ಬಂಟ್ಟಾಳ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟಗಾರರಿಗೆ ಸಿಕ್ಕಿದ್ದು ಬಹಳ ಅಮೂಲ್ಯವಾದ ಸತ್ಯದ ಪುನಃಪ್ರದರ್ಶನ. ಈ ದೇಶದ ಮಣ್ಣಿನ ಅಂತಃ ಸತ್ವದ ದಿವ್ಯಾನುಭವ. ಭಾರತ ಜಗತ್ತಿನಲ್ಲಿ ಮೊತ್ತ ಮೊದಲು ಹುಟ್ಟಿದ ದೇಶ. ಪ್ರಪಂಚಕ್ಕೆ ಹಿರಿಯಣ್ಣ. ಭಾರತ ದೇಶಕ್ಕೆ ಎಷ್ಟೇ ಆಕ್ರಮಣಗಳಾದರೂ, ಆಘಾತಗಳಾದರೂ ದೇಶದ ಜೀವನಯಾತ್ರೆ ಎಂದೂ ಮುಕ್ಕಾಗಲಿಲ್ಲ, ಯಾತ್ರೆ ಪೂರ್ಣ ವಿರಾಮವಿಲ್ಲ. ಭಾರತ ಅಖಂಡ, ಅವಿಚಿನ್ನವಾಗಿ ಮುಂದುವರಿಯುತ್ತಾ ಬಂತು ಎಂದು ಅಖಿಲ ಭಾರತ ಕುಟುಂಬ ಪ್ರಭೋಧನ್ ಪ್ರಮುಖ್ ಸು.ರಾಮಣ್ಣ ಹೇಳಿದರು.
ಅವರು ಕಲ್ಲಡ್ಕ ಶ್ರೀ ರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ತುರ್ತುಪರಿಸ್ಥಿತಿಯ ಒಂದು ನೆನಪು ಮತ್ತು ಸಂದೇಶ ಎಂಬ ವಿಚಾರ ಸಂಕಿರಣದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ಭಾರತದ ಮಣ್ಣಿನ ಗುಣವೇ ಭಾರತೀಯರಲ್ಲಿ ಮುಂದುವರಿಯುವುದು. ಸೋಲನ್ನು ಒಪ್ಪಿಕೊಂಡು, ಭೂಮಿಗೆ ಒರಗುವುದಲ್ಲ, ಬದಲಾಗಿ ಸೋಲನ್ನು ಸವಾಲನ್ನಾಗಿ ಸ್ವೀಕರಿಸಿ, ಧರ್ಮದ ವಿಜಯದಲ್ಲಿ ಪರಮನಂಬಿಕೆಯನ್ನಿಟ್ಟ ಜನ ಭಾರತೀಯರು. ಎಲ್ಲಿ ಧರ್ಮವಿದೆಯೋ ಅಲ್ಲಿ ಗೆಲವು ಶತಸಿದ್ಧ. ಭಾರತ ದೇಶ ಇದಕ್ಕೆ ಪ್ರತ್ಯಕ್ಷವಾದ ಜ್ವಲಂತವಾದ ಉದಾಹರಣೆ. ಅದಕ್ಕಾಗಿ ಭಾರತದ ಜೀವನಯಾತ್ರೆ ಸೋಲಿನ ಅಪಮಾನದ ಜೀವನಯಾತ್ರೆ ಅಲ್ಲ. ಭಾರತೀಯರ ಜೀವನಯಾತ್ರೆ, ತಾತ್ಕಾಲಿಕವಾಗಿ ಹಿಮ್ಮೆಟ್ಟಬೇಕಾಗಿ ಬಂದರು ಸಹ ಅಂತಿಮವಾಗಿ ಅಧರ್ಮದ ಮೇಲೆ ಜಯಗಳಿಸುವ ಜೀವನಯಾತ್ರೆ ನಮ್ಮದು ಎಂದರು.
ಸತತ ಸಂಘರ್ಷ ಭಾರತೀಯರ ಜಾತಕದಲ್ಲಿ ಬರೆದಿದೆ. ಸಂಘರ್ಷದಲ್ಲಿ ನೋವಿದೆ ಆದರೆ ಸಾವಿಲ್ಲ. ಆತ್ಮವಿಶ್ವಾಸವಿದೆ, ಆತ್ಮಹೀನಯತೆಯಿಲ್ಲ ಇಲ್ಲ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟಗಾರರಿಗೆ ಆದ ಲಾಭ ಭಾರತದ ಮಣ್ಣಿನ ಅಂತಃಶಕ್ತಿಯ ಅನುಭವ ಎಂದರು.
ಯಾರು ನಿರೀಕ್ಷೆ ಮಾಡಲಾಗದ ಬದಲಾವಣೆ ತುರ್ತುಪರಿಸ್ಥಿತಿಯ ಚುನಾವಣೆಯಲ್ಲಿ ನಡೆಯಿತು. ಅಂದಿನ ಚುನಾವಣೆ ಪ್ರಚಾರಕ್ಕೆ ಸಮಯವಿಲ್ಲ. ಹಣವಿಲ್ಲ. ಚುನಾವಣೆಯ ಬಹಿಷ್ಕಾರವೇ ಸರಿ ಎಂಬ ತೀರ್ಮಾನಕ್ಕೆ ಬಂದಂತಹ ಸಮಯದಲ್ಲಿ ಅದರ ಸದುಪಯೋಗ ಪಡೆದವರು ಹೋರಾಟಗಾರ ಕಾರ್ಯಕರ್ತರು. ಚುನಾವಣೆ ಸ್ಪರ್ಧೆಮಾಡಿ ಗೆಲ್ಲಬೇಕು ಅನ್ನುವ ಅಗತ್ಯವಿಲ್ಲ, ಬದಲಾಗಿ ಚುನಾವಣೆ ದೈವದತ್ತವಾದ ಒಂದು ಸದಾವಕಾಶ. 21 ತಿಂಗಳಿಂದ ನಡೆಯುವ ಅನ್ಯಾಯವನ್ನು ಪ್ರಚಾರದಲ್ಲಿ ಹೇಳಬಹುದು. ಕೋಟಿ ಕೋಟಿ ಜನರಲ್ಲಿ ವಿಶ್ವಾಸ ಮೂಡಿಸಬಹುದು ಅದು ಹೋರಾಟದ ನಿರ್ಣಾಯಕವಾದ ಮಜಲು ಎಂದರು.
ಚುನಾವಣೆ ಘೋಷಣೆ ಮಾಡಿದಾಗ ತುಂಬಾ ಸಂತೋಷಗೊಂಡವರು ಆರ್ ಎಸ್.ಎಸ್. ಕಾರ್ಯಕರ್ತರು. ಯುವಕರ ಮೇಲೆ ನಂಬಿಕೆ ಇಟ್ಟು, ವಿದ್ಯಾರ್ಥಿ ಶಕ್ತಿ ಇಂದಿನ ರಾಷ್ಟ್ರಶಕ್ತಿ ಹೀಗೆ ವಿಶ್ವಾಸಬಲದ ಮೇಲೆ ಸಂಘ ಹೋರಾಟಕ್ಕೆ ಕರೆ ಕೊಟ್ಟಾಗ ಸೇರಬೇಕು ಎಂದು ವಿದ್ಯಾರ್ಥಿಗಳಿಗೆ ಅನಿಸಿತು. ವಿದ್ಯಾರ್ಥಿ ಶಕ್ತಿಯೂ ಹೋರಾಟಕ್ಕೆ ದುಮ್ಮುಕ್ಕಿತ್ತು ಎಂದರು.
ವಿಕ್ರಮ ವಾರಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಮಾತನಾಡಿ ಕಹಳೆಯ ಪತ್ರಿಕೆಯ ಅಂದಿನ ಹೋರಾಟದ ನೆನಪು, ಅನುಭವ, ಆ ಸಮಯದಲ್ಲಿ ಪತ್ರಿಕೆಯಲ್ಲಿ ತಾನೇ ಮುಂದೆ ನಿಂತು ಭೂಗತ ರೀತಿಯಲ್ಲಿ ಪತ್ರಿಕೆಯ ಪ್ರಚಾರ ನಡೆಸಿದ ಸಂಪಾದಕೀಯ ಸ್ವ ಅನುಭವವನ್ನು ವಿವರಿಸಿದರು.
ತುರ್ತುಪರಿಸ್ಥಿತಿಯ ಹೋರಾಟಗಾರರಾದ ನಾಗೇಶ್ ರಾವ್, ರಾಮಕೃಷ್ಣಭಟ್, ಡಾ| ಪ್ರಭಾ ಕಾಮತ್, ಮೋಹನ್ ರೈ, ಗಣೇಶ್ ಹೆಗ್ಡೆ, ಶ್ಯಾಮ್ ರೈ, ಪುಷ್ಪಲತಾ, ಶೇಷಪ್ಪ, ಕಾರ್ಯಪ್ಪ ಇವರುಗಳು ಮಾತನಾಡಿ ಜೈಲುವಾಸದ ಚಪತಿ ಶಿಕ್ಷೆ, ಏರೋಪ್ಲೇನ್ ಶಿಕ್ಷೆಯ ಅನುಭವಗಳನ್ನು ಹಂಚಿಕೊಂಡರು. ಅಂದು ಜನರಿಗೆ ಕಹಳೆ ಪತ್ರಿಕೆಯನ್ನು ಸಂತೆಯಲ್ಲಿ ವಿತರಿಸುತ್ತಿದ್ದ ಹೋರಟಗಾರರನ್ನು ಪೋಲಿಸರು ಎಳೆದುಕೊಂಡು ಹೋದ ಕ್ಷಣ, ಮೈಚರ್ಮ ಏಳುವವರೆಗೆ ಹೊಡೆದ ನೋವಿನ ಅನುಭವ, ತಮ್ಮವರನ್ನು ಕಳೆದುಕೊಂಡ ಘಳಿಗೆ ಇವೆಲ್ಲವನ್ನೂ ವೇದಿಕೆಯಲ್ಲಿ ನೆನಪಿಸುತ್ತಾ ತನ್ನ ಸಹಪಾಠಿ ಮಿತ್ರರೊಂದಿಗೆ ಕಣ್ಣೀರಿಡುತ್ತ ಅನುಭವಗಳನ್ನು ಹಂಚಿಕೊಂಡರು.
ತುರ್ತುಪರಿಸ್ಥಿತಿಯ ಹೋರಾಟಗಾರರಲ್ಲಿ ಡಾ. ಪ್ರಭಾ ಕಾಮತ್ ಜೈಲುವಾಸ ಅನುಭವಿಸಿದರಲ್ಲಿ ಅತ್ಯಂತ ಸಣ್ಣ ವಯಸ್ಸಿನವರು. ಪುತ್ತೂರಿನ ನರಿಮೊಗರಿನ ಮೋಹನ್ ರೈ ೮ ಬಾರಿ ಸತ್ಯಾಗ್ರಹ ನಡೆಸಿ ಮೀಸಾ ಬಂಧನಕ್ಕೆ ಒಳಗಾದವರು.
ಸಮಾರಂಭದಲ್ಲಿ ಭಾಗವಹಿಸಿದ 220 ಮೀಸಾಬಂಧಿ ಹೋರಾಟಗಾರರಿಗೆ ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೇ ತುರ್ತುಪರಿಸ್ಥಿತಿಯ ಸಂದರ್ಭವನ್ನು ನೆನಪಿಸುವ ಹಿನ್ನಲೆಯಲ್ಲಿ ಅಣುಕು ಜೈಲಿನ ನಿರ್ಮಾಣ ಮಾಡಲಾಗಿತ್ತು.
ವೇದಿಕೆಯಲ್ಲಿ ದೆಹಲಿಯ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯವಾದಿಗಳು ಹೆಬ್ರಿ ಬಾಲಕೃಷ್ಣ ಮಲ್ಯ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ, ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಾಯಾಜಿ, ತುರ್ತುಪರಿಸ್ಥಿತಿಯ ಮಹಿಳಾ ಹೋರಾಟಗಾರ್ತಿ ಸುಮತಿ ಶೆಣೈ ಉಪಸ್ಥಿತರಿದ್ದರು. ಸುಮಾರು ಒಂದು ಘಂಟೆಗಳ ಕಾಲ ಪ್ರಶ್ನೋತ್ತರ ಅವಧಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ್ ಮತ್ತು ರಸಾಯನಶಾಸ್ತ್ರ ಉಪನ್ಯಾಸಕ ಗಿರೀಶ್ ಪ್ರೇರಣಾಗೀತೆ ಹಾಡಿದರು. ಉಪನ್ಯಾಸಕಿ ರೇಖಾ, ಜಯಲಕ್ಷ್ಮೀ, ದೀಪ್ತಿ ಸ್ವಾಗತಿಸಿ, ಉಪನ್ಯಾಸಕ ರಂಜಿತ್ ವಂದಿಸಿ, ಉಪನ್ಯಾಸಕಿ ಸುನೀತಾ, ಶೋಭಾ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.