ಉಡುಪಿ : ಐತಿಹಾಸಿಕವೆನಿಸಲಿರುವ ಶ್ರೀಪೇಜಾವರ ಮಠದ ಐದನೆಯ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ನಾಡಿನ ನಾನಾ ಕಡೆಗಳಿಂದ ಭಕ್ತರ ದಂಡು ಆಗಮಿಸುತ್ತಿದ್ದು ಇವರನ್ನು ಸ್ವಾಗತಿಸಲು ಸ್ವಾಗತ ಸಮಿತಿ ಸಜ್ಜಾಗಿದೆ. ಪೇಜಾವರ ಮಠದಲ್ಲಿ ಜನಜಂಗುಳಿ ಕಂಡುಬರುತ್ತಿದೆ. ವಿದ್ಯುದ್ದೀಪಗಳಿಂದ ರಥಬೀದಿ, ಪೇಜಾವರ ಮಠ, ಮಾರ್ಗಗಳು ಕಂಗೊಳಿಸುತ್ತಿವೆ. ಪೇಜಾವರ ಮಠದಿಂದ ಸಾಮಗ್ರಿಗಳನ್ನು ಶ್ರೀಕೃಷ್ಣಮಠದ ಬಡಗುಮಾಳಿಗೆಗೆ ತೆಗೆದುಕೊಂಡು ಹೋಗುತ್ತಿದ್ದರೆ, ಶ್ರೀಕೃಷ್ಣಮಠದಿಂದ ಸಾಮಗ್ರಿಗಳನ್ನು ಶ್ರೀ ಕಾಣಿಯೂರು ಮಠದವರು ತಮ್ಮ ಮಠಕ್ಕೆ ಸಾಗಿಸುತ್ತಿದ್ದಾರೆ.
ವಸತಿ : ದೊಡ್ಡ ಸಮೂಹವನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ, ಸ್ವಯಂಸೇವಕರ ಪಡೆ ಸನ್ನದ್ಧವಾಗಿದೆ. ವಿವಿಐಪಿಗಳಿಗೆ ಮಣಿಪಾಲದ ಕಂಟ್ರಿ ಇನ್ ಆ್ಯಂಡ್ ಸೂಟ್ಸ್ ಹೊಟೇಲ್, ಪ್ರವಾಸಿ ಮಂದಿರದಲ್ಲಿ ವ್ಯವಸ್ಥೆ ಮಾಡಿದ್ದರೆ, ಮನೆಗಳಲ್ಲಿ ವಸತಿ, ದಿನ ಬಾಡಿಗೆ ಮನೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಬ್ರಹ್ಮಾವರ, ಕಾಪು, ಮಣಿಪಾಲ, ಪರ್ಕಳ, ಕಾರ್ಕಳ, ಮೂಲ್ಕಿ ಮೊದಲಾದ ಹೊರವಲಯಗಳಲ್ಲಿ ರೂಮುಗಳಿರುವ ಹೊಟೇಲ್ಗಳಿದ್ದು ಸಾರ್ವಜನಿಕರು ಉಳಿದುಕೊಂಡು ಬರಬಹುದು. ಸಾರ್ವಜನಿಕರು ಪೇಜಾವರ ಮಠ ಸಮೀಪದ ಸ್ವಾಗತ ಸಮಿತಿಯ ಕಚೇರಿಯನ್ನು ಸಂಪರ್ಕಿಸಿದರೆ ಅವರು ಮನೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಿದ್ದಾರೆ. ಆರೋಗ್ಯ ವ್ಯವಸ್ಥೆಗಾಗಿ ನಾಲ್ಕು ಕೇಂದ್ರಗಳನ್ನು ತೆರೆಯಲಾಗಿದೆ.
ಭವ್ಯ ವೇದಿಕೆ : ಪರ್ಯಾಯ ದರ್ಬಾರ್ನ್ನು ಇದೇ ಮೊದಲ ಬಾರಿಗೆ ಪಾರ್ಕಿಂಗ್ ಪ್ರದೇಶದಲ್ಲಿ ನಡೆಸಲಾಗುತ್ತಿದೆ. ಒಟ್ಟು 40,000 ಚದರಡಿ ವಿಸ್ತೀರ್ಣದ ಪೆಂಡಾಲಿನಲ್ಲಿ 160×32 ಅಡಿ ಆಕಾರದ ವೇದಿಕೆ ಸಿದ್ಧಪಡಿಸಲಾಗಿದೆ.ಹತ್ತಾರು ಸಚಿವರು, ಗಣ್ಯರು ಬರುವ ನಿರೀಕ್ಷೆ ಇದೆ. ಸಭಾಂಗಣದಲ್ಲಿ ಒಟ್ಟು 7,000 ಜನರು, ಹೊರಗೆ 5,000 ಜನರು ಕುಳಿತುಕೊಳ್ಳಬಹುದು. ರಾಜಾಂಗಣದಲ್ಲಿ 1,600 ಜನರು ಟಿವಿ ಪರದೆಯಲ್ಲಿ ಸಭೆಯನ್ನು ವೀಕ್ಷಿಸಬಹುದು. ಗುತ್ತಿನ ಮನೆ ಶೈಲಿಯಲ್ಲಿ ವೇದಿಕೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ|ಮೋಹನ ಆಳ್ವರು ಆಕರ್ಷಕವಾಗಿ ನಿರ್ಮಿಸಿದ್ದಾರೆ. ಪೆಂಡಾಲನ್ನು ಮುಚ್ಚಾರು ರಾಮಚಂದ್ರ ಭಟ್ ನಿರ್ಮಿಸಿದ್ದಾರೆ.
ಡಿಡಿಯಲ್ಲಿ ನೇರ ಪ್ರಸಾರ : ಜ. 17ರ ಮಧ್ಯರಾತ್ರಿಯಿಂದ ಪರ್ಯಾಯ ಸಮಾರಂಭವನ್ನು ದೂರದರ್ಶನವು ನೇರ ಪ್ರಸಾರ ಮಾಡಲಿದೆ.ಆಕಾಶವಾಣಿಯಲ್ಲಿ ಕೂಡ ವೀಕ್ಷಕ ವಿವರಣೆ ಪ್ರಸಾರವಾಗಲಿದೆ.ಸಾಂಸ್ಕೃತಿಕ ಕಾರ್ಯಕ್ರಮ ಜ. 17ರ ರಾತ್ರಿ ನಗರದ 12ಕ್ಕೂ ಹೆಚ್ಚು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಚಲನಚಿತ್ರ ನಟನಟಿಯರು ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.
ಬಿಜೆಪಿ ನಾಯಕರ ದಂಡು : ಬಿಜೆಪಿ ನಾಯಕರಾದ ಎಲ್.ಕೆ. ಆಡ್ವಾಣಿ, ಉಮಾಭಾರತಿ, ದೇವೇಂದ್ರ ಫಡ್ನವೀಸ್, ವಸುಂಧರಾ ರಾಜೇ ಸಿಂಯಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಅನಂತ ಕುಮಾರ್, ಡಿ.ವಿ. ಸದಾನಂದ ಗೌಡ, ಜಿ.ಎಂ.ಸಿದ್ಧೇಶ್ವರ, ಶ್ರೀಪಾದ ನಾಯಕ್, ಸ್ಮತಿ ಇರಾನಿ, ಸುರೇಶ ಪ್ರಭು, ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ಎಚ್. ಶಂಕರಮೂರ್ತಿ, ಪ್ರಹ್ಲಾದ್ ಜೋಶಿ, ಕೆ.ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಬಿ.ವೈ. ರಾಘವೇಂದ್ರ, ಸಿ.ಟಿ. ರವಿ ಮೊದಲಾದ 20ಕ್ಕೂ ಹೆಚ್ಚು ನಾಯಕರು ಭಾಗವಹಿಸಲಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರ ದಂಡು : ರಾಜ್ಯದ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಶನಿವಾರವೇ ಪೇಜಾವರ ಮಠಕ್ಕೆ ಆಗಮಿಸಿ ಶ್ರೀಗಳವರನ್ನು ಕಂಡು ಭೇಟಿ ಮಾಡಿ ಪ್ರಸಾದ ಸ್ವೀಕರಿಸಿದ್ದಾರೆ. ಪರ್ಯಾಯೋತ್ಸವಕ್ಕೆ ಸಚಿವರು ಶುಭ ಕೋರಿದ್ದಾರೆ. ಕಾಂಗ್ರೆಸ್ ನಾಯಕರಾದ ಆಸ್ಕರ್, ವೀರಪ್ಪ ಮೊಲಿ, ದಿನೇಶ್ ಗುಂಡೂ ರಾವ್, ಆರ್. ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್, ರಮಾನಾಥ ರೈ, ಖಾದರ್, ಮಹದೇವಪ್ರಸಾದ್, ಮಂಜು, ಸಿ.ಎಂ. ಇಬ್ರಾಹಿಂ, ಧರಂ ಸಿಂಗ್, ವಿನಯಕುಮಾರ ಸೊರಕೆ, ಅಭಯಚಂದ್ರ ಜೈನ್ ಮೊದಲಾದವರು ಪಾಲ್ಗೊಳ್ಳುವರೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಬಸ್ ಸಂಚಾರ : ಜ. 17ರ ರಾತ್ರಿಯಿಂದ ಜ. 18ರ ಬೆಳಗ್ಗೆವರೆಗೆ ಕಾಪು, ಹೆಬ್ರಿ, ಕಾರ್ಕಳ, ಕುಂದಾಪುರ, ಮಂಗಳೂರು ಕಡೆಗಳಿಂದ ಮತ್ತು ಸಿಟಿ ಬಸ್ ಸಂಚಾರವಿರುವ ಕಡೆಗಳಲ್ಲಿ ಬಸ್ ಸೇವೆಗಳು ನಡೆಯಲಿವೆ. ಸಿಟಿ ಬಸ್ ನಿಲ್ದಾಣದಿಂದ ಹಳೆ ತಾಲೂಕು ಕಚೇರಿ ಕಡೆಗೆ ಮಾತ್ರ ಬಸ್ ಸಂಚಾರವಿರುವುದಿಲ್ಲ ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ, ಕೆನರಾ ಬಸ್ ಮಾಲಕರ ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ ನಾಯಕ್ ತಿಳಿಸಿದ್ದಾರೆ.
ಪರ್ಯಾಯ ಮೆರವಣಿಗೆ : ಜ. 18ರ ಮುಂಜಾವ 1.30ಕ್ಕೆ ಕಾಪು ದಂಡತೀರ್ಥದಲ್ಲಿ ಸ್ನಾನ ಮಾಡಿ 2 ಗಂಟೆಗೆ ಜೋಡುಕಟ್ಟೆಯಲ್ಲಿ ಸೇರಲಿದ್ದಾರೆ. 2.30ಕ್ಕೆ ಆಕರ್ಷಕ ಪರ್ಯಾಯ ಮೆರವಣಿಗೆ ಆರಂಭವಾಗಲಿದೆ. 4.30ಕ್ಕೆ ಪರ್ಯಾಯ ಮೆರವಣಿಗೆ ರಥಬೀದಿಗೆ ಪ್ರವೇಶವಾಗಲಿದೆ. ದೇವರ ದರ್ಶನ ಬಳಿಕ 5.40ಕ್ಕೆ ಅಕ್ಷಯಪಾತ್ರೆ ಪ್ರದಾನ, ಸರ್ವಜ್ಞ ಪೀಠಾರೋಹಣ, 6.20ಕ್ಕೆ ಪರ್ಯಾಯ ದರ್ಬಾರ್ ಸಭೆ ಆರಂಭವಾಗಲಿದೆ.
ಇಂದು ರಾತ್ರಿ ಊಟ : ಜ. 17ರ ರಾತ್ರಿ ಇದೇ ಮೊದಲ ಬಾರಿಗೆ ಊಟದ ಏರ್ಪಾಡು ಮಾಡಲಾಗಿದೆ. ರಾತ್ರಿ 8ರಿಂದ 11ರ ವರೆಗೆ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದ ಬಳಿ ಬಫೆ ಪದ್ಧತಿ ಊಟ ನಡೆಯಲಿದೆ. ಸುಮಾರು 36 ಕೌಂಟರುಗಳನ್ನು ತೆರೆಯಲಾಗುತ್ತದೆ. ಅನ್ನ, ಸಾಂಬಾರು, ಕೇಸರಿಬಾತ್ ವಿತರಿಸಲಾಗುವುದು. ಸುಮಾರು 75,000 ಜನರಿಗೆ ಊಟದ ಏರ್ಪಾಡು ಮಾಡಲಾಗುತ್ತದೆ. ಸುಮಾರು 150 ಅಡುಗೆ ಭಟರು ಬೆಳಗ್ಗೆಯಿಂದ ಇದಕ್ಕಾಗಿ ತಯಾರಾಗಲಿದ್ದಾರೆ.
ನಾಳೆ ಸಂತರ್ಪಣೆ : ಜ. 18ರ ಮಧ್ಯಾಹ್ನ ಊಟಕ್ಕೆ ಅನ್ನ, ಚಟ್ನಿ, ಸಾರು, ಗುಳ್ಳದ ಸಾಂಬಾರು, ಪಲ್ಯ, ಬರ್ಫಿ, ಲಾಡು ಮೆನುಗಳು. ಹೊಟೇಲ್ ಕಿದಿಯೂರು ಮಾಲಕ ಭುವನೇಂದ್ರ ಕಿದಿಯೂರು ಅವರು ಹಾಲು ಪಾಯಸ ವ್ಯವಸ್ಥೆ ಮಾಡಲಿದ್ದಾರೆ. ಈ ಊಟಕ್ಕೆ ಭಾರೀ ಮಹತ್ವವಿದ್ದು ಜ. 17ರ ರಾತ್ರಿಯೇ ಕಾಯಿಪಲ್ಯ ಮುಹೂರ್ತ ನಡೆಯಲಿದೆ. ಇದಕ್ಕೆ ಸ್ವಾಮೀಜಿಯವರು ಮುಹೂರ್ತ ಮಾಡಲಿದ್ದಾರೆ. ಎರಡೂ ದಿನದ ಅಡುಗೆ ಜವಾಬ್ದಾರಿಯನ್ನು ನಿರ್ವಹಿಸುವವರು ಪ್ರಸಿದ್ಧ ಪಾಕತಜ್ಞ ಪೆರ್ಣಂಕಿಲ ಯಜ್ಞನಾರಾಯಣ ಭಟ್. ಇವರಿಗೆ ಇದು ನಾಲ್ಕನೆಯ ಪರ್ಯಾಯ. ಪಲಿಮಾರು ಮಠದ ಮೂರು ಪರ್ಯಾಯದಲ್ಲಿಯೂ ಇವರು ಅಡುಗೆ ತಯಾರಿಸಿದ್ದಾರೆ. ಇವರ ತಂದೆ ಪೆರ್ಣಂಕಿಲ ವಾಸುದೇವ ಭಟ್ ಪೇಜಾವರ ಮಠದ ಹಿಂದಿನ ಸ್ವಾಮಿಗಳ ಪರ್ಯಾಯದಲ್ಲಿ ಅಡುಗೆಯ ಜವಾಬ್ದಾರಿ ನಿರ್ವಹಿಸಿದ್ದರು.
1,200 ಸಾಂಸ್ಕೃತಿಕ ಕಾರ್ಯಕ್ರಮ ನಡೆದ ಕಾಣಿಯೂರು ಪರ್ಯಾಯ ಸಮಾಪನ : ಉಡುಪಿ: ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯದಲ್ಲಿ 1,200ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದರಲ್ಲಿ ನೃತ್ಯ 200, ಯಕ್ಷಗಾನ 170, ತಾಳಮದ್ದಳೆ 80, ಭಕ್ತಿಸಂಗೀತ 200, ಹರಿಕಥೆ 50, ಕೊಳಲುವಾದನ 60, ನಾಟಕ 30, ಜಾದೂ 8, ಗೊಂಬೆಯಾಟ 15, ಇತರೆ ವಾದ್ಯ ಕಾರ್ಯಕ್ರಮಗಳು 60, ಚಿಣ್ಣರಮಾಸ 50 ಕಾರ್ಯಕ್ರಮಗಳು ಒಳಗೊಂಡಿವೆ.
ದೇವರಿಗೆ 60ಕ್ಕೂ ಅಕ ವಿಶೇಷ ಅಲಂಕಾರಗಳು, 91 ಸಪೊತ್ಸವ, ಶ್ರೀಅನಂತೇಶ್ವರದಲ್ಲಿರುವ ಆಚಾರ್ಯ ಮಧ್ವರ ಸನ್ನಿಗೆ ಹಸ್ತೋದಕ ಪ್ರಾರಂಭ, ಸುಮಾರು 1 ಕೋ.ರೂ. ವೆಚ್ಚದಲ್ಲಿ ಆರೋಗ್ಯನಿ, ಚಿಣ್ಣರ ಸಂತರ್ಪಣೆ, ಸುಮಾರು 1 ಕೋ.ರೂ. ವೆಚ್ಚದಲ್ಲಿ 60ಕ್ಕೂ ಹೆಚ್ಚು ವಿದ್ವಾಂಸರು, ವಿವಿಧ ಮಠಾಪತಿಗಳ ಪ್ರವಚನ, ಮಧ್ವಾಚಾರ್ಯರ ವಿಗ್ರಹಕ್ಕೆ 1 ಕೆ.ಜಿ. ಚಿನ್ನದಿಂದ ಪಾಣಿಪೀಠ, ಮುಖ್ಯಪ್ರಾಣದೇವರ ಉತ್ಸವ ಪ್ರತಿಮೆಗೆ ಅರ್ಧ ಕೆ.ಜಿ. ಚಿನ್ನದಿಂದ ಪಾಣಿಪೀಠ, ಅಭಿಷೇಕಕ್ಕೆ ಚಿನ್ನದ ಪಂಚಪಾತ್ರೆಗಳು, ಗರುಡದೇವರಿಗೆ 2.5 ಕೆ.ಜಿ. ಬೆಳ್ಳಿ ಕವಚ, ಗರ್ಭಗುಡಿ ಪ್ರವೇಶದ್ವಾರಕ್ಕೆ 10 ಕೆ.ಜಿ. ಬೆಳ್ಳಿಯ ಹೊದಿಕೆ, 30 ಲ.ರೂ. ಮೌಲ್ಯದ ನಿತ್ಯ ಅನ್ನದಾನಕ್ಕೆ ಅನುಕೂಲವಾಗುವ ಶಾಶ್ವತ ಪಾತ್ರೆಗಳ ಸಮರ್ಪಣೆ, ಭೋಜನ ಶಾಲೆಯಲ್ಲಿ ಅಡುಗೆ ಸಾಗಿಸಲು ಲಿಫ್ಟ್, ಅಡುಗೆಗೆ ಹೊಸ ಸ್ಟೀಮರ್, ಬೃಹತ್ ಗೋಸಮ್ಮೇಳನ, ವಿದ್ವದೊಗೋಷ್ಠಿ , 25 ಲ.ರೂ. ವೆಚ್ಚದಲ್ಲಿ ರಾಷ್ಟ್ರೀಯ ಜಾನಪದೋತ್ಸವ, ಸುಮಾರು 1.5 ಲಕ್ಷ ಜನರಿಗೆ ಅನೇಕ ಸಂಘ-ಸಂಸ್ಥೆಗಳ ಮೂಲಕ ಅನ್ನಪ್ರಸಾದ ವಿತರಣೆ, ನಾಲ್ಕು ವೇದ, ಸುಧಾ ಮಂಗಳ ಮಹೋತ್ಸವ, ಉತ್ತರಾದಿ ಶ್ರೀಗಳ ಚಾತುರ್ಮಾಸ್ಯ, ಚತುಸ್ಸಂಹಿತಾಯಾಗ, ಗ್ರಂಥಪ್ರಕಾಶನ, ವಿವಿಧ ಮಠಾಧೀಶರ ಆಗಮನ, ಎಂಟು ವೈದ್ಯಕೀಯ ಶಿಬಿರಗಳು, ಎರಡು ನೇತ್ರಶಿಬಿರ, ವಿವಿಧ ಆರಾಧನಾ ಮಹೋತ್ಸವಗಳು, ಶ್ರೀನಿವಾಸಕಲ್ಯಾಣ ಮಹೋತ್ಸವ, 200 ವಿದ್ವಾಂಸರಿಗೆ, ಗಣ್ಯರಿಗೆ ಸಮ್ಮಾನ ನಡೆದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.