
1980 ರ ದಶಕದ ಮಧ್ಯಭಾಗದಲ್ಲಿ, ಅಂದರೆ ಸುಮಾರು 1985 ರ ವೇಳೆಗೆ, ದೂರದರ್ಶನದ ದೆಹಲಿ ಕಚೇರಿಗೆ ಆಗಮಿಸಿದ್ದ ರಾಮಾನಂದ ಸಾಗರ್ ಅವರು ಸಣ್ಣ ಪದರೆಯಲ್ಲಿ ರಾಮಾಯಣ ಸರಣಿಯನ್ನು ಪ್ರಸಾರ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟರು. ಆದರೆ ಸುಮಾರು ಎರಡು ವರ್ಷಗಳ ಕಾಲ ಅವರ ಪ್ರಸ್ತಾವನೆಯನ್ನು ನಿರಾಕರಿಸುತ್ತಾ ಬರಲಾಗಿತ್ತು. ರಾಮಾಯಣ ಹಳೆಯ ಕಾಲದ್ದು, ಅದು ಆಧುನಿಕ ದೂರದರ್ಶನಕ್ಕೆ ಸೂಕ್ತವಲ್ಲ ಎಂದು ಅಧಿಕಾರಿಗಳು ಪ್ರಸ್ತಾವನೆಯನ್ನು ಪದೇ ಪದೇ ತಿರಸ್ಕರಿಸಿದ್ದರು. ಸರ್ಕಾರಿ ಪ್ರಸಾರಕ ದೂರದರ್ಶನ ರಾಮಾಯಣದಂತಹ ಧಾರವಾಹಿಗಳನ್ನು ಪ್ರಸಾರ ಮಾಡಿದರೆ ಅದು ವಿವಾದವನ್ನು ಹುಟ್ಟುಹಾಕಬಹುದು ಎಂಬ ಭಯವೂ ಅವರಲ್ಲಿತ್ತು. ಆದರೆ ಕೊನೆಗೆ ರಾಮಾನಂದ್ ಸಾಗರ್ ಅವರ ಅವಿರತ ಪ್ರಯತ್ನದ ಫಲವಾಗಿ ಜನವರಿ 11, 1987 ರ ವೇಳೆಗೆ ರಾಮಾಯಣದ ಮೊದಲ ಕಂತು ಪ್ರಸಾರವಾಯಿತು. ಅದು ನಿರಂತರತೆ ಹಾಗೂ ಪ್ರಾಯೋಗಿಕ ಯಶಸ್ಸನ್ನು ಕಂಡಿತು. ದೂರದರ್ಶನದ ಅಧಿಕಾರಿಗಳು ಹೊಂದಿದ್ದ ಸಂದೇಹವನ್ನು ಹೊಡೆದೋಡಿಸಿತು. ಮಾತ್ರವಲ್ಲ ಭಾರತದ ಅತ್ಯಂತ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾಗಿ ಚರಿತ್ರೆ ಸೃಷ್ಟಿ ಮಾಡಿತು.
ದೂರದರ್ಶನದ ಆ ಎರಡು ವರ್ಷಗಳು (1985-1986)
1985 ರಲ್ಲಿ 70 ವರ್ಷ ವಯಸ್ಸಿನ ರಾಮಾನಂದ ಸಾಗರ್, ಕೌಟುಂಬಿಕ ಧಾರಾವಾಹಿಗಳು ಪ್ರಾಬಲ್ಯ ಮೆರೆಯುತ್ತಿದ್ದ ಟಿವಿ ಮಾಧ್ಯಮದಲ್ಲಿ ರಾಮಾಯಣವನ್ನು ಪ್ರದರ್ಶಿಸಲು ಮುಂದಾದರು. ಜಾತ್ಯತೀತ ಚಾನೆಲ್ನಲ್ಲಿ ಧಾರ್ಮಿಕತೆಯನ್ನು ಉತ್ತೇಜಿಸುವಂತಹ ಸೈದ್ಧಾಂತಿಕ ಅಪಾಯಗಳನ್ನು ಉಲ್ಲೇಖಿಸಿ ದೂರದರ್ಶನ ಸಮಿತಿಗಳು ಮೂರು ಪ್ರಯತ್ನಗಳನ್ನು ತಿರಸ್ಕರಿಸಿದ್ದವು. ಶಾ ಬಾನೋ (1985) ಪ್ರಕರಣದ ನಂತರದ ಪ್ರತಿಕ್ರಿಯೆಗಳ ಬಗ್ಗೆ ಅಧಿಕಾರಿಗಳು ಚಿಂತಿತರಾಗಿದ್ದರು, ಮಹಾಕಾವ್ಯವನ್ನು ಸಾಂಸ್ಕೃತಿಕವಾಗಿ ಅಲ್ಲ, ರಾಜಕೀಯವಾಗಿ ಪ್ರಭಾವಿತವಾಗಿ ನೋಡಲಾಗುತ್ತಿದ್ದದ್ದು ಅವರ ಚಿಂತೆಗೆ ಕಾರಣವಾಗಿತ್ತು. ಆದರೂ ರಮಾನಂದ್ ಸಾಗರ್ ಅವರು ವಾಲ್ಮೀಕಿ-ತುಳಸಿದಾಸರ ಬಗೆಗಿನ ತಮ್ಮ 20 ವರ್ಷಗಳ ಅಧ್ಯಯನದ ಅನುಭವದೊಂದಿಗೆ ಧಾರಾವಾಹಿ ಮಾಡಲು ಧುಮುಕಿಯೇ ಬಿಟ್ಟರು.
ವಿಕ್ರಮ್ ಔರ್ ಬೇತಾಲ್ (1985) ಮೂಲಕ ತಮ್ಮನ್ನು ಸಾಬೀತುಪಡಿಸಿದರು ರಮಾನಂದ್ ಸಾಗರ್
ಎಲ್ಲಾ ಸಂದೇಹಗಳನ್ನು ಎದುರಿಸಿ ತನ್ನನ್ನು ತಾನು ಸಾಬೀತುಪಡಿಸಲು, ರಮಾನಂದ್ ಸಾಗರ್ ಅವರು 1985 ರಲ್ಲಿ ʼವಿಕ್ರಮ್ ಔರ್ ಬೇತಾಲ್ʼ ಅನ್ನು ನಿರ್ಮಿಸಿದರು, ಇದು ಭಾನುವಾರ ಸಂಜೆ 4 ಗಂಟೆಗೆ ಪ್ರಸಾರವಾಯಿತು. ಕಳಪೆ ಸ್ಲಾಟ್ ಹೊರತಾಗಿಯೂ, ಇದು ಬೃಹತ್ ವೀಕ್ಷಕರನ್ನು ಸೆಳೆಯಿತು, ಜನರಲ್ಲಿ ಪೌರಾಣಿಕ ಕಥೆಗಳ ಬಗ್ಗೆ ಆಕರ್ಷಣೆ ಇರುವುದನ್ನು ಇದು ಸಾಬೀತುಪಡಿಸಿತು. 1985 ರ ಈ ಹಿಟ್ ಧಾರಾವಾಹಿ ಆಂತರಿಕ ದೃಷ್ಟಿಕೋನಗಳನ್ನು ಬದಲಾಯಿಸಿತು, 1986 ರ ಅಂತ್ಯದ ವೇಳೆಗೆ ಸಾಂಸ್ಕೃತಿಕ ಧಾರಾವಾಹಿಗಳಿಗೆ ರಾಜೀವ್ ಗಾಂಧಿಯವರ ಪ್ರೋತ್ಸಾಹವೂ ದೊರೆಯಿತು.
ಪ್ರಾಯೋಜಕ ಹುಡುಕಾಟ: ಮೊದಲಿಗೆ ಸಿಕ್ಕಿತು ಕೋಲ್ಗೇಟ್ (1986 ರ ಅಂತ್ಯ)
ರಾಮಾನಂದ್ ಸಾಗರ್ ಪುತ್ರ ಪ್ರೇಮ್ ಸಾಗರ್ ಅವರು 1986 ರ ಅಂತ್ಯದಲ್ಲಿ ವಿಕ್ರಮ್ ಧಾರಾವಾಹಿಯ ರೇಟಿಂಗ್ ಹೆಚ್ಚುತ್ತಿದ್ದಂತೆ ಮುಂದಿನ ರಾಮಾಯಣ ಧಾರಾವಾಹಿಗೆ ಪ್ರಯೋಜಕರನ್ನು ಹುಡುಕಲಾರಂಭಿಸಿದರು. ಮೊದಲು ಕೋಲ್ಗೇಟ್ ಅನ್ನು ಸಂಪರ್ಕಿಸಿದರು. ನಂತರ ಅದು ಪ್ರಮುಖ ಪ್ರಾಯೋಜಕನಾಗಿ ಹೊರಹೊಮ್ಮಿತು. ಹಿಂದೂಸ್ತಾನ್ ಲಿವರ್ ಮತ್ತು ಅರವಿಂದ್ ಮಫತ್ಲಾಲ್ ನಂತರ ಪ್ರಯೋಜಕತ್ವ ನೀಡಿದವು. ಹೀಗೆ, ಸಂಚಿಕೆಗೆ 9 ಲಕ್ಷ ರೂಪಾಯಿಗಳನ್ನು ಹೊಂದಿಸಲಾಯಿತು. 1987 ರ ಹೊತ್ತಿಗೆ ಉಮರ್ಗಾಂವ್ ಸ್ಟುಡಿಯೋಗಳಲ್ಲಿ ರಾಮಾಯಣದ ನಿರ್ಮಾಣ ಕಾರ್ಯ ಚುರುಕುಗೊಂಡಿತು.
ಜನವರಿ 1987 ರಿಂದ ರಾಮಾಯಣದ ಪ್ರಸಾರ ಆರಂಭಗೊಂಡಿತು
ರಾಮಾಯಣ ಜನವರಿ 11, 1987 ರಂದು ದೂರದರ್ಶನದಲ್ಲಿ ಪ್ರಥಮವಾಗಿ ಪ್ರದರ್ಶನಗೊಂಡಿತು, ಸರಣಿಯು ಮಧ್ಯಕ್ಕೆ ತಲುಪುತ್ತಿದ್ದಂತೆ 80%+ ರೇಟಿಂಗ್ಗಳನ್ನು ಗಳಿಸಿತು. ಭಾನುವಾರ ಬೆಳಿಗ್ಗೆ 9:30 ಕ್ಕೆ ಭಾರತದ ಬೀದಿಗಳು ಖಾಲಿ ಖಾಲಿಯಾದವು. ರಾಮಾಯಣ ವೀಕ್ಷಿಸಲು ಜನರಲ್ಲ ಒಂದೆಡೆ ಜಮಾಯಿಸತೊಡಗಿದರು. ಬರುಬರುತ್ತಾ ರಾಮಾಯಣ ಮನೆ ಮಾತಾಯಿತು. 1988 ರವರೆಗೆ 78 ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಯಿತು. ಬಿಬಿಸಿ/ಲಿಮ್ಕಾ ಪ್ರಕಾರ ಜಾಗತಿಕವಾಗಿ 650 ಮಿಲಿಯನ್ ವೀಕ್ಷಕರನ್ನು ಇದು ತಲುಪಿತು. 2020 ರಲ್ಲಿ ಮರುಪ್ರಸಾರಗೊಂಡಾಗಲೂ ರಾಮಾಯಣ ತನ್ನ ಹಿಂದಿನ ವೈಭವವನ್ನು ಹಾಗೆಯೇ ಉಳಿಸಿಕೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



