ಬೆಳ್ತಂಗಡಿ : ದಲಿತ ಚಳುವಳಿಯಲ್ಲಿ `ಅಂಬೇಡ್ಕರ್ವಾದ’ ಎಂಬ ಶಿರ್ಷಿಕೆಯೊಂದಿಗೆ ಗುರುತಿಸಿಕೊಂಡಿರುವ ಸಂಘಟನೆಯಲ್ಲಿ ಏಕ ವ್ಯಕ್ತಿಯ ರಾಜಕೀಯ ನಿರ್ಧಾರ ನಡೆಯುತ್ತಿದೆ ಹಾಗೂ ಅಂಬೇಡ್ಕರ್ ಸಿದ್ಧಾಂತ ಮರೀಚಿಕೆಯಾಗುತ್ತಿದೆ ಎಂಬ ಪ್ರಮುಖ ಕಾರಣದಿಂದ ಬೇಸತ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ಬೆಳ್ತಂಗಡಿ ತಾಲೂಕು ಸಂಚಾಲಕ ಸಹಿತ ಆರು ಮಂದಿ ದಲಿತ ಮುಖಂಡರುಗಳು ಸಂಘಟನೆಗೆ ಸಾಮೂಹಿಕ ರಾಜಿನಾಮೆಯ ನೀಡಿದ್ದು ಈ ಕುತೂಹಲಕರ ಬೆಳವಣಿಗೆಯ ಬೆನ್ನಲ್ಲೇ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಜಿಲ್ಲಾ ಸಂಚಾಲಕರು ನೂತನ ಸಂಚಾಲಕರನ್ನು ಆಯ್ಕೆ ಮಾಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಕರ್ನಾಟಕ ದ ಸಂ ಸ (ಅಂಬೇಡ್ಕರ್ವಾದ) ಮಾಜಿ ತಾಲೂಕು ಸಂಚಾಲಕ, ಜಿಲ್ಲಾ ಸಮಿತಿ ಸದಸ್ಯ ಸಂಜೀವ ಆರ್ ಅವರನ್ನು ಸಂಘಟನೆ ವಿರೋಧಿ ಚಟುವಟಿಕೆ ಎಂಬ ಆರೋಪದಲ್ಲಿ ಸಂಘಟನೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಸಂಘಟನೆಯ ತಾಲೂಕು ಸಂಚಾಲಕ ರಮೇಶ್ ಆರ್ ಬೆಳ್ತಂಗಡಿ, ಬೆಳ್ತಂಗಡಿ ಹೋಬಳಿ ಸಂಚಾಲಕ ಬಾಬಿ ಎಂ ಮಾಲಾಡಿ, ತಾಲೂಕು ನಿರ್ವಾಹಕ ಸಮಿತಿ ಸದಸ್ಯರುಗಳಾದ ಲಕ್ಷ್ಮಣ ಜಿ ಎಸ್ ತಣ್ಣೀರುಪಂಥ, ರಫಾಯಿಲ್ ಡಿ`ಸೋಜಾ ನಾರಾವಿ, ರಾಘವ ಕಲ್ಮಂಜ, ತನಿಯಪ್ಪ ಇಂದಬೆಟ್ಟು ಎಂಬವರು ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ಸಂಚಾಲಕರಿಗೆ ಅಧಿಕೃತವಾಗಿ ಸಾಮೂಹಿಕ ರಾಜಿನಾಮೆ ಪತ್ರ ರವಾನಿಸಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಏಕ ವ್ಯಕ್ತಿಯ ರಾಜಕೀಯ ತೀರ್ಮಾನದಂತೆ ಸಂಘಟನೆಯು ದುರ್ಬಳಕೆಯಾಗುತ್ತಾ ದುರ್ಬಲಗೊಂಡಿದೆ ಎಂಬ ಪ್ರಮುಖ ಅಂಶವನ್ನು ಸಾಮೂಹಿಕ ರಾಜಿನಾಮೆ ನೀಡಿದ ಮುಖಂಡರುಗಳು ತಮ್ಮ ರಾಜಿನಾಮೆ ಪತ್ರದಲ್ಲಿ ಎತ್ತಿ ಹಿಡಿದಿದ್ದಾರೆ. ರಾಜ್ಯ ಸಂಚಾಲಕರಿಗೂ ಸಲ್ಲಿಸಿರುವ ರಾಜಿನಾಮೆ ಪತ್ರದಲ್ಲಿ ಸಂಘಟನೆಯ ನೇತೃತ್ವದಲ್ಲಿ ಕಳೆದ ಡಿ 6 ರಂದು ಅಂಬೇಡ್ಕರ್ ಪರಿನಿಬ್ಬಾಣ ದಿನ ದಿನದ ಪ್ರಯಕ್ತ ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮ ಹಾಗೂ ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಸಿದ್ಧಾಂತದ ಬಗ್ಗೆ ವಿದ್ಯಾರ್ಥಿಗಳಿಗೆ ಶಿಬಿರ ನಡೆದ ನಂತರದ ಬೆಳವಣಿಗೆಯಲ್ಲಿ ಕೆಲವು ತಾಲೂಕು ಸಮಿತಿ ಪದಾಧಿಕಾರಿಗಳ ಒತ್ತಾಯದ ಮೇರೆಗೆ ಸಂಘಟನೆಯ ತುರ್ತು ಸಭೆ ನಡೆದಿದ್ದು ಸಂಘಟನೆಯ ಕೆಲವು ಪದಾಧಿಕಾರಿಗಳು ಅಂಬೇಡ್ಕರ್ ತತ್ವ ಸಿದ್ಧಾಂತ ಪ್ರತಿಪಾದಿಸುವ ಬಹುಜನ ವಿದ್ಯಾರ್ಥಿ ಸಂಘ(ಬಿ ವಿ ಎಸ್)ವನ್ನು ಬೆಂಬಲಿಸಿರುವುದನ್ನು ಹಾಗೂ ಮಾಲಾಡಿಯಲ್ಲಿ ನಡೆದ ಬಿ ವಿ ಎಸ್ ವಿದ್ಯಾರ್ಥಿ ತರಬೇತಿ ಶಿಬಿರಕ್ಕೆ ಸಹಕಾರ ನೀಡಿರುವುದನ್ನೇ ನೆಪವಾಗಿಟ್ಟುಕೊಂಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಚಂದು ಎಲ್ ಮತ್ತಿತರ ಪದಾಧಿಕಾರಿಗಳು ನಾನಾ ಆರೋಪ ಹೊರಿಸಿ ಅವಾಚ್ಯವಾಗಿ ನಿಂದಿಸಿರುವುದರಿಂದ ತೀವ್ರ ನೊಂದಿರುವುದಾಗಿ ವಿವರಿಸಲಾಗಿದೆ. ಸಂಘಟನೆಯ ಎಲ್ಲಾ ವಿಷಯಗಳು ರಾಜಕೀಯ ವೇದಿಕೆಯಲ್ಲಿ ತೀರ್ಮಾನವಾಗುತ್ತಿರುವುದರಿಂದ ಮನನೊಂದು ಸಂಘಟನೆಗೆ ರಾಜಿನಾಮೆ ನೀಡಿರುವುದಾಗಿ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಇನ್ನೊಂದೆಡೆ ಸಂಚಾಲಕ ರಮೇಶ್ ಆರ್ ಸೇರಿದಂತೆ 6 ಮಂದಿ ಪ್ರಮುಖ ಮುಖಂಡರು ರಾಜಿನಾಮೆ ನೀಡಿದ್ದರೂ ಈ ಬೆಳವಣಿಗೆಯ ಬಗ್ಗೆ ಸಂಘಟನೆಯ ರಾಜ್ಯ ಮುಖಂಡರಾಗಲಿ ಜಿಲ್ಲಾ ಮುಖಂಡರಾಗಲಿ ರಾಜಿನಾಮೆ ನೀಡಿದ ಮುಖಂಡರುಗಳನ್ನು ಯಾವುದೇ ರೀತಿಯಲ್ಲಿ ವಿಚಾರಿಸಿ ಅಭಿಪ್ರಾಯ ಪಡೆಯದೆ ಅಥವಾ ಮನವೊಲಿಸಲು ಯತ್ನಿಸದೆ ನೂತನ ಸಂಚಾಲಕರನ್ನು ಆಯ್ಕೆ ಮಾಡಿರುವುದು ಇದೀಗ ಚರ್ಚೆಗೂ ಕುತೂಹಲಕ್ಕೂ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.