ಬೆಳ್ತಂಗಡಿ: ಜಾತಿ, ಧರ್ಮ, ಭಾಷೆಯನ್ನು ಮೀರಿ ನಿಂತು ಎಲ್ಲರೂ ಸಾವಧಾನದಿಂದ ಬದುಕನ್ನು ಕಟ್ಟಲು ಪ್ರತಿಯೊಬ್ಬರಿಗೂ ಆಶ್ರಯವನ್ನು ನೀಡಿದ ಭೂಮಿ ತುಳುನಾಡು ಎಂದು ಜಾನಪದ ವಿದ್ವಾಂಸ ತುಳವ ಬೊಳ್ಳಿ ದಯಾನಂದ ಜಿ. ಕತ್ತಲ್ ಹೇಳಿದರು.
ಅವರು ಆದಿತ್ಯವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಟಿದ ಅಟಿಲ್ದ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.
ತುಳುನಾಡಿನ ಆಚರಣೆಗಳು, ನಾಗಬನಗಳು, ದೈವಸ್ಥಾನಗಳು ಹಿರಿಯರು ಹಾಕಿಕೊಟ್ಟ ಸಂಪ್ರದಾಯ. ಇದರ ಬಗ್ಗೆ ಯಾರೇ ಏನೇ ಹೇಳಿದರೂ ತುಳುನಾಡಿನ ಮಣ್ಣಿನ ಕಾರಣಿಕ ಕಡಿಮೆಯಾಗಿಲ್ಲ. ಎಲ್ಲಿ ದೈವಾರಾಧನೆ ನಡೆಯುತ್ತಿದೆಯೋ ಅಲ್ಲಿಯಾವುದೇ ಸುನಾಮಿ, ಭೂಕಂಪ ನಡೆದಿಲ್ಲ. ತುಳುನಾಡಿನ ಜನತೆ ಪ್ರಕೃತಿಯ ಆರಾಧಕರು. ದೈವಗಳು ಪ್ರಕೃತಿಯ ಶಕ್ತಿಗಳು. ಹಿರಿಯರು ತುಳು ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದನ್ನು ನಾವು ಬೆಳೆಸಿಕೊಂಡು ಹೋಗಬೇಕು. ಹಿರಿಯರು ಹಾಕಿಕೊಟ್ಟ ಕಟ್ಟುಪಾಡುಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಮೂಲ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಕೆ.ವಸಂತ ಸಾಲಿಯಾನ್ ಕಾಪಿನಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗು.ನಾ. ಸ್ವಾ.ಸೇ.ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಕೆ.ವಸಂತ ಬಂಗೇರ, ತಾಪಂಅಧ್ಯಕ್ಷೆ ಜಯಂತಿ ಪಾಲೇದು, ಶ್ರೀ ಗು.ನಾ. ಸ್ವಾ.ಸೇ.ಸಂಘದ ಮಾಜಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಪ್ರಗತಿಪರ ಕೃಷಿಕ ಜನಾರ್ದನ ಪೂಜಾರಿ ಗೇರುಕಟ್ಟೆ, ಬಿಲ್ಲವ ಮಹಿಳಾ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ.ಬಂಗೇರ, ಕಾರ್ಯದರ್ಶಿ ತನುಜಾ ಶೇಖರ್, ಪುತ್ತೂರು ಬಿಲ್ಲವ ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ಉಷಾ ಅಂಚನ್, ಜನಪದ ಕಲಾವಿದ ಹರೀಶ್ ಪೂಜಾರಿ ಪೆರ್ಲ, ಉಜಿರೆ ಉಪಸ್ಥಿತರಿದ್ದರು.
ತಾಲೂಕಿನ ನಾಟಿ ವೈದ್ಯರಾದ ಜಿನ್ನಪ್ಪ ಪೂಜಾರಿ ತೋಟತ್ತಾಡಿ, ಮುತ್ತಮ್ಮ ಅಚ್ಚಿನಡ್ಕ, ಪದ್ಮಾವತಿ ಇವರನ್ನು ಗೌರವಿಸಲಾಯಿತು.
ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ವಿನೋದಿನಿ ರಾಮಪ್ಪ ಸ್ವಾಗತಿಸಿದರು.ಶ್ರೀ ಗು.ನಾ. ಸ್ವಾ.ಸೇ.ಸಂಘದ ಕಾರ್ಯದರ್ಶಿ ಪದ್ಮನಾಭ ಸಾಲಿಯಾನ್ ಮತ್ತು ಸುಧಾಮಣಿ ಆರ್. ಕಾರ್ಯಕ್ರಮ ನಿರ್ವಹಿಸಿದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ ಕುಮಾರ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.