ಬಂಟ್ವಾಳ: ನೂತನವಾಗಿ ಅಸ್ಥಿತ್ವಕ್ಕೆ ಬಂದ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್ನಲ್ಲಿ ಆರಂಭಗೊಂಡಿದೆ.
ರಾಜ್ಯ ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೂತನ ಠಾಣೆಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅನ್ಯಾಯವನ್ನು ಪ್ರತಿಭಟಿಸಬೇಕಾದ ಸಂದರ್ಭದಲ್ಲಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವ ಪ್ರಕ್ರಿಯೆಯು ಅತ್ಯಂತ ಕೆಟ್ಟ ಸಂಸ್ಕೃತಿ. ನ್ಯಾಯಕ್ಕಾಗಿ ಹೋರಾಟ ಮಾಡಲು ಸಾಕಷ್ಟು ವಿಧಾನಗಳಿವೆ. ಆದರೆ ನ್ಯಾಯ ದೊರಕಿಸಿಕೊಡಬೇಕಾದ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಪೊಲೀಸರಲ್ಲೇ ಭಯವನ್ನು ಸೃಷ್ಠಿಸುವ ಈ ಪದ್ಧತಿಯನ್ನು ಕೈಬಿಟ್ಟು ಪೊಲೀಸರು ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದರು.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸಿರುವ ಪೊಲೀಸರ ನಡವಳಿಕೆಗಳು ಜನರ ನಂಬಿಕೆ, ವಿಶ್ವಾಸಕ್ಕೆ ಪಾತ್ರವಾಗುವಂತಿರಬೇಕು. ಎಲ್ಲಾ ಜಾತಿ, ಧರ್ಮದವರ ನಂಬಿಕೆಗೆ ಅರ್ಹವಾಗಿರಬೇಕು. ಜನರು ಪೊಲೀಸರೊಡನೆ ಪ್ರೀತಿ, ವಿಶ್ವಾಸ ಹಾಗೂ ತಾಳ್ಮೆಯಿಂದ ವರ್ತಿಸಬೇಕು ಎಂದ ಸಚಿವರು, ಜನಪ್ರತಿನಿಧಿಗಳು, ಪೊಲೀಸರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸಮಾಜದ ಇತರ ಜನರಿಗಿಂತ ಒಂದಷ್ಟು ಭಿನ್ನವಾಗಿ, ವಿಶೇಷ ದೃಷ್ಟಿಕೋನದಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸರ್ವಜನತೆಯ ಗೌರವಕ್ಕೆ ಪಾತ್ರರಾಗಬೇಕಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ, ಪೊಲೀಸ್ ಮಹಾನಿರೀಕ್ಷಕ ಅಮೃತ್ ಪಾಲ್ ಶುಭ ಹಾರೈಸಿದರು.
ಈ ಭಾಗದ ಜನರ ಒಂದು ದಶಕಗಳ ಬೇಡಿಕೆ ನನಸಾಗಿದೆ. ಅಪಘಾತಗಳನ್ನು ತಡೆಯಲು, ವಾಹನ ಸಂಚಾರ ಸುಗಮಗೊಳಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಕಾರಾತ್ಮಕ ವಾತಾವರಣ ನಿರ್ಮಾಣಗೊಂಡಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ ಎಸ್.ಡಿ. ಅವರು ಪ್ರಸ್ತಾವನೆಯಲ್ಲಿ ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶೇಖರಪ್ಪ ಎಂ.ಸ್ವಾಗತಿಸಿದರು. ಡಿವೈಎಸ್ಪಿ ಭಾಸ್ಕರ್ ಯು.ವಂದಿಸಿದರು. ರಂಗನಿರ್ದೇಶಕ ಗೋಪಾಲ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು. ಎಎಸ್ಪಿ ರಾಹುಲ್ ಕುಮಾರ್, ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.