ಬೆಳ್ತಂಗಡಿ : ತಾಲೂಕಿನ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಇನ್ನೂ ಅನೇಕ ಶಾಲೆಗಳ ಮೇಲ್ಛಾವಣಿ ಕುಸಿಯುವ ಹಂತದಲ್ಲಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ. ಲಾಯಿಲಾ ವಿಮುಕ್ತಿ ಕಚೇರಿಯಲ್ಲಿ ನಡೆದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ, ಸದಸ್ಯರ ಸಮಾವೇಶದಲ್ಲಿ ಪ್ರತಿನಿಧಿಗಳು ಮಾಧ್ಯಮದವರ ಜೊತೆ ತೋಡಿಕೊಂಡ ಸಂಕಷ್ಟಗಳು.
ಕಡಿರುದ್ಯಾವರ ಶಾಲೆಯಲ್ಲಿ 7 ತರಗತಿಗಳಿವೆ. ಇಬ್ಬರು ಶಿಕ್ಷಕರಿದ್ದರು. ಒಬ್ಬರಿಗೆ ಭಡ್ತಿಯಾಯಿತು. ಈಗ ಒಬ್ಬರೇ ಶಿಕ್ಷಕರು. 56 ಮಕ್ಕಳು. ವಿಮುಕ್ತಿಯಿಂದ ಒಬ್ಬ ಶಿಕ್ಷಕರನ್ನು ನೀಡಲಾಗಿದೆ. ಪುದುವೆಟ್ಟು ಮಿಯ್ಯಾರಿನಲ್ಲಿ 89 ಮಕ್ಕಳಿದ್ದರೂ ಶಿಕ್ಷಕರು ಇರುವುದು ಒಬ್ಬರೇ. ಅವರಿಗೂ ವಾರದಲ್ಲಿ ಮೂರು ದಿನ ಮೀಟಿಂಗ್ ಇರುತ್ತದೆ. ಪೆರ್ಲ ಬಪಾಡಿ ಶಾಲೆಯಲ್ಲಿ 63 ಮಕ್ಕಳಿದ್ದು ಬೇರೆ ಶಾಲೆಯಿಂದ ನಿಯೋಜಿತರಾದ ಶಿಕ್ಷಕರು ಮಾತ್ರ ಇರುವುದು. ಅವರಿಗೆ ವಾರದಲ್ಲಿ ಮೂರು ದಿನ ಮೀಟಿಂಗ್ ನೆವ. ನಡ ಮಂಜೊಟ್ಟಿಯ ಮೂಡಾಯಿಬೆಟ್ಟು ಶಾಲೆಯಲ್ಲಿ 36 ಮಕ್ಕಳಿದ್ದು ಶಿಕ್ಷಕರು ಇರುವುದು ಒಬ್ಬರೇ. ಕಲ್ಮಂಜದಲ್ಲಿ 16 ಮಕ್ಕಳಿರುವ ಶಾಲೆಯಲ್ಲಿ 5 ಶಿಕ್ಷಕರಿದ್ದು ಒಬ್ಬರು ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪುತ್ತಿಲ ಹೆರಾಜೆಯಲ್ಲಿ 1ರಿಂದ 7 ತರಗತಿಗಳಿದ್ದು 157 ಮಕ್ಕಳಿದ್ದಾರೆ. 4 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗಂಡಿಬಾಗಿಲಿನಲ್ಲಿ 3 ಶಿಕ್ಷಕರು, 82 ಮಕ್ಕಳಿದ್ದಾರೆ. ಕೊಲ್ಪಾಡಿಯಲ್ಲಿ 5 ತರಗತಿಗಳು, 38 ಮಕ್ಕಳೂ ಇದ್ದು 5 ವರ್ಷಗಳಿಂದ ನಿಯೋಜಿತ ಶಿಕ್ಷಕರನ್ನು ಅವಲಂಬಿಸಲಾಗಿದೆ. ಖಾಯಂ ಶಿಕ್ಷಕರ ನೇಮಕ ನಡೆದಿಲ್ಲ. ಇಂದಬೆಟ್ಟಿನಲ್ಲಿ 7 ತರಗತಿಗಳಿಗೆ ೩ ಶಿಕ್ಷಕರು. ಇದರಲ್ಲಿ ಒಬ್ಬರು ಅನಾರೋಗ್ಯದ ರಜೆ. ಇರುವ 2 ಶಿಕ್ಷಕರು 57 ಮಕ್ಕಳಿಗೆ ಬೋಧಿಸುತ್ತಾ ಇಲಾಖಾ ಮೀಟಿಂಗ್ಗಳಿಗೆ ಹಾಜರಾಗಬೇಕಾಗುತ್ತದೆ. ಎಷ್ಟೋ ಬಾರಿ ಶಾಲಾಭಿವೃದ್ಧಿ ಸಮಿತಿಯವರೇ ಹೋಗಿ ಶಾಲಾ ಬಾಗಿಲು ತೆರೆದದ್ದೂ ಇದೆ. ಸಿದ್ದಬಲು ಪರಾರಿ ಶಾಲೆಯಲ್ಲಿ 109 ಮಕ್ಕಳಿಗೆ 3 ಶಿಕ್ಷಕರು. ಇದರಲ್ಲಿ ಒಬ್ಬರು ನಿಯೋಜನೆ ಮೇರೆಗೆ ವಾರಕ್ಕೆ ಮೂರು ದಿನ ಬರುತ್ತಾರೆ. ಇನ್ನೊಬ್ಬರು ಮೀಟಿಂಗ್ಗೆ ಹೋದರೆ ಒಬ್ಬರೇ ಶಿಕ್ಷಕರು ಕಾರ್ಯಭಾರ ನಿರ್ವಹಿಸಬೇಕು ಎಂದು ಅಧ್ಯಕ್ಷರುಗಳು ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು.
ಹೆರಾಜೆ ಶಾಲೆಯಲ್ಲಿ ಸ್ಥಳ ಇದೆ, ಮೈದಾನ ಇಲ್ಲ. ಯಾರ್ಯಾರ ಬಯಲಲ್ಲಿ ಮಕ್ಕಳು ಆಟವಾಡಬೇಕು. ಮೂಡಾಯಿಬೆಟ್ಟು ಶಾಲೆ 1970 ರಲ್ಲಿ ಕಟ್ಟಿದ ಕಟ್ಟಡದಲ್ಲೇ ಇನ್ನೂ ಕಾರ್ಯನಿರ್ವಹಿಸತಿದೆ. ಛಾವಣಿ ಕುಸಿತದ ಆತಂಕದಲ್ಲಿದೆ. ಮುಂಡಾಜೆ ಚಾಮುಂಡಿನಗರ ಶಾಲೆಯನ್ನು ಊರವರೇ ದುರಸ್ತಿ ಮಾಡಿದ್ದಾರೆ. ಪೆರ್ಲಬಪಾಡಿಯಲ್ಲಿ ಮೂರು ಕೊಠಡಿಗಳಲ್ಲಿ 7 ತರಗತಿ ನಡೆಯಬೇಕು. ಹಾಗಾಗಿ ಶಾಲಾ ಜಗುಲಿಯಲ್ಲಿ ತರಗತಿ ನಡೆಯುತ್ತಿದೆ. ಬೆಳಾಲು ಮಾಯಾ ಶಾಲಾ ಅಕ್ಷರದಾಸೋಹ ಕೊಠಡಿ ನಿರ್ಮಾಣವಾಗಿ ವರ್ಷಕ್ಕೂ ಮೊದಲೇ ಸೋರುತ್ತಿದೆ. ಗಂಡಿಬಾಗಿಲು ಶಾಲೆಯ ಮಾಡು ಯಾವಾಗ ಕುಸಿಯುತ್ತದೆ ಎಂಬಂತಿದೆ. ಬಂಗಾಡಿ ಶಾಲೆಯಲ್ಲಿ ಬೆಂಚು ಡೆಸ್ಕುಗಳ ಕೊರತೆಯಿದೆ. ಇಂದಬೆಟ್ಟು ಹಾಗೂ ಕೊಯ್ಯೂರು ಶಾಲಾ ಬಳಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದೆ. ಗುರಿಪಳ್ಳ ಶಾಲಾ ಮೈದಾನದಲ್ಲಿ ವಿದ್ಯುತ್ಕಂಬ ನೆಡಲಾಗಿದೆ ಎಂಬ ದೂರುಗಳು ಬಂದವು.
ವಿಮುಕ್ತಿ ನಿರ್ದೇಶಕ ಫಾ| ವಿನೋದ್ ಮಸ್ಕರೇನಸ್, ಸಹ ನಿರ್ದೇಶಕ ಫಾ| ಅಮರ್ ಲೋಬೋ, ಶಿಕ್ಷಣ ಸಂಯೋಜಕಿ ನೀನಾ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.