ಬೆಂಗಳೂರು: ಕಾಂಗ್ರೆಸ್ನ ರಾಹುಲ್ ಗಾಂಧಿಯವರ ಪೌರತ್ವ ಮುಟ್ಟುಗೋಲು ಹಾಕಿಕೊಂಡು ಅವರನ್ನು ಗಡೀಪಾರು ಮಾಡಬೇಕೆಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯÀ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ಇಲ್ಲಿ ಅಭದ್ರತೆ ಉಂಟು ಮಾಡುವುದು ಮತ್ತು ದೇಶಕ್ಕೆ ತೊಂದರೆ ಕೊಡಬೇಕೆಂಬ ಮನಸ್ಥಿತಿ ರಾಹುಲ್ ಗಾಂಧಿ ಅವರದು ಎಂದು ನನಗನಿಸುತ್ತದೆ. ಆದ್ದರಿಂದ ನಾನು ಪ್ರಧಾನಿ ಮೋದಿಜಿ ಮತ್ತು ಅಮಿತ್ ಶಾ ಅವರಿಗೆ ಪತ್ರ ಬರೆಯಲಿದ್ದೇನೆ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರು ದ್ವಿ ಪೌರತ್ವ (ಡ್ಯುಯಲ್ ಸಿಟಿಜನ್ಶಿಪ್) ಹೊಂದಿದ್ದಾರೆಂದು ಮಾಹಿತಿ ಇದೆ. ಸುಬ್ರಹ್ಮಣ್ಯನ್ ಸ್ವಾಮಿ ಅವರು ಇದನ್ನು ತಿಳಿಸಿದ್ದಾರೆ. ಇದರ ಪರಿಶೀಲನೆ ಮಾಡಿ ರಾಹುಲ್ ಗಾಂಧಿಯವರ ಪೌರತ್ವವನ್ನು ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು. ಅಲ್ಲದೆ ಅವರನ್ನು ಈ ದೇಶದಿಂದ ಗಡೀಪಾರು ಮಾಡಿದರೆ ಉತ್ತಮ ಎಂದು ತಿಳಿಸಿದರು. ಇಲ್ಲವಾದರೆ ಅವರು ದೇಶದಲ್ಲಿ ಅಭದ್ರತೆ ಉಂಟು ಮಾಡುವ ಎಲ್ಲ ಲಕ್ಷಣಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಬಂದಾಗ ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಇದೇ ರಾಹುಲ್ ಗಾಂಧಿಯವರ ಮುತ್ತಜ್ಜನಿಗೆ ಆಗಿನ ಬ್ರಿಟಿಷರು ಸೆಂಗೋಲ್ (ರಾಜದಂಡ) ಕೊಟ್ಟಿದ್ದರು. ಆ ವಿಚಾರ ಚರಿತ್ರೆಯಲ್ಲಿ ಮುಚ್ಚಿ ಹೋಗಿತ್ತು. ಅದನ್ನು ಹೊರಕ್ಕೆ ತರುವ ಕೆಲಸವನ್ನು ಮೋದಿಜಿ ಮತ್ತು ಅಮಿತ್ ಶಾ ಅವರು ಮಾಡಿದ್ದು, ಅದನ್ನೂ ಹೊರಗಡೆ ಪ್ರಸ್ತಾಪ ಮಾಡಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ ರಾಹುಲ್ ಗಾಂಧಿಯವರ ತಲೆಯಲ್ಲಿ ಭಾರತೀಯ ವಿರೋಧಿ ಧೋರಣೆ ಇದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಹುಲ್ ಗಾಂಧಿಯವರು ಅಮೆರಿಕಕ್ಕೆ ಹೋಗಿದ್ದಾರೆ. ಅಲ್ಲಿ ಹೋಗಿ, ದೇಶದಲ್ಲಿ ಅಭದ್ರತೆ ಸೃಷ್ಟಿಸುವ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಅವರು ಯಾವತ್ತೂ ಕೂಡ ಭಾರತ ಪರವಾದ ಮಾನಸಿಕ ಸ್ಥಿತಿ ಹೊಂದಿರಲಿಲ್ಲ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ನುಡಿದರು.
18 ಇಸ್ಲಾಂ ಸಂಘಟನೆಗಳ ಮುಖ್ಯಸ್ಥರನ್ನು ಅವರು ಭೇಟಿ ಮಾಡುವ ಮಾಹಿತಿ ಬರುತ್ತಿದೆ. ಅವರನ್ನು ಐದಾರು ತಿಂಗಳೊಳಗೆ ಭಾರತಕ್ಕೆ ಕರೆಸಿಕೊಳ್ಳಬೇಕು. ಅವರ ಮೂಲಕ ಭಾರತದಲ್ಲಿ ಅಭದ್ರತೆ ಸೃಷ್ಟಿಸಲು ಯೋಜನೆಯನ್ನು ರಾಹುಲ್ ಗಾಂಧಿಯವರು ಹೊಂದಿರುವುದಾಗಿ ವಿಷಯ ಹೊರಬರುತ್ತಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಮನಸ್ಥಿತಿ ಇಷ್ಟೊಂದು ಬದಲಾಗಲು ಕಾರಣ ಏನು ಎಂದು ಕೇಳಿದ ಅವರು, ಹೊಸ ಸಂಸತ್ ಭವನವನ್ನು ಮೋದಿಜಿ ಕಟ್ಟಿಸಿದ್ದಾರೆ. ಉದ್ಘಾಟನೆಗೆ ಎಲ್ಲ ವಿರೋಧ ಪಕ್ಷಗಳಿಗೂ ಆಹ್ವಾನ ಇದ್ದರೂ ಅವರು ಬಂದಿಲ್ಲ. ಅದು ಮೋದಿಯವರ ವಿರೋಧಿ ಮೇನಿಯಾ ಎಂದು ತಿಳಿಸಿದರು. ಇದರ ವಿರುದ್ಧವಾಗಿಯೂ ರಾಹುಲ್ ಗಾಂಧಿಯವರು ಹೊರದೇಶದಲ್ಲಿ ಮಾತನಾಡಿದ್ದಾರೆ ಎಂದರು.
ಗ್ಯಾರಂಟಿಗಳು ನನಗೆ ಬೇಕಿಲ್ಲ
ಗ್ಯಾರಂಟಿ ಏನಾಯ್ತೆಂದು ಕೇಳಲು ನಾನು ಬಂದಿಲ್ಲ; ನಾನು ಮೊದಲನೆಯದಾಗಿ ಈ ಗ್ಯಾರಂಟಿಗಳ ವಿರೋಧಿ. ನನ್ನ ಕುಟುಂಬ ಕಾಂಗ್ರೆಸ್ ಕೊಡುವ ಯಾವ ಗ್ಯಾರಂಟಿಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದೆ ಇದ್ದಲ್ಲಿ ಆಗ ನಾನು ಅದರ ಕುರಿತು ಮಾತನಾಡುವೆ. ಅದು ಜನಪರವಾಗಿರುತ್ತದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.