ಮಡಿಕೇರಿ : ಜನಸಂಖ್ಯೆಯ ಅಸಂತುಲನದಿಂದಾಗಿ ರಾಷ್ಟ್ರಕ್ಕೆ ದೊಡ್ಡ ಗಂಡಾಂತರ ಕಾದಿದ್ದು, ದೇಶದಲ್ಲಿ ಬಹುಸಂಖ್ಯಾತರಾದ ಹಿಂದೂಗಳು 2061 ರ ಹೊತ್ತಿಗೆ ಅಲ್ಪಸಂಖ್ಯಾತರಾಗುವ ಆತಂಕವಿದೆ ಎಂದು ಧರ್ಮ ಜಾಗರಣಾದ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ನ. ಸೀತರಾಮ್ ಹೇಳಿದರು.
ನಗರದ ಪ್ರಜ್ಞಾ ಕಾವೇರಿ ಬಳಗ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ ’ 2011ರ ಜನಗಣತಿ ವರದಿ, ಜನಸಂಖ್ಯೆ ಏರುಪೇರು, ಚಿತ್ರಣ – ಪರಿಣಾಮ’ ವಿಚಾರಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು. ಜನಸಂಖ್ಯೆ ಹೆಚ್ಚಾದಂತೆ ಜನಸಂಖ್ಯೆಯ ಏರುಪೇರು, ಮತೀಯ ಭಾವನೆಗಳಿಂದಾಗಿ ದೇಶ ತುಂಡಾಗಿರುವ ಇತಿಹಾಸವಿದೆ. ಜನಸಂಖ್ಯೆ ನಿಯಂತ್ರಣದ ಕಾನೂನು ಹಿಂದೂಗಳಿಗೆ ಮಾತ್ರ ಅನ್ವಯಿಸುತ್ತಿದ್ದು, ಅನ್ಯ ಧರ್ಮಿಯರು ಕಾನೂನು ಪಾಲನೆ ಮಾಡದಿರುವದೇ ಜನಸಂಖ್ಯೆ ಅಸಮತೋಲನಕ್ಕೆ ಕಾರಣವಾಗಿದೆ. ಹೀಗಾಗಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ. ಶೇ. 10 ರಷ್ಟು ಮತ ಪಡೆದವರು ಇವತ್ತು ಸಂಸತ್ತು ಹಾಗೂ ವಿಧಾನ ಸಭೆಗಳಿಗೆ ಪ್ರವೇಶ ಮಾಡುತ್ತಿದ್ದು, ಹಿಂದೂಗಳ ಮತಗಳು ಜಾತಿಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ನಡುವೆ ಹಂಚಿ ಹೋಗಿರುವದರಿಂದ ಶೇಕಡವಾರು ಕಡಿಮೆ ಮತ ಪಡೆದವರು ಆಯ್ಕೆಯಾಗುತ್ತಿದ್ದಾರೆ. ಜನಸಂಖ್ಯೆ ಏರುಪೇರುಗಳಿಂದಾಗಿ ಆಡಳಿತ ಯಂತ್ರ ಇಂತಹವರ ಕೈಗಳಿಗೆ ಹೋಗುವ ಆತಂಕವಿದೆ. ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರಯುತ ಶಿಕ್ಷಣ ನೀಡುವ ಅವಶ್ಯಕತೆಯಿದೆ. ಪೋಷಕರಿಗೆ ತಮ್ಮ ಮಕ್ಕಳಲ್ಲಿ ಪ್ರೀತಿಯ ಬದಲು ವ್ಯಾಮೋಹ ಜಾಸ್ತಿಯಾಗುತ್ತಿದ್ದು, ಮಕ್ಕಳನ್ನು ಕೊಳ್ಳುಬಾಕ ಸಂಸ್ಕೃತಿಗೆ ದೂಡದಿರಿ ಎಂದು ವಿಷಾಧಿಸಿದ ಅವರು, ಜಾತಿ ಸಂಘಟನೆಗಳು ತಮ್ಮ ಸಮಾಜ ಬಾಂಧವರ ಕಡು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಾತ್ರ ನೀಡುವ ಬದಲು ಅವರ ಸಂಪೂರ್ಣ ಖರ್ಚು ವೆಚ್ಚವನ್ನು ನೋಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ಪ್ರಜ್ಞಾ ಕಾವೇರಿಯ ಪದಾಧಿಕಾರಿ ಚಂದ್ರ ಅವರು, ’ ೨೦೧೧ರ ಜನಗಣತಿ ವರದಿ, ಜನಸಂಖ್ಯೆಯ ಏರುಪೇರು ಚಿತ್ರಣ ಪರಿಣಾಮ’ವನ್ನು ಪ್ರೊಜೆಕ್ಟರ್ ಮೂಲಕ ಮಾಹಿತಿ ನೀಡಿದರು. ಈ ಸಂದರ್ಭ ನಡೆದ ಸಂವಾದದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ, ಎಸ್ಎನ್ಡಿಪಿಯ ಜಿಲ್ಲಾಧ್ಯಕ್ಷ ಎ.ಎನ್. ವಾಸು, ಅಧಿವಕ್ತ ಪರಿಷತ್ನ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ವಕೀಲ ಸುಭಾಷ್, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಮಾಜಿ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ನೂತನ ಜಿ.ಪಂ. ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ, ವಿಜು ಸುಬ್ರಮಣಿ, ನೆಲ್ಲಚಂಡ ಕಿರಣ್, ಮುರುಳೀಧರ, ಮಾಜಿ ಸದಸ್ಯೆ ಕಾಂತಿ ಸತೀಶ್ ಹಾಗೂ ಇನ್ನಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯವಾಹ ಕೆ.ಕೆ. ದಿನೇಶ್ಕುಮಾರ್, ವೀರಾಜಪೇಟೆ ತಾಲೂಕು ಸಂಘ ಚಾಲಕ್ ಪ್ರಿನ್ಸ್ ಗಣಪತಿ, ಕುಶಾಲನಗರ ತಾಲೂಕು ಸಂಘ ಚಾಲಕ್ ತಿಮ್ಮಪ್ಪ ಮತ್ತು ವಿವಿಧ ಸಮಾಜದ ಪದಾಧಿಕಾರಿಗಳಾದ ಕೆ.ಎಸ್. ರಮೇಶ್, ಬಿ.ಎಸ್. ಮೋಹನ್, ಬಿ.ಕೆ. ಅರುಣ್ ಕುಮಾರ್, ಪಿ.ಎಂ. ರವಿ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭಾರತೀಯ ವಿದ್ಯಾಭವನ ಯೋಗ ಕೇಂದ್ರದ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್ ಪ್ರಾರ್ಥಿಸಿ, ಪ್ರಜ್ಞಾ ಕಾವೇರಿ ಬಳಗದ ಸದಸ್ಯ ಪವನ್ ವಶಿಷ್ಟ ಸ್ವಾಗತಿಸಿ, ಚಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.