ಸುಳ್ಯ: ತಾಲೂಕಿನ ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ನವೀಕರಣ ಪುನರ್ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮೇ.15 ರಿಂದ 21ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅತ್ಯಂತ ಅಪರೂಪವಾದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ನವೀಕರಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಮೂರು-ನಾಲ್ಕು ಶತಮಾನಗಳಿಂದ ಪಾಳು ಬಿದ್ದಿದ್ದ ದೇವಸ್ಥಾನವನ್ನು ಪನರ್ನಿರ್ಮಾಣ ಮಾಡಲಾಗಿದ್ದು ರಮಣೀಯ ಪ್ರಾಕೃತಿಕ ನಿಸರ್ಗದಲ್ಲಿ ತಲೆ ಎತ್ತಿ ನಿಂತಿದೆ.
ಅನೇಕ ವಾಸ್ತು ವೈಶಿಷ್ಠ್ಯಗಳನ್ನೊಳಗೊಂಡು ಪುರಾತನ ಶೈಲಿಯಲ್ಲಿ ದೇವಸ್ಥಾನ ನಿರ್ಮಾಣಗೊಂಡಿದೆ. ಮುಖ್ಯ ಗರ್ಭಗುಡಿ, ಕಡುಶರ್ಕರ ವಿಗ್ರಹ, ಶೂಲಿನಿ ದುರ್ಗೆ ಗುಡಿ, ಗಣಪತಿ ಗುಡಿ, ನಮಸ್ಕಾರ ಮಂಟಪ, ತೀರ್ಥ ಬಾವಿ, ಸುತ್ತುಗೋಪುರ, ಅಂಗಣಕ್ಕೆ ಶಿಲೆ ಹಾಸುವುದು, ವಸಂತ ಮಂಟಪ ಇತ್ಯಾದಿ ನಿರ್ಮಾಣಗಳು ಎರಡು ಕೋಟಿ ವೆಚ್ಚದಲ್ಲಿ ನಡೆಸಲಾಗಿದೆ ಎಂದು ಅವರು ವಿವರಿಸಿದರು.
ಬ್ರಹ್ಮಕಲಶೋತ್ಸವಕ್ಕೆ ಯತಿವರ್ಯರು, ಗಣ್ಯರ ಆಗಮನ:
ಮೇ.15ರಿಂದ 21ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ನಾಡಿನ ಯತಿವರ್ಯರು, ಗಣ್ಯರು ಆಗಮಿಸಲಿದ್ದಾರೆ. ಮೆ.20 ರಂದು ದೇವರ ಹಾಗೂ ಉಪದೈವಳ ಪ್ರತಿಷ್ಠೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಪಿ.ರಾಮಚಂದ್ರ ಭಟ್ ದೇವಸ್ಯ ವಿವರಿಸಿದರು. ಪ್ರತಿ ದಿನ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ. ಪೇಜಾವರ ಮಠಾಧಿಪತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧಿಕಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮಿ, ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ಕಾರ್ಯಕ್ರಮಗಳಲ್ಲಿ ಆಶೀರ್ವಚನ ನೀಡಲಿದ್ದಾರೆ.
ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಸಂಸದರಾದ ನಳಿನ್ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕರಾದ ಎಸ್.ಅಂಗಾರ, ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ, ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಟಿ.ಶ್ಯಾಮ್ ಭಟ್, ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಸೇರಿದಂತೆ ಹಲವು ಮಂದಿ ಗಣ್ಯರು ವಿವಿಧ ದಿನಗಳ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಕಡು ಶರ್ಕರ ವಿಗ್ರಹ:
ಕಡುಶರ್ಕರ ವಿಗ್ರಹ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ವೈಶಿಷ್ಟ್ಯ. ದೇವಾಲಯಗಳಲ್ಲಿ ಸಾಮಾನ್ಯವಾಗಿ ಪಂಚಲೋಹ, ಶಿಲೆ, ಮರಗಳಿಂದ ವಿಗ್ರಹ ರಚಿಸಲಾಗುತ್ತದೆ. ಆದರೆ ಮೃತ್ತಿಕೆಯಿಂದ ಮತ್ತು ಕಡುಶರ್ಕರ ಪಾಕದಿಂದ ವಿಗ್ರಹ ರಚಿಸುವುದು ಅತೀ ವಿರಳ. ಸಾಮಾನ್ಯ ವಿಗ್ರಹಗಳಲ್ಲಿ ತಲೆ ಮತ್ತು ಬಾಹ್ಯ ಅಂಗಾಂಗಗಳು ಮಾತ್ರ ಇದ್ದರೆ ಕಡುಶರ್ಕರ ವಿಗ್ರಹಗಳಲ್ಲಿ ಒಳ ಅಂಗಾಂಗಗಳಾದ ನರನಾಡಿ, ಮೆದುಳು, ಮಾಂಸಖಂಡ, ಜಠರಗಳಂತಹ ಅಂಗಗಳ್ನೂ ರಚಿಸುವುದು ವಿಶೇಷತೆ.
ಪ್ರಧಾನ ದ್ರವ್ಯವಾದ ಮೃತ್ತಿಕೆಯನ್ನು ಶುದ್ಧೀಕರಿಸಿ ವಿವಿಧ ಕಷಾಯಗಳಲ್ಲಿ ಪಾಕ ಬರಿಸಿ 48 ದ್ರವ್ಯಗಳನ್ನು ಬಳಸಿ ವಿಗ್ರಹವನ್ನು ರಚಿಸಲಾಗುತ್ತದೆ. ಎಡ ತೊಡೆಯ ಮೇಲೆ ಲಕ್ಷ್ಮೀಯನ್ನು ಕುಳ್ಳಿರಿಸಿಕೊಂಡು ಶಂಖ, ಚಕ್ರ, ಗದಾಪದ್ಮಧಾರಿಯಾಗಿ ರೌದ್ರಭಾವ ಹೊಂದಿದ ನರಸಿಂಹ ದೇವರ ಆಳೆತ್ತರದ ವಿಗ್ರಹಕ್ಕೆ ಏಳು ಹೆಡೆಯ ನಾಗ ಹೆಡೆ ತೆರೆದು ಕೊಡೆ ಹಿಡಿದಂತೆ ಇಡುವಂತಹ ಕಡುಶರ್ಕರ ಪಾಕದ ವಿಗ್ರಹ ಆಕರ್ಷಕ ಮತ್ತು ವೈಶಿಷ್ಠ್ಯಪೂರ್ಣವಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ವಿಠಲ ರೈ ಪೋಳಾಜೆ, ಕಾರ್ಯದರ್ಶಿ ಜನಾರ್ಧನ ಅಲೆಕ್ಕಾಡಿ, ಉಪಾಧ್ಯಕ್ಷ ಎಂ.ಕೇಶವ ಭಟ್ಟ ಮಾನಸವನ, ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಎಂ.ಮುರಳೀಕೃಷ್ಣ ಮಾನಸವನ, ಅನೂಪ್ ಬಿಳಿಮಲೆ, ಸುದರ್ಶನ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.