ಹೊಸ ಹೊಸತನ್ನು ಆವಿಷ್ಕರಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ದಾಪುಗಾಲಿಡುವಂತೆ ಮಾಡುತ್ತಿರುವ, ಭಾರತದ ಅಭಿವೃದ್ಧಿಗೆ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಾ ಅವಿರತ ಪರಿಶ್ರಮ ಪಡುತ್ತಿರುವ ನಮ್ಮ ಹೆಮ್ಮೆಯ ಇಂಜಿನಿಯರ್ಗಳನ್ನು ಸ್ಮರಿಸಬೇಕಾದ ದಿನವಿಂದು.
ವಿಶ್ವಕಂಡ ಮಹಾನ್ ಇಂಜಿನಿಯರ್, ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿಂದಿರುವ ಶಿಲ್ಪಿ ಮೋಕ್ಷಗೊಂಡಂ ವಿಶ್ವೇಶ್ವರಯ್ಯ ಅವರ ಜನುಮ ದಿನ 1860ರ ಸೆ.15. ಹೀಗಾಗಿ ಸೆ.15ನ್ನು ಭಾರತದಲ್ಲಿ ಇಂಜಿನಿಯರ್ಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆ ಮಹಾನ್ ಚೇತನ, ಭಾರತ ರತ್ನಕ್ಕೆ ನಾವು ನೀಡುತ್ತಿರುವ ಪುಟ್ಟ ಗೌರವವಿದು.
ವಿಶ್ವೇಶ್ವರಯ್ಯ ಹೈದರಾಬಾದ್ ಸಿಟಿಗೆ ಪ್ರವಾಹ ತಡೆ ವ್ಯವಸ್ಥೆಯನ್ನು ಕಲ್ಪಿಸಿದವರು, ಮೈಸೂರಿನ ದಿವಾನರಾಗಿ ಹತ್ತು ಹಲವು ಸಾರ್ವಜನಿಕ ಕಾರ್ಯಗಳನ್ನು ಮಾಡಿದ ಕೀರ್ತಿ ಇವರದ್ದು, 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಲು ಕಾರಣೀಕರ್ತರಾದವರು ಇವರು, ಇದೀಗ ಆ ಕಾಲೇಜು ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂದೇ ಖ್ಯಾತಿ ಪಡೆದಿದೆ. ಮೈಸೂರಿನಲ್ಲಿ ರೈಲ್ವೇ ಹಳಿಗಳ ನಿರ್ಮಾಣದಲ್ಲೂ ಇವರ ಪಾತ್ರ ಬಹಳಷ್ಟಿದೆ.
ಇವರು ಕೇವಲ ಒಬ್ಬ ಎಂಜಿನಿಯರ್ ಮಾತ್ರವಲ್ಲ, ಸಮಾಜದ ಬಗ್ಗೆ, ಬಡವರ ಬಗ್ಗೆ ಕಾಳಜಿ ಇದ್ದ ಸಮಾಜ ಸೇವಕನೂ ಹೌದು. ಒಬ್ಬ ಎಂಜಿನಿಯರ್ ಆಗಿ ಇವರು ಮಾಡಿದ ಸೇವೆಗಳು ಅದೆಷ್ಟೋ ಬಡ ಜನರಿಗೆ ಜೀವನ ಒದಗಿಸಿದೆ. ವಿಶಾಖಪಟ್ಟಣಂ ಬಂದರನ್ನು ಮಣ್ಣಿನ ಸವಕಳಿಯಿಂದ ಪಾರು ಮಾಡಿದ ಕೀರ್ತಿ ಇವರದ್ದು, ಮೈಸೂರು ಸೋಪ್ ಫ್ಯಾಕ್ಟರಿ, ಮೈಸೂರು ಸ್ಟೀಲ್ ಮತ್ತು ಐರನ್ ಫ್ಯಾಕ್ಟರಿ ಮುಂತಾದ ಹಲವು ಉದ್ಯೋಗಗಳ, ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅಡಿಪಾಯ ಹಾಕಿದವರು ವಿಶ್ವೇಶ್ವರಯ್ಯ.
ಕೆಲಸದ ಮೇಲಿನ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಶಿಸ್ತು ಇವು ವಿಶ್ವೇಶ್ವರಯ್ಯರವರ ಟ್ರೇಡ್ಮಾರ್ಕ್ ಆಗಿತ್ತು, ಒಬ್ಬ ಎಂಜಿನಿಯರ್ ಆಗಿ ದೇಶದ ಅಭಿವೃದ್ಧಿಯಲ್ಲಿ ಅವರು ವಹಿಸಿರುವ ಪಾತ್ರ ಅನನ್ಯ.
ಇಂದು ಹಣ ಸಂಪಾದನೆಗಾಗಿ ಜನ ಎಂಜಿನಿಯರಿಂಗ್ ಮಾಡುತ್ತಿದ್ದಾರೆ. ಇಲ್ಲಿ ಎಂಜಿನಿಯರ್ ಪದವಿ ಪಡೆದು ವಿದೇಶಕ್ಕೆ ಹಾರಿ ಅಲ್ಲಿ ಕೋಟಿಗಟ್ಟಲೆ ದುಡಿಯುತ್ತಿದ್ದಾರೆ. ಹಣ ಸಂಪಾದಿಸುವುದು ಒಳ್ಳೆಯದೇ ಆದರೆ ಹುಟ್ಟಿದ ದೇಶದ ಋಣ ಸಂದಾಯ ಮಾಡುವ ಆಶಯ ಪ್ರತಿಯೊಬ್ಬರಲ್ಲೂ ಇರಬೇಕು. ಈ ದೇಶದ ಅಭಿವೃದ್ಧಿಯಲ್ಲೂ ಅವರು ಕೈಜೋಡಿಸಬೇಕು. ಆಗ ಎಂಜಿನಿಯರ್ಗಳ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತದೆ. ವಿಶ್ವೇಶ್ವರಯ್ಯರಂತೆ ಅವರೂ ಅಜರಾಮರರಾಗುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.