ಮಂಗಳೂರು: ಸಾವಯವ ಕೃಷಿಯ ಹರಿಕಾರ ’ಕೃಷಿಋಷಿ’ ದಿವಂಗತ ಪುರುಷೋತ್ತಮರಾಯರ ನೆನಪಿನಲ್ಲಿ ಎಪ್ರಿಲ್ 11ರಂದು ಪುರುಷೋತ್ತಮ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಸಾವಯವ ಕೃಷಿ ಸಾಧಕರಾಗಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವಿಠಲಾಪುರ ಗ್ರಾಮದ ಆದಿಕೆರೆ ಮನೆತನದವರಾದ ಶ್ರೀ ರುದ್ರಪ್ಪ ಮತ್ತು ಶ್ರೀಮತಿ ರುದ್ರಮ್ಮ ಹಾಗೂ ಶ್ರೀ ವೀರಪ್ಪ ಮತ್ತು ಶ್ರೀಮತಿ ಚಂದ್ರಮ್ಮ ಇವರ ಪರಿವಾರವನ್ನು ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಬೌದ್ಧಿಕ ಪ್ರಮುಖರಾದ ಶ್ರೀ ಮುಕುಂದರವರು ಭಾಗವಹಿಸುವರು.
ಈ ಕಾರ್ಯಕ್ರಮವು ಮಂಗಳೂರಿನ ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 9.30ಗಂಟೆಗೆ ಸನ್ಮಾನಕ್ಕೆ ಭಾಜನರಾಗುತ್ತಿರುವ ಸಾಧಕ ಕುಟುಂಬದವರನ್ನು ಮಂಗಳೂರಿನ ಉರ್ವ ಮಾರುಕಟ್ಟೆ ಸಮೀಪವಿರುವ ಮಾರಿಗುಡಿಯಿಂದ ಮೆರವಣಿಗೆಯ ಮೂಲಕ ಸಂಘನಿಕೇತನಕ್ಕೆ ಕರೆತರಲಾಗುವುದು. ನಂತರ 10.30ಕ್ಕೆ ’ಪುರುಷೋತ್ತಮ ಸನ್ಮಾನ’ ಕಾರ್ಯಕ್ರಮ ಜರುಗಲಿದೆ. ಅಂದು ಸಂಘನಿಕೇತನದಲ್ಲಿ ಸಾವಯವ ಕೃಷಿ ಉತ್ಪನ್ನಗಳು, ಪುಸ್ತಕಗಳು, ದೇಸೀ ಬೀಜಗಳು, ಶ್ರಮ ಉಳಿಸುವ ಸಾಧನಗಳ ಪ್ರದರ್ಶಿನಿಯೂ ಇರುತ್ತದೆ.
ಈ ಕಾರ್ಯಕ್ರಮಕ್ಕೆ ಕೃಷಿ ಪ್ರಯೋಗ ಪರಿವಾರ, ಸಾವಯವ ಕೃಷಿ ಪರಿವಾರ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಸಾವಯವ ಕೃಷಿ ಪರಿವಾರಗಳು, ಮಂಗಳೂರಿನ ಸಾವಯವ ಗ್ರಾಹಕ ಪರಿವಾರ ಮತ್ತು ಕೇಶವ ಸ್ಮೃತಿ ಸಂವರ್ಧನ ಸಮಿತಿ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಈ ಕಾರ್ಯಕ್ರಮಕ್ಕೆ ರಾಜ್ಯದೆಲ್ಲೆಡೆಯಿಂದ ಸಾವಯವ ಕೃಷಿಕರು ಹಾಗೂ ಗ್ರಾಹಕರು ಆಗಮಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಂ. ಎಸ್. ಸುಬ್ಬರಾವ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಪ್ರತಿಷ್ಠಾನದ ಕಿರು ಪರಿಚಯ
ಸಾವಯವ ಕೃಷಿಯ ಹರಿಕಾರ ತೀರ್ಥಹಳ್ಳಿಯ ಕೃಷಿಋಷಿ ದಿ| ಪುರುಷೋತ್ತಮರಾಯರು ಸಾವಯವ ಕೃಷಿಯ ಪ್ರಯೋಗ, ಪ್ರಚಾರಾಂದೋಲನದ ನೇತೃತ್ವ ವಹಿಸಿಕೊಂಡವರು. ಅವರ ಪ್ರೇರಣೆಯಿಂದ ಸಾವಯವ ಕೃಷಿಯನ್ನು ಅಳವಡಿಸಿಕೊಂಡ ರೈತರ ಸಂಖ್ಯೆ ನೂರಾರು. 1998ರಲ್ಲಿ ವಿಧಿವಶರಾದ ಅವರು ತಮ್ಮ ಕರ್ಮಭೂಮಿ ’ಕೃಷಿನಿವಾಸ’ವನ್ನು ಸಾವಯವ ಕೃಷಿಯಲ್ಲಿ ಪ್ರಯೋಗ, ಪ್ರಚಾರ ಮತ್ತು ಶಿಕ್ಷಣ ಕಾರ್ಯಗಳಿಗಾಗಿ ಮೀಸಲಿಟ್ಟಿದ್ದಾರೆ. ಅವರ ಆಶಯದಂತೆ 1999ರಲ್ಲಿ ಅಸ್ತಿತ್ವಕ್ಕೆ ಬಂದ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ಕಳೆದ 16 ವರ್ಷಗಳಿಂದ ಸಾವಯವ ಕೃಷಿ ಮತ್ತು ಗ್ರಾಮವಿಕಾಸಗಳಿಗೆ ಪೂರಕವಾಗುವ ಪ್ರಯೋಗ, ಪ್ರಚಾರ, ಪ್ರಕಾಶನ ಹಾಗೂ ಶಿಕ್ಷಣ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.
ಪ್ರತಿಷ್ಠಾನವು ಪ್ರತಿವರ್ಷ ಪುರುಷೋತ್ತಮರಾಯರ ಸವಿನೆನಪಿನಲ್ಲಿ ಸಾವಯವ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕೃಷಿಕ ದಂಪತಿಗಳಿಗೆ ಅಥವಾ ಸಂಸ್ಥೆಗೆ ’ಪುರುಷೋತ್ತಮ ಸನ್ಮಾನ’ವನ್ನು ನೀಡಿ ಗೌರವಿಸುತ್ತಿದೆ.
’ಪುರುಷೋತ್ತಮ ಸನ್ಮಾನ’ಕ್ಕೆ ಭಾಜನರಾದವರ ಕಿರು ಪರಿಚಯ
ಕಳೆದ ಮೂವತ್ತು ವರ್ಷಗಳ ಪರಿಶ್ರಮದಿಂದ ಕಗ್ಗಾಡಿನಂತಿದ್ದ ಅಂಕುಡೊಂಕು ಕಲ್ಲು ಭೂಮಿಯನ್ನು ಫಲವತ್ತಾದ ತೋಟವನ್ನಾಗಿ ಮಾರ್ಪಡಿಸಿದ್ದು ಶ್ರೀ ರುದ್ರಪ್ಪ – ಶ್ರೀ ವೀರಪ್ಪ ಕುಟುಂಬದ ಮಹತ್ತರ ಸಾಧನೆ. ಮಣ್ಣನ್ನು ಗಟ್ಟಿಯಾಗಿ ನೆಚ್ಚಿ, ತಪಸ್ಸಿನಂತೆ ಅದನ್ನು ಹದಗೊಳಿಸಿದ ಇವರ ಸಾಧನೆ ರಾಜ್ಯದ ರೈತರಿಗೆ ಮಾದರಿ. ಆರಂಭದಲ್ಲಿ ಅನಿವಾರ್ಯತೆಯಿಂದ ಆರಂಭವಾದ ಸಾವಯವ ಪದ್ಧತಿಯ ಬೇಸಾಯ ಮುಂದೆ ಬದುಕಿನ ಒಂದು ಭಾಗವೇ ಆಗಿದ್ದು ವಿಶೇಷ. ಸಾಕಷ್ಟು ಹಣ- ಕೀರ್ತಿ ಸಂಪಾದನೆಯಾದ ನಂತರವೂ ಇವರ ಸಾವಯವ ನಿಷ್ಠೆ ಬದಲಾಗಲಿಲ್ಲ. ಇಂದು ಅವರ ಮನಸ್ಸು ಅತ್ತಿತ್ತ ಹೋಯ್ದಾಡದೆ ಸಾವಯವ ಪದ್ಧತಿಯನ್ನು ಪಟ್ಟಾಗಿ ಹಿಡಿದಿದೆ.
15 ಎಕರೆ ಭೂಮಿಯಲ್ಲಿ ಮನೆ ಬಳಕೆಗೆ, ಆದಾಯಕ್ಕೆ ಬೇಕಾದ ಬಹುಪಾಲು ಎಲ್ಲವೂ ಇದೆ. ಸಮಗ್ರ ಕೃಷಿ ಪದ್ಧತಿಯ ಯೋಜಿತ ಅನುಸರಣೆ ಈ ಕುಟುಂಬದ ವಿಶೇಷ. ಬಹುಹಂತದ ಬೆಳೆ ಪದ್ಧತಿ ಮತ್ತು ಸಮಗ್ರ ಕೃಷಿ ಪದ್ಧತಿಯನ್ನು ಜಾಣತನದ ಸಂಯೋಜನೆ ಕಂಡು ಬರುತ್ತದೆ. ಅಡಿಕೆ (3000 ಮರ), ತೆಂಗು (300 ಮರ), ಕೊಕೊ (4000 ಗಿಡ), ಕಾಳುಮೆಣಸು (1500 ಬಳ್ಳಿ), ಜಾಯಿಕಾಯಿ (250), ಬಾಳೆ (3000ಗಿಡ), ಕಬ್ಬು (8 ಗುಂಟೆ), ರಾಗಿ, ಶೇಂಗಾ, ಭತ್ತ, ಹೆಸರು, ಉದ್ದು, ಈರುಳ್ಳಿ, ಮಾವು, ಹುಣಸೆ, ಸಪೋಟಾ, ವೆಲ್ವೆಟ್ ಬೀನ್ಸ್, ಸಿಲ್ವರ್ಓಕ್, ತೇಗ, ಹೆಬ್ಬೇವು, ಬಿದಿರು ಇತ್ಯಾದಿ ಎದ್ದು ಕಾಣುತ್ತವೆ. ಮಳೆ ನೀರು ಸಂಗ್ರಹ, ಸಮಗ್ರ ಕೃಷಿ, ಬಹು ಹಂತದ ಬೇಸಾಯ, ತೋಟಗಾರಿಕೆ ಬೆಳೆಗಳು, ಅರಣ್ಯ ಕೃಷಿ, ಆಹಾರ ಬೆಳೆ, ಸಾವಯವ ಬೇಸಾಯದ ಚಿಂತನೆ, ದೇಸಿ ಪದ್ಧತಿಯ ಹೈನುಗಾರಿಕೆ, ಬೀಜ ಸಂರಕ್ಷಣೆ ಇವೆಲ್ಲವುಗಳಲ್ಲಿ ಈ ಕುಟುಂಬದ ಸಾಧನೆ ಎದ್ದು ಕಾಣುವಂತದ್ದು.
ವೈಜ್ಞಾನಿಕ ಆಲೋಚನೆ, ಕಠಿಣ ಪರಿಶ್ರಮ, ನಂಬಿದ ತತ್ವದ ಶ್ರದ್ಧೆಯ ಪಾಲನೆ ಈ ಕುಟುಂಬವನ್ನು ಇತರ ರೈತ ಕುಟುಂಬಗಳಿಗಿಂತ ಭಿನ್ನ ಎನ್ನುವಂತೆ ಮಾಡಿದೆ. ಅವಿಭಕ್ತ ಕುಟುಂಬದಲ್ಲಿ ಮನೆ ಮಂದಿಯೆಲ್ಲಾ ಕೂಡಿ ದುಡಿಯುತ್ತಾರೆ. ಕೊರಕಲು ಭೂಮಿಯನ್ನು ಬೆವರು ಬಸಿದು ಹದಗೊಳಿಸಿದ ರುದ್ರಪ್ಪ – ವೀರಪ್ಪ ಅವರ ಶ್ರಮಕ್ಕೆ ಮಕ್ಕಳು ಮನೆಯಲ್ಲಿಯೇ ಇದ್ದು ಹೊಲ- ತೋಟದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.