
ಡಿಸೆಂಬರ್ ತಿಂಗಳು ಬಂತೆಂದರೆ ಪ್ರತಿಯೊಬ್ಬರು ಆ ವರ್ಷದ ನೆನಪುಗಳನ್ನು, ಘಟನೆಗಳನ್ನು ಮತ್ತೆ ಮೆಲುಕು ಹಾಕುತ್ತಾರೆ. ತಮ್ಮ ಜೀವನದಲ್ಲಾದ ಬದಲಾವಣೆಗಳ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಉದ್ದುದ್ದ ಸಾಲುಗಳನ್ನು ಕೆಲವರು ಹಂಚಿಕೊಂಡರೆ, ಮಾಧ್ಯಮಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಾದ ಘಟನೆಗಳನ್ನು ಮತ್ತೆ ಜನರ ಮುಂದಿಡುತ್ತವೆ. ಆದರೆ ತುಸು ಭಿನ್ನ ಎಂಬಂತೆ ಋತಮ್ ತನ್ನ ಕ್ಯಾಲೆಂಡರ್ ಭಾಗವಾಗಿ ಭಾರತದ ಮರೆತುಹೋದ ಇತಿಹಾಸವನ್ನು ಮತ್ತೆ ಮುನ್ನಲೆಗೆ ತರುವ ಪ್ರಯತ್ನಗಳನ್ನು ನಡೆಸಿದೆ. ಪಠ್ಯಪುಸ್ತಕಗಳಲ್ಲಿ ಅಪರೂಪವಾಗಿ ಕಂಡುಬರುವ ಅಜ್ಞಾತ ಕಥೆಗಳ ಸರಣಿಯನ್ನು ಪ್ರಸ್ತುತಪಡಿಸಿದೆ. ಈ ಸರಣಿ ಧೈರ್ಯ, ತ್ಯಾಗಗಳು, ಜೀವಂತ ಸಂಪ್ರದಾಯಗಳು ಮತ್ತು ಭೂತಕಾಲದ ನಿರೂಪಣೆಯ ಸುತ್ತಲಿನ ರಾಜಕೀಯ ಹೋರಾಟಗಳನ್ನು ಒಳಗೊಂಡಿತ್ತು. ಈ ಕ್ಯಾಲೆಂಡರ್ ಕೇವಲ ದಿನಾಂಕಗಳ ಪಟ್ಟಿ ಅಲ್ಲ, ಇದು ಭಾರತದ ಆತ್ಮಕ್ಕೆ ಮಾರ್ಗದರ್ಶಿ, ನಮ್ಮ ರಾಷ್ಟ್ರವು ಯಾವ ಬಗೆಯ ನೆನಪುಗಳನ್ನು ಆಯ್ಕೆ ಮಾಡಿ ಸಂರಕ್ಷಿಸಬೇಕು ಎಂಬುದನ್ನು ಇದು ಪ್ರದರ್ಶಿಸುತ್ತದೆ.
ಪ್ರತಿರೋಧದ ಧ್ವನಿಗಳನ್ನು ಮುನ್ನಲೆಗೆ ತರುವ ಪ್ರಯತ್ನ
ವಸಾಹತುಶಾಹಿಯ ವಿರುದ್ಧದ ಹೋರಾಟಗಳು, ಮೊಘಲ್ ಸಾಮ್ರಾಜ್ಯವನ್ನು ಎದುರಿಸಿದ ಸಿಖ್ ಯೋಧರು ಮತ್ತು ರಾಜಕುಮಾರರ ಸಾಹಸಗಳಿಂದ ಹಿಡಿದು ಬ್ರಿಟಿಷರ ವಿರುದ್ಧ ಬಾಳೆದಿಂಡನ್ನೇ ಆಯುಧವಾಗಿ ಮಾಡಿಕೊಂಡ ಈಶಾನ್ಯ ಭಾರತದ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರವರೆಗಿನ ಕಥೆಗಳನ್ನು ಋತಮ್ ವಿಡಿಯೋ ಮೂಲಕ, ಲೇಖನದ ಮೂಲಕ ಹೊರತಂದಿದೆ. 1704 ರಲ್ಲಿ ಚಾಮ್ಕೌರ್ನಲ್ಲಿ ನಾಲವತ್ತು ಸಿಖ್ಖರ ಸಾಹಸ, ಸಾಹಿಬ್ಜಾದಾ ಜುಜಾರ್ ಸಿಂಗ್, ವೀರ್ ಬಾಬಾ ಸಂಗತ್ ಸಿಂಗ್, ಮಾತಾ ಗುಜ್ರಿ ಅವರಂತಹ ಧೈರ್ಯಶಾಲಿ ಪುರುಷರ ಜೀವನವನ್ನು ಪರಿಣಾಮಕಾರಿಯಾಗಿ ಋತಮ್ ವತಿಯಿಂದ ಪ್ರಸ್ತುತಪಡಿಸಲಾಗಿದೆ.
ಅದರ ಜೊತೆಗೆ ಮೇಜರ್ ಧ್ಯಾನ್ ಚಂದ್ ಅವರಂತಹ ಆಧುನಿಕ ದಂತಕಥೆಗಳು ಕೂಡ ಋತಮ್ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ, ಸಿಪಾಯಿಯಿಂದ “ಹಾಕಿ ಮಾಂತ್ರಿಕ” ನವರೆಗಿನ ಧ್ಯಾನ್ ಚಂದ್ ಅವರ ಪ್ರಯಾಣವನ್ನು ಕ್ರೀಡಾ ಪಯಣವಾಗಿ ಅಲ್ಲ, ಬದಲಾಗಿ ವಸಾಹತುಶಾಹಿ ಸೈನ್ಯದ ಶ್ರೇಣಿಯಿಂದ ಹೊರಹೊಮ್ಮಿದ ಶಿಸ್ತು ಮತ್ತು ರಾಷ್ಟ್ರೀಯ ಹೆಮ್ಮೆಯ ನಿರೂಪಣೆಯಾಗಿ ಋತಮ್ ಕಥೆಯಲ್ಲಿ ಬಿಂಬಿಸಲಾಗಿದೆ.
ಬ್ರಿಟಿಷರ ವಿರುದ್ಧದ ಭಾರತೀಯ ಸ್ವಾತಂತ್ರ್ಯ ಹೋರಾಟವು ಶ್ರೀಮಂತ ಮತ್ತು ವೈವಿಧ್ಯಮಯವಾಗಿತ್ತು. ಆದರೆ ದುರಾದೃಷ್ಟವಶಾತ್ ನಾವು ನಮ್ಮ ಪಠ್ಯಪುಸ್ತಕಗಳಲ್ಲಿ ಇವುಗಳ ಕಾಲು ಭಾಗವನ್ನು ಸಹ ಅಳವಡಿಸಿಕೊಂಡಿಲ್ಲ. ಬ್ರಿಟಿಷರ ವಿರುದ್ಧ ಬಾಳೆ ದಿಂಡಿನ ಆಯುಧಗಳನ್ನು ಬಳಸಿದ ಮೇಘಾಲಯದ ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರ ಪಾವೊ ಟೋಗನ್ ನೆಂಗ್ಮಿಂಜಾ ಸಂಗ್ಮಾ ಅವರ ಪ್ರಬಲ ಕಥೆಯನ್ನು ನಾವು ಹೊರತಂದಿರುವುದು ನಮಗೆ ಹೆಮ್ಮೆಯ ಸಂಗತಿ. ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪಾ ಟೋಗನ್ ಅವರು ಬುದ್ಧಿವಂತಿಕೆಯಿಂದ ಬ್ರಿಟಿಷರ ಕ್ರೂರ ಶಕ್ತಿಯನ್ನು ಮಣಿಸಿದ ಪ್ರಸಂಗ ಈಗಲೂ ನಮಗೆ ಪ್ರೇರಣೆ ನೀಡುತ್ತದೆ. ಆರಂಭಿಕ ಯುದ್ಧ ವಿಮಾನ ಪೈಲಟ್ಗಳಲ್ಲಿ ಒಬ್ಬರಾದ ಇಂದ್ರ ಲಾಲ್ ರಾಯ್ ಅವರ ಜೀವನವನ್ನು ಕೂಡ ನಾವು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಪ್ರಯತ್ನ ನಡೆಸಿದ್ದೇವೆ. 19 ನೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ ಏನನ್ನು ಸಾಧಿಸಬಹುದು ಎಂಬುದಕ್ಕೆ ಅವರೊಂದು ನಿದರ್ಶನ ಮತ್ತು ಒಂದು ಶತಮಾನದ ನಂತರವೂ ನೆನಪಿನಲ್ಲಿ ಉಳಿಯುವ ಸಾಧನೆ ಅವರದ್ದು.
ಭಾರತದಲ್ಲಿನ ನಂಬಿಕೆಗಳ ಮೆಲುಕು
ಋತಮ್ನ ಒಂದು ಸೆಟ್ ಕಥೆಯು ಭಾರತದಲ್ಲಿ ಉದಯಿಸಿದ್ದ ಪ್ರತಿರೋಧದ ಧ್ವನಿಗಳ ಬಗ್ಗೆಯಾಗಿದ್ದರೆ, ಇನ್ನೊಂದು ಕಥೆಯು ನಂಬಿಕೆಯು ನಮ್ಮ ಜೀವನವನ್ನು ಹೇಗೆ ಸದ್ದಿಲ್ಲದೆ ಪ್ರಾಬಲ್ಯಗೊಳಿಸುತ್ತದೆ ಎಂಬುದರ ಬಗ್ಗೆಯಾಗಿತ್ತು. ಉದಾಹರಣೆಗೆ, ಅನ್ನಪೂರ್ಣ ಜಯಂತಿಯಂದು ಋತಮ್ ದಿನಕ್ಕೆ ಸುಮಾರು 18.82 ಲಕ್ಷ ಜನರಿಗೆ ಆಹಾರವನ್ನು ನೀಡುವ ದೇಶ 32 ಪ್ರಮುಖ ದೇವಾಲಯಗಳನ್ನು ಹೈಲೈಟ್ ಮಾಡಿತ್ತು, ಇದು ಧಾರ್ಮಿಕ ಸ್ಥಳಗಳು ಹೇಗೆ ಆಹಾರ ಭದ್ರತಾ ಜಾಲವಾಗಿ ಪರಿವರ್ತನೆಗೊಂಡವು ಎಂಬುದನ್ನು ನಾವು ವಿವರಿಸಿದ್ದೇವೆ.
ಭಾರತ ಮತ್ತು ಪಾಕಿಸ್ತಾನದ ಗಡಿಯ ಅಂಚಿನಲ್ಲಿರುವ ತಾನೋಟ್ ಮಾತೆಯ ಮಂದಿರವನ್ನು ಕೇವಲ ಭಕ್ತಿ ತಾಣವಾಗಿ ಮಾತ್ರವಲ್ಲದೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಗೆ ವಿಶೇಷ ಬಂಧವನ್ನು ಹೊಂದಿರುವ ನೈತಿಕ ಸ್ತಂಭವಾಗಿ ನಮ್ಮ ಕಥೆಯಲ್ಲಿ ನಾವು ಚಿತ್ರಿಸಿದ್ದೇವೆ.
ಋತಮ್ ಕ್ಯಾಲೆಂಡರ್ ಭಾರತದ ಜೀವಂತ ಕಲೆಗಳು ಮತ್ತು ಜವಳಿಗಳ ಮೇಲೂ ಬೆಳಕು ಚೆಲ್ಲಿದೆ. ಕೊನಾರ್ಕ್ ಉತ್ಸವದ ಸಂದರ್ಭದಲ್ಲಿ ಗೋಟಿಪುವಾ ನರ್ತಕರ ಬಗ್ಗೆ, ವಿಶ್ವ ಸೀರೆ ದಿನದ ಸಂದರ್ಭದಲ್ಲಿ ಪಟಾನ್ನಪವಿತ್ರ ಪಟೋಲಾ ಸೀರೆಯ ಪ್ರಯಾಣ ಮತ್ತು ತಂತ್ರಜ್ಞಾನವನ್ನು ಸಂಪ್ರದಾಯದೊಂದಿಗೆ ಬೆರೆಸುವ “ಕ್ಯೂಆರ್ ಕೋಡ್ ಸೀರೆ” ನೇಯ್ದ ಸಿರ್ಸಿಲ್ಲಾ ನೇಕಾರರ ಬಗ್ಗೆ ನಾವು ಕಥೆಗಳನ್ನು ಪ್ರಸ್ತುಪಡಿಸಿದ್ದೇವೆ.
ಮಹಿಳೆಯರು, ಕವಿಯತ್ರಿ ಮತ್ತು ಯೋಗ ಗುರುಗಳು
ಕರ್ನಾಟಕದ ಮೊದಲ ಮಹಿಳಾ ಶಿಲ್ಪಿ ಕನಕ ಮೂರ್ತಿಯವರು ಪುರುಷ ಪ್ರಧಾನವಾಗಿದ್ದ ಶಿಲ್ಪಾ ಕಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಸಾಧಾರಣ ಕಥೆಯನ್ನು ವಿವರಿಸಿದ್ದೇವೆ. ಅವರ ಪಾಂಡಿತ್ಯ, ಮಹಿಳೆಯರು ಭಾರತ ಸಂಪ್ರದಾಯವನ್ನು ಹೇಗೆ ಅಳವಡಿಸಿಕೊಂಡಿದ್ದಾರೆ ಎಂಬುದರ ಕುರಿತು ಅವರ ಜೀವನವನ್ನು ಒಂದು ಪ್ರಕರಣ ಅಧ್ಯಯನವಾಗಿ ಪ್ರಸ್ತುತಪಡಿಸಿದ್ದೇವೆ. ಭಾರತ ವಿರೋಧಿ ನಿರೂಪಣೆಗಳ ಸುತ್ತ ತಮ್ಮ ಜೀವನವನ್ನು ನಿರ್ಮಿಸಿಕೊಂಡ ಅರುಂದತಿ ರಾಯ್ ಅವರ ಕಥೆಗೆ ವಿರುದ್ಧವಾಗಿ ಕನಕಮೂರ್ತಿ ಮಹಿಳಾ ಸಬಲೀಕರಣ ಉಜ್ವಲ ಉದಾಹರಣೆಯಾಗಿದ್ದಾರೆ.
ಮಾತಾ ಗುಜ್ರಿಯವರ ಕಥೆಯನ್ನು ಸಮುದಾಯದ ಭಾವನಾತ್ಮಕ ಮತ್ತು ನೈತಿಕ ಬೆನ್ನೆಲುಬಾಗಿ ರೂಪಿಸಿ ಋತಮ್ ಮುಂದಿಟ್ಟಿದೆ, ತಾಯಿಯ ಧೈರ್ಯವನ್ನು ಸಿಖ್ ಪ್ರತಿರೋಧದ ಭಾವನಾತ್ಮಕ ರೂಪವಾಗಿ ವಿವರಿಸಿದ್ದೇವೆ.
ಇವರ ಜೊತೆಗೆ ಬಿ.ಕೆ.ಎಸ್. ಅಯ್ಯಂಗಾರ್ ಮತ್ತು ಸುಬ್ರಮಣಿಯ ಭಾರತಿಯವರ ಜೀವನ ಪಯಣವನ್ನು ಮತ್ತು ಅದು ಭಾರತದಲ್ಲಿ ತಂದ ಬದಲಾವಣೆಯನ್ನು ವಿವರಿಸಿದ್ದೇವೆ, ಯೋಗದ ಮೂಲಕ ಸಜ್ಜಾದ ದೇಹಗಳು ಮತ್ತು ಕಾವ್ಯದಿಂದ ಹರಿತವಾದ ಮನಸ್ಸುಗಳು ಹೇಗೆ ಐತಿಹಾಸಿಕ ಬದಲಾವಣೆಯ ಸಾಧನಗಳಾದವು ಎಂಬುದನ್ನು ಈ ಕಥೆ ಸೂಚಿಸುತ್ತದೆ.
ಟಿಪ್ಪು ಸುಲ್ತಾನ್ ಮತ್ತು ಮಿಷನರಿ ಮತಾಂತರದವರೆಗೆ
ಟಿಪ್ಪು ಸುಲ್ತಾನನ ಕುರಿತಾದ ಕಥೆಯ ಮೂಲಕ ವಸಾಹತುಶಾಹಿ ವಿರೋಧಿ ನಾಯಕನಾಗಿ ಟಿಪ್ಪುವನ್ನು ಬಿಂಬಿಸಿದ್ದರ ಹಿಂದಿನ ಉದ್ದೇಶವನ್ನು ನೇರವಾಗಿ ಪ್ರಶ್ನೆ ಮಾಡಿದ್ದೇವೆ, ಆತ ಹಿಂದೂಗಳ ವಿರುದ್ಧ ಮಾಡಿದ ಅಪರಾಧಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಲಾಗಿದೆ ಅಷ್ಟೇ ಅಲ್ಲದೇ ಪಂಜಾಬ್ ಪ್ರತ್ಯೇಕತಾವಾದಿ ಕಲ್ಪನೆಗೆ ವಿದೇಶಗಳಲ್ಲಿ ಹೇಗೆ ಉತ್ತೇಜನ ದೊರಕಿತು ಎಂಬುದರ ಕುರಿತು ಆಳವಾದ ಅಧ್ಯಯನವನ್ನು ಜನರ ಮುಂದಿಟ್ಟಿದೆ ಋತಮ್.
ಮೂರು ಭಾಗಗಳಲ್ಲಿ ತಂದ “ಎಕ್ಸ್ಪೋಸಿಂಗ್ ಎವಾಂಜಲಿಸಂ” ಸರಣಿಯು ಮಿಷನರಿ ತಂತ್ರಗಳು ಹಿಂದೂ ಪದ್ಧತಿಗಳನ್ನು ಹೇಗೆ ಅನುಕರಿಸುತ್ತವೆ, ಕ್ರಿಸ್ಮಸ್ ಶಾಲಾ ಸಂಸ್ಕೃತಿಗಳನ್ನು ಹೇಗೆ ಬದಲಾಯಿಸುತ್ತಿದೆ ಮತ್ತು ಪವಾಡ ನಡೆಸುವ ಮೂಲಕ ಜನರನ್ನು ಹೇಗೆ ಮರಳು ಮಾಡಿ ಮತಾಂತರ ಮಾಡಲಾಗುತ್ತಿದೆ ಎಂಬುದನ್ನು ಕೇಸ್ ಡೈರಿ ಮತ್ತು ಡೇಟಾ ವಿಶ್ಲೇಷಕರ ಚೌಕಟ್ಟಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ.
ವಿಜ್ಞಾನ, ರಾಜ್ಯ ಮತ್ತು ಸಾಮ್ರಾಜ್ಯದ ದೀರ್ಘ ನೆರಳು
ಋತಮ್ ತನ್ನ ಕ್ಯಾಲೆಂಡರ್ನಲ್ಲಿ ವಿಜ್ಞಾನ ಮತ್ತು ಆಡಳಿತವನ್ನು ಕೂಡ ನಿರ್ಲಕ್ಷಿಸಿಲ್ಲ. 1899 ರಲ್ಲಿ ಮೊದಲ ಮಾನವ ಟೈಫಾಯಿಡ್ ಲಸಿಕೆಯನ್ನು ವಸಾಹತುಶಾಹಿ ಯುಗ ಹೇಗೆ ಭಾರತೀಯ ಯೋಧರ ಮೇಲೆ ಹೇಗೆ ಪ್ರಯೋಗಿಸಿತ್ತು? “ಜಾಗತಿಕ ಲಸಿಕೆ ನಾಯಕ” ನಾಗಿ ಭಾರತದ ಹೊರಹೊಮ್ಮುವಿಕೆಗೆ ಇದು ಹೇಗೆ ಸಂಪರ್ಕ ಹೊಂದಿದೆ ಎಂಬುದನ್ನು ನಮ್ಮ ಕಥೆಯಲ್ಲಿ ವಿವರಿಸಿದ್ದೇವೆ, ವೈದ್ಯಕೀಯ ಇತಿಹಾಸವನ್ನು ಸ್ವಾಧೀನ ಮತ್ತು ನಂತರದ ಪುನಃಸ್ಥಾಪನೆಯ ನಿರೂಪಣೆಯಾಗಿ ಇದು ಪರಿವರ್ತಿಸುತ್ತದೆ. “2007–2025” ವರೆಗಿನ ಮತ್ತೊಂದು ವಿಷಯವು ಇತ್ತೀಚಿನ ರಾಜಕೀಯ ಅಥವಾ ಸಾಮಾಜಿಕ ರೂಪಾಂತರಗಳ ದೀರ್ಘ, ಮೌಲ್ಯಮಾಪನ ನೋಟವನ್ನು ಸೂದಗಿಸಿದೆ. ಓದುಗರನ್ನು ವರ್ತಮಾನವನ್ನು ಸುದ್ದಿ ಚಕ್ರವಾಗಿ ನೋಡದೆ, ಐತಿಹಾಸಿಕ ಕಥೆಗಳತ್ತ ಮುಖ ಮಾಡಲು ಆಹ್ವಾನಿಸಿದ್ದೇವೆ.
ಒಟ್ಟಾರೆಯಾಗಿ, ಈ ಡಿಸೆಂಬರ್ ಲೇಖನಗಳು ಕೇವಲ ಇತಿಹಾಸವನ್ನು “ಅನುವಾದ” ಮಾಡಿಲ್ಲ. ಭಾರತವು ಯಾವ ರೀತಿಯ ಭೂತಕಾಲವನ್ನು ನೆನಪಿಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ನಡೆಸಿದೆ. ವೀರರನ್ನು ಪಠ್ಯಪುಸ್ತಕಗಳಿಂದ ಹೊರಗಿಡುವ ಪ್ರಯತ್ನಗಳನ್ನು ಪ್ರಶ್ನೆ ಮಾಡುವ ಮತ್ತು ಆ ವೀರರನ್ನು ಜನರಿಗೆ ಪರಿಚಯಿಸುವ ಪ್ರಯತ್ನ ನಿರಂತರವಾಗಿ ಸಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



