ಕೇಂದ್ರ ಸರ್ಕಾರ ಜನಸಾಮಾನ್ಯರಿಗಾಗಿ ಹಲವು ಯೋಜನೆ, ಅಭಿಯಾನಗಳನ್ನು ಆರಂಭಿಸಿದೆ. ಡಿಜಿಟಲ್ ಇಂಡಿಯಾ ಮತ್ತಿತರ ಸೇವೆಗಳ ಮೂಲಕ ಮನೆಯಿಂದಲೇ ಆನ್ಲೈನ್ ಸೇವೆ ಪಡೆಯುವಂತೆ ಮಾಡಿದೆ. ಈ ಯೋಜನೆಗಳ ಜೊತೆಗೆ ಸ್ವಚ್ಛತಾ ಅಭಿಯಾನಗಳಾದ ಗಂಗಾ ಶುದ್ಧೀಕರಣ ಅಭಿಯಾನ, ಸ್ವಚ್ಛ ಭಾರತ ಅಭಿಯಾನಗಳನ್ನೂ ತಂದಿದೆ. ಇದರ ಪೂರ್ಣ ಲಾಭ ಪಡೆಯಬೇಕೆಂಬುದೇ ಸರ್ಕಾರದ ಆಶಯವಾಗಿದೆ.
ಸ್ವಚ್ಛ ಭಾರತಕ್ಕೆ ಚಾಲನೆ ನೀಡಿದ ಸ್ವಲ್ಪ ಸಮಯ ಎಲ್ಲಾ ರಾಜಕಾರಣಿಗಳು, ಮುಖ್ಯಮಂತ್ರಿಗಳು, ಎಂಪಿ, ಎಂಎಲ್ಎಗಳು ತಂಡೋಪತಂಡವಾಗಿ ಅಲ್ಲಲ್ಲಿ ಕ್ಯಾಮೆರಾ ಪೋಸ್ ನೀಡುತ್ತ ಅಭಿಯಾನದಲ್ಲಿ ಪಾಲ್ಗೊಂಡರು. ಇನ್ನು ಹಲವು ಸಂಘ, ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಭಾಗವಹಿಸಿದರು. ಆದರೆ ಜನರ ಮೇಲೆ ಇದು ಯಾವುದೇ ಪರಿಣಾಮ ಬೀರದಂತೆ ಕಾಣುತ್ತಿದೆ.
ದಿನಪತ್ರಿಕೆಗಳು, ಜಾಲತಾಣಗಳಲ್ಲಿ ಫೋಟೋ ಪ್ರಕಟಿಸುವ ತನಕ ನಾ ಮುಂದು, ತಾ ಮುಂದೆನ್ನುತ್ತಿದ್ದ ಸಂಘಟನೆಗಳು ಇವುಗಳಿಂದ ಹಿಂದೆ ಸರಿಯುತ್ತಿರುವಂತಿದೆ. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿರುವ ಶಾಲಾ ಶಿಕ್ಷಕರು, ಪೋಷಕರು ಈಗ ತಮಗೆ ಇದರ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಈ ಬಾರಿ ಮಳೆ ಕಡಿಯಾಗಿದ್ದು, ಜನರು, ರೈತರ ಅಳಲು, ಆತ್ಮಹತ್ಯೆ ಹೆಚ್ಚುತ್ತಿದೆ. ಮಳೆ ಬರಬೇಕೆಂದರೆ ಮೊದಲು ನಾವು ಪರಿಸರ ಪ್ರೇಮಿಗಳಾಗಬೇಕು. ಗಿಡ, ಮರಗಳನ್ನು ಬೆಳೆಸಿ, ಉಳಿಸಬೇಕು.
ನಾವು ಎದುರಿಸುತ್ತಿರುವ ಹಲವು ರೋಗ, ರುಜಿನಗಳಿಗೆ ನಾವೇ ಕಾರಣರು ಎಂಬ ಸಾಮಾನ್ಯ ಜ್ಞಾನವೂ ಇವರಗಿಲ್ಲ. ಜನರು ಕೇವಲ ತಮ್ಮ ಮನೆಗಳನ್ನು ಮಾತ್ರವಲ್ಲದೇ ಕಾಂಪೌಂಡ್ ಹೊರಗಡೆಯ ಪರಿಸರವೂ ಸ್ವಚ್ಛವಾಗಿರಬೇಕೆಂದು ಯೋಚಿಸಿದರೆ ಇಂತಹ ಅಭಿಯಾನಗಳ ಅಗತ್ಯವೂ ಇರದು. ನಮ್ಮ ಪರಿಸರ ನಾವೇ ಕಾಪಾಡಬೇಕು ಎಂಬ ಭಾವನೆ ಮೂಡುವುದು ಅತಿ ಮುಖ್ಯ. ರಸ್ತೆ ಬದಿ, ಚರಂಡಿಗಳು, ಎಲ್ಲೆಂದರಲ್ಲಿ ಬಿಸ್ಕೆಟ್, ಚಾಕಲೇಟ್, ಪಾನ್ ಮಸಾಲಾ ಮತ್ತಿತರ ಲಕೋಟೆಗಳನ್ನು ಎಸೆಯುವ ಬದಲು ಸಾರ್ವಜನಿಕ ಕಸದ ತೊಟ್ಟಿಗಳಲ್ಲೇ ಎಸೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಮಹಾನಗರಪಾಲಿಕೆ ನಮ್ಮ ಮನೆ ಬಾಗಿಲಿಗೆ ಬಂದು ಕಸ ಒಯ್ಯುತ್ತಿದ್ದರೂ ಜನರು ಇದರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಲಕ್ಷ ಸಂಖ್ಯೆಯಲ್ಲಿ ಶೌಚಾಲಯಗಳನ್ನು ಕಟ್ಟಿದರೂ ಅದರ ಸ್ವಚ್ಛತೆ ಕಾಪಾಡುವ ಹೊಣೆಗಾರಿಕೆ ಯಾರೂ ವಹಿಸುತ್ತಿಲ್ಲ. ಕಾರ್ಖಾನೆ, ಆಫೀಸುಗಳಲ್ಲಿಯ ಶೌಚಾಲಯಗಳದ್ದೂ ಇದೇ ಪರಿಸ್ಥಿತಿ.
ಮನೆಯ ಹಿರಿಯರು ಸ್ವಚ್ಛತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಬೇಕು. ಕೇವಲ ಒಂದೆರಡು ಬಾರಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ತಿಳಿ ಹೇಳಿದರೆ ಸಾಲದು. ಮಕ್ಕಳು ಸಂಪೂರ್ಣವಾಗಿ ಇದಕ್ಕೆ ಒಗ್ಗುವಂತೆ ಮಾಡಿದಾಗ ಮಾತ್ರ ಇದು ಸಾಧ್ಯ. ಮಕ್ಕಳನ್ನು ಒಮ್ಮೆಯೂ ಬಯ್ಯಬಾರದು, ಹೊಡೆಯಬಾರದು ಎಂದಲ್ಲಿ ಅವರಲ್ಲಿ ಒಳ್ಳೆಯ ಗುಣಗಳನ್ನು ರೂಪಿಸುವುದು ಕಷ್ಟ. ಮಕ್ಕಳಾಗಿದ್ದಾಗಲೇ ಸಮಾಜ ಮತ್ತು ಸ್ವಚ್ಛತೆಯ ಅರಿವು ಅವರಲ್ಲಿ ಮೂಡಬೇಕು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಂತೆ ಮಕ್ಕಳಿದ್ದಾಗ ಮಾಡದೇ ಇರುವ ಇಂಥ ಕಾರ್ಯ ವಯಸ್ಕರಾದಾಗ ಮಾಡಲು ಸಾಧ್ಯವಿಲ್ಲ. ವಯಸ್ಸಿಗೆ ಬಂದ ಹಿರಿಯರು ಪಾನ್ ಮಸಾಲಾ ತಿನ್ನುವುದು, ಸಿಗರೇಟ್, ಬೀಡಿ ಸೇದಿ ಅಲ್ಲಲ್ಲಿ ಉಗುಳಿದರೆ ಅದನ್ನು ಕಂಡ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಅವರನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತಾರೆ ಎಂಬುದನ್ನು ನಾವು ತಿಳಿಯಬೇಕು.
ಇಂತಹ ಕೆಟ್ಟ ಹವ್ಯಾಸಗಳಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದು ಮಾತ್ರವಲ್ಲದೇ ನಮ್ಮ ಹಾಗೂ ನಮ್ಮ ಹಿರಿಯರ, ತಂದೆ-ತಾಯಂದಿರ ಮರ್ಯಾದೆಗೂ ಧಕ್ಕೆ ಉಂಟಾಗುತ್ತದೆ ಎಂಬ ಅರಿವು ನಮಗಿರಬೇಕಾಗಿದೆ. ಆದ್ದರಿಂದ ಸ್ವಚ್ಛ ಭಾರತದ ಮತ್ತು ಉತ್ತಮ ಆರೋಗ್ಯದ ದೃಷ್ಟಿಯಿಂದ ನಾವು ಮೊದಲು ನಮ್ಮನ್ನು ತಿದ್ದುವುದು ಅಗತ್ಯವೆನಿಸಿದೆ.
ಈ ಎಲ್ಲವನ್ನು ನಾವು ಪಾಲಿಸುತ್ತಾ ಬಂದಲ್ಲಿ ಮಾತ್ರ ಸ್ವಚ್ಛ ಭಾರತದ ನಮ್ಮೆಲರ ಕನಸು ನನಸಾಗಲು ಸಾಧ್ಯ. ಆದ್ದರಿಂದ ನಾವೆಲ್ಲರೂ ಇದನ್ನು ಪಾಲಿಸುವುದು, ಪ್ರೋತ್ಸಾಹಿಸುವುದು ಬಹಳ ಅಗತ್ಯವಾಗಿದೆ. ಇದು 120 ಕೋಟಿ ಭಾರತೀಯರ ಆರೋಗ್ಯದ ಪ್ರಶ್ನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.