ಕೊರೋನಾ ಸಾಂಕ್ರಾಮಿಕ ಸಂಕಷ್ಟಕ್ಕೆ ಭಾರತವೂ ಸೇರಿದಂತೆ ಇಡೀ ವಿಶ್ವವೇ ತತ್ತರಿಸುತ್ತಿದೆ. ಕೊರೋನಾ ಒಂದನೇ ಅಲೆಗಿಂತಲೂ ಭೀಕರವಾಗಿ ಎರಡನೇ ಅಲೆ ಪ್ರಪಂಚದ ನಿದ್ದೆಗೆಡಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಕೊರೋನಾ ಸಂಕಷ್ಟ ದೇಶದಲ್ಲಿ ರೌದ್ರಾವತಾರ ತಾಳಿದೆ. ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹಲವು ನಿರ್ಣಯವನ್ನು ತೆಗೆದುಕೊಂಡಿದೆ. ಹಾಗೆಯೇ ಭಾರತದಲ್ಲಿ ನಿಯಂತ್ರಣ ತಪ್ಪಿರುವ ಕೊರೋನಾ ಸೋಂಕು ಹತೋಟಿಗೆ ತರುವ ನಿಟ್ಟಿನಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ನೆರವುಗಳನ್ನು ವಿಶ್ವದ ಹಲವು ರಾಷ್ಟ್ರಗಳು ನೀಡಿವೆ. ಆ ಮೂಲಕ ಭಾರತ ಅಪಾರ ನಂಬಿಕೆ ಹೊಂದಿರುವ ವಸುದೈವ ಕುಟುಂಬದ ಪರಿಕಲ್ಪನೆಯಲ್ಲಿ ವಿಶ್ವವೂ ನಂಬಿಕೆ ಇರಿಸಿರುವುದಕ್ಕೆ ಸಾಕ್ಷಿ ದೊರೆತಂತಾಗಿದೆ.
ಇದಕ್ಕೆ ಪೂರಕವಾಗಿ 80 ಟನ್ ದ್ರವೀಕೃತ ಆಕ್ಸಿಜನ್ ಸೇರಿ ವಿವಿಧ ಔಷಧಗಳನ್ನು ಒಳಗೊಂಡಿರುವ ಭಾರತೀಯ ನೌಕಾಪಡೆಯ ಹಡಗುಗಳು ವಿದೇಶಗಳಿಂದ ದೇಶದ ಹಲವು ಬಂದರುಗಳಿಗೆ ಬಂದು ತಲುಪಿವೆ. 20 ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕ್ಗಳು, 3,150 ಸಿಲಿಂಡರ್ಗಳು ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಔಷಧೀಯ ವಸ್ತುಗಳು ಭಾರತಕ್ಕೆ ಬಂದಿವೆ. ಈ ಬಗ್ಗೆ ಮಾತನಾಡಿರುವ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಾದ್ವಾಳ್, ಹಡಗುಗಳ ಮೂಲಕ ಬೇರೆ ದೇಶಗಳಿಂದ ಭಾರತಕ್ಕೆ ಬಂದ ವಸ್ತುಗಳಲ್ಲಿ 900 ಭರ್ತಿಯಾದ ಆಕ್ಸಿಜನ್ ಸಿಲಿಂಡರ್ಗಳು, 10 ಸಾವಿರ ರಾಪಿಡ್ ಆಂಟಿಜೆನ್ ಕೊರೋನಾ ಟೆಸ್ಟಿಂಗ್ ಕಿಟ್ಗಳು, 54 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳು, 450 ಪಿಪಿಇ ಕಿಟ್ಗಳು ಸೇರಿವೆ ಎಂದು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಯ ಐರಾವತ ಸಿಂಗಾಪುರದಿಂದ ವಿಶಾಕಪಟ್ಟಣ ಬಂದು ತಲುಪಿದೆ. ಇದರಲ್ಲಿ 20 ಮೆಟ್ರಿಕ್ ಟನ್ ಸಾಮರ್ಥ್ಯದ 8 ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕ್ಗಳು, ಇತರೆ ಔಷಧಿಗಳು ಸೇರಿವೆ. ಹಾಗೆಯೇ ಕತಾರ್ ಮತ್ತು ಕುವೈಟ್ನಿಂದ ಆಮ್ಲಜನಕ, ಔಷಧೀಯ ಪರಿಕರಗಳನ್ನು ಹೊತ್ತ ಹಡಗು ಮಂಗಳೂರು ಬಂದರನ್ನು ತಲುಪಿವೆ. ಇದರಲ್ಲಿ 40 ಮೆಟ್ರಿಕ್ ಟನ್ ಆಕ್ಸಿಜನ್, 400 ಆಮ್ಲಜನಕ ಸಿಲಿಂಡರ್, 47 ಆಮ್ಲಜನಕ ಕಾನ್ಸನ್ಟ್ರೇಟರ್ಗಳು ಭಾರತಕ್ಕೆ ಬಂದಿವೆ. ಜೊತೆಗೆ ಕತಾರ್ನಿಂದ ಮುಂಬೈ ಬಂದರಿಗೂ ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಅಗತ್ಯ ವಸ್ತುಗಳನ್ನು ತರಲಾಗಿದೆ. ಇದರಲ್ಲಿ 40 ಟನ್ ಆಮ್ಲಜನಕ ಭಾರತಕ್ಕೆ ಬಂದಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಆಪರೇಷನ್ ಸಮುದ್ರಸೇತು -2 ಭಾಗವಾಗಿ ವಿದೇಶಗಳಿಂದ ಔಷಧಗಳನ್ನು ದೇಶಕ್ಕೆ ತರಲು ನೌಕಾಪಡೆ ಕಳೆದ ವಾರ 9 ಹಡಗುಗಳನ್ನು ನೇಮಿಸಿದ್ದು, ಅದರ ಭಾಗವಾಗಿ ಇದೀಗ ಭಾರತದ ವಿವಿಧ ಬಂದರುಗಳಿಗೆ ಔಷಧೀಯ ವಸ್ತುಗಳನ್ನು ತಲುಪಿಸುವ ಕೆಲಸ ನಡೆದಿದೆ. ಜೊತೆಗೆ ದೇಶದಲ್ಲಿನ ಕೊರೋನಾ ಪರಿಸ್ಥಿತಿ ಪರಿಹರಿಸಿಕೊಳ್ಳುವ ಭಾರತದ ಪ್ರಯತ್ನಕ್ಕೆ ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನ್, ಆಸ್ಟ್ರೇಲಿಯಾ, ಐರ್ಲೆಂಡ್, ಬೆಲ್ಜಿಯಂ, ರೊಮೇನಿಯಾ, ಸಿಂಗಾಪುರ, ಸ್ವೀಡನ್, ನ್ಯೂಜಿಲ್ಯಾಂಡ್, ಕುವೈತ್ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳು ಅಗತ್ಯ ನೆರವು ನೀಡುವ ಭರವಸೆಯ ಜೊತೆಗೆ, ಭಾರತದ ಜೊತೆಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರಿದೆ. ಜೊತೆಗೆ ಒಗ್ಗಟ್ಟಿನಿಂದ ಮಾತ್ರವೇ ಇಂತಹ ಸಂಕಷ್ಟ ಎದುರಿಸಲು ಸಾಧ್ಯ ಎಂಬಂತೆ ಭಾರತದ ಈ ನಿರ್ಣಾಯಕ ಪರಿಸ್ಥಿತಿ ಎದುರಿಸುವಲ್ಲಿ ಕೈಜೋಡಿಸಿವೆ.
ಹಾಗೆಯೇ ವಿಶ್ವದ ಹಲವು ಗಣ್ಯರು, ಕ್ರೀಡಾಪಟುಗಳು, ಭಾರತದ ಹಲವು ಉದ್ಯಮಿಗಳು ಕೊರೋನಾ ಸಂಕಷ್ಟ ನಿವಾರಣಾರ್ಥ ಸರ್ಕಾರದ ಜೊತೆಗೆ ಕೈಜೋಡಿಸಿದ್ದಾರೆ. ಕೋಟಿ ಕೋಟಿ ಆರ್ಥಿಕ ನೆರವನ್ನು ನೀಡುವ ಮೂಲಕ ಕೊರೋನಾ ಸೋಂಕಿತರ ಚಿಕಿತ್ಸೆಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆರ್ಥಿಕ, ವೈದ್ಯಕೀಯ ನೆರವನ್ನು ನೀಡಿದ್ದಾರೆ. ಹಾಗೆಯೇ ಹಲವು ಸಂಘ ಸಂಸ್ಥೆಗಳೂ ಸಹ ಭಾರತದಲ್ಲಿನ ಈ ಪ್ರತಿಕೂಲ ಪರಿಸ್ಥಿತಿಯನ್ನು ಸರಿದೂಗಿಸುವ, ಸಮಸ್ಥಿತಿಗೆ ತರುವ ನಿಟ್ಟಿನಲ್ಲಿ ಅಗತ್ಯ ಆರ್ಥಿಕ, ವೈದ್ಯಕೀಯ, ಆಹಾರ ಸೇರಿದಂತೆ ಇನ್ನಿತರ ನೆರವು ನೀಡುವಲ್ಲಿಯೂ ಭಾರತ ಸರ್ಕಾರದ ಜೊತೆಗೆ ಕೈಜೋಡಿಸಿರುವುದನ್ನು ನಾವಿಲ್ಲಿ ಸ್ಮರಿಸಲೇ ಬೇಕು.
ಇನ್ನು ಕೊರೋನಾ ಮೊದಲನೇ ಅಲೆಯ ಸಂದರ್ಭದಲ್ಲಿ ಭಾರತ ಸಹ ವಿದೇಶಗಳಿಗೆ ವಸುದೈವ ಕುಟುಂಬಕಂ ಎಂಬ ನೆಲೆಗಟ್ಟಿನಲ್ಲಿ ಹಲವು ವೈದ್ಯಕೀಯ, ಆಹಾರ ನೆರವುಗಳನ್ನು ಪೂರೈಕೆ ಮಾಡಿರುವುದನ್ನು ನಾವಿಲ್ಲಿ ಗಮನಿಸಬೇಕು. ಕೊರೋನಾ ಲಸಿಕೆ ಸಿದ್ಧವಾದ ಸಂದರ್ಭದಲ್ಲಿ ವ್ಯಾಕ್ಸಿನ್ ಮೈತ್ರಿ ಹೆಸರಿನಲ್ಲಿ ವಿಶ್ವದ ಹಲವು ರಾಷ್ಟ್ರಗಳಿಗೆ ಭಾರತ ಹೆಗಲು ನೀಡುವ ಮೂಲಕ ಕೊರೋನಾ ನಿಯಂತ್ರಣಕ್ಕೆ ನೆರವಾಗಿತ್ತು. ಜೊತೆಗೆ ಇನ್ನಿತರ ವೈದ್ಯಕೀಯ ಸಾಮಗ್ರಿಗಳನ್ನು ಸಹ ವಿಶ್ವದ ಹಲವು ರಾಷ್ಟ್ರಗಳಿಗೆ ಒದಗಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಿತ್ತು.
ಇದೀಗ ಭಾರತ ಎರಡನೇ ಅಲೆಗೆ ನಲುಗುತ್ತಿರುವ ಸಂದರ್ಭದಲ್ಲಿ ವಿದೇಶಗಳು ಆಕ್ಸಿಜನ್, ವೆಂಟಿಲೇಟರ್, ಔಷಧಗಳು ಸೇರಿದಂತೆ ಇನ್ನಿತರ ನೆರವಿನ ಮಹಾಪೂರವನ್ನೇ ಮೋದಿ ಸರ್ಕಾರಕ್ಕೆ ನೀಡುತ್ತಿದ್ದಾರೆ. ಆ ಮೂಲಕ ವಿಶ್ವ ಕುಟುಂಬಕಂ ಎಂಬ ಸಂಕಲ್ಪಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಕೊರೋನಾ ಸಂಕಷ್ಟ ಇಡೀ ವಿಶ್ವವೇ ಒಂದು ಕುಟುಂಬ ಎಂಬುದನ್ನು ಮತ್ತೆ ಜಾಹೀರುಗೊಳಿಸಿದೆ. ಒಗ್ಗಟ್ಟಿನ ಮೂಲಕ ಮಾತ್ರವೇ ಕೊರೋನಾ ನಿವಾರಣೆ ಸಾಧ್ಯ ಎಂಬುದನ್ನು ಈ ನೆರವಾಗುವ ಪರಸ್ಪರತೆಯ ಮನೋಭಾವ ಮತ್ತೆ ಸಾಬೀತು ಪಡಿಸಿದೆ ಎಂದರೆ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.