ಬೆಳ್ತಂಗಡಿ : ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣಕ್ಕೂ ಹೆಚ್ಚು ಆದ್ಯತೆ ನೀಡುವುದು ಅವಶ್ಯ. ಇದರಿಂದ ದೇಶ ಬೌದ್ಧಿಕವಾಗಿಯೂ ಬಲಿಷ್ಠವಾಗಬಲ್ಲುದು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತದ ವತಿಯಿಂದ ಹಳೆಕೋಟೆ ವಾಣಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ 69ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಿತಿ ಮೀರಿದ ಜನಸಂಖ್ಯೆಯು ಅಭಿವೃದ್ದಿ ಹೊಂದುತ್ತಿರುವ ದೇಶಕ್ಕೆ ಹಿನ್ನಡೆಯಾಗಬಲ್ಲುದು. ಜನಸಂಖ್ಯೆಯಲ್ಲಿ ನಾವು ಚೀನವನ್ನೂ ಹಿಂದಿಕ್ಕೂವ ಸ್ಥಿತಿಗೆ ಬರುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕು. ರೈತರು ಕೃಷಿಗೆ ಪಡೆದ ಸಾಲದಿಂದ ಆತ್ಮಹತ್ಯೆ ಮಾಡುತ್ತಿಲ್ಲ.
ಕೃಷಿಯೇತರ ಸಾಲದ ಹೊರೆಯಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಆಡಂಬರದ ಜೀವನವು ನಮ್ಮ ಬದುಕನ್ನು ಹಾಳುಮಾಡದಂತಿರಬೇಕು. ಹೀಗಾಗಿ ರೈತರು ಆತ್ಮಹತ್ಯೆಗೆ ಮುಂದಾಗದಂತೆ ಮನವೊಲಿಸುವ ಪ್ರಯತ್ನ ಎಲ್ಲಾ ಕಡೆಯಿಂದ ನಡೆಯಬೇಕು ಎಂದರು.
ಧ್ವಜವನ್ನರಳಿಸಿ ಮಾತನಾಡಿದ ತಹಸೀಲ್ದಾರ್ ಬಿ.ಎಸ್.ಪುಟ್ಟ ಶೆಟ್ಟಿ ಅವರು ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ಮಹಾಪುರುಷರನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅವರ ಹಾಕಿಕೊಟ್ಟ ಪಥದಲ್ಲಿ ಮುನ್ನಡೆದು ಉತ್ತಮ ನಾಗರಿಕರಾಗಬೇಕು ಎಂದರು.
ಪ್ರಧಾನ ಭಾಷಣ ಮಾಡಿದ ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ, ಸಾಹಿತಿ ಅರವಿಂದ ಚೊಕ್ಕಾಡಿ ಅವರು, ನಮ್ಮ ರಾಷ್ಟ್ರ ಧ್ವಜ ನಮ್ಮನ್ನು ಸ್ವಾಭಿಮಾನಿಗಳನ್ನಾಗಿ ತಲೆ ಎತ್ತಿ ಬದುಕಲು ಕಲಿಸಿಕೊಟ್ಟಿದೆ. ನಮ್ಮ ದೇಶಕ್ಕೆ ರಾಜರ, ಸೈನಿಕರ ಹಾಗೂ ಜನರ ಹೋರಾಟದ ಹಿನ್ನೆಲೆ ಇದೆ. ದೇಶ ಗಾಂಧೀಜಿಯವರ ಸಾತ್ವಿಕ ಹೋರಾಟದಲ್ಲಿ ರಾಜಕೀಯ ಗಾಳಿ ಇರಲಿಲ್ಲ. ಸಾಮಾಜಿಕ ಕಳಕಳಿ ಇತ್ತು. ಅವರು ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಹೊಂದಿದ್ದರು. ದೇಶದ ಇತಿಹಾಸವನ್ನು ಗಮನಿಸಿದಾಗ ಸ್ವಾತಂತ್ರ್ಯಕ್ಕಾಗಿ ಜಾತ, ಮತ, ಭೇದವಿಲ್ಲದೆ ಹೋರಾಟ ನಡೆದ ನಿದರ್ಶನಗಳಿವೆ. ಸಾಮರಸ್ಯವೇ ಈ ದೇಶದ ಜೀವಾಳ. ಈ ಸ್ವಾತಂತ್ರ್ಯ ಎಂಬುದು ನನ್ನದು ಎಂಬ ಭಾವನೆ ಬಂದಾಗ ನಮ್ಮೆಲ್ಲಾ ನಡವಳಿಕೆಗಳು, ಚಿಂತನೆಗಳು ಈ ದೇಶಕ್ಕೆ ಪೂರಕವಾಗಿರುತ್ತವೆ ಎಂದರು.
ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು ಪಟ್ಟಣ ಪಂ.ಅಧ್ಯಕ್ಷೆ ಮುಸ್ತಾರ್ ಜಾನ್ ಮೆಹಬೂಬ್, ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ವೃತ್ತ ನಿರೀಕ್ಷಕ ಬಿ.ಆರ್. ಲಿಂಗಪ್ಪ, ವೇಣೂರು ಎಸ್ಡಿಎಂ ಐಟಿಐ ನಿವೃತ್ತ ಪ್ರಾಚಾರ್ಯ ಎಂ.ಆರ್.ಜೈನ್, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮೊದಲು ಬೆಳ್ತಂಗಡಿ ಚರ್ಚ್ ಕೂಡು ರಸ್ತೆಯಿಂದ ಎಲ್ಲಾ ಇಲಾಖಾ ಅಧಿಕಾರಿಗಳು, ಪೋಲಿಸರು, ಗೃಹರಕ್ಷಕ ದಳ, ಎನ್.ಸಿ.ಸಿ., ಸ್ಕೌಟ್ಸ್ ಗೈಡ್ಸ್, ಬುಲ್ಬುಲ್ಸ್, ಕಬ್ಸ್, ಶಾಲಾಮಕ್ಕಳು ಹಾಗೂ ಸಾರ್ವಜನಿಕರು, ಯುವಕ ಯುವತಿ ಮಂಡಲಗಳು ಮೆರವಣಿಗೆಯಲ್ಲಿ ಸಾಗಿ ಬಂದರು. ನಂತರ ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ, ನೃತ್ಯ ನಡೆಯಿತು.
ತಾಲೂಕಿನ ಶೇ.ನೂರು ಫಲಿತಾಂಶವನ್ನು ಪಡೆದ 15 ಶಾಲೆಗಳನ್ನು ಗುರುತಿಸಲಾಯಿತು. ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಮಹಾಂತೇಶ್ ಸ್ವಾಗತಿಸಿದರು. ಪತ್ರಕರ್ತ ದೇವಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಸಿಡಿಪಿಒ ಪುಟ್ಟಸ್ವಾಮಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.