ಬೈಂದೂರು: ಅಂತೂ ಇಂತೂ ಬರೋಬ್ಬರಿ ಒಂದು ವರ್ಷ ಎಂಟು ತಿಂಗಳ ಮೇಲೆ ಎಚ್ಚೆತ್ತ ಅರಣ್ಯ ಇಲಾಖೆ ಹಾಗೂ ಯಡ್ತರೆ ಗ್ರಾ.ಪಂ, ಮೇಲ್ಛಾವಣಿ ಹಾರಿಹೋಗಿ ಶಿಥಿಲಾವಸ್ಥೆಯಲ್ಲಿರುವ ಮಾರ್ಕೆಟ್ನ ಕಟ್ಟಡಕ್ಕೆ ಮತ್ತು ಅಪಾಯಕಾರಿ ಮರಗಳಿಗೆ ಮುಕ್ತಿ ನೀಡಿದ್ದಾರೆ.
ಮಳೆಗಾಲದಲ್ಲಿ ನೀರು ಸೋರುತ್ತದೆ. ಮೇಲ್ಭಾಗದಲ್ಲಿ ವಿದ್ಯುತ್ ತಂತಿಗಳು ಚೆಲ್ಲಾಪಿಲ್ಲಿಯಾಗಿ ಹರಡಿವೆ. ಇದಕ್ಕಿಂತಲೂ ಮಿಗಿಲಾಗಿ ಮಾರ್ಕೆಟ್ ಆವರಣದಲ್ಲಿ ಬೃಹದಾಕಾರದ (ಹಳೆಯ) ಮರಗಳಿದ್ದು, ಅವು ಗಾಳಿ ಮಳೆಗೆ ಯಾವ ಸಂದರ್ಭದಲ್ಲಿ ಬೀಳುತ್ತದೆ ಎಂಬ ಭಯದಲ್ಲಿಯೇ ಪ್ರತಿನಿತ್ಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ವ್ಯವಹಾರ ನಡೆಸಬೇಕಾಗಿತ್ತು. ಹಲವು ಬಾರಿ ಸ್ಥಳೀಯಾಡಳಿತದ ಗಮನಕ್ಕೆ ತಂದರೂ, ಸಂಬಂಧಿತರು ಮಾತ್ರ ಅದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಮರದ ಅಕ್ಕ-ಪಕ್ಕದ ಅಂಗಡಿಯವರನ್ನು ಹಾಗೂ ಸಾರ್ವಜನಿಕರನ್ನು ಕೆರಳಿಸಿತ್ತು. ಸದ್ಯದಲ್ಲಿಯೇ ತಾಲೂಕಾಗಿ ಕಾರ್ಯನಡೆಸುವ ಹೊಸ್ತಿಲಲ್ಲಿರುವ ಬೈಂದೂರಿನ ಹೃದಯ ಭಾಗದಲ್ಲಿರುವ ಸಂತೆ ಮಾರ್ಕೆಟ್ನ ದುಸ್ಥಿತಿ ಹೀಗಿತ್ತು.
ಬೈಂದೂರು ಉಪ ಅರಣ್ಯಾಧಿಕಾರಿ (ಫಾರೆಷ್ಟರ್) ಕೆ. ಸದಾಶಿವ, ಮಾರ್ಕೇಟ್ನಲ್ಲಿರುವ ಮರ ಅಪಾಯಕಾರಿಯಾಗಿದ್ದು ಪಂಚಾಯತ್ನವರು ಕೂಡ ಇದರ ತೆರವಿಗೆ ಅರ್ಜಿ ಸಲ್ಲಿಸಿದ್ದಾರೆ. ಕೃಷಿಚಟುವಟಿಕೆ ನಡೆಯುತ್ತಿರುವುದರಿಂದ ಆಳುಗಳ ಕೊರತೆ ಹಾಗೂ ಸತತ ಮಳೆಯಿಂದಾಗಿ ಕಟಾವು ಕಾರ್ಯ ವಿಳಂಬವಾಗಿದೆ. ಶೀಘ್ರದಲ್ಲೇ ಮರ ತೆರವುಗೊಳಿಸಲಾಗುವುದು ಎಂದು ಪತ್ರಿಕಾ ಹೇಳಿಕೆ ನೀಡಿದ್ದರು. ಈಗ ಮರಗಳ ಕಟಾವು ಕಾರ್ಯ ಮುಗಿದು ಕಟ್ಟಡ ತೆರವುಗೊಳಿಸಿ ಸಮತಟ್ಟುಗೊಳಿಸಲಾಗಿದೆ.
ಕಳೆದ ಮಳೆಗಾಲದಲ್ಲಿ ಇಲ್ಲಿನ ಬೃಹತ್ ಮರವೊಂದು ಮಾರ್ಕೆಟ್ ಕಟ್ಟಡದ ಮೇಲೆ ಬಿದ್ದು, ಅಲ್ಲಿದ್ದ ಪಾದರಕ್ಷೆ ಗೂಡಂಗಡಿವೊಂದು ಹಾನಿಯಾಗಿತ್ತು. ಇದು ರಾತ್ರಿ ಸಮಯದಲ್ಲಿ ಬಿದ್ದಿರುವುದರಿಂದ ಅಂಗಡಿಯಲ್ಲಿ ಮಲಗಿದ್ದ ಸಂಜೀವ ನಾಯ್ಕ್ ಎಂಬುವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಡ್ತರೆ ಗ್ರಾ.ಪಂ. ವತಿಯಿಂದ ಈ ಸ್ಥಳದಲ್ಲಿ ಬಯಲು ರಂಗಮಂದಿರ ನಿರ್ಮಾಣವಾಗಲಿದೆ. ಇನ್ನೆರಡು ಮೂರುದಿನಗಳಲ್ಲಿ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲನೆಗಾಗಿ ಬರುವವರಿದ್ದು, ಅಷ್ಟರಲ್ಲಿ ಜಾಗವನ್ನು ಸಮತಟ್ಟುಗೊಳಿಸಲಾಗುತ್ತಿದೆ. ಪಶ್ಚಿಮಾಭಿಮುಖ ವೇದಿಕೆ ನಿರ್ಮಿಸಿ ಮೇಲೆ ಶೀಟುಗಳಿಂದ ಮುಚ್ಚಲಾಗುತ್ತದೆ. ಹಾಗೂ ಈ ಪ್ರದೇಶವನ್ನು ಡಾಮರೀಕರಣ ಗೊಳಿಸಲಾಗುತ್ತದೆ. ಇದರಿಂದ ಶುಚಿತ್ವಕ್ಕೂ ಅನುಕೂಲವಾಗಲಿದೆ. ಶುಕ್ರವಾರ ಸಂತೆ ಹೊರತು ಪಡಿಸಿ ಇತರ ದಿನಗಳಲ್ಲಿ ಸಾಂಸ್ಕೃತಿಕ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಈ ವೇದಿಕೆ ಸದ್ಬಳಕೆಯಾಗುತ್ತದೆ ಎಂದು ಯಡ್ತರೆ ಗ್ರಾ.ಪಂ. ಅಧ್ಯಕ್ಷ ಎನ್.ನಾಗರಾಜ ಶೆಟ್ಟಿ ಭವಿಷ್ಯದ ಯೋಜನೆಯನ್ನು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.