
ಬೆಂಗಳೂರು: ಮುಖ್ಯಮಂತ್ರಿಗಳು ವಾಸ್ತವಿಕ ಸತ್ಯವನ್ನು ಬಿಚ್ಚಿಟ್ಟು ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.
ಅವರು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇವರ ಪಂಚ ಗ್ಯಾರಂಟಿಗಳನ್ನು ನಿರ್ವಹಣೆ ಮಾಡಲು ಹಣಕಾಸಿನ ಸಮಸ್ಯೆ ಕಾಡುತ್ತಿದ್ದು, ಯಾವುದೇ ನೇಮಕಾತಿ ಮಾಡಲು ಕಾಂಗ್ರೆಸ್ಸಿನವರಿಗೆ ಮನಸ್ಸು ಬರುತ್ತಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳೇ, ನಿಮ್ಮ ಸರಕಾರ ಬಂದು ಎರಡೂಮುಕ್ಕಾಲು ವರ್ಷವಾಗಿದೆ. ಇನ್ನೂ ಬಿಜೆಪಿ ಸರಕಾರವನ್ನು ದೂರುವುದನ್ನು ಮುಂದುವರೆಸಿದ್ದೀರಾ? ಒಂದು ವರ್ಷದಲ್ಲಿ ನೇಮಕಾತಿ ಮಾಡುವ ಭರವಸೆ ಕೊಟ್ಟಿದ್ದಿರಿ. ಈ ರೀತಿ ಸುಳ್ಳು ಹೇಳುವುದು, ಆರೋಪ ಮಾಡುವುದನ್ನು ಬಿಟ್ಟು ಕೇವಲ ಪತ್ರಿಕಾ ಹೇಳಿಕೆಗೆ ಸೀಮಿತವಾಗದೇ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು. ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸದೇ ಇದ್ದರೆ ಅತಿ ಶೀಘ್ರದಲ್ಲಿ ಬಿಜೆಪಿ ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಸಿದರು.
ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದವರ ಹುದ್ದೆಗಳಿಗೆ ನೇಮಕಾತಿಗೆ ಸರಕಾರದ ಅನುಮತಿ ಕೇಳಿದ್ದಾರೆ. ಸರಕಾರ ಅನುಮತಿ ನೀಡಿದೆ; ಒಂದು ವರ್ಷ ಎಂಟು ತಿಂಗಳಾದರೂ ಸರಕಾರ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ. ಪ್ರಕ್ರಿಯೆ ಮುಂದುವರೆಸಲು ಸಹಕಾರ ಕೊಡುತ್ತಿಲ್ಲ ಎಂದು ಟೀಕಿಸಿದರು.
ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿರುವ ಕಾಂಗ್ರೆಸ್ ಸರಕಾರವು ಎಲ್ಲವೂ ಸರಿಯಾಗಿದೆ (ಆಲ್ ಈಸ್ ವೆಲ್) ಎಂದು ಬಿಂಬಿಸಿಕೊಂಡು, ಹಣಕಾಸು ವ್ಯವಸ್ಥೆ ಸುಸೂತ್ರವಾಗಿದೆ ಎಂದು ತಿಳಿಸುತ್ತಿದೆ. ಬಿಜೆಪಿಯವರಿಗೆ ಏನೂ ಕೆಲಸ ಇಲ್ಲ ಎಂದು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ 59 ಸಾವಿರ ಹುದ್ದೆಗಳು ಬಾಕಿ ಉಳಿದಿವೆ ಎಂದು ಗಮನ ಸೆಳೆದರು. ಆರೋಗ್ಯ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಹುದ್ದೆಗಳು ಭರ್ತಿ ಆಗಬೇಕಿದೆ ಎಂದು ವಿವರಿಸಿದರು.
ಕೈ ಮುಗಿಯುವೆ; ಶಿಕ್ಷಕರ ನೇಮಕಾತಿ ಮಾಡಿ ಎಂದು ಗುಲ್ಬರ್ಗದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಒಂದು ವರ್ಷದ ಹಿಂದೆಯೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದರು. ಅವರ ಬಹಿರಂಗ ಬೇಡಿಕೆಯೂ ಈಡೇರಿಲ್ಲ ಎಂದು ಟೀಕಿಸಿದರು. ಮುಖ್ಯಮಂತ್ರಿಗಳು ಸಬೂಬು, ಸುಳ್ಳು ಹೇಳಿ ಜನರನ್ನು ಅಡ್ಡದಾರಿಯಲ್ಲಿ ಒಯ್ಯುವುದನ್ನು ಬದಿಗಿಡಬೇಕು. ಸುಳ್ಳಿನ ಬಂಡಿಯನ್ನು ಶಾಶ್ವತವಾಗಿ ಹೀಗೇ ಓಡಿಸಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


