ಭಾರತ ಸಮೃದ್ಧ ಚಾರಿತ್ರಿಕ ವಿಶೇಷತೆಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಉಪಖಂಡದ ಹತ್ತು ಹಲವು ಸಂಸ್ಕೃತಿ ಆಚಾರ ವಿಚಾರಗಳಿಗೆ ಭಾರತದ ಪ್ರಾಚೀನ ನಾಗರೀಕತೆಯೇ ಮೂಲ ಎಂಬುದು ಸತ್ಯ. ದೇಶದ ಪ್ರಾಚೀನ ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಅವುಗಳಿಂದ ಹುಟ್ಟಿರುವ ಹಲವು ಕಲೆಗಳು ಚರಿತ್ರೆ ಮತ್ತು ಸಾಂಸ್ಕೃತಿಕತೆಯ ಭಾಗವಾಗಿದ್ದು ಪ್ರತಿಯೋರ್ವ ಭಾರತೀಯನ ಹೃದಯದಲ್ಲಿ ಹೆಮ್ಮೆ, ಅಭಿಮಾನ ಮೂಡುವಂತೆ ಮಾಡುತ್ತದೆ.
ಆಧುನಿಕ ಕಾಲಘಟ್ಟದಲ್ಲಿ ಚರಿತ್ರೆ ಸಂಶೋಧನೆಯಲ್ಲಿ ವಿಜ್ಞಾನದ ಬೆಸುಗೆಯು ಆಗಿದ್ದು, ಶೋಧನೆಗಳಿಗೆ ಹೊಸ ಸ್ಪರ್ಶ ಸಿಕ್ಕಿದೆ. ಉಪಗ್ರಹ ಆಧಾರಿತವಾಗಿ ಪಳೆಯುಳಿಕೆಗಳನ್ನು ಪತ್ತೆ ಹಚ್ಚುವುದು, ಅವುಗಳ ವಿಸ್ತಾರವನ್ನು ಗೊತ್ತುಪಡಿಸುವುದು, ನಂತರ ಅಂತಹ ಸ್ಥಳದ ಭೌತಿಕ ಗುಣಲಕ್ಷಣಗಳನ್ನು ಅಧ್ಯಯನ ಮಾಡಲು ಸಹಕಾರಿಯು ಹೌದು. ದೇಶದ ಆಧುನಿಕ ಇತಿಹಾಸದಲ್ಲಿ ವಿನೂತನ ಪ್ರಯೋಗಗಳನ್ನು ಅಳವಡಿಸಿ ಸತ್ಯಶೋಧನೆಯ ಮಾರ್ಗದಲ್ಲಿ ದೈರ್ಯದಿಂದ ಮುನ್ನಡೆದ ಪ್ರಾಚ್ಯವಸ್ತು ಉತ್ಖನನಕಾರ ಕೇರಳದ ಕಲ್ಲಿಕೋಟೆ ಮೂಲದ ಡಾ. ಕೆ. ಕೆ. ಮುಹಮ್ಮದ್. ಗ್ರಾಮೀಣ ಭಾಗದ ಮಧ್ಯಮ ವರ್ಗದಲ್ಲಿ ಬೆಳೆದ ಕೆ. ಕೆ. ಮುಹಮ್ಮದ್ ದೇಶದ ಉತ್ಖನನಕಾರರಾಗಿ, ಹಲವು ಪ್ರಾಚೀನ ಸ್ಮಾರಕಗಳು, ದೇಗುಲಗಳನ್ನು ಮರುನಿರ್ಮಾಣ ಮಾಡುವಲ್ಲಿ ಕೈಗೊಂಡ ಕ್ರಮ ಶ್ರಮ ಜೊತೆಯಲ್ಲಿ ಅವರ ದಿಟ್ಟತನವನ್ನು ಎಲ್ಲರೂ ಮೆಚ್ಚುವಂತಹದ್ದು. ಭೂಗರ್ಭದಲ್ಲಿ ಹುದುಗಿರುವ ಪ್ರಾಚೀನ ಐತಿಹಾಸದ ತುಣುಕುಗಳನ್ನು ಆಧರಿಸಿ ಅದರ ನಿಖರತೆಯನ್ನು ನಿಷ್ಪಕ್ಷಪಾತವಾಗಿ ಮುಂದಿಟ್ಟು ದೇಶ ಕಾಲದ ಬಗ್ಗೆ ಅಧ್ಯಯನ ನಡೆಸುವುದು ಇತಿಹಾಸಕಾರರ ಅದರಲ್ಲೂ ಉತ್ಖನನಕಾರನ ಮುಖ್ಯ ಕೆಲಸ. ಹೀಗೆ ದೇಶದ ವಿವಿದೆಡೆಗಳಲ್ಲಿ ಉತ್ಖನನ ವಿಭಾಗದ ನಿರ್ದೇಶಕರಾಗಿ ಸೇವೆಗೈದ ಕೆ. ಕೆ. ಮುಹಮ್ಮದ್ ಸ್ಮಾರಕದ ಸಂರಕ್ಷಣೆ ಮಾತ್ರವಲ್ಲದೆ ಅವುಗಳ ಮರುನಿರ್ಮಾಣದಲ್ಲೂ ಮಹತ್ತರ ಪಾತ್ರ ವಹಿಸಿದ್ದಾರೆ ಎಂಬುದು ಸ್ತುತ್ಯರ್ಹ ಅಂಶ.
ಅಯೋಧ್ಯೆಯ ಉತ್ಖನನ
ಅಯೋಧ್ಯೆಯ ಉತ್ಖನನದ ತಂಡದಲ್ಲಿ ಇದ್ದವರು ಕೆ. ಕೆ. ಮಹಮ್ಮದ್. ದೇಶದ ಆಸ್ಮಿತೆಯ ಸಂಕೇತವಾಗಿದ್ದ ಸಂಸ್ಕೃತಿ ಮತ್ತು ರಾಮನ ದೇಗುಲಕ್ಕೆ ಪುಷ್ಠಿ ಕೊಡುವ ಸಾಕಷ್ಟು ಆಧಾರಗಳು ಅಯೋಧ್ಯೆಯಲ್ಲಿ ಸಿಕ್ಕಿವೆ ಮಾತ್ರವಲ್ಲ ಇವೆಲ್ಲವೂ ಹಿಂದೆ ಅಲ್ಲೊಂದು ಭವ್ಯ ದೇಗುಲ ಇತ್ತೆಂಬುದರ ಸಂಕೇತವಾಗಿದೆ ಎಂದು ಗಟ್ಟಿ ಧ್ವನಿಯಿಂದ ಹೇಳಿಕೊಂಡ ಬಂದವರು ಉತ್ಖನನಕಾರ ಮತ್ತು ಸತ್ಯಶೋಧಕ ಕೆ. ಕೆ. ಮಹಮ್ಮದ್. ಇಂದಿಗೂ ಇದನ್ನೇ ಪುನರುಚ್ಛರಿಸುವ ಇತಿಹಾಸ ತಜ್ಞ ಕೆ. ಕೆ. ಮಹಮ್ಮದ್ ರಾಮ ಮಂದಿರ ನಿರ್ಮಾಣದಲ್ಲಿ ಮುಸ್ಲಿಮರು ಕೂಡಾ ತನು, ಮನ ಧನದಿಂದ ಸಹಕರಿಸಬೇಕು ಎಂದು ಕರೆ ನೀಡಿದ್ದರು.
ಉತ್ಖನನ ಸಂದರ್ಭ ಅಯೋಧ್ಯೆಯ ಪ್ರಾಚೀನ ದೇಗುಲದ ಅತ್ಯಪೂರ್ವ ಕುರುಹುಗಳಾದ ಜಲಪ್ರನಾಳಿ, ಕೆತ್ತಲ್ಪಟ್ಟ ಕಲ್ಲಿನ ಕಂಬಗಳು, ಗೋಪುರದ ಭಾಗಗಳು ಸಿಕ್ಕಿತ್ತು ಎಂಬುದು ದೊಡ್ಡ ಐತಿಹಾಸಿಕ ಶೋಧವಾಗಿ ಮಾರ್ಪಾಡಾಯಿತು. ಮಾತ್ರವಲ್ಲ ಮಸೀದಿ ಇದ್ದ ಸ್ಥಳದಲ್ಲಿ ಹಿಂದೆ ಭವ್ಯ ದೇಗುಲವಿತ್ತು ಎನ್ನುವುದಕ್ಕೆ ಬಹುದೊಡ್ಡ ಪುರಾವೆಯೂ ಆಯಿತು. 1976-77 ರಲ್ಲಿ ಪ್ರೊ. ಬಿ. ವಿ. ಲಾಲ್ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ನಡೆದ ಉತ್ಖನನದಲ್ಲಿ ಕೆ. ಕೆ. ಮುಹಮ್ಮದ್ ಇದ್ದರು.
ಬಟೇಶ್ವರ ದೇವಳ ಸಮುಚ್ಚಯದ ಮರುನಿರ್ಮಾಣ
ಪದ್ಮಶ್ರೀ ಪುರುಸ್ಕೃತ ಕೆ. ಕೆ. ಮುಹಮ್ಮದ್ ಅವರ ಸಾಧನೆಗೆ ಕಳಸಪ್ರಾಯವಾಗಿ ನಿಲ್ಲುವುದು ಮಧ್ಯಪ್ರದೇಶದಲ್ಲಿನ ಬಟೇಶ್ವರ ಎಂಬ ಶಿವನ ದೇಗುಲದ ಮರು ನಿರ್ಮಾಣದ ಮಹತ್ಕಾರ್ಯ. ಸಾವಿರಾರು ವರ್ಷ ಹಳಮೆಯ ದೇಶದ ಶಿಲ್ಪಶಾಸ್ತ್ರ ಶ್ರೀಮಂತಿಕೆಯನ್ನು ಹೊತ್ತಿದ್ದ ಬಟೇಶ್ವರವು ಕಾಲಗರ್ಭದಲ್ಲಿ ಸೇರುತ್ತಲಿತ್ತು. ಸಮುಚ್ಚಯದಲ್ಲಿದ್ದ ಹಲವು ದೇಗುಲಗಳು ಯಾವತ್ತೋ ಧರಾಶಾಯಿಯಾಗಿದ್ದವು. ಕಾಡಿನಿಂದಾವೃತವಾದ ಪ್ರದೇಶ ಕಳ್ಳಕಾಕರ ಆವಾಸವಾಗಿತ್ತು. ಸುಮಾರು 60 ಕ್ಕಿಂತಲೂ ಹೆಚ್ಚಿದ್ದ ದೇವಸ್ಥಾನಗಳು ಹಲವು ಎಕರೆ ಪ್ರದೇಶಗಳಲ್ಲಿ ಹರಡಿದ್ದವು. ಕೆಲ ದೇಗುಲಗಳ ಗುಡಿಯೊಳಗೆ ಮೂರ್ತಿಯಾಗಲಿ, ದೇವರಾಗಲೀ ಇರಲಿಲ್ಲ. ಬಂದೂಕು ಹಿಡಿದು ಕೊಲೆ ಸುಲಿಗೆಯಲ್ಲಿ ನಿರತರಾಗಿದ್ದ ಕೊಲೆಗಡುಕರ ತಾಣವಾಗಿತ್ತು ಬಟೇಶ್ವರ. ಆದರೆ ಇದರಲ್ಲಿದ್ದ ಓರ್ವ ಯಾವತ್ತೂ ಬಟೇಶ್ವರಕ್ಕೆ ತಲುಪಿ ಭಗ್ನ ಕಲ್ಲಿನ ದೇಗುಲದ ಮುಂದೆ ನಿಂತು ನಮಿಸುತ್ತಿದ್ದುದು ಇದೆ. ಹೀಗೆ ಹಲವು ವಿಸ್ಮಯಗಳಿಗೆ ಕಾರಣವಾಗಿದ್ದ ಬಟೇಶ್ವರದ ಕಳ್ಳಕಾಕರ ಅಡ್ಡೆಯಾಗಿ ಕಳೆ ಗುಂದಿತ್ತು. ಹಲವು ವಿಶೇಷ ಮೂರ್ತಿಗಳು ದರೋಡೆಕೋರರ ವಶವಾಗಿ ಅಧಾರ್ಮಿಕತೆ ನೆಲೆಯಾಗಿತ್ತು. ಮೊರೆನಾ ಎಂಬ ಈ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಲೂಟಿಕೋರರ ಗುಂಪಿನೊಂದಿಗೆ ಸಂಧಾನ ನಡೆಸಿ, ಅವರ ಮನವೊಲಿಸಿ ಆ ಪ್ರದೇಶದಲ್ಲಿ ಭಟೇಶ್ವರ ದೇಗುಲವನ್ನು ಮರು ನಿರ್ಮಾಣದ ಕೈಂಕರ್ಯ ಮುಹಮ್ಮದರ ಮಹತ್ತರ ಗುರಿ ಸಾಧನೆಗಳಲ್ಲೊಂದು. ಇದರ ಹೊರತಾಗಿ ದೇಶದ ಹಲವು ವಲಯಗಳಲ್ಲಿ ಭಾರತೀಯ ಪ್ರಾಚ್ಯವಸ್ತು ಪ್ರಾಧಿಕಾರದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಅಗಣಿತ ಕೊಡುಗೆಗಳನ್ನು ನೀಡಿರುವ ಮುಹಮ್ಮದ್ಕೇಸರಿಯಾ ಬೌದ್ಧ ಸ್ಥೂಪದ ಉತ್ಖನನ ಮತ್ತು ಸಂರಕ್ಷಣೆಯಲ್ಲೂ ಪ್ರಧಾನ ಭೂಮಿಕೆ ವಹಿಸಿದ್ದರು ಎಂಬುದು ಪ್ರಶಂಸನೀಯ.
ಭಾರತ ದೇಶದ ಪ್ರಾಚೀನತೆ ಮತ್ತು ಅದು ಜೋಡಿಸಲ್ಪಡುವ ಐತಿಹಾಸಿಕ ಉಳಿಕೆಗಳನ್ನು ಸಂರಕ್ಷಿಸಿ ಕಾಪಿಡುವ ಜವಾಬ್ದಾರಿ ಹೊಣೆಗಾರಿಕೆ ಎಲ್ಲರ ಮೇಲಿದೆ. ನಮ್ಮ ದೇಶದ ಧಾರ್ಮಿಕ ಸಾಂಸ್ಕೃತಿಕತೆಯ ಸ್ಥೂಲ ಅಧ್ಯಯನಕ್ಕೆ ಉತ್ಖನನ ಮತ್ತು ಸಂಶೋಧನೆ ದಾರಿ ಮಾಡಿಕೊಡುತ್ತದೆ ಎಂಬುದು ಮಹಮ್ಮದ್ಅವರ ಅಭಿಮತ.
ಆತ್ಮಕಥನ ‘ನಾನ್ ಎನ್ನ ಭಾರತೀಯನ್’ (ನಾನೆಂಬ ಭಾರತೀಯ)
ಕೆ. ಕೆ. ಮಹಮ್ಮದ್ತಮ್ಮ ಆತ್ಮಕಥನದಲ್ಲಿ ಬಾಲ್ಯ, ಶಿಕ್ಷಣದ ಹಾದಿ, ನಂತರದಲ್ಲಿ ವೃತ್ತಿ ಜೀವನದಲ್ಲಿ ಅನುಭವಿಸಿದ ಸಂಕಷ್ಟಗಳು ಸಹಿತ ಅದನ್ನು ಮೆಟ್ಟಿ ನಿಂತ ಕಥೆಯನ್ನು ವಿವರಿಸಿದ್ದಾರೆ. ದೇಶದ ಇತಿಹಾಸ ಹಾಗೂ ಸಂಶೋಧನೆ ನಿಷ್ಪಕ್ಷಪಾತವಾಗಿರಬೇಕು, ಯಾವುದೇ ಬಾಹ್ಯ ಒತ್ತಡಕ್ಕೆ ಮಣಿದು ನೈಜ ಇತಿಹಾಸದ ಅಧ್ಯಯನ ಸಂಶೋಧನೆ ಹಾದಿ ತಪ್ಪಬಾರದು ಎಂಬುದು ಧ್ಯೇಯವಾಗಿರಬೇಕು. ಅಲಿಘಡ ಮುಸ್ಲಿಂ ವಿಶ್ವ ವಿದ್ಯಾನಿಲಯದಲ್ಲಿದ್ದ ಸಂದರ್ಭ ಅನುಭವಿಸಿದ ಕೆಲ ಕಹಿ ಘಟನೆಗಳನ್ನು ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ. ಸ್ವಜನಪಕ್ಷಪಾತವೂ ಮನುಷ್ಯನ ಅಧಪತನಕ್ಕೆ ಕಾರಣ ಮಾತ್ರವಲ್ಲ ಇದರಿಂದ ನಿಜವಾದ ಪ್ರತಿಭೆಗಳು ತೆರೆಮರೆಗೆ ಸರಿಸಿಬಿಡುತ್ತವೆ. ಹೀಗೆ ಹತ್ತು ಹಲವು ಅಂಶಗಳೊಂದಿಗೆ ತಮ್ಮ ಆತ್ಮಕಥನದಲ್ಲಿ ತಮ್ಮ ಪುರಾವಸ್ತು ಸಂಶೋಧನಾ ಬದುಕಿನ ಪಯಣದ ಬಗ್ಗೆ ಕೌತುಕಪೂರ್ಣ ವಿಚಾರಗಳ ಬಗ್ಗೆ ಮಾತನಾಡುತ್ತಾರೆ.
ಮಲಯಾಳಂ ಭಾಷೆಯಲ್ಲಿರುವ ನಾನ್ ಎನ್ನ ಭಾರತೀಯನ್ ಪುಸ್ತಕದ ಕನ್ನಡ ಅನುವಾದವು ಹೊರ ಬಂದಿದೆ. ಕಾಸರಗೋಡು ಮೂಲದ ನರಸಿಂಗ ರಾವ್ ಈ ಆತ್ಮಕಥನವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಆತ್ಮಕಥನದ ಆಂಗ್ಲ ಭಾಷಾ ಆವೃತ್ತಿ ಶೀಘ್ರದಲ್ಲಿ ಪ್ರಕಟವಾಗಲಿದೆ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.