ದೇಶಭಕ್ತಿ ಎಂಬುದು ರಕ್ತಗತವಾಗಿರುವ, ಬೆಳೆಯುತ್ತಾ ಬೆಳೆಯುತ್ತಾ ಉತ್ತೇಜನಗೊಳ್ಳುತ್ತಾ ಬರುವ ಭಾವನೆ. ದೇಶಭಕ್ತರು ಎನಿಸಿಕೊಂಡವರು ಎಲ್ಲರೂ ದೇಶಕ್ಕಾಗಿ ಪ್ರಾಣ ಅರ್ಪಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಕೆಲವರ ದೇಶಭಕ್ತಿ ಕೇವಲ ಮಾತಲ್ಲೇ ಉಳಿದು ಬಿಡುತ್ತದೆ ಆದರೆ ಸಮಯ ಸಂದರ್ಭ ಬಂದಾಗ ತನ್ನದು ಎಂಬ ಎಲ್ಲವನ್ನೂ ತ್ಯಾಗ ಮಾಡಿ ತಾಯ್ನಾಡಿಗಾಗಿ ತನ್ನ ಜೀವವನ್ನು ಬಲಿದಾನ ಮಾಡುವವನೇ ನಿಜವಾದ ದೇಶಭಕ್ತ. ಆತನೇ ನಿಜವಾದ ವೀರ.
ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಇಂತಹ ವೀರತ್ವವನ್ನು ಮೆರೆದವರು ಅನೇಕರಿದ್ದಾರೆ. ಆದರೆ ಈ ಸಾಲಿನಲ್ಲಿ ನಮಗೆ ಥಟ್ಟನೆ ಹೊಳೆಯುವ ಹೆಸರು ವೀರ ಸೇನಾನಿ ಭಗತ್ ಸಿಂಗ್. ಹಲವಾರು ಮಂದಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ವಯಸ್ಸಿನಲ್ಲಿ ಈತ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತೆತ್ತ. ಈತ ಬದುಕಿದ್ದು ಇಪ್ಪತ್ತಮೂರೇ ವರ್ಷ. ಆದರೆ ಮಾಡಿದ ಸಾಧನೆ ಅಪರಿಮಿತ, ಅನನ್ಯ. ಸೂರ್ಯ, ಚಂದ್ರ ಇರುವವರೆಗೂ ಅಜರಾಮರ.
ಕ್ರಾಂತಿಕಾರಿಯಾಗಿ ಬ್ರಿಟಿಷ್ ರಾಜ್ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ಬಿಸಿ ರಕ್ತದ ಭಗತ್ ಇಂದಿನ ಪೀಳಿಗೆಗೂ ಆದರ್ಶ ವ್ಯಕ್ತಿ. ಆತನ ಹೆಸರು ಕೇಳಿದೊಡನೆ ದೇಶಭಕ್ತ ಯುವ ಮನಸ್ಸುಗಳ ರಕ್ತ ಬಿಸಿಯಾಗುತ್ತದೆ, ದೇಶಪ್ರೇಮ ಉದ್ದೀಪನವಾಗುತ್ತದೆ. ದೇಶದಲ್ಲಿ ನಡೆಯುತ್ತಿರುವ ಅನಾಚಾರ, ಅತ್ಯಾಚಾರಗಳ ವಿರುದ್ಧ ಹೋರಾಡಬೇಕು ಎನ್ನುವ ಛಲ ಬರುತ್ತದೆ. ಭಾರತಾಂಬೆಗಾಗಿ ಏನಾದರು ಮಾಡುವ ಇಚ್ಛೆ ಉಂಟಾಗುತ್ತದೆ.
ಸೆ.28.1907ರಲ್ಲಿ ಸಿಖ್ ಸಮುದಾಯದಲ್ಲಿ ಹುಟ್ಟಿದ ಭಗತ್ ಎಳವೆಯಲ್ಲಿಯೇ ಕ್ರಾಂತಿಕಾರಿ ಧೋರಣೆಗಳನ್ನು ಮೈಗೂಡಿಸಿಕೊಂಡವರು. ಹಲವಾರು ಕ್ರಾಂತಿಕಾರಿ ಸಂಘಟನೆಗಳೊಂದಿಗೆ ಕಾರ್ಯನಿರ್ವಹಿಸಿದ್ದವರು. ಅದರಲ್ಲಿ ಪ್ರಮುಖವಾದುದು ಹಿಂದೂಸ್ಥಾನ್ ಸೋಶಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್. ಅಹಿಂಸೆಯ ಮಾರ್ಗದಲ್ಲಿ ಸಾಗಿದರೆ ಭಾರತ ಬಂಧನದಿಂದ ಮುಕ್ತಗೊಳ್ಳುವುದಿಲ್ಲ ಎಂಬ ದೃಢ ನಂಬಿಕೆ ಅವರಿಗಿತ್ತು. ಅದಕ್ಕಾಗಿ ಅವರು ಕ್ರಾಂತಿಯ ಮಾರ್ಗದಲ್ಲಿ ಸಾಗಿ ಬ್ರಿಟಿಷರ ಎದೆಯಲ್ಲಿ ಭಯ ಹುಟ್ಟಿಸಿದರು. ಬ್ರಿಟಿಷರು ಎಂಬ ಅಸುರರನ್ನು ಕನಸಿನಲ್ಲೂ ಬೆಚ್ಚಿಬೀಳಿಸುವ ಶಕ್ತಿ ಈ ಯುವ ಸೇನಾನಿಗಿತ್ತು.
ಜಾನ್ ಸೌಂಡರ್ಸ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಕೊಂದು ಲಾಲ ಲಜಪತ್ ರಾಯ್ ಅವರ ಹತ್ಯೆಗೆ ಪ್ರತಿಕಾರ ತೀರಿಸಿದ ಭಗತ್ ಮುಯ್ಯಿಗೆ ಮುಯ್ಯಿ ಎಂಬ ಧೋರಣೆಯನ್ನು ಇಟ್ಟುಕೊಂಡಿದ್ದವರು. ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಎರಡು ಬಾಂಬ್ಗಳನ್ನು ಹಾಕಿ ಬ್ರಿಟಿಷರನ್ನು ಅಲ್ಲೋಲ ಕಲ್ಲೋಲಗೊಳಿಸಿ ಬಳಿಕ ಬ್ರಿಟಿಷರು ನೀಡಿದ ನೇಣು ಕುಣಿಕೆಗೂ ಮಂದಹಾಸ ಬೀರುತ್ತಾ ’ಇನ್ಕ್ವಿಲಾಬ್ ಜಿಂದಾಬಾದ್’ ಎನ್ನುತ್ತಲೇ ಕೊರಳೊಡ್ಡಿ ಅಮರರಾದವರು.
ಅವರ ತ್ಯಾಗ, ಸಾಹಸ ಮತ್ತಷ್ಟು ಯುವಕರನ್ನು ಸ್ವಾತಂತ್ರ್ಯ ಚಳುವಳಿಗೆ ಧುಮುಕುವಂತೆ ಪ್ರೇರಣೆ ನೀಡಿತು. ಈಗಲೂ ಅವರು ಆಧುನಿಕ ಭಾರತದ ರೋಲ್ ಮಾಡೆಲ್, ಹಲವಾರು ಸಿನಿಮಾಗಳ, ಹಲವಾರು ಚಳುವಳಿಗಳ ಪ್ರೇರಣೆ, ಸಂಸತ್ತು ಮುಂಭಾಗದಲ್ಲಿರುವ ಅವರ ಬೃಹತ್ ಕಂಚಿನ ಪ್ರತಿಮೆ ಭಾರತೀಯರು ಅವರನ್ನು ಎಷ್ಟು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂಬುದರ ಪ್ರತೀಕ.
ಎಲ್ಲರೂ ಬದುಕುತ್ತಾರೆ, ನಾವು ಬದುಕುತ್ತಿದ್ದೇವೆ. ಆದರೆ ಬದುಕಿಗೊಂದು ಅರ್ಥ ಸಿಗುವುದು ನಾವು ಹುಟ್ಟಿದ ಮಣ್ಣಿನ ಋಣ ಸಂದಾಯ ಮಾಡುವ ಕಾರ್ಯವಾದಾಗ. ದೇಶಕ್ಕಾಗಿ ಬಲಿದಾನ ಮಾಡುವ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ, ಆದರೆ ದೇಶಕ್ಕಾಗಿ ಸೇವೆ ಮಾಡುವ ಅದೃಷ್ಟ ಪ್ರತಿಯೊಬ್ಬನಿಗೂ ಸಿಗುತ್ತದೆ. ಈ ದೇಶಕ್ಕಾಗಿ ಭಗತ್ ತಮ್ಮ ಕುಟುಂಬವನ್ನು ತೊರೆದರು, ವಿದ್ಯಾಭ್ಯಾಸವನ್ನು ತೊರೆದರು, ಮದುವೆಯನ್ನೂ ತೊರೆದರು, ಧರ್ಮವನ್ನೂ ತ್ಯಜಿಸಿದರು, ಜೀವನವನ್ನೇ ತ್ಯಾಗ ಮಾಡಿದರು ಕೊನೆಗೆ ಜೀವವನ್ನೂ ಬಿಟ್ಟರು.
ಸೆ.28 ಆ ಮಹಾನ್ ಸೇನಾನಿಯ ಜನ್ಮದಿನ. ಅವರನ್ನು ರೋಲ್ ಮಾಡೆಲ್ ಎಂದು ಭಾವಿಸುವ ನಮಗೆ ಅವರಷ್ಟು ತ್ಯಾಗಗಳನ್ನು ಮಾಡಲು ಸಾಧ್ಯವಾಗಲಾರದು, ಆದರೆ ಕನಿಷ್ಠ ಪಕ್ಷ ಒಂದಿಷ್ಟು ದಿನವನ್ನಾದರೂ ಈ ದೇಶದ ಸೇವೆಗಾಗಿ ಮುಡಿಪಾಗಿಡುವ. ಭಾರತದ ಋಣ ತೀರಿಸುವ, ಭಗತ್ರಂತಹ ವೀರರು ಧಕ್ಕಿಸಿಕೊಟ್ಟ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಳ್ಳುವ.
’ಜೈ ಶಹೀದ್ ಭಗತ್ ಸಿಂಗ್’ ’ಇನ್ಕ್ವಿಲಾಬ್ ಜಿಂದಾಬಾದ್’ ‘ವಂದೇ ಮಾತರಂ’
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.