
ನವದೆಹಲಿ: ಭಾರತವು ಹಿಂದೂ ಮಹಾಸಾಗರ ಪ್ರದೇಶ ಮತ್ತು ವಿಶಾಲ ಇಂಡೋ-ಪೆಸಿಫಿಕ್ ವಲಯದಲ್ಲಿ ವಿಶ್ವಾಸಾರ್ಹ ‘ನೆಟ್ ಸೆಕ್ಯುರಿಟಿ ಪ್ರೊವೈಡರ್’ (ಭದ್ರತೆಯನ್ನು ಒದಗಿಸುವ ಪ್ರಮುಖ ಶಕ್ತಿ) ಆಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಫಿಲಿಪೈನ್ಸ್ನ ಸೆಬುನಲ್ಲಿ ನಡೆದ 13ನೇ ಆಸಿಯಾನ್ ರಕ್ಷಣಾ ಸಚಿವರ ಸಭೆ ‘ಪ್ಲಸ್’ (ADMM-PLUS) ಅನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಈ ಪ್ರದೇಶದ ಶಾಂತಿ, ಭದ್ರತೆ ಮತ್ತು ಸಮೃದ್ಧಿಯೊಂದಿಗೆ ಕಡಲ ಭದ್ರತೆಯು ನಿಕಟ ಸಂಬಂಧ ಹೊಂದಿದೆ ಎಂದು ಭಾರತ ಪರಿಗಣಿಸುತ್ತದೆ ಎಂದು ತಿಳಿಸಿದರು.
ಈ ವರ್ಷದ ADMM-Plus ಸಭೆಯ ಧ್ಯೇಯವಾಕ್ಯವಾದ ‘ನಾವಿಗೇಟಿಂಗ್ ಅವರ್ ಫ್ಯೂಚರ್ ಟುಗೆದರ್’ (ನಮ್ಮ ಭವಿಷ್ಯದತ್ತ ಒಟ್ಟಾಗಿ ಸಾಗುವುದು), ಭಾರತದ ರಕ್ಷಣಾ ಮತ್ತು ವಿದೇಶಾಂಗ ನೀತಿಗಳೊಂದಿಗೆ ಆಳವಾಗಿ ಹೊಂದಿಕೆಯಾಗುತ್ತದೆ ಎಂದರು. ಕಾನೂನಿನ ಆಳ್ವಿಕೆ – ವಿಶೇಷವಾಗಿ ‘ಸಮುದ್ರ ಕಾನೂನಿನ ಮೇಲಿನ ವಿಶ್ವಸಂಸ್ಥೆಯ ಸಮಾವೇಶ’ (UNCLOS) – ಮತ್ತು ಮುಕ್ತ ಸಂಚಾರ ಹಾಗೂ ಹಾರಾಟದ ಸ್ವಾತಂತ್ರ್ಯಕ್ಕೆ ಭಾರತ ನೀಡುವ ಒತ್ತು, ಯಾವುದೇ ನಿರ್ದಿಷ್ಟ ದೇಶದ ವಿರುದ್ಧವಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಕಡಲ ಸುರಕ್ಷತೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು, ಮಾನವೀಯ ನೆರವು, ಸಾಮರ್ಥ್ಯ ವೃದ್ಧಿ ಮತ್ತು ಅಂತರರಾಷ್ಟ್ರೀಯ ಕಾನೂನುಗಳಿಗೆ ಭಾರತ ಗೌರವ ನೀಡುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಈ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ಆಸಿಯಾನ್ ಪಾಲುದಾರ ರಾಷ್ಟ್ರಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಭಾರತ ಬದ್ಧವಾಗಿದೆ ಎಂದರು.
ಭಾರತೀಯ ನೌಕಾಪಡೆಯು ತನ್ನ ಮುಂಚೂಣಿ ಯುದ್ಧನೌಕೆಗಳನ್ನು ನಿಯೋಜಿಸುವ ಮೂಲಕ ಸಾವಿರಾರು ವಾಣಿಜ್ಯ ನೌಕೆಗಳಿಗೆ ಭದ್ರತೆ ಒದಗಿಸಿದೆ ಮತ್ತು ಸಮುದ್ರದಲ್ಲಿ ಹಡಗುಗಳನ್ನು ಅಪಹರಿಸುವ ಅನೇಕ ಪ್ರಯತ್ನಗಳನ್ನು ವಿಫಲಗೊಳಿಸಿದೆ ಎಂದು ರಾಜನಾಥ್ ಸಿಂಗ್ ಎತ್ತಿ ತೋರಿಸಿದರು. ವಾಣಿಜ್ಯ ನೌಕಾಯಾನದ ಭದ್ರತೆಯನ್ನು ತನ್ನ ಜವಾಬ್ದಾರಿಯೆಂದು ಪರಿಗಣಿಸಿರುವ ಭಾರತದ ಈ ಭದ್ರತಾ ವ್ಯವಸ್ಥೆಯು, ಯಾವುದೇ ನಿರ್ದಿಷ್ಟ ಧ್ವಜ ಅಥವಾ ರಾಷ್ಟ್ರೀಯತೆಗೆ ಸೀಮಿತವಾಗಿಲ್ಲ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



