ಬೆಳ್ತಂಗಡಿ : ಬದುಕಿನ ಸಾರ್ಥಕತೆಗೆ ಧರ್ಮದ ಆಶ್ರಯ ಆಗತ್ಯ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ನಾವೂರು ಶ್ರೀ ಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಮೂರನೇ ದಿನವಾದ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ದೇವರಲ್ಲಿ ನಮಗೆ ಆತ್ಮೀಯತೆ ಬೆಳೆಯಬೇಕಾದರೆ ದೇವರ ಕಲ್ಪನೆ ಹಾಸುಹೊಕ್ಕಾಗಿರಬೇಕು. ಕೃಷ್ಣನ ಬದುಕು ನಮ್ಮ ನಿತ್ಯಜೀವನಕ್ಕೆ ಆದರ್ಶ. ಧರ್ಮ ಎಂದಿಗೂ ನಮ್ಮನ್ನು ಬಿಡದು. ನಾವು ಧರ್ಮವನ್ನು ಬಿಟ್ಟರೂ ಅದು ನಮ್ಮನ್ನು ಬಿಟ್ಟು ಹಾಕದು ಎಂದ ಅವರು ರಾಮಾಯಣ, ಮಹಾಭಾರತ, ಭಾಗವತದ ಕಥೆಗಳನ್ನು ಜನಸಾಮಾನ್ಯರೆಡೆಗೆ ತಂದಿರುವುದು ಜಾನಪದ ಕಲೆಗಳು ಮತ್ತು ಯಕ್ಷಗಾನ ಎಂದರು.
ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಮುಖೇನ ರಾಜ್ಯದಲ್ಲಿ 213 ದೇವಾಲಯಗಳನ್ನು ನವೀಕರಣಗೊಳಿಸಲಾಗಿದೆ. ಅದರಲ್ಲಿ ಕೇವಲ ಪೂಜೆ ಮಾತ್ರ ನಡೆಯುತ್ತಿದ್ದ 150 ದೇವಾಲಯಗಳೂ ಸೇರಿವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಸರಕಾರದ ಯೋಜನೆಗಳಿಂದ ಜನರು ಆರ್ಥಿಕ ಸಬಲರಾಗಿರುವುದನ್ನು ಕಾಣುತ್ತಿದ್ದೆವೆ. ಹಳ್ಳಿಯಲ್ಲಿ ಇಂದು ಜನರು ಒಂದಲ್ಲ ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣಕೊಡುವಲ್ಲಿಗೆ ಸ್ಥಿತಿವಂತರಾಗಿದ್ದಾರೆ. ಅವಕಾಶಗಳ ನಿರ್ಮಾಣವಾಗಿದೆ ಎಂದರು.
ಆರ್ಥಿಕ ಪರಿವರ್ತನೆಯ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಮೊದಲು ನಮ್ಮ ಕುಟುಂಬ ಸಧೃಢವನ್ನಾಗಿ ಮಾಡಿಕೊಂಡು ಬಳಿಕ ದೇವಸ್ಥಾನಕ್ಕೆ ತಮ್ಮ ಉಳಿದೆಲ್ಲ ಸಂಪತ್ತನ್ನು ಧಾರೆಯಿರುವುದು ನಾವೂರಿನ ದೇಗುಲವನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಡಾ| ಹೆಗ್ಗಡೆ ಶ್ಲಾಘಿಸಿದರು.
ಧಾರ್ಮಿಕ ಉಪನ್ಯಾಸ ನೀಡಿದ ಅಖಿಲ ಭಾರತೀಯ ಕುಟುಂಬ ಪ್ರಭೋಧನ ಪ್ರಮುಖ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಸಮಾಜ ಸಂಸ್ಕಾರ ವಿಹೀನವಾದಾಗ ಅದನ್ನು ನೆನಪಿಸುವ ಕಾರ್ಯ ದೇಗುಲಗಳು ಮಾಡುತ್ತವೆ. ಸಂಸ್ಕಾರದ ಕೊರತೆಯಿಂದಾಗಿ ಇಂದು ಮನೆಗಳಲ್ಲಿ ಸಹಬಾಳ್ವೆ, ಸಹಭೋಜನ, ಸಹಚಿಂತನೆ ಕಡಿಮೆಯಯಾಗುತ್ತಿದೆ. ಮಾನಸಿಕ ಶ್ರೀಮಂತಿಕೆ, ಹೃದಯ ವೈಶಾಲ್ಯಗಳಿದ್ದರೆ ನಾವೂರಿನಂತ ದೇಗುಲ ನಿರ್ಮಾಣ ಎಲ್ಲೆಡೆ ಸಾಧ್ಯ ಎಂದ ಅವರು ದೇಗುಲಗಳನ್ನು ಮಕ್ಳಳಿಗೆ ಸಂಸ್ಕಾರ ನೀಡುವ ಕೇಂದ್ರಗಳನ್ನಾಗಿ ರೂಪಿಸುವ ಅಗತ್ಯ ಇದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವ ಮಾರ್ಗದರ್ಶಕ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಅವರು, ಪೂಜೆಗಿಂತಲೂ ಸೇವಾ ಕಾರ್ಯಗಳು ಮುಖ್ಯ. ಮನಸ್ಸಿನ ಪಾವಿತ್ರ್ಯತೆಗೆ ದೇಗುಲಗಳು ಅಗತ್ಯ ಎಂದರು.ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಅವರು ಭಜನಾ ಸಂಪ್ರದಾಯ ಇಂದು ನಶಿಸಿಹೋಗುತ್ತಿರುವುದು ವಿಷಾದನೀಯ. ಈ ಪರಂಪರೆಯನ್ನು ಮತ್ತೆ ಮನೆಮನೆಯಲ್ಲಿರುವಂತೆ ಮಾಡಲು ನನ್ನ ವತಿಯಿಂದ ನಾವೂರು ಗ್ರಾಮದ ಎಲ್ಲಾ ಮನೆಗಳಿಗೆ ತಾಳವನ್ನು ದೇಗುಲದ ಮುಖಾಂತರ ನೀಡುವುದಾಗಿ ಪ್ರಕಟಿಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಉಜಿರೆ ಶ್ರಿ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಯು. ವಿಜಯರಾಘವ ಪಡ್ವೆಟ್ನಾಯ, ಬಂಗಾಡಿ ಅರಮನೆ ರವಿರಾಜ ಬಲ್ಲಾಳ್, ಪಡಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಯೋಗೀಶ್ ಕುಮಾರ್ ನಡಕರ, ಬಂಗಾಡಿ ಸಹಸ್ರನಾಗಬ್ರಹ್ಮ ಸನ್ನಿಧಿ ಆಡಳಿತ ಮೊಕ್ತೇಸರ ತಿಮ್ಮಪ್ಪ ಗೌಡ ಬೆಳಾಲು, ಪಿಲ್ಯ ಬೀಡು ಕೇಶವ ಗೊಲ್ಲ, ಸಾಮ್ರಾಟ್ ಕರ್ಕೆರ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜಾ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಕಾರಿಂಜ, ಗೌರವಾಧ್ಯಕ್ಷ ಸುಕುಮಾರ್ ಜೈನ್ ವೇದಿಕೆಯಲ್ಲಿದ್ದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಸಾಲ್ಯಾನ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ವಿಷ್ಣು ಶರ್ಮ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ|ಪ್ರದೀಪ್ ನಾವೂರು ಸ್ವಾಗತಿಸಿದರು. ಮೋಹನ ಬಂಗೇರ ವಂದಿಸಿದರು.
ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿ, ಕನ್ಯಾಡಿ ಇವರಿಂದ ಭಜನಾ ಕಾರ್ಯಕ್ರಮ, ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಬೆಂಗಳೂರು ಇವರಿಂದ ಭಕ್ತಿ ರಸಮಂಜರಿ, ನಾವೂರು ಸರಕಾರಿ ಪ್ರೌಢ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.