಡು ಗೋವು ಇರುವಂತಾಗಬೇಕು ಎಂದರು.
ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ವೇ.ಮೂ. ಕೇಶವಪ್ರಸಾದ ಕೂಟೇಲು ‘ಅನಂತ ನೀರಾಜನ’ ಕಾರ್ಯಕ್ರಮದ ವಿವರಣೆ ನೀಡಿದರು. ಸಮಾರಂಭದಲ್ಲಿ ಕಾಮದುಘಾ ಯೋಜನೆಯ ಜಿ.ಟಿ.ದಿವಾಕರ್, ಕೆ.ಪಿ.ಎಡಾಪ್ಪಾಡಿ, ಸಂಕಪ್ಪ ರೈ ಬಜಕೂಡ್ಲು, ಬಿ.ಜಿ.ರಾಮಭಟ್, ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್, ಅಶೋಕ್ ಪೈ, ಡಾ. ಶ್ರೀಪತಿ ಕಜಂಪಾಡಿ, ರೂಪವಾಣಿ ಆರ್. ಭಟ್, ಪುಷ್ಪಾ ಗೋವಿಂದ ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೃಷ್ಣಪ್ರಸಾದ ಬನಾರಿ ಸ್ವಾಗತಿಸಿ ಜಗದೀಶ್ ಬಿ.ಜಿ.ಗೋಳಿತ್ತಡ್ಕ ಧನ್ಯವಾದವನ್ನಿತ್ತರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.