ಸುಬ್ರಹ್ಮಣ್ಯ : ಪ್ರತೀ ಮನೆಯಲ್ಲೂ ಇಂದು ಆಚರಣೆ ಪದ್ದತಿ ಬದಲಾಗಬೇಕಿದೆ.ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ಮನೆಯಲ್ಲಿ ಸಂಸ್ಕೃತಿ ಮರೆಯಾಗುತ್ತಿದೆ.ಶ್ರೀಕೃಷ್ಣನ ಜನ್ಮದಿನಾಚರಣೆ ಹಬ್ಬದ ರೀತಿಯಲ್ಲಿ ಆಚರಿಸುವಂತೆ ಮನೆಯಲ್ಲೂ ಮಕ್ಕಳ ಹುಟ್ಟುಹಬ್ಬ ಆಚರಣೆಯಾಗಲಿ ಎಂದು ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಹೇಳಿದರು.
ಅವರು ಶನಿವಾರ ಶ್ರೀಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಶ್ರೀಕೃಷ್ಣ ಭಜನಾಮಂದಿರ ಹಾಗೂ ಗುತ್ತಿಗಾರು ಯುವಕ ಮಂಡಲ ಸಹಯೋಗದೊಂದಿಗೆ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.ಮನೆಯಲ್ಲಿ ಮಗುವಿನ ಹುಟ್ಟುಹಬ್ಬ ದೀಪ ಆರಿಸುವ, ಕೇಕ್ ಕತ್ತರಿಸುವ ಮೂಲಕ ಇಂದು ಆಚರಿಸಲಾಗುತ್ತಿದೆ.ಆದರೆ ಇಡೀ ಸಮಾಜಕ್ಕೆ ಸಂದೇಶ ನೀಡಿದ ಕೃಷ್ಣ ಪರಮಾತ್ಮನ ಜನ್ಮದಿನಾಚರಣೆಯನ್ನು ಸಾಮೂಹಿಕವಾಗಿ ಸಂಭ್ರಮದಿಂದ ಆಚರಿಸುವ ವೇಳೆ ಪ್ರತೀ ಮನೆಯಲ್ಲೂ ದೀಪ ಬೆಳಗಿಸುವ ಆಚರಣೆಗಳು ನಡೆಯಬೇಕಿದೆ.ಹೀಗಾಗಿ ಇಂತಹ ಆಚರಣೆಗಳು ಸಾಮೂಹಿಕ ಸಂದೇಶ ನೀಡಬೇಕು ಎಂದರು.
ಮುಖ್ಯಅತಿಥಿಯಾಗಿದ್ದ ನ್ಯಾಯವಾದಿ ವಿಶ್ವನಾಥ ದೇವಸ್ಯ ಮಾತನಾಡಿ, ಸಮಾಜದಲ್ಲಿ ಅಧರ್ಮಗಳು ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಧರ್ಮ ಸಂಸ್ಥಾಪನೆಗಾಗಿ ಅವತಾರ ಎತ್ತಿದ ಕೃಷ್ಣ ಪರಮಾತ್ಮ ಎಲ್ಲರ ಮನಸ್ಸಿನಲ್ಲೂ ಅವತಾರ ಎತ್ತಬೇಕಿದೆ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಿ.ಕೆ.ಶ್ರೀಧರ್ ಮಾತನಾಡಿ, ಸಮಾಜದಲ್ಲಿ ನೆಮ್ಮದಿ, ಶಾಂತಿ ಲಭ್ಯವಾಗಬೇಕಾದರೆ ಇಂತಹ ಸಾಮೂಹಿಕ ಆಚರಣೆಗಳ ಅಗತ್ಯವಿದೆ.ಶ್ರೀಕೃಷ್ಣ ಸಮಸ್ತರಿಗೂ ಆದರ್ಶ, ಇಂತಹ ಆದರ್ಶ ಪುರುಷರ ಬಗ್ಗೆ ಅವಹೇಳನ ಮಾಡುವುದನ್ನು ಖಂಡಿಸಲಾಗುತ್ತದೆ ಎಂದರು.
ಅತಿಥಿಗಳಾಗಿ ಗ್ರಾಪಂ ಸದಸ್ಯ ಭರತ್ ಕುಕ್ಕುಜೆ ಉಪಸ್ಥಿತರಿದ್ದರು.ವೇದಿಕೆಯಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ಪರಮೇಶ್ವರ ಗೌಡ ಪೈಕ, ಯುವಕ ಮಂಡಲ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಕಾರ್ಯದರ್ಶಿ ಲೋಹಿತ್ ಚೈಪೆ, ಶ್ರೀಕೃಷ್ಣ ಭಜನಾ ಮಂದಿರದ ಕಾರ್ಯದರ್ಶಿ ವೇಣುಗೋಪಾಲ ಬೊಳ್ಳೂರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಯುವಕಮಂಡಲ ಸದಸ್ಯ ಪೂರ್ಣಚಂದ್ರ ಪೈಕ ಸ್ವಾಗತಿಸಿ ಶ್ರೀಕೃಷ್ಣ ಭಜನಾ ಮಂದಿರದ ಸದಸ್ಯ ರವಿಪ್ರಕಾಶ್ ಬಿವಿ ವಂದಿಸಿದರು. ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.