
ಬೆಂಗಳೂರು: ಯಾಕೆ ಕಲ್ಯಾಣ ಕರ್ನಾಟಕವು ಶಿಕ್ಷಕರಿಂದ, ಅಭಿವೃದ್ಧಿಯಿಂದ ವಂಚಿತವಾಗಿದೆ? ಮಕ್ಕಳಿಗೆ ಅನ್ಯಾಯ ಮಾಡುವುದೇಕೆ? ಸ್ವತಃ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರು ಗುಲ್ಬರ್ಗದಲ್ಲೇ ಕಳೆದ ವರ್ಷ ಈ ಪ್ರಶ್ನೆ ಎತ್ತಿದ್ದರು. ಕಲ್ಯಾಣ ಕರ್ನಾಟಕವು ಇಷ್ಟು ಹಿಂದುಳಿದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಬೆಳಕು ಚೆಲ್ಲಲು ಸಾಧ್ಯವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಕುರಿತ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಪ್ರಿಯಾಂಕ್ ಅವರು ಆರೆಸ್ಸೆಸ್ ವಿರುದ್ಧ ದ್ವೇಷದಿಂದ, ಹತಾಶರಾಗಿ ಅಥವಾ ಬಾಲಿಶತನದಿಂದ ಈ ಹೇಳಿಕೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು. ಇದನ್ನು ಅವಿವೇಕತನದ ಹೇಳಿಕೆ ಎಂದು ಕರೆಯಬಹುದು; ಜನರು ಗ್ರಾಮೀಣ ಭಾಷೆಯಲ್ಲಿ ತಲೆಹರಟೆ ಎಂದು, ಉಡಾಫೆ ಎಂದು ಕರೆಯುತ್ತಾರೆ ಎಂದರು.
ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ನ 100 ವರ್ಷದ ಸಾಧನೆ, ಸಮಾಜ ಕಟ್ಟುವ ನಿಟ್ಟಿನಲ್ಲಿ ಆರೆಸ್ಸೆಸ್ಸಿನ ಸಮರ್ಪಣಾ ಮನೋಭಾವ, ದೇಶ ಕಟ್ಟುವ ನಿಟ್ಟಿನಲ್ಲಿ ಆರೆಸ್ಸೆಸ್ಸಿನ ಪಾತ್ರ ಏನು?- ಇದ್ಯಾವುದನ್ನೂ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದೇ ಮಾತಿನ ಚಪಲಕ್ಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಆಗಬೇಕೆಂದು ಹೀಗೆ ಮಾತನಾಡಿದಂತಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ನಡೆದಿದ್ದು, ಅವರು ಇದರಲ್ಲಿ ಆಕಾಂಕ್ಷಿಯೇ ತಿಳಿದಿಲ್ಲ ಎಂದರು.
ಪ್ರಿಯಾಂಕ್ ಖರ್ಗೆ ಅವರು ಕಣ್ಣಿದ್ದೂ ಕುರುಡರಂತೆ, ಕಿವಿ ಇದ್ದೂ ಕಿವುಡರಂತೆ ನಟಿಸುತ್ತಿದ್ದಾರಾ ಎಂಬ ಅನುಮಾನ ನನ್ನದು ಎಂದರು. ಪ್ರಿಯಾಂಕ್ ಖರ್ಗೆ ಅವರು ಕಳೆದ ಎರಡೂವರೆ ವರ್ಷಗಳಲ್ಲಿ ತಾವು ಜವಾಬ್ದಾರಿ ಹೊತ್ತ ಇಲಾಖೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಮಾಹಿತಿ ಸಿಗುತ್ತಿಲ್ಲ. ಇಲಾಖೆ, ಇಲಾಖೆ ಸಾಧನೆ, ಸುಧಾರಣೆ ಕುರಿತು ಅವರು ಪತ್ರಿಕಾಗೋಷ್ಠಿ ನಡೆಸುವುದಿಲ್ಲ. ಆದರೆ, ಅವರು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ವಿಚಾರಗಳನ್ನಷ್ಟೇ ಚರ್ಚಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ತಮ್ಮ ತಂದೆಯವರಾದಿಯಾಗಿ ಗೌರವಾನ್ವಿತ ಮಲ್ಲಿಕಾರ್ಜುನ ಖರ್ಗೆಯವರು ಇವತ್ತು ಎಐಸಿಸಿ ಅಧ್ಯಕ್ಷರಾಗಿದ್ದಾರೆ. 50 ವರ್ಷಗಳಿಂದ ಇಡೀ ಗುಲ್ಬರ್ಗ, ಕಲ್ಯಾಣ ಕರ್ನಾಟಕದ ಹಿಡಿತ ಅವರ ಕೈಯಲ್ಲಿದೆ. ನಿರಂತರವಾಗಿ ಅಧಿಕಾರ ಅನುಭವಿಸುತ್ತ ಬರುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಎರಡನೇ ಬಾರಿಗೆ ಸಚಿವರಾಗಿದ್ದಾರೆ. ಇಷ್ಟು ಸುದೀರ್ಘವಾಗಿ ರಾಜಕೀಯ ಅನುಭವ ಇರುವ ಮತ್ತು ಎಲ್ಲ ರಾಜಕೀಯ ಸ್ಥಾನಮಾನ ಅನುಭವಿಸಿದ ಕುಟುಂಬದವರಾಗಿದ್ದು, ಗುಲ್ಬರ್ಗ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆ ಯಾಕೆ ಎಂಬುದಕ್ಕೆ ಪ್ರಿಯಾಂಕ್ ಅವರಿಂದ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಗುಲ್ಬರ್ಗ, ಕಲ್ಯಾಣ ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಯಾಕೆ ಅತಿ ಹೆಚ್ಚು ಹಿಂದುಳಿದಿದೆ ಎಂಬ ಬಗ್ಗೆ ಅವರು ಚಕಾರ ಎತ್ತುತ್ತಿಲ್ಲ. ಆರೋಗ್ಯ, ಅಭಿವೃದ್ಧಿ ವಿಚಾರದಲ್ಲಿ ಯಾವತ್ತೂ ಪ್ರಿಯಾಂಕ್ ಅವರು ಧ್ವನಿ ಎತ್ತುವುದಿಲ್ಲ ಎಂದು ಆಕ್ಷೇಪಿಸಿದರು. ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಡಾ. ಗೋವಿಂದ ರಾವ್ ಸಮಿತಿಯು ಪ್ರಾದೇಶಿಕ ಅಸಮಾನತೆಯ ಬಗ್ಗೆ ಮತ್ತೊಂದು ವರದಿ ನೀಡಿದೆ. ಪ್ರಿಯಾಂಕ್ ಅವರಿಗೆ ಅದರ ಪ್ರತಿ ಸಿಕ್ಕಿದೆಯೇ? ಅದನ್ನು ಓದಲು ಸಮಯ ಸಿಕ್ಕಿದೆಯೇ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.
ಅದರ ಪ್ರತಿಯನ್ನು ನಾನು ಕಳುಹಿಸಿಕೊಡುವೆ ಎಂದು ತಿಳಿಸಿದರು. ರಾಜ್ಯದ 59 ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳೆಲ್ಲವೂ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲೇ ಇವೆ ಎಂದು ವರದಿ ತಿಳಿಸಿದ್ದಾಗಿ ಗಮನ ಸೆಳೆದರು. ಇದರ ಕುರಿತು ಪ್ರಿಯಾಂಕ್ ಖರ್ಗೆ ಅವರು ಸದನದಲ್ಲಿ ಅಥವಾ ಇವತ್ತು ನಾಳೆ ಪತ್ರಿಕಾಗೋಷ್ಠಿ ಮಾಡಿ ಈ ಪ್ರದೇಶಗಳ ಜನರ ಗಮನಕ್ಕೆ ತರಲು ಸಾಧ್ಯವಾದೀತೇ ಎಂದು ಕೇಳಿದರು.
ಹಿಂದುಳಿದಿರುವಿಕೆ ಪ್ರಮಾಣ ಶೇ 65ರಿಂದ ಶೇ 72.8ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿಯಾಗಿದ್ದರು. 8 ವರ್ಷ ಕಾಂಗ್ರೆಸ್ ಸರಕಾರವೇ ಇತ್ತು. ನೀವೂ ಸಚಿವಸಂಪುಟದ ಒಳ್ಳೆಯ ಇಲಾಖೆಯ ನೇತೃತ್ವ ವಹಿಸಿದ ಸದಸ್ಯರಾಗಿದ್ದಿರಿ ಅಲ್ಲವೇ ಎಂದು ಕೇಳಿದರು.
ಪ್ರಿಯಾಂಕ್ ಖರ್ಗೆ ಅವರಿಗೆ ಗುಲ್ಬರ್ಗ ಜಿಲ್ಲೆ ಬಗ್ಗೆ ಅವಲೋಕನ ಮಾಡುವ ಸಮಯವೂ ಇಲ್ಲ; 12 ದಿನಗಳಿಂದ 9 ಬಡಾವಣೆಗಳಲ್ಲಿ ಕುಡಿಯುವ ನೀರನ್ನು ಕೊಡಲು ಸಾಧ್ಯವಾಗಿಲ್ಲ ಎಂದು ಪತ್ರಿಕಾ ತುಣುಕನ್ನು ಪ್ರದರ್ಶಿಸಿದರು. ಉಸ್ತುವಾರಿ ಸಚಿವ ಪ್ರಿಯಾಂಕ್ ಅವರು ಜಿಲ್ಲಾ ಅಭಿವೃದ್ಧಿ ಸಭೆಯನ್ನು ಕಳೆದ ಎರಡೂವರೆ ವರ್ಷದಲ್ಲಿ ಕರೆದಿಲ್ಲ ಎಂದು ಆಕ್ಷೇಪಿಸಿದರು. ಎಷ್ಟು ಕೆಡಿಪಿ ಸಭೆ ಮಾಡಿದ್ದೀರೆಂದು ಬೆಳಕು ಚೆಲ್ಲಿ. ಅದಕ್ಕೂ ಅವರಿಗೆ ಸಮಯ ಸಿಕ್ಕಿಲ್ಲ. ನೀವು ಉದ್ದುದ್ದ ಭಾಷಣ ಮಾಡುತ್ತೀರಿ. ಆರೋಪ, ಅಪಪ್ರಚಾರ ಮಾಡುತ್ತೀರಿ ಎಂದು ಟೀಕಿಸಿದರು.
ಶಿವಮೊಗ್ಗದ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಅವರು ಸವಾಲು ಹಾಕಿದ್ದಾರೆ. 50 ವರ್ಷದಲ್ಲಿ ಕಲ್ಯಾಣ ಕರ್ನಾಟಕ ಯಾವ ರೀತಿ ಅಭಿವೃದ್ಧಿ ಆಗಿದೆ? ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಎಷ್ಟು ಅಭಿವೃದ್ಧಿ ಆಗಿದೆ? ಬಿಜೆಪಿ ಸರಕಾರವು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಗುಲ್ಬರ್ಗ ಜಿಲ್ಲೆಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಬ ಬಗ್ಗೆ ಚರ್ಚಿಸಲು ನಾನು ಸಿದ್ಧ ಎಂದು ಸವಾಲು ಹಾಕಿದರು.
ಸುದೀರ್ಘ ಆಡಳಿತ ನಡೆಸುತ್ತ ಇದ್ದೀರಿ. ಅನುಭವೂ ನಿಮಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಅವಕಾಶ ಲಭಿಸಿದೆ. ಹುಡುಗಾಟಿಕೆ ಮಾತನ್ನು ಬದಿಗಿಡಿ; ಅವಕಾಶ ಬಳಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಚಿಂತನೆ ಮಾಡಿ ಎಂದು ಆಗ್ರಹಿಸಿದರು. ಇಲ್ಲವೇ ನಾಗಪುರಕ್ಕೆ ಆರು ತಿಂಗಳು ಬಂದು ಆರೆಸ್ಸೆಸ್ ಕುರಿತು ಅಧ್ಯಯನ ಮಾಡಿ ಎಂದು ಕಿವಿಮಾತು ಹೇಳಿದರು. ಆಗಲೂ ನಿಮಗೆ ಮನವರಿಕೆ ಆಗದಿದ್ದರೆ ಆಮೇಲೆ ಚರ್ಚೆ ಮಾಡೋಣ ಎಂದು ತಿಳಿಸಿದರು.
ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿದರೆ ಅಧಿಕಾರಕ್ಕೆ ಬಂದುದು ಸಾರ್ಥಕ ಆಗಲಿದೆ. ಅಭಿವೃದ್ಧಿ ಮಾಡಿದರೆ, ಪಂಚ ಗ್ಯಾರಂಟಿಗಳು ಜನರನ್ನು ತಲುಪಿಸದ್ದರೆ ನೀವು ಇಷ್ಟರಲ್ಲೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುತ್ತಿದ್ದಿರಿ. ಚುನಾವಣೆ ನಡೆಸಲು ಧೈರ್ಯ ಇಲ್ಲ. ಪುಗ್ಸಟ್ಟೆ ಮಾತನಾಡುತ್ತೀರಾ ಎಂದು ಕೇಳಿದರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ನಂದೀಶ್ ರೆಡ್ಡಿ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಬುದ್ನ ಸಿದ್ದಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ನಿರಂಜನ್ ಕುಮಾರ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


