ಕನ್ನಡ ಸಾಹಿತ್ಯಕ್ಕೆ ಸಾವಿರ ವರ್ಷಗಳಿಗೂ ಮಿಕ್ಕ ಒಂದು ಪರಂಪರೆ ಇದೆ. ಈ ಪರಂಪರೆಯಲ್ಲಿ ಸಾಹಿತ್ಯದ ರೂಪ, ಭಾಷೆ, ವಸ್ತು ವಿನ್ಯಾಸದಲ್ಲಿ ಹಲವು ನೆಲೆಯ ಪಲ್ಲಟಗಳನ್ನು ಕಂಡಿದ್ದೇವೆ. ಸಾಹಿತ್ಯ ಕೃತಿಗಳು ತನ್ನ ಕಾಲದ ಹಲವು ಬಗೆಯ ವಿಚಾರಗಳಿಂದ ರೂಪ ಪಡೆದಿದ್ದು, ಸಮಗ್ರವಾಗಿ ವಿವೇಚಿಸಿದಾಗ ಅದೊಂದು ಮಾನವ ಸಮಾಜದ ಸಂಸ್ಕೃತಿಯ ಕಥನವೇ ಆಗಿದೆ. ಸಮಾಜದಲ್ಲಿರುವ ಚೈತನ್ಯ ಈ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಬಹು ದೊಡ್ಡ ಪಾಲನ್ನು ನೀಡಿರುತ್ತದೆ.ಕನ್ನಡದಲ್ಲಿ ಈ ಸಾಹಿತ್ಯ ಪರಂಪರೆ ಇಷ್ಟು ದೀರ್ಘವಾಗಿದ್ದಾಗಲೂ ಸಾಹಿತ್ಯಕ್ಕೆ ಆಕ್ಷರಿಕ ರೂಪದ ಕವಿ-ಕಾಲದ ನಿಖರತೆಯುಳ್ಳ ಒಂದು ಚರಿತ್ರೆಯನ್ನು ಕಟ್ಟುವ ಪ್ರಯತ್ನ ಬಹು ಕಾಲದ ನಂತರ ನಡೆದಿರುವುದನ್ನು ಗಮನಿಸಬಹುದು. ಸಾಹಿತ್ಯ ಎಂಬ ಭಾವ ನಿರ್ಮಿತಿಯನ್ನು ಸಾಹಿತ್ಯ ಚರಿತ್ರೆ ಎಂಬ ವೈಚಾರಿಕ ಆಕೃತಿಯ ನಿರ್ಮಾಣಕ್ಕಾಗಿ ಬಳಸಿಕೊಂಡದ್ದು ಇತ್ತೀಚಿನ ಬೆಳವಣಿಗೆ.
ಸಾಹಿತ್ಯ ಚರಿತ್ರೆ ಒಂದು ಜ್ಞಾನ ರೂಪ. ಸಾಹಿತ್ಯ ಚರಿತ್ರ್ರೆಯ ಮೂಲಕ ಒಂದು ಕಾಲದ ಸಾಹಿತ್ಯ ತನ್ನ ಸಮಕಾಲೀನತೆಯನ್ನು ಪುನರ್ ಪಡೆದುಕೊಳ್ಳುತ್ತದೆ. ಹೀಗೆ ಮರು ಕಟ್ಟುವ ಬಗೆ, ಸಾಹಿತ್ಯ ಚರಿತ್ರಕಾರ ಸಾಹಿತ್ಯ ಚರಿತ್ರೆಯನ್ನು ಗ್ರಹಿಸಿದ ಆಧಾರದಲ್ಲಿ ರೂಪ ಪಡೆಯುತ್ತದೆ. ಭಾಷಿಕ ರಚನೆಯಾದ ಸಾಹಿತ್ಯವನ್ನು ಚರಿತ್ರೆಯ ಮಾದರಿಯಲ್ಲಿ ಕಾಲಾನುಕ್ರಮಣಿಕೆಯಲ್ಲಿ ಕಟ್ಟುವಾಗ ಆ ಚರಿತ್ರೆಯಲ್ಲಿ ಒಬ್ಬ ಕವಿ, ಒಂದು ಕೃತಿ, ಒಂದು ನಿರ್ದಿಷ್ಟ ‘ಅವಕಾಶ’ವನ್ನು ಪಡೆಯುತ್ತದೆ. ಈ ‘ಅವಕಾಶ’ ಎನ್ನುವುದು ಕೃತಿಯಿಂದ ಕೃತಿಗೆ, ಕವಿಯಿಂದ ಕವಿಗೆ ಬದಲಾಗುತ್ತಾ ಹೋಗುತ್ತದೆ. ಸಾಹಿತ್ಯ ಚರಿತ್ರಕಾರ ಆ ಕೃತಿ ಅಥವಾ ಕವಿಯನ್ನು ಹೇಗೆ ಗ್ರಹಿಸಿದ್ದಾರೆ ಎನ್ನುವ ಆಧಾರದಲ್ಲಿ ಈ ಅವಕಾಶ ಬದಲಾಗುತ್ತಾ ಹೋಗುತ್ತದೆ. ಆ ಕವಿ ಅಥವಾ ಕೃತಿ ಮುಖ್ಯ ಎಂದು ಪರಿಗಣಿಸಿದರೆ ಸಿಗುವ ಅವಕಾಶ ಮತ್ತು ಸಾಧಾರಣ ಎಂದು ಪರಿಗಣಿಸಿದಾಗ ಸಿಗುವ ಅವಕಾಶದಲ್ಲಿ ವ್ಯತ್ಯಾಸ ಇದೆ.
ಸಾಮಾನ್ಯವಾಗಿ ಸಾಹಿತ್ಯ ಚರಿತ್ರೆಯ ಕಟ್ಟುವಿಕೆಯನ್ನು ಅದರ ಆಂತರ್ಯವನ್ನೇ ಪ್ರವೇಶಿಸಿ ನೋಡುವುದಾದರೆ, ಈ ಸಾಹಿತ್ಯ ಚರಿತ್ರೆಯ ಮಾದರಿಗಳು, ಒಂದು ನಿರ್ದಿಷ್ಟ ಕಾಲಮಾನದಿಂದ ಹೊರಟು ಮತ್ತೆ ಒಂದು ನಿರ್ದಿಷ್ಟ ಕಾಲಮಾನದಲ್ಲಿ ಮುಕ್ತಾಯಗೊಳ್ಳುವ ಸ್ವರೂಪದಲ್ಲಿದೆ. ಮುಂದೆ ಇನ್ನೊಂದು ಮಾದರಿ ಒಬ್ಬ ಪ್ರಮುಖ ಕವಿಯು ಬಂದು ಹೋದ ನಂತರ ಆತನ ಪ್ರಭಾವಲಯದಲ್ಲಿ ಮುಂದಿನ ಅನೇಕ ದಶಕ ಅಥವಾ ಶತಮಾನವೇ ಹೇಗೆ ಸೇರಿಕೊಂಡಿದೆ ಎಂಬುದನ್ನು ಹೇಳುವ ಬಗೆಯನ್ನೂ ಕಾಣಬಹುದು.
ಸಾಹಿತ್ಯ ಚರಿತ್ರೆಯ ಸ್ವರೂಪವನ್ನು ಕುರಿತಂತೆ ಡಿ.ಎಲ್ ನರಸಿಂಹಾಚಾರ್ಯ ಹೀಗೆ ಹೇಳುತ್ತಾರೆ “ಒಂದು ಭಾಷೆಯಲ್ಲಿ ಹುಟ್ಟಿರುವ ಸಾಹಿತ್ಯ ರಾಶಿಯ ಅಭ್ಯಾಸವನ್ನು ಅಮೂಲಾಗ್ರವಾಗಿ ಕೈಕೊಳ್ಳುವವರು ಒಂದು ಕ್ರಮವನ್ನು ಹಿಡಿಯಬೇಕಾಗುತ್ತದೆ. ಆ ಸಾಹಿತ್ಯ ಹೇಗೆ ಆರಂಭವಾಗಿ ಕಾಲಕಾಲಕ್ಕೆ ಹೇಗೆ ಬೆಳೆದು ಬಂದಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕು. ಕಾಲಧರ್ಮಕ್ಕನುಗುಣವಾಗಿ ಅದರಲ್ಲಿ ಆಗಿರುವ ವ್ಯತ್ಯಾಸಗಳು, ಅವಕ್ಕೆ ಕಾರಣಗಳು, ಅವುಗಳಿಂದ ಸಾಹಿತ್ಯ ಕಲೆಗೆ ಆಗಿರುವ ಪ್ರಯೋಜನಗಳು ಮುಂತಾದ ಅನೇಕ ವಿಷಯಗಳು ವಿಚಾರಕ್ಕೆ ಒಳಪಡುತ್ತವೆ. ಸಾಹಿತ್ಯವನ್ನು ಸೃಷ್ಟಿಸಿರುವ ಕವಿಗಳ ಕಾಲ ಮತ್ತು ಅವು ರಚಿತವಾದ ಸಂದರ್ಭ ಸನ್ನಿವೇಶಗಳು ಇವುಗಳ ಪರಿಜ್ಞಾನ ಸಾಹಿತ್ಯ ಚರಿತ್ರೆಗೆ ಮೂಲಾಧಾರ.” ಸಾಹಿತ್ಯ ಚರಿತ್ರೆಯ ಸ್ವರೂಪವನ್ನು ಬಹಳ ನಿರ್ದಿಷ್ಟವಾಗಿ, ಸ್ಪಷ್ಟವಾಗಿ ಇಲ್ಲಿ ಗುರುತಿಸಲಾಗಿದೆ. ಮುಖ್ಯವಾಗಿ ಇಲ್ಲಿ ಗಮನಿಸಬೇಕಾದುದು ಒಂದು ಸಾಹಿತ್ಯ ಪರಂಪರೆಯ ವಿಕಾಸವನ್ನು ಗುರುತಿಸುವುದು. ಸಾಹಿತ್ಯ ಚರಿತ್ರೆಯ ಬಹುಮುಖ್ಯವಾದ ಒಂದು ಕಾರ್ಯ ಇದು. ಕನ್ನಡದಲ್ಲಿ ಬಂದ ಬೇರೆ ಬೇರೆ ಸಾಹಿತ್ಯ ಚರಿತ್ರೆಯ ಕೃತಿಗಳು ಈ ಸಾಹಿತ್ಯ ಚರಿತ್ರೆಯ ಸ್ವರೂಪವನ್ನು ಭಿನ್ನಭಿನ್ನವಾಗಿ ಪರಿಕಲ್ಪಿಸಿಕೊಂಡಿದೆ. ಹೀಗೆ ಭಿನ್ನವಾಗಿ ಆಲೋಚಿಸಿದ್ದರ ಪರಿಣಾಮವಾಗಿಯೇ ಅನೇಕ ಮಾದರಿಯ ಸಾಹಿತ್ಯ ಚರಿತ್ರೆಯ ಸಂಪುಟಗಳು ಬಂದಿದೆ. ಬಹಳ ಪ್ರಾರಂಭದಲ್ಲಿ ಬಂದ ಕಿಟ್ಟೆಲ್ಲರ ‘ Old canaries literature ’ ನಿಂದ ತೊಡಗಿ, ರಂ. ಶ್ರೀ ಮುಗಳಿ, ಬೆಂಗಳೂರು ವಿ.ವಿ ಸಂಪುಟ, ಮೈಸೂರು ವಿ.ವಿ. ಸಂಪುಟ, ಡಾ| ವೆಂಕಟಸುಬ್ಬಯ್ಯನವರ ಬರವಣಿಗೆ, ಎಲ್.ಎಸ್ ಶೇಷಗಿರಿರಾವ್ ಮೊದಲಾದವರ ಬರವಣಿಗೆಯವರೆಗೂ ಸಾಹಿತ್ಯ ಚರಿತ್ರೆಯ ಸ್ವರೂಪವನ್ನು ವಿಶ್ಲೇಷಿಸಿದ್ದಾರೆ.
ಸಾಹಿತ್ಯ ಚರಿತ್ರೆಯು ಸಾಹಿತ್ಯದ ಬೆಳವಣಿಗೆಯನ್ನು ಗ್ರಹಿಸುವಾಗ ಸಾಹಿತ್ಯ ರೂಪ ಮತ್ತು ವಸ್ತುವಿನಲ್ಲಾಗುವ ಬದಲಾವಣೆಯನ್ನು ಚರಿತ್ರೆಕಾರ ತನ್ನ ಗ್ರಹಿಕೆಗೆ ತೆಗೆದುಕೊಂಡು ನಿರೂಪಿಸಬೇಕು. ಈ ರೂಪ ಮತ್ತು ವಸ್ತುವಿನ ಬದಲಾವಣೆ ಕೇವಲ ಆಕಸ್ಮಿಕ ಆಗಿರುವುದಿಲ್ಲ “ಸಾಹಿತ್ಯ ಚರಿತ್ರೆಯಲ್ಲಿ ಗಮನಾರ್ಹವಾದ ಮತ್ತೊಂದು ಮುಖ್ಯಾಂಶ ಕಾಲಕಾಲಕ್ಕೆ ಮಾರ್ಪಡುವ ಅಭಿರುಚಿ ವಿಶೇಷಗಳು. ಜನರಲ್ಲೂ, ಕವಿಗಳಲ್ಲೂ ಉತ್ತಮವಾದ ಅಭಿರುಚಿ ನೆಲೆಸಿದ್ದರೆ, ಅವರಿಂದ ರಚಿತವಾದ ಕಾವ್ಯಗಳೂ ಉತ್ಕøಷ್ಟವಾಗಿರುತ್ತದೆ. ಒಂದು ಕಾಲದಲ್ಲಿ ರಸಕ್ಕೆ ಪ್ರಾಧಾನ್ಯವಿದ್ದರೆ ಮತ್ತೊಂದು ಕಾಲದಲ್ಲಿ ರೀತಿಗೆ ಪ್ರಧಾನತೆ ಬಂದು ಬಿಡುತ್ತದೆ. ಒಂದು ಕಾಲದವರಿಗೆ ವೀರರಸ ಇಷ್ಟವಾಗಿದ್ದರೆ ಇನ್ನೊಂದು ಕಾಲದವರಿಗೆ ಶೃಂಗಾರದಲ್ಲಿ ಮೆಚ್ಚುಗೆ ಉಂಟಾಗುತ್ತದೆ. ಹತ್ತನೆಯ ಶತಮಾನದ ಕನ್ನಡಿಗರಿಗೆ ವೀರರಸಕ್ಕಾಗರವಾದ ಕಾವ್ಯಗಳು ಇಷ್ಟವಾಗಿದ್ದರೆ, ಹನ್ನೊಂದನೆಯ ಶತಮಾನದವರಿಗೆ ಶಾಸ್ತ್ರ ಕಾವ್ಯಗಳಲ್ಲಿ ಹೆಚ್ಚು ಆದರವುಂಟಾಗಿತ್ತು. ಹೀಗೆ ಕಾಲಕಾಲಕ್ಕೆ ನಡೆಯುವ ಅಭಿರುಚಿ ವ್ಯತ್ಯಾಸಗಳಿಗೆ ಕಾರಣಗಳೇನೆಂಬುದನ್ನು ಅವು ಹೇಗೆ ಸಾಹಿತ್ಯದಲ್ಲಿ ನಾನಾ ರೀತಿಯಾದ ರಚನೆಗಳಿಗೆ ಇಂಬು ಕೊಟ್ಟಿವೆಂಬುದನ್ನೂ ಸಾಹಿತ್ಯ ಚರಿತ್ರೆ ಕೂಲಂಕಷವಾಗಿ ವಿಮರ್ಶಿಸಿ ಕಂಡು ಹಿಡಿಯಲು ಪ್ರಯತ್ನಿಸಬೇಕು.” ಎಂದು ಡಿ.ಎಲ್. ನರಸಿಂಹಾಚಾರ್ಯರು ಅಭಿಪ್ರಾಯಪಡುತ್ತಾರೆ.
ಹಾ.ಮಾ. ನಾಯಕರು ಸಾಹಿತ್ಯ ಚರಿತ್ರೆಕಾರನ ಕರ್ತವ್ಯವನ್ನು ಹೇಳುತ್ತಾ “ಎಲ್ಲ ಚರಿತ್ರೆಕಾರರೂ ತಮ್ಮ ತಮ್ಮ ವಿಷಯಗಳ ಚರಿತ್ರೆಯನ್ನು ಬರೆಯುವಾಗ ಆ ವಿಷಯಗಳಲ್ಲಿ ಅಭಿವ್ಯಕ್ತಿಗೊಳ್ಳುವ ಒಂದು ಸಮಾಜದ ಜನಾಂಗದ ಚರಿತ್ರೆಯನ್ನು ಹೇಳುತ್ತಾರೆ. ಹಾಗೆಯೇ ಸಾಹಿತ್ಯ ಚರಿತ್ರೆಯಲ್ಲಿಯೂ ಆಯಾ ಸಾಹಿತ್ಯದಲ್ಲಿ ಪ್ರಕಟಗೊಳ್ಳುವ ಸಮಾಜ ಜೀವನದ, ರಾಷ್ಟ್ರ ಜೀವನದ ಚರಿತ್ರೆ ರೂಪುಗೊಳ್ಳುತ್ತದೆ. ಸಾಹಿತ್ಯ ಚರಿತ್ರೆಕಾರನ ಆದ್ಯ ಕರ್ತವ್ಯ ತಾನು ಆಯ್ದುಕೊಂಡ ಕಾಲ ದೇಶದ ಸಾಹಿತ್ಯ ಕೃತಿಗಳನ್ನು ಕಂಡು ಹಿಡಿದು ಅವುಗಳ ಸ್ವರೂಪವನ್ನು ವರ್ಣಿಸುವುದು” ಎನ್ನುತ್ತಾರೆ.
ಸಾಹಿತ್ಯ ಚರಿತ್ರೆ ಕೇವಲ ಆಯಾ ಅವಧಿಯ ಕವಿ-ಕೃತಿಗಳ ವಿವರವಾದ ಪರಿಚಯ ಮಾತ್ರವಲ್ಲದೆ ಜನಜೀವನ ಮತ್ತು ಸಾಹಿತ್ಯ, ರಾಜಕೀಯ ಚರಿತ್ರ್ರೆ, ಕನ್ನಡ ನಾಡಿನ ಧಾರ್ಮಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕ ಜನಜೀವನದ ಕುರಿತ ಚರ್ಚೆಯಾಗುತ್ತದೆ. ಅಂದರೆ ಸಾಹಿತ್ಯ ಚರಿತ್ರೆಯನ್ನು ಕವಿ-ಕೃತಿಗಳ ಆಧಾರದಲ್ಲಿ ಕಟ್ಟುತ್ತಲೇ ಅದು ಈ ನಾಡಿನ ಒಂದು ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟುವ ಆಸಕ್ತಿಯನ್ನು ಹೊಂದಿರಬೇಕು. ಲಭ್ಯ ಸಾಹಿತ್ಯ ಕೃತಿಗಳ ವಿವರದ ಮೂಲಕವೇ ಆ ಕಾಲದ ನಾಡಿನ ಉಳಿದೆಲ್ಲಾ ವಿವರಗಳನ್ನು ಸಾಹಿತ್ಯ ಚರಿತ್ರೆ ಸಂಯೋಜಿಸಿಕೊಳ್ಳುತ್ತಾ ಅವುಗಳನ್ನು ನಾಡಿನ ಚರಿತ್ರೆಯಾಗಿ ನಿರೂಪಿಸಬೇಕು. ಕಾಲಕಾಲಕ್ಕೆ ಉಂಟಾದ ಬೆಳವಣಿಗೆ ಬದಲಾವಣೆಗಳು ಚಾರಿತ್ರಿಕ ಅನಿವಾರ್ಯತೆಯನ್ನು ಸೂಚಿಸುತ್ತವೆ. ಸಾಹಿತ್ಯ ಚರಿತ್ರೆಕಾರ ಸಾಹಿತ್ಯದ ಸ್ವರೂಪದಲ್ಲಾದ ಬದಲಾವಣೆಯ ಅಂಶಗಳ ನಿರೂಪಣೆಗೆ ಗಮನವನ್ನು ಕೊಡಬೇಕಾಗುತ್ತದೆ. ಈ ಬದಲಾವಣೆಯನ್ನು ಇ.ಪಿ. ರೈಸ್, ಎಫ್. ಕಿಟ್ಟೆಲ್, ಆರ್. ನರಸಿಂಹಾಚಾರ್ಯ ರಿಂದ ತೊಡಗಿ ಹೊಸಗನ್ನಡದ ವಿವಿಧ ಕಾಲಘಟ್ಟಗಳ ಸಾಹಿತ್ಯ ಚರಿತ್ರೆಯನ್ನು ಬರೆದವರವರೆಗೂ ಗುರುತಿಸಿದ್ದಾರೆ.
ಕನ್ನಡ ಸಾಹಿತ್ಯ ಚರಿತ್ರೆಯು ಪಂಪಪೂರ್ವಯುಗ, ಪಂಪಯುಗ, ಬಸವಯುಗ ಎಂದು, ಚಂಪೂ ಸಾಹಿತ್ಯ, ವಚನ ಸಾಹಿತ್ಯ, ಕೀರ್ತನೆಗಳು ಎಂದೋ, ಹಳೆಗನ್ನಡ , ನಡುಗನ್ನಡ, ಹೊಸಗನ್ನಡ ಎಂದೋ, ಮತ್ತೆ ಹೊಸಗನ್ನಡದಲ್ಲಿ ನವೋದಯ, ಪ್ರಗತಿಶೀಲ,ನವ್ಯ, ದಲಿತ, ಬಂಡಾಯ ಎಂಬ ಕಾಲವಿಂಗಡನೆಗೆ ಒಳಗಾಗಿರುವ ಸಾಹಿತ್ಯ ಚರಿತ್ರೆಯನ್ನು ನಾವು ದಶಕಗಳಿಂದ ಓದುತ್ತಿದ್ದೇವೆ. ಪ್ರತಿ ಕಾಲಕ್ಕೂ ಸಾಹಿತ್ಯದ ಆಶಯ ಬದಲಾಗುತ್ತಿದ್ದಂತೆ ಸಾಹಿತ್ಯ ವಿಮರ್ಶಕರು, ಸಾಹಿತ್ಯ ಚರಿತ್ರಕಾರರು ಅದನ್ನು ಗುರುತಿಸಿದ್ದಾರೆ. ಹಾಗಾಗಿ ನವೋದಯ ಕಳೆದು ಪ್ರಗತಿಶೀಲ, ಪ್ರಗತಿಶೀಲ ಕಳೆದು ನವ್ಯ, ನವ್ಯ ಕಳೆದು ದಲಿತ-ಬಂಡಾಯ ಎಂದು ಗುರುತಿಸಲಾಯಿತು. ಕಳೆದ ಎರಡು ದಶಕಗಳಲ್ಲಿ ಸಾಹಿತ್ಯದ ಆಶಯ ಸಾಕಷ್ಟು ಬದಲಾಗಿದೆ. ಆದರೆ ಚರಿತ್ರೆ, ವಿಮರ್ಶೆಯ ಕಾಲಮಾಪನ ಇನ್ನೂ ದಲಿತ ಬಂಡಾಯಕ್ಕಿಂತ ಮುಂದೆ ಹೋಗಿಲ್ಲ. ಯಾಕೆ? ಪ್ರಸ್ತುತ ರಚನೆಯಾಗುತ್ತಿರುವ ಸಾಹಿತ್ಯದ ಆಶಯವನ್ನು ನೋಡಿದರೆ ನಮ್ಮ ಕಾಲನಿರ್ಣಯಕ್ಕೆ ಹೆಸರೇನು? ಈ ಜಾಗ ಖಾಲಿಯಾಗಿದೆಯಲ್ಲವೇ? ಈ ಕುರಿತು ವಿಮರ್ಶಕರ ವಲಯದ ನಡುವೆ ಚರ್ಚೆಗಳು ಆರಂಭವಾಗಿದೆ.ನಮ್ಮ ಕಾಲದಲ್ಲಿ ರಚನೆಯಾಗುತ್ತಿರುವ ಸಾಹಿತ್ಯದ ಸ್ಥಾನಮಾನ ನಮ್ಮ ಚರಿತ್ರೆ ಹಾಗೂ ವಿಮರ್ಶೆಯಲ್ಲಿ ಏನು? ದಲಿತ ಬಂಡಾಯೋತ್ತರ ಕಾಲದ ಸಾಹಿತ್ಯದಲ್ಲಿ ಈ ಆಶಯಗಳನ್ನು ಮೀರಿ ಸಾಹಿತ್ಯ ಬೆಳೆದಿದೆ, ಸಾಹಿತ್ಯದ ಧ್ವನಿ ಭಿನ್ನವಾಗಿದೆ.ಸಮಾಜ ಬದುಕಿನ ಭಿನ್ನ ಭಿನ್ನ ಸಂಗತಿಗಳನ್ನು ಒಳಗೊಂಡ ಸಾಹಿತ್ಯ ರಚನೆಯಾಗುತ್ತಿದೆ. ಜಾಗತೀಕರಣದ ಗುಣಾವಗುಣಗಳು, ಹಿಂಸೆ, ಭಯೋತ್ಪಾಧನೆಯೂ ಸೇರಿದಂತೆ ಸಮಾಜದಲ್ಲಿ ಉಂಟಾಗಿರುವ ಪರಿಣಾಮಗಳು ಇಂದಿನ ಸಾಹಿತ್ಯದಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದೆ. ಈ ಸಾಹಿತ್ಯವನ್ನು ದಲಿತ ಬಂಡಾಯದ ಚೌಕಟ್ಟಿನೊಳಗೆ ತರಲಾಗದು. ಬೌದ್ಧಿಕ ದಾಸ್ಯದಿಂದ ಹೊರಬರುವ ಕುರಿತ ಚರ್ಚೆಗಳು ಬೇರೆ ಬೇರೆ ರೂಪದಲ್ಲಿ ವರ್ತಮಾನದ ಸಾಹಿತ್ಯದಲ್ಲಿ ಕಾಣಿಸಿಕೊಂಡಿದೆ.
ಈ ಕಾಲಮಾನವನ್ನು ನಾವು ಸಾಮರಸ್ಯ ಸಾಹಿತ್ಯಯುಗವೆಂದು ನಾಮಕರಣ ಮಾಡಬಹುದೇ? ಯಾಕೆಂದರೆ ಬಂಡಾಯವೇ ಶಾಶ್ವತ ಮೌಲ್ಯವಲ್ಲ. ಬಂಡಾಯದ ನಂತರ ನಿರ್ಮಾಣವಾಗಬೇಕಾದುದು ಸಾಮರಸ್ಯವೇ ಅಲ್ಲವೇ? ಸಾಮರಸ್ಯ ಸಾಹಿತ್ಯ ಯುಗವೆಂದರೆ ಅದರ ವ್ಯಾಪ್ತಿ ಆಶಯ ಎರಡೂ ಹಿರಿದಾದುದು ಮತ್ತು ಸಾರ್ವಕಾಲಿಕವಾದುದು. ಇಂತಹ ಸಾರ್ವಕಾಲಿಕ ಆಶಯ ನಮ್ಮ ಸಾಹಿತ್ಯದಲ್ಲಿ ಕಾಣಿಸುತ್ತಿದೆಯಲ್ಲವೇ? ಇದು ಭವಿಷ್ಯವನ್ನು ಮುನ್ನಡೆಸಬೇಕಾದ ಆಶಯವೂ ಹೌದಲ್ಲವೇ? ನವೋದಯದ ಕಾಲ ಮೀರಿದೆ ಎಂದು ಸಾಹಿತ್ಯ ಲೋಕಕ್ಕೆ ಅನಿಸಿದಾಗ ಸಹಜವಾಗಿ ಹೊಸದೊಂದು ಧ್ವನಿ ಪ್ರಗತಿಶೀಲರ ರೂಪದಲ್ಲಿ ಕಾಣಿಸಿಕೊಂಡರೆ ಅದರ ಏಕತಾನತೆಯನ್ನು ಮೀರಿ ವ್ಯಕ್ತಿಯ ಒಳಗಿನ ತುಮುಲಗಳನ್ನು ನವ್ಯ ಸಹಜವಾಗಿ ಪ್ರತಿನಿಧಿಸಿತು. ದಲಿತ ಬಂಡಾಯ ಕೇವಲ ಸಾಹಿತ್ಯದ ಆಶಯವಾಗದೆ ಸಾಮಾಜಿಕ ಚಳವಳಿಯ ವ್ಯಾಪ್ತಿಯನ್ನು ಸಾಹಿತ್ಯಕ್ಕೆ ತಂದುಕೊಟ್ಟಿತು. ಆದರೆ ಹಲವು ದಶಕಗಳ ನಂತರ ಈಗ ಬಂಡಾಯದ ಸ್ವರೂಪ ಭಿನ್ನವಾಗಿದೆ. ದಲಿತ ಸಾಹಿತ್ಯದ ಕಾಳಜಿ ಬೇರೆಯಾಗಿದೆ. ಒಂದು ಹಂತದ ಸಾಮಾಜಿಕ ಉತ್ಪಾತ ಕೊನೆಗೊಂಡು ಮತ್ತೆ ಸೃಷ್ಟಿ ಸಮಸ್ತದ ನಡುವೆ ಬೆಸೆಯಬೇಕಾದ ಆಶಯ ಸಾಮರಸ್ಯ ಯುಗ ಸಾಹಿತ್ಯದ ಧ್ವನಿಯಾಗುವುದರಲ್ಲಿ ಅತಿಶಯೋಕ್ತಿಯಿಲ್ಲ.
ದಲಿತ ಬಂಡಾಯದ ಕಾಲಕ್ಕೆ ಮೊದಲು ಸಾಹಿತ್ಯದಲ್ಲಿ ಮೂಡಿದ ಆಶಯ ಸಾಮಾಜಿಕ ಚಳವಳಿಯ ರೂಪವನ್ನು ಪಡೆದುಕೊಂಡಂತೆ ಇಂದು ಸಾಮಾಜಿಕ ಚಳವಳಿಯ ಆಶಯವಾದ ಸಾಮರಸ್ಯ ಸಾಹಿತ್ಯದ ಆಶಯವಾಗಿ ವಿಸ್ತಾರಗೊಳ್ಳಬೇಕಾಗಿದೆ. ಹೀಗಾದಾಗ ಸಾಹಿತ್ಯ ಮತು ಸಮಾಜ ಸಮಾನ ಆಶಯದಲ್ಲಿ ಸಮಾನಂತರವಾಗಿ ಚಲಿಸಲು ಸಾದ್ಯವಿದೆ. ಆಗ ಸಾಹಿತ್ಯ ಚರಿತ್ರೆಯು ವರ್ತಮಾನ ಸಾಹಿತ್ಯದ ಪೂರ್ಣ ಪ್ರತಿಫಲನವಾಗುತ್ತದೆ. ಇಲ್ಲವಾದರೆ ಸಾಹಿತ್ಯಕ್ಕೂ , ಸಮಾಜಕ್ಕೂ, ವಿಮರ್ಶೆಗೂ ಪರಸ್ಪರ ಸಂಬಂಧವೇ ಇಲ್ಲದೆ ಇರುವ ಸ್ಥಿತಿ ನಿರ್ಮಾಣವಾಗುತ್ತದೆ. ಉದಾಹರಣೆಗೆ ಇಂದಿಗೂ ಕನ್ನಡ ಸಾಹಿತ್ಯವನ್ನು ಸ್ನಾತಕೋತ್ತರ ಪದವಿಯಲ್ಲಿ ಓದುವ ವಿದ್ಯಾರ್ಥಿಗಳು ಕಾಲನಿರ್ಣಯದ ವಿಷಯ ಬಂದಾಗ ಎಂದೋ ಮುಗಿದು ಹೋದ ಬಂಡಾಯದ ಕಾಲಕ್ಕೆ ನಿಂತು ಬಿಡುವುದರಿಂದ ಅವರ ಗ್ರಹಿಕೆ ಒಂದು ದಶಕದಷ್ಟು ಹಿಂದೆ ಉಳಿದು ಬಿಡುತ್ತದೆ .
ನವ್ಯ , ದಲಿತ, ಬಂಡಾಯಗಳೆನ್ನುವ ಕಾಲ ವಿಂಗಡನೆ ರಚನೆಯಾದ ಸಾಹಿತ್ಯವನ್ನು ವಿಂಗಡಿಸಿ ಮಾಡಿದ ಕಾಲ ವಿಂಗಡನೆಯಾಗಿರಲಿಲ್ಲ. ಅದು ಮುಂದಿನ ಸಾಹಿತ್ಯ ರಚನೆಯನ್ನು ನಿರ್ರ್ದೆಶಿಸುವ ವೈಚಾರಿಕ ಪಥದರ್ಶಕವೂ ಆಗಿತ್ತು. ಮುಂದಿನ ಸಾಹಿತ್ಯ ಇದೇ ಪಥದಲ್ಲಿ ಸಾಗಿತ್ತು. ಪ್ರಸ್ತುತ ರಚನೆಯಾಗುತ್ತಿರುವ ಸಾಹಿತ್ಯದ ಕಾಳಜಿಯನ್ನು ಗಮನಿಸಿದರೆ ಇಲ್ಲಿ ವಸಾಹತುಶಾಹಿ ಹುಟ್ಟುಹಾಕಿದ್ದ ಗುಲಾಮಿತನದ ಮಾನಸಿಕತೆಯಿಂದ ಬಿಡುಗಡೆಗೊಳ್ಳುವ ತವಕ, ರಾಷ್ಟ್ರೀಯತೆಯ ಕುರಿತ ಎಚ್ಚರ, ಸಾಮಾಜಿಕವಾಗಿ ಸಮುದಾಯಗಳ ನಡುವಿನ ಸಾಮರಸ್ಯ, ಸಮನ್ವಯತೆ ಮುಖ್ಯ ಕಾಳಜಿಯಾಗಿ ಕಾಣುತ್ತಿದೆ. ಸಾಮರಸ್ಯ ಭಾರತೀಯ ಸಾಹಿತ್ಯದಲ್ಲಿ ಆರಂಭದಿಂದಲೂ ಕಾಣುತ್ತಿದ್ದ ಒಂದು ಪ್ರಮುಖ ಮೌಲ್ಯವೂ ಹೌದು. ಸೃಷ್ಠಿ ಸಮಸ್ತವನ್ನೂ ಆಧರಣೀಯ ಭಾವದೀದ ಕಾಣುವ, ಒಂದು ಇನ್ನೊಂದರ ಹಿತಕ್ಕಾಗಿ ಇದೆ ಎನ್ನುವ ಈ ಭಾವ ಸಾಮರಸ್ಯದ ಭಾವ. ಸಾಮರಸ್ಯ ಕೇವಲ ಕಾವ್ಯ ಮಾರ್ಗವಲ್ಲ, ಅದು ಜೀವನ ಮಾರ್ಗವೂ ಆಗಿತ್ತು. ಪಶ್ಚಿಮದ ಪ್ರೇರಿತ ಶಿಕ್ಷಣ ಒಂದೆಡೆಯಾದರೆ, ಸ್ವಾತಂತ್ರ್ಯಾನಂತರ ಶಿಕ್ಷಣ ಕ್ಷೇತ್ರವನ್ನು ವ್ಯವಸ್ಥಿತವಾಗಿ ಆವರಿಸಿದ ಮಾರ್ಕ್ಸ್ವಾದಿ ಚಿಂತನೆಗಳ ಪ್ರಭಾವದಿಂದ ಶಿಕ್ಷಣ ಮಾತ್ರವಲ್ಲದೆ, ಸಾಹಿತ್ಯವೂ ಸೇರಿದಂತೆ ಸಮಾಜ ಜೀವನದ ಎಲ್ಲಾ ಮುಖಗಳು ಸಂಘರ್ಷವನ್ನು ಪ್ರಧಾನ ಎಂಬಂತೆ ಪರಿಭಾವಿಸಿದ ಪರಿಣಾಮ ಮನೆ, ಗಂಡ ಹೆಂಡತಿ, ಮಕ್ಕಳು ಎನ್ನುವ ಈ ಸಂಬಂಧವೂ ಸಹಜವಲ್ಲ ಎನ್ನುವಂತೆ ಕಾಣಿಸಿಲಾರಂಭಿಸಿತು. ಸಂಘರ್ಷದ ತುತ್ತ ತುದಿ ತಲುಪಿ ಎಲ್ಲವನ್ನೂ ಕಳೆದುಕೊಂಡೆವು.
ಸಾಹಿತ್ಯ ಇದನ್ನೆ ವ್ಯಕ್ತಪಡಿಸಲಾರಂಭಿಸಿತು. ಮುಂದಿನ ಸಾಹಿತ್ಯವಾದರೂ ಈ ಸಂಘರ್ಷದ ಮನಸ್ಥಿತಿಯಿಂದ ಹೊರಬಂದು ಪರಸ್ಪರ ಸಮನ್ವವನ್ನು ಪೋಷಿಸುವ ಹಾಗಾಗಬೇಕಾದರೆ ಇಂತಹದೊಂದು ಸಾಮರಸ್ಯ ಯುಗದ ಚಿಂತನೆಯನ್ನು ಸಾಹಿತ್ಯ ವಿಮರ್ಶಕರು ಗುರುತಿಸಿ ಪ್ರಚಲಿತಕ್ಕೆ ತರಬೇಕಾಗಿದೆ. ಸಾಮರಸ್ಯ ಎನ್ನುವುದು ಎಲ್ಲರ ಮೌಲ್ಯವೂ ಆಗಬೇಕಾಗಿದೆ. ಸೂಕ್ಷ್ಮವಾಗಿ ನೋಡಿದರೆ ಪಂಪನಿಂದ ತೊಡಗಿ ಇಂದು ಬಂಡಾಯ ಸಿದ್ಧಾಂತದ ಆಚೆಗೆ ನಿಂತು ರಚನೆಯಾಗುತ್ತಿರುವ ಬಹುತೇಕ ಸಾಹಿತ್ಯಕೃತಿಗಳ ಕೇಂದ್ರ ಆಶಯ ಸಾಮರಸ್ಯವೇ ಆಗಿದೆ. ಆದರೆ ಸಂಘರ್ಷದ ಸಿದ್ಧಾಂತದ ಪ್ರಭಾವದಿಂದ ಸಾಹಿತ್ಯಕೃತಿಗಳನ್ನು ಓದಿದ ಪರಿಣಾವಾಗಿ ನಾವು ಈ ಧ್ವನಿಯನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ ಎನ್ನುವುದು ದುರಂತ. ಕನ್ನಡ ವಿಮರ್ಶಾಲೋಕ ಈಗಲಾದರೂ ಎಚ್ಚೆತ್ತು ಹೊಸಯುಗದ ಪಥ ದರ್ಶಕವಾಗಬೇಕಾಗಿದೆ. ಸಾಹಿತ್ಯದ ಯುಗ ಪಲ್ಲಟ ನಮ್ಮಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಪಂಪನಿಂದ ಬಸವಣ್ಣನ ಕಾಲಕ್ಕೆ ಬದಲಾವಣೆಯಾಗಿದೆ. ಕುಮಾರವ್ಯಾಸನಿಂದ ಕನಕದಾಸರ ಕಾಲಕ್ಕೆ ಬದಲಾವಣೆಯಾಗಿದೆ. ಕುವೆಂಪು ಅವರಿಂದ ಸಿದ್ದಲಿಂಗಯ್ಯ ಅವರ ಕಾಲಕ್ಕೆ ಬದಲಾವಣೆಯಾಗಿದೆ. ಈ ಬದಲಾವಣೆಗಳೇ ಕನ್ನಡ ಸಾಹಿತ್ಯವನ್ನು ಬೆಳೆಸಿದ್ದು. ಸಾಹಿತ್ಯ ಬೆಳೆದು ಯುಗಕ್ಕೊಂದು ಹೊಸ ಪಥತೋರಿತು. ಹೊಸದೊಂದು ಪಥವೇ ಮುಂದಿನ ಸಾಹಿತ್ಯಕ್ಕೆ ದಿಕ್ಕುತೋರಿತು. ವರ್ತಮಾನದ ಕನ್ನಡ ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆಗೆ ಕವಿದ ಒಂದು ಬಗೆಯ ಜಡತೆ ದೂರವಾಗಿ ಮತ್ತೆ ಚೈತನ್ಯ ಹುಟ್ಟಬೇಕಾದರೆ ಅಂತಹದ್ದೊಂದು ಪಲ್ಲಟವಾಗಬೇಕಾಗಿದೆ. ಸತ್ವ ಕಳೆದುಕೊಂಡ ಹಳೆಯ ಕಾಲವಿಂಗಡನೆಗೆ ಕೊನೆಹಾಡೋಣ.ಸಾಮರಸ್ಯದ ಯುಗಕ್ಕೆ ಸ್ವಾಗತಕೋರೋಣ.
✍️ ಡಾ.ರೋಹಿಣಾಕ್ಷ ಶಿರ್ಲಾಲು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.