“I do not stand for myself but for my kit and kin; my kit and kin are those who are oppressed and neglected” ಎಂದು ಹೇಳಿದವರು ಮತ್ತು ಅದರಂತೆ ನಡೆದುಕೊಂಡವರು ಭಾರತರತ್ನ, ರಾಷ್ಟ್ರಋಷಿ ನಾನಾಜೀ ದೇಶಮುಖರು. 2019 ರಲ್ಲಿ ನಾನಾಜೀಯವರಿಗೆ ಮರಣೋತ್ತರವಾಗಿ ಭಾರತರತ್ನ ಪುರಸ್ಕಾರ ಬಂತು. ಆಗ ಈ ಮೇರು ವ್ಯಕ್ತಿತ್ವದ ಬಗ್ಗೆ ಅಷ್ಟೇನು ಗೊತ್ತಿಲ್ಲದ ವ್ಯಕ್ತಿ ನಾನಾಗಿದ್ದೆ. ಭಾರತದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರು ಇವರನ್ನು ಅಭಿನಂದಿಸಿ ಒಂದು ಟ್ವೀಟ್ ಮಾಡುತ್ತಾರೆ. “ಗ್ರಾಮಾಭಿವೃದ್ದಿಗೆ ನಾನಾಜೀ ದೇಶಮುಖರ ನಾಕ್ಷತ್ರಿಕ ಕೊಡುಗೆ ನಮ್ಮ ಹಳ್ಳಿಗಳಲ್ಲಿ ವಾಸಿಸುವವರನ್ನು ಸಬಲೀಕರಣಗೊಳಿಸುವ ಹೊಸ ಮಾದರಿಗೆ ದಾರಿ ತೋರಿಸಿದೆ. ದೀನ ದಲಿತರಿಗೆ ನಮ್ರತೆ, ಸಹಾನುಭೂತಿ ಮತ್ತು ಸೇವೆಯನ್ನು ನಿರೂಪಿಸುತ್ತಾರೆ. ಅವರು ನಿಜವಾದ ಭಾರತರತ್ನ”. ಈ ಮಾತುಗಳು ಇವರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ನನ್ನನ್ನು ಪ್ರೇರೆಪಿಸಿದವು.
ನಾನಾಜೀ ದೇಶಮುಖರವರು 1916, ಅಕ್ಟೋಬರ್ 11 ರಂದು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಡೋಲಿ ಎಂಬಲ್ಲಿ ಜನಿಸಿದರು. ಬಡ ಕುಟುಂಬವಾದ್ದರಿಂದ ಶಿಕ್ಷಣ ಪಡೆಯಲು ನಾನಾ ರೀತಿಯ ಕಷ್ಟಗಳನ್ನು ಪಟ್ಟರು. ತಮ್ಮ 13 ನೇ ವಯಸ್ಸಿನಲ್ಲಿಯೇ ಆರ್ಎಸ್ಎಸ್ನ ಸಂಪರ್ಕಕ್ಕೆ ಬಂದರು. ಸಂಘ ಸ್ಥಾಪಕರಾದ ಡಾಕ್ಟರ್ ಜೀಯವರು ನಾನಾಜೀಯವರ ಮನೆಗೆ ಹೋಗಿ ಬರುತ್ತಿದ್ದರಿಂದ ಮನೆಯಲ್ಲಿಯೂ ಸಂಘದ ಸಂಸ್ಕಾರ ಇತ್ತು. ಬಾಲ ಗಂಗಾಧರ ತಿಲಕರ ರಾಷ್ಟ್ರೀಯ ವಿಚಾರಗಳಿಂದ ಪ್ರೇರಿತರಾಗಿದ್ದರು. 1940 ರಲ್ಲಿ ಡಾಕ್ಟರ್ಜೀ ಕಾಲವಾದ ನಂತರ ನಾನಾಜೀಯವರು ಉತ್ತರ ಪ್ರದೇಶದ ಗೋರಖಪುರಕ್ಕೆ ಸಂಘದ ಪ್ರಚಾರಕರಾಗಿ ಹೊರಟರು. ಪಂಡಿತ ದೀನದಯಾಳ ಉಪಾಧ್ಯಾಯ, ಅಟಲ ಬಿಹಾರಿ ವಾಜಪೇಯಿಯವರ ಜೊತೆಗೊಡಿ ಜನಸಂಘದ ಬೆಳವಣಿಗೆಯಲ್ಲಿ ಶ್ರಮಿಸಿದರು.
1975 ರಲ್ಲಿ ತುರ್ತು ಪರಿಸ್ಥಿತಿ ವಿರುದ್ದ ಹೋರಾಡಿ ಜೈಲು ಸೇರಿದರು. 1977 ರಲ್ಲಿ ತುರ್ತು ಪರಿಸ್ಥಿತಿ ಕೊನೆಗೊಂಡ ನಂತರ ಜನತಾ ಪಕ್ಷದ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ವಿಶೇಷವೆಂದರೆ ಮೂರಾರ್ಜಿ ದೇಸಾಯಿಯವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಅರಸಿ ಬಂದರೂ ಅದನ್ನು ನಯವಾಗಿ ನಿರಾಕರಿಸಿದರು. 1980 ರಲ್ಲಿ ಜನತಾ ಪಕ್ಷ ವಿಭಜನೆಗೊಂಡ ನಂತರ ನಾನಾಜಿಯವರು ರಾಜಕೀಯದಿಂದ ನಿವೃತ್ತರಾದರು.
ಭಾರತವು ಹಳ್ಳಿಗಳ ದೇಶವಾಗಿದ್ದು ಹಳ್ಳಿಗಳ ಅಭಿವೃದ್ದಿಯಿಂದಲೇ ದೇಶದ ಅಭಿವೃದ್ದಿಯಾಗುವುದು ಎಂಬುದನ್ನು ಅರಿತ ನಾನಾಜಿಯವರು ಗ್ರಾಮೀಣ ಅಭಿವೃದ್ದಿಗಾಗಿ ಸಂಪೂರ್ಣ ಜೀವನವನ್ನು ಸವೆಸಿದರು. ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ನಾನಾಜೀ 1952 ರಲ್ಲಿ ಸರಸ್ವತಿ ಶಿಶು ಮಂದಿರವನ್ನು ಪ್ರಾರಂಭಿಸಿದರು. ಈಗ ವಿದ್ಯಾ ಭಾರತಿಯ ಹೆಸರಿನಲ್ಲಿ ಭಾರತ ಅತಿ ದೊಡ್ಡ ಸರ್ಕಾರೇತರ ಶಿಕ್ಷಣ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಅಭಿವೃದ್ದಿಯ ದೃಷ್ಟಿ ಇಟ್ಟುಕೊಂಡು ಭಾರತದ ಮೊದಲ ಗ್ರಾಮ ವಿಶ್ವವಿದ್ಯಾಲಯವಾದ ಮಹಾತ್ಮಾ ಗಾಂಧಿ ಗ್ರಾಮೋದಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಅದರ ಮೊದಲ ಕುಲಪತಿಗಳೂ ಅವರೇ ಆಗಿದ್ದರು. ಪಂಡಿತ ದೀನದಯಾಳರ ವಿಚಾರಗಳ ಅನುಗುಣವಾಗಿ ಭಾರತೀಯ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಗ್ರಾಮಗಳ್ಳಿ ಕಾರ್ಯ ನಿರ್ವಹಿಸಲು 1968 ರಲ್ಲಿ ದೀನದಯಾಳ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಗ್ರಾಮೋದಯದ ಕೆಲಸಕ್ಕೆ ಮುಂದಡಿ ಇಟ್ಟರು.
ವಿಜ್ಞಾನವು ಸಾರ್ವತ್ರಿಕವಾಗಿದೆ, ಅದರೆ ತಂತ್ರಜ್ಞಾನವು ಸ್ಥಳೀಯವಾಗಿರಬೇಕು ಎಂಬುದು ನಾನಾಜೀಯವರ ನಂಬಿಕೆಯಾಗಿತ್ತು. ʼಹರ್ ಕತ್ ಕೋ ದೆಂಗೆ ಕಾಮ್, ಹರ್ ಕೇತ್ ಕೋ ದೆಂಗೆ ಪಾಣಿʼ ಎಂಬ ಧ್ಯೇಯ ವಾಕ್ಯದೊಂದಿಗೆ ಮತ್ತು ಜನರ ಉಪಕ್ರಮ, ಭಾಗವಹಿಸುವಿಕೆಯೊಂದಿಗೆ ಸಮಗ್ರ ಅಭಿವೃದ್ದಿಯ ಮೂಲಕ ಒಟ್ಟು ಪರಿವರ್ತನೆ ಎಂಬ ಉದ್ದೇಶದೊಂದಿಗೆ ಕೆಲಸವನ್ನು ಪ್ರಾರಂಭಿಸಿದರು. 1978 ರಲ್ಲಿ ಗೊಂಡಾದಲ್ಲಿ, 1987 ರಲ್ಲಿ ಮಹಾರಾಷ್ಟ್ರದ ಬೀಡ್ನಲ್ಲಿ, 1991 ರಲ್ಲಿ ಚಿತ್ರಕೂಟ ಮತ್ತು ನಾಗಪುರದಲ್ಲಿ ಗ್ರಾಮಾಭಿವೃದ್ದಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ರೈತರಿಗೆ ಕೃಷಿ, ಕೃಷಿಯೇತರ ಆದಾಯವನ್ನು ಹೆಚ್ಚಿಸುವ ಮತ್ತು ಕೃಷಿ ಭೂಮಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಸಲುವಾಗಿ ಗೊಂಡಾ, ಬೀಡ್, ಮಜಗಾಂವ ಮತ್ತು ಗಾಜಿಗಾಂವ ಎಂಬಲ್ಲಿ 4 ಕೃಷಿ ವಿಜ್ಞಾನ ಕೇಂದ್ರಗಳನ್ನು ಪ್ರಾರಂಭಿಸಿದರು.
ಗ್ರಾಮಗಳಲ್ಲಿ ಆರೊಗ್ಯ, ಶಿಕ್ಷಣ, ಸ್ವಾವಲಂಬನೆ, ಸಂಸ್ಕಾರ, ಸುಸ್ಥಿರ ಅಭಿವೃದ್ದಿಯನ್ನು ಗಮನದಲ್ಲಿ ಇಟ್ಟುಕೊಂಡು ಗ್ರಾಮೋದಯವನ್ನು ಮಾಡಲಾಗುತ್ತಿದೆ. ವಿಶೇಷವೆಂದರೆ ಗ್ರಾಮಗಳಲ್ಲಿ ಅಲ್ಲಿನ ಜನರ ಜೊತೆ ಕೂಡಿಕೊಂಡು, ಬೆರೆತು ಗ್ರಾಮಗಳಲ್ಲಿ ಬದಲಾವಣೆ ತರಲು ನಾನಾಜಿಯವರು ‘ಸಮಾಜ ಶಿಲ್ಪಿ ದಂಪತಿʼ ಯೋಜನೆಯನ್ನು ರೂಪಿಸಿದರು. ಸಮಾಜ ಶಿಲ್ಪಿ ದಂಪತಿಗಳಾಗಿ ಕಾರ್ಯ ಮಾಡುವಂತಹ ದಂಪತಿಗಳು ಕಡ್ಡಾಯವಾಗಿ ಪದವಿಯನ್ನು ಪಡೆದಿರಬೇಕು. ಆಯ್ಕೆ ಮಾಡಿದ ಗ್ರಾಮಕ್ಕೆ ಹೋಗಿ ಅಲ್ಲಿಯ ಜನರು ಬದುಕುವ ಹಾಗೆಯೇ ಬದುಕಬೇಕು. ಆ ಗ್ರಾಮದಲ್ಲಿ ಆರೋಗ್ಯ, ಶಿಕ್ಷಣ, ಸ್ವಾವಂಬನ ಮತ್ತು ಸಂಸ್ಕಾರವನ್ನು ನೀಡುವ ಸಲುವಾಗಿ ತಮ್ಮ ಸಂಪೂರ್ಣ ಸಮಯವನ್ನು ಸಮಾಜಕ್ಕಾಗಿ ನೀಡಬೇಕು. ನಾನಾಜಿಯವರಿಂದ ಪ್ರೇರೆಪಿತರಾದ ಕೆಲವು ದಂಪತಿಗಳು ತಮ್ಮ ಸಂಪೂರ್ಣ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟು ಸೇವೆಯಲ್ಲಿ ಸಾರ್ಥಕ್ಯತೆಯನ್ನು ಕಾಣುತ್ತಿದ್ದಾರೆ. ಈಗಲೂ 19 ದಂಪತಿಗಳು ಸಮಾಜ ಶಿಲ್ಪಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿತ್ರಕೂಟದಲ್ಲಿ 2002 ರಲ್ಲಿ ಗ್ರಾಮ ಸ್ವಾವಲಂಬನ ಅಭಿಯಾನವನ್ನು ಪ್ರಾರಂಭಿಸಿ 500 ಹಳ್ಳಿಗಳನ್ನು ಸ್ವಾವಲಂಬಿ ಗ್ರಾಮಗಳನ್ನಾಗಿ ಮಾಡುವ ಯೋಜನೆ ರೂಪಿಸಲಾಯಿತು. ಮೊದಲ ಹಂತದಲ್ಲಿ 80 ಗ್ರಾಮಗಳನ್ನು ಅಗಸ್ಟ್ 15, 2005 ರ ಒಳಗಾಗಿ ಮತ್ತು ಎರಡನೆಯ ಹಂತದಲ್ಲಿ ಉಳಿದ ಹಳ್ಳಿಗಳನ್ನು ಆಗಸ್ಟ್ 15, 2010 ರ ಒಳಗಾಗಿ ಸ್ವಾವಲಂಬಿ ಗ್ರಾಮಗಳನ್ನಾಗಿ ಮಾಡಿದರು. ಈ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದರು ಸಮಾಜ ಶಿಲ್ಪಿ ದಂಪತಿಗಳು.
ಚಿತ್ರಕೂಟದಲ್ಲಿ ಆರೋಗ್ಯ ಧಾಮ ನಿರ್ಮಾಣ ಮಾಡಿ ಆಯುರ್ವೇದ ಸಂಶೋಧನೆ, ಸಾರ್ವಜನಿಕರಿಗೆ ಆಯುರ್ವೇದ ಚಿಕಿತ್ಸೆ ನೀಡುವುದು, ಸ್ಥಳೀಯವಾಗಿ ಸಿಗುವ ಗಿಡ ಮೂಲಿಕೆಗಳಿಂದ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವುದು ವಿಶೇಷವೆಂದರೆ ‘ದಾದಿಮಾ ಕೀ ಬಟುವಾ’ಎಂಬ 34 ತೆರನಾದ ಗಿಡ ಮೂಲಿಕೆಗಳ ಔಷದಿಯ ಒಂದು ಕಿಟ್ ಇದ್ದು. ಈ ಕಿಟ್ಟನ್ನು ಹಳ್ಳಿಗಳಲ್ಲಿ ಪ್ರಥಮ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಸ್ವಾವಲಂಬಿಯಾಗಿ ಬದುಕಲು ನಾನಾ ತರಹದ ಕೌಶಲ್ಯಗಳನ್ನು ಕಲಿಸಿ ಕೊಡಲು ಉದ್ಯಮಿತಾ ವಿದ್ಯಾಪೀಠವನ್ನು ತೆರೆಯಲಾಗಿದೆ.
ನಾನಾಜಿಯವರು ಬೀಡ್ನಲ್ಲಿ ಧನ್ಯತಾ ಅಭಿಯಾನವನ್ನು ಆರಂಭಿಸಿದರು. ಬೀಡ್ ಜಿಲ್ಲೆಯು ಅತ್ಯಂತ ಹಿಂದುಳಿದ, ಹೆಚ್ಚು ಬಡತನದಿಂದ ಕೂಡಿರುವ ಮತ್ತು ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ಇಲ್ಲಿ ನೀರಿನ ಸಂರಕ್ಷಣೆ ಮತ್ತು ಮಳೆ ಹೆಚ್ಚಿಸಲು ಜಯಾನಯನ ಪ್ರದೇಶಗಳಲ್ಲಿ ಗಿಡಗಳನ್ನು ನೆಡಲಾಯಿತು. ಅಷ್ಟೇ ಅಲ್ಲದೇ ಸುಮಾರು ಐದು ಲಕ್ಷ ಘನ ಮೀಟರನಷ್ಟು ಹೂಳು ತೆಗೆದು ಹೊಲಗಳಿಗೆ ಸಾಗಿಸಿ ಅಲ್ಲಿನ ಭೂಮಿಯನ್ನು ಫಲವತ್ತಾಗಿ ಮಾಡಲಾಯಿತು. 30 ದಿನಗಳ ಶ್ರಮ ಸಾಧನ ಶಿಬಿರ ನಡೆಸುವ ಮೂಲಕ ಈ ಅಭಿಯಾನವನ್ನು ಪೂರ್ಣಗೊಳಿಸಲಾಯಿತು.
ಹೀಗೆ ಹತ್ತು ಹಲವು ಸಾಮಾಜಿಕ, ಗ್ರಾಮಾಭಿವೃದ್ದಿ ಕೆಲಸವನ್ನು ಮಾಡಿ ಜನರ ಹೃದಯವನ್ನು ಗೆದ್ದವರು ನಾನಾಜಿ. ಇವರ ಸಾಮಾಜಿಕ ಕಾರ್ಯಕ್ಕಾಗಿ 1999 ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದರು. ಅದೇ ವರ್ಷ ಪದ್ಮ ವಿಭೂಷಣ ಪ್ರಶಸ್ತಿಯು ಕೂಡಾ ಅವರಿಗೆ ಒಲಿದು ಬಂತು. ಫೆಬ್ರವರಿ 27, 2010 ರಲ್ಲಿ ಚಿತ್ರಕೂಟದಲ್ಲಿ ಮಹಾನ ಚೇತನ ಅಸ್ತಂಗತವಾಯಿತು. ಇಂದು ಈ ಸಮಾಜ ಶಿಲ್ಪಿಯ ಪುಣ್ಯತಿಥಿಯ ದಿನ. ಸಮಾಜಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟ ನಾನಾಜಿ ಅವರನ್ನು ನೆನೆಯೋಣ. ಅವರು ಹಾಕಿಕೊಟ್ಟ ದಾರಿಯಲ್ಲಿ ಹೆಜ್ಜೆ ನೆಡುವ ಮೂಲಕ ಮಹಾತ್ಮರಿಗೆ ನಿಜವಾದ ಗೌರವ ಸಲ್ಲಿಸೋಣ.
✍️ ಸಂತೋಷ ಸೊಗಲದ, ಸವದತ್ತಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.