ಬಂಟ್ವಾಳ: ತಾಲೂಕಿನ ಬರಿಮಾರ್ ಗ್ರಾಮದಲ್ಲಿ ನಡೆಸಲಾಗುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸಹಾಯಕ ಆಯುಕ್ತ, ಬಂಟ್ವಾಳ ಪೊಲೀಸ್ ಎಎಸ್ಪಿ ನೇತೃತ್ವದ ತಂಡ ಗುರುವಾರ ರಾತ್ರಿ ದಿಢೀರ್ ದಾಳಿ ನಡೆಸಿದೆ.
ಸುಮಾರು ಐದಾರು ತಿಂಗಳಿನಿಂದ ಕಾರ್ಯಾಚರಿಸುತ್ತಿದ್ದ ಮರಳುದಂಧೆಯ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಸರಕಾರಕ್ಕೆ ರಾಜಧನ ಸಂದಾಯ ಮಾಡದೇ ನಡೆಯುತ್ತಿದ್ದ ಮರಳುಗಾರಿಕೆಯಿಂದ ರಸ್ತೆ ಹಾನಿ, ಪರಿಸರ ಮಾಲಿನ್ಯ ಉಂಟಾಗಿತ್ತೆಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ನೇತ್ರಾವತಿ ನದಿ ತೀರದ ಸಮೀಪ ಮರಳುಗಾರಿಕೆ ನಡೆಸಲಾಗುತ್ತಿದ್ದು, ಇಲ್ಲಿಂದ ಮರಳನ್ನು ಲಾರಿಗಳಲ್ಲಿ ಕೇರಳ, ಬೆಂಗಳೂರು ಹಾಗೂ ಮಡಿಕೇರಿಗೆ ಭಾರೀ ಬೆಲೆಗೆ ಸಾಗಾಟ ಮಾಡಲಾಗುತ್ತಿತ್ತು. ಇಲಾಖೆಯ ಯಾವುದೇ ಪರವಾನಿಗೆಯನ್ನು ಪಡೆಯದೇ ಉದ್ದಿಮೆ ನಡೆಸಲಾಗುತ್ತಿದ್ದ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮಲೆಕ್ಕಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ನಡೆದಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ಮುಂದೆ ದೂರು ನೀಡಿದರು.
ದೂರಿಗೆ ಪ್ರತಿಕ್ರಿಯಿಸಿದ ಎಸಿ ಡಾ.ಅಶೋಕ್ ಅವರು, ಯಾವುದೇ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆದಲ್ಲಿ ಆ ಗ್ರಾಮದ ವಿ.ಎ.ಗಳನ್ನು ನೇರ ಹೊಣೆಯಾಗಿಸುವುದಾಗಿ ಎಚ್ಚರಿಸಿದ್ದಾರೆ. ಬರಿಮಾರ್ ಮರಳುಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ತೀವ್ರ ನಿಗಾ ವಹಿಸಿದ ಸಂಬಂಧಿತ ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್, ಬಂಟ್ವಾಳ ಎಸ್ಪಿ ರಾಹುಲ್ ಕುಮಾರ್, ತಹಸೀಲ್ದಾರ್ ಪುರಂದರ ಹೆಗ್ಡೆ, ರೆವಿನ್ಯೂ ಇನ್ಸ್ಪೆಕ್ಟರ್ ನಾರಾಯಣ ಪೂಜಾರಿ, ಗ್ರಾಮಲೆಕ್ಕಾಧಿಕಾರಿ ತೌಸೀಫ್, ರಾಜ್ಕುಮಾರ್, ಸಿದ್ಧಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.